HomeGadag Newsಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ

ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಎಲ್ಲ ಪಡಿತರ ಅಂಗಡಿಗಳ ಮುಂದೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮಾಹಿತಿ ಒಳಗೊಂಡಿರುವ ಬ್ಯಾನರ್ ಅಳವಡಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಸೂಚಿಸಿದರು.

ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರದ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ದೊರಕುವಲ್ಲಿ ವಿಳಂಬವಾಗಬಾರದು. ಈ ನಿಟ್ಟಿನಲ್ಲಿ ಸಂಬಂಧಿತ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ಅನ್ನಭಾಗ್ಯದ ಅಕ್ಕಿಗಳು ಕಾಳ ಸಂತೆಯಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿರುವ ಕುರಿತು ದೂರು ಬರುತ್ತಿರುವ ಹಿನ್ನೆಲೆಯಲ್ಲಿ ಇಂತಹ ಅವ್ಯವಹಾರಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಗದಗ ನಗರದಲ್ಲಿನ ಹಳೇ ಬಸ್ ನಿಲ್ದಾಣ ಹಾಗೂ ಹೊಸ ಬಸ್ ನಿಲ್ದಾಣಗಳ ಆವರಣದ ಸ್ವಚ್ಛತೆಯಿಂದ ಇರುವಂತೆ ನೋಡಿಕೊಳ್ಳಬೇಕು. ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥಿವಾಗಿ ಇರುವಂತೆ ಕ್ರಮ ವಹಿಸಬೇಕು. ಶಿಶು ಪಾಲನಾ ಕೇಂದ್ರ ವ್ಯವಸ್ಥಿತವಾಗಿರುವಂತೆ ನೋಡಿಕೊಳ್ಳಬೇಕು. ಮಹಿಳೆಯರ ವಿಶ್ರಾಂತಿ ಕೊಠಡಿಯ ಸ್ವಚ್ಛತೆ ಕುರಿತು ಗಮನಹರಿಸಬೇಕು. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿನ ಬಸ್ ಸ್ಟ್ಯಾಂಡ್‌ ಗಳು ಸ್ವಚ್ಛವಾಗಿರುವಂತೆ ಹಾಗೂ ಮೂಲಭೂತ ಸೌಲಭ್ಯ ಇರುವಂತೆ ಗಮನ ಹರಿಸಬೇಕು. ಈ ಕುರಿತು ಸಮಿತಿಯ ಸದಸ್ಯರು ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಗಳನ್ನು ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಜರುಗಿಸಬೇಕು. ಗ್ಯಾರಂಟಿ ಯೋಜನೆಗಳ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಶೀಘ್ರವಾಗಿ ತಲುಪುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಬಿ.ಬಿ. ಅಸೂಟಿ ನಿರ್ದೇಶನ ನೀಡಿದರು.

ಪಂಚ ಗ್ಯಾರಂಟಿ ಯೋಜನೆಗಳ ಸಂಬಂಧಿತ ಅಧಿಕಾರಿಗಳು ಈ ಕೆಳಗಿನಂತೆ ಸಭೆಗೆ ಮಾಹಿತಿ ನೀಡಿ, ಗೃಹಲಕ್ಷ್ಮೀ ಯೋಜನೆಯಡಿ ಎಪ್ರಿಲ್ 2025ರ ಅಂತ್ಯದವರೆಗೆ 2,55,916 ನೋಂದಣಿಯಾದ ಅರ್ಜಿಗಳ ಪೈಕಿ 2,50,421 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ವಾ.ಕ.ರ.ಸಾ ಸಂಸ್ಥೆಯಿಂದ ಯೋಜನೆ ಆರಂಭವಾದಾಗಿನಿಂದ ಎಪ್ರಿಲ್ 2025ರವರೆಗೆ 1841.55 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. 114660.87 ಲಕ್ಷ ರೂ. ಮಹಿಳಾ ಪ್ರಯಾಣಿಕರ ಆದಾಯವಾಗಿದೆ.

ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಡಿಸೆಂಬರ್ 2024ರ ಅಂತ್ಯದವರೆಗೆ 234190 ಪಡಿತರ ಚೀಟಿದಾರರಿಗೆ ಡಿಬಿಟಿ ಮೂಲಕ 12,80,34,140 ರೂ. ಹಣ ಸಂದಾಯ ಮಾಡಲಾಗಿದೆ. ಯುವನಿಧಿ ಯೋಜನೆಯಡಿ ಯೋಜನೆ ಆರಂಭದಿಂದ ಮೇ 2025ರವರೆಗೆ 3807 ಅರ್ಹ ಫಲಾನುಭವಿಗಳಿಗೆ 7,55,19,000 ರೂ. ಡಿಬಿಟಿ ಮೂಲಕ ಹಣ ವರ್ಗಾವಣೆಯಾಗಿರುತ್ತದೆ. ಗೃಹ ಜ್ಯೋತಿ ಯೋಜನೆಯಡಿ ಯೋಜನೆ ಆರಂಭದಿಂದ ಎಪ್ರಿಲ್ 2025ರವರೆಗೆ 273251 ಸ್ಥಾವರಗಳು ನೋಂದಣಿಯಾಗಿದ್ದು ಶೇ.98.68 ಪ್ರಗತಿಯಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿಯ ಉಪಾಧ್ಯಕ್ಷೆ ನೀಲಮ್ಮ ಬೋಳನವರ, ಉಪಾಧ್ಯಕ್ಷರುಗಳಾದ ಪಿ.ಬಿ. ಅಗಳವಾಡಿ, ದೀಪಕ ಲಮಾಣಿ, ಫಕ್ರುಸಾಬ ಚಿಕ್ಕಮಣ್ಣೂರ, ಗದಗ ಜಿಲ್ಲಾ ಸಮಿತಿಯ ಸದಸ್ಯರಾದ ಅಶೋಕ ಮಂದಾಲಿ ಸೇರಿದಂತೆ ಸಮಿತಿಯ ಸದಸ್ಯರು, ಗ್ಯಾರಂಟಿ ಯೋಜನೆಯ ಸಂಬಂಧಿತ ಅಧಿಕಾರಿಗಳು ಹಾಜರಿದ್ದರು.

ಗದಗ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಸದಸ್ಯ ಅಶೋಕ ಮಂದಾಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರ ಮಾರ್ಗದರ್ಶನದಂತೆ ಗದಗ ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆಯನ್ನು ಅರ್ಹರೆಲ್ಲರಿಗೂ ತಲುಪಿಸುವಲ್ಲಿ ಸಫಲರಾಗಿದ್ದೇವೆ. ಇನ್ನುಳಿದ ಯೋಜನೆಗಳ ಸಂಪೂರ್ಣ ಪ್ರಗತಿಗೆ ಪ್ರಯತ್ನಿಸಲಾಗುತ್ತಿದೆ. ಅಧಿಕಾರಿಗಳೆಲ್ಲರೂ ಈ ನಿಟ್ಟಿನಲ್ಲಿ ಕಾರ್ಯನಿರ್ವಹಣೆಗೆ ಮುಂದಾಗಬೇಕೆಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಮುಖ್ಯಸ್ಥರು ಅವುಗಳ ಸಮರ್ಪಕ ಅನುಷ್ಠಾನದ ಕುರಿತು ಪರಾಮರ್ಶೆ ನಡೆಸಬೇಕು. ಅರ್ಹರಿಗೆ ಯೋಜನೆಗಳ ಸೌಲಭ್ಯ ನಿಗದಿತ ಅವಧಿಯೊಳಗೆ ಲಭ್ಯವಾಗುವಂತೆ ಕ್ರಮ ವಹಿಸಬೇಕು. ಸರ್ಕಾರದ ಸೌಲಭ್ಯಗಳ ಮೂಲಕ ಜನಸಾಮಾನ್ಯರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!