ಸಾರ್ವಜನಿಕರೊಂದಿಗೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಯಾವುದೇ ಇಲಾಖೆಗೆ ಸಾರ್ವಜನಿಕರು ತಮ್ಮ ಸಮಸ್ಯೆ, ಬೇಡಿಕೆಗಳ ಬಗ್ಗೆ ಅರ್ಜಿ ಸಲ್ಲಿಸಿದಾಗ ಅವರಿಗೆ ಅರ್ಜಿ ಸ್ವೀಕೃತಿ ರಸೀದಿ ನೀಡಬೇಕು. ವೃಥಾ ಯಾರನ್ನೂ ಅಲೆದಾಡಿಸಬೇಡಿ. ಸಾರ್ವಜನಿಕರು ಸಹ ಅರ್ಜಿ ಸ್ವೀಕರಿಸಿದ ಬಗ್ಗೆ ಕಡ್ಡಾಯವಾಗಿ ಸ್ವೀಕೃತಿ ಪಡೆದುಕೊಳ್ಳುವದು ಅವಶ್ಯವಾಗಿದೆ ಎಂದು ಲೋಕಾಯುಕ್ತ ಡಿಎಸ್‌ಪಿ ವಿಜಯ ಬಿರಾದಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಅವರು ಪಟ್ಟಣದ ಪುರಸಭೆ ಸಭಾಭವನದಲ್ಲಿ ಬುಧವಾರ ಗದಗ ಜಿಲ್ಲೆ ಲೋಕಾಯುಕ್ತ ಇಲಾಖೆಯಿಂದ ಲಕ್ಷ್ಮೇಶ್ವರ ತಾಲೂಕಿನ ಸಾರ್ವಜನಿಕರ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ದೂರು ಅರ್ಜಿಗಳು ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಇಲಾಖೆಗಳಿಗೆ ಬರುವ ಸಾರ್ವಜನಿಕರೊಂದಿಗೆ ಅಧಿಕಾರಿಗಳು, ಸಿಬ್ಬಂದಿಗಳು ಸೌಜನ್ಯಯುತವಾಗಿ ವರ್ತಿಸಬೇಕು. ನಿಗದಿತ ಅವಧಿಯಲ್ಲಿ ಅರ್ಜಿ ವಿಲೇವಾರಿಯಾಗಬೇಕು ಮತ್ತು ಶುಲ್ಕಗಳ ವಿವರಗಳ ಫಲಕ ಹಾಕಬೇಕು. ಹೆಚ್ಚುವರಿ ಹಣ ತೆಗೆದುಕೊಳ್ಳುವದರ ಬಗ್ಗೆ ದೂರು ಬಂದರೆ ಅಂಥವರ ಬಗ್ಗೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಕಚೇರಿಗಳಲ್ಲಿ ಸಾರ್ವಜನಿಕರಿಗೆ ಕನಿಷ್ಠ ಶುದ್ಧ ಕುಡಿಯುವ ನೀರಿನ್ನು ಕಲ್ಪಿಸುವ/ ಅವರ ಕಷ್ಟಕ್ಕೆ ಸ್ಪಂದಿಸುವ ಭಾವನೆ ಬೆಳೆಸಿಕೊಳ್ಳಿ ಎಂದರು.

