ವಿಜಯಸಾಕ್ಷಿ ಸುದ್ದಿ, ಗದಗ: ಬಿಪಿಎಲ್‌ನಿಂದ ಎಪಿಎಲ್ ಆಗಿರುವ ಪಡಿತರ ಚೀಟಿಗಳನ್ನು ಬಿಪಿಎಲ್‌ಗೆ ಬದಲಾಯಿಸುವ ಕಾರ್ಯಕ್ಕೆ ಮುಂದಾಗಬೇಕು. ಅರ್ಹ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಸೌಲಭ್ಯ ಪಡೆದುಕೊಳ್ಳುವಂತಾಗಬೇಕು ಎಂದು ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದರು.
ನಗರದ ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಪಂಚ ಗ್ಯಾರಂಟಿ ಕಚೇರಿಯಲ್ಲಿ ಶನಿವಾರ ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಿಂದ ಪಡಿತರ ಚೀಟಿ ವಿಶೇಷ ಸಭೆಯನ್ನು ಜರುಗಿಸಿ ಮಾತನಾಡಿದರು.
ಅನ್ನಭಾಗ್ಯ ಯೋಜನೆಯು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಸಮಾಜದ ಕಟ್ಟಕಡೆಯ ಕುಟುಂಬದ ಹಸಿವು ನೀಗಿಸಲು ಅನ್ನಭಾಗ್ಯ ಯೋಜನೆ ಸಹಕಾರಿಯಾಗಿದೆ. ಈ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿಯೇ ತಲುಪುವಂತಾಗಲು ಸಂಬಂಧಿತ ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕೆಲಸ ನಿರ್ವಹಿಸಬೇಕು ಎಂದರು.
ಗದಗ ತಾಲೂಕು ಪಂಚ ಗ್ಯಾರಂಟಿ ಸಮಿತಿ ನಿರ್ದೇಶನದ ಮೇರೆಗೆ ಬಿಪಿಎಲ್ ಪಡಿತರ ಚೀಟಿಯಿಂದ ವಂಚಿತರಾದವರನ್ನು ಗುರುತಿಸಿ ಪಟ್ಟಿ ಮಾಡಬೇಕು. ಎಎವೈ (ಅಂತ್ಯೋದಯ ಅನ್ನ ಯೋಜನೆ)/ ಬಿಪಿಎಲ್‌ನಿಂದ ಎಪಿಎಲ್‌ಗೆ ಬದಲಾವಣೆಯಾಗಿರುವ ಪಡಿತರ ಚೀಟಿಗಳನ್ನು ಎಎವೈ/ ಬಿಪಿಎಲ್‌ಗೆ ಬದಲಾಯಿಸಬೇಕಾದರೆ ಹೊಸದಾಗಿ ಅರ್ಜಿ ಸಲ್ಲಿಸಬೇಕು ಹಾಗೂ ಸಲ್ಲಿಸಬೇಕಾದ ದಾಖಲೆ ಹಾಗೂ ಹೆಚ್ಚಿನ ವಿವರಗಳಿಗಾಗಿ ಗ್ರಾಮೀಣ ಭಾಗದಲ್ಲಿ ಪಡಿತರ ಚೀಟಿಗಳ ಮಾಹಿತಿಗಾಗಿ ತಹಸೀಲ್ದಾರ ಕಚೇರಿಯಲ್ಲಿ ಇರುವ ಆಹಾರ ವಿಭಾಗಕ್ಕೆ ಹಾಗೂ ಗದಗ-ಬೆಟಗೇರಿ ಶಹರದಲ್ಲಿ ಬರುವ ಪಡಿತರ ಚೀಟಿಗಳ ಮಾಹಿತಿಗಾಗಿ ಗದಗ-ಬೆಟಗೇರಿ ನಗರಾಭಿವೃದ್ಧಿ ಕಾರ್ಯಾಲಯದ ಹತ್ತಿರವಿರುವ ಸಹಾಯಕ ನಿರ್ದೇಶಕ ಕಾರ್ಯಾಲಯ ಸಂಪರ್ಕಿಸಬಹುದು ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಸಾವಿತ್ರಿ ಹೂಗಾರ, ಮಲ್ಲು ಬಾರ್ಕೇಕರ, ಸಂಗಮೇಶ ಕರಕಲಮಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಬಸವರಾಜ ಕಡೆಮನಿ, ಆಹಾರ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಗದಗ ತಾಲೂಕು ಪಂಚ ಗ್ಯಾರಂಟಿ ಸಮಿತಿಯ ಸದಸ್ಯರಾದ ಕೃಷ್ಣಗೌಡ ಪಾಟೀಲ ಮಾತನಾಡಿ, ಗದಗ ಮತಕ್ಷೇತ್ರದಲ್ಲಿರುವ ಬಡ ಕುಟುಂಬದವರನ್ನು ಗುರುತಿಸಿ ಪಟ್ಟಿ ಮಾಡಿ ಅವರಿಗೆ ಬಿಪಿಎಲ್ ಕಾರ್ಡ್ ಮಂಜೂರು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಬಿಪಿಎಲ್ ಕಾರ್ಡ್ ಮಂಜೂರಾತಿಗಾಗಿ ಬಾಕಿ ಉಳಿದಿರುವ ಅರ್ಜಿಗಳ ಸೂಕ್ತ ಪರಿಶೀಲನೆ ನಡೆಸಿ ನಿಗದಿತ ಅವಧಿಯಲ್ಲಿಯೇ ವಿಲೇವಾರಿ ಮಾಡಿ ಮಂಜೂರಾತಿಗೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಗತ್ಯ ದಾಖಲೆಗಳು
ಏಪ್ರಿಲ್-2022ರಿಂದ 2025ರವರೆಗೆ (3 ವರ್ಷಗಳ ಬ್ಯಾಂಕ್ ಸ್ಟೇಟ್‌ಮೆಂಟ್) ಕುಟುಂಬದಲ್ಲಿ ಯಾರಾದರೂ ಸರಕಾರಿ/ ಅರೆಸರ್ಕಾರಿ/ ಸಂಸ್ಥೆ/ ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಕುಟುಂಬ ಸದಸ್ಯರ ಜಿಎಸ್‌ಟಿ/ ಇನ್‌ಕಂ ಟ್ಯಾಕ್ಸ್ ತುಂಬುವ ಬಗ್ಗೆ ಮಾಹಿತಿ, ಕುಟುಂಬಕ್ಕೆ ಇರುವ ಜಮೀನಿನ ಮಾಹಿತಿ, ರೇಶನ್ ಕಾರ್ಡ್ ಝೆರಾಕ್ಸ್ ಪ್ರತಿ, ಕುಟುಂಬದ ಎಲ್ಲರ ಆಧಾರ್ ಕಾರ್ಡ್ ಝೆರಾಕ್ಸ್ ಪ್ರತಿ — ಎಲ್ಲ ದಾಖಲಾತಿಗಳೊಂದಿಗೆ ನೇರವಾಗಿ ಪಡಿತರ ಚೀಟಿದಾರರು ಲಿಖಿತವಾಗಿ ತಹಸೀಲ್ದಾರರಿಗೆ ಮನವಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಗ್ರಾಮೀಣ ಭಾಗದಲ್ಲಿ ಪಡಿತರ ಚೀಟಿಗಳ ಮಾಹಿತಿಗಾಗಿ ತಹಸೀಲ್ದಾರ ಕಚೇರಿ, ಗದಗ-ಬೆಟಗೇರಿ ನಗರದ ನಗರಾಭಿವೃದ್ಧಿ ಕಾರ್ಯಾಲಯದ ಹತ್ತಿರ ಇರುವ ಸಹಾಯಕ ನಿರ್ದೇಶಕ ಕಾರ್ಯಾಲಯಕ್ಕೆ ಭೇಟಿ ನೀಡಬೇಕು.