ಗ್ರಾಮ ಆಡಳಿತಾಧಿಕಾರಿಗಳು/ಪಿಡಿಓಗಳು ಫೀಲ್ಡ್ ವರ್ಕ್ ಎನ್ನುತ್ತಾ ಹೊರಗೆ ಇರುತ್ತಿರುವ ಬಗ್ಗೆ ದೂರುಗಳಿದ್ದು, ಇದಕ್ಕೆ ಇಓ ಅವರು ಕ್ರಮ ವಹಿಸಲು ಸೂಚಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಅಂಗವಿಕತೆ ಪ್ರಮಾಣ ಪತ್ರ ನೀಡುವ ಬಗ್ಗೆ, ರೋಗಿಗಳಿಗೆ ಶುದ್ಧ ಕುಡಿಯುವ ನೀರಿನ ಲಭ್ಯತೆ ಇಲ್ಲದಿರುವುದು, ವೈದ್ಯರು ಮತ್ತು ಸಿಬ್ಬಂದಿ ತಮ್ಮ ಸೇವಾ ಅವಧಿಯಲ್ಲಿ ಆಸ್ಪತ್ರೆಯಲ್ಲಿಯೇ ಇರಬೇಕು ಎಂಬ ದೂರುಗಳು ಕೇಳಿ ಬಂದಿವೆ. ಈ ಎಲ್ಲ ವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಟ್ರಾಫಿಕ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯಮತ್ತು ಹಾಸ್ಟೆಲ್ ವಾರ್ಡನ್‌ಗಳ ಕಾರ್ಯವೈಖರಿಯ ಬಗ್ಗೆ ದೂರುಗಳಿದ್ದು, ಸರಿಪಡಿಸಿಕೊಳ್ಳದಿದ್ದರೆ ಕ್ರಮಕ್ಕೆ ಸೂಚಿಸಲಾಗುವುದು ಎಂದರು. ಸಾರ್ವಜನಿಕರಾದ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ ಮುಂತಾದವರು ಆಶ್ರಯ ನಿವೇಶನ ಹಂಚಿಕೆಯಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಪಟ್ಟಣದಲ್ಲಿ 8/10 ಕೋಟಿ ರೂ ವೆಚ್ಚದ ನಗರೋತ್ಥಾನ ಕಾಮಗಾರಿ ಮತ್ತು 140 ಕೋಟಿ ರೂ.ಗಳ ಕೆರೆ ತುಂಬಿಸುವ ಯೋಜನೆಯ ಕಾಮಗಾರಿಗಳು ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರ್ಧಕ್ಕೆ ನಿಂತಿವೆ. ಹೊಸ ಬಡಾವಣೆ, ಆಶ್ರಯ ನಿವೇಶನಗಳಿಗೆ ಮೂಲಭೂತ ಸೌಲಭ್ಯ ಇಲ್ಲದಿರುವದು ಸೇರಿ ಹಲವು ಸಮಸ್ಯೆಗಳ ಬಗ್ಗೆ ಪುರಸಭೆಗೆ ಮನವಿ, ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಗೋಸಾವಿ ಸಮಾಜದ ಸುಮಾರು 32 ಮನೆಗಳಿರುವ ಜಾಗೆಯಲ್ಲಿ ಯಾವುದೇ ಸೌಕರ್ಯಗಳಿಲ್ಲ. ಇದಕ್ಕಾಗಿ ಪುರಸಭೆಗೆ ದೂರು ಸಲ್ಲಿಸುವದು ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಪಾದಯಾತ್ರೆ ಮಾಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ದೂರು ಸಲ್ಲಿಸಿದರು.

ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಹೆಸ್ಕಾಂನ ಆಂಜನಪ್ಪ ಬಿ, ಉಪ ತಹಸೀಲ್ದಾರ ಮಂಜುನಾಥ ಅಮಾಸಿ, ಆರೋಗ್ಯ, ಆಹಾರ, ಸಾರಿಗೆ, ಕೃಷಿ, ತೋಟಗಾರಿಕೆ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಈ ವೇಳೆ ಆಗಮಿಸಿದ್ದ ಸಾರ್ವಜನಿಕರು ಪುರಸಭೆಯವರು ಸ್ವಚ್ಛತೆಯ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದ್ದಾರೆ. ಜನರ ದೂರು/ಮನವಿಗೆ ಸ್ಪಂದಿಸುವುದಿಲ್ಲ ಎಂದಾಗ, ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ 15 ದಿನಗಳಲ್ಲಿ ವರದಿ ನೀಡುವಂತೆ ಮುಖ್ಯಾಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಕರಿಗೆ ವಿಜಯ ಬಿರಾದಾರ ಸೂಚಿಸಿದರು.


Spread the love

LEAVE A REPLY

Please enter your comment!
Please enter your name here