ವಿಶ್ವದ ನಂಬರ್ ಒನ್ ಟಿ20 ತಂಡವಾಗಿರುವ ಭಾರತದ ವಿರುದ್ಧ ದಿಟ್ಟ ಆಟ ಪ್ರದರ್ಶಿಸಿದ ಕ್ರಿಕೆಟ್ ಶಿಶುಗಳಾದ ಓಮನ್ ತಂಡ ಪಂದ್ಯ ಸೋತರೂ ಎಲ್ಲರ ಮನಸ್ಸು ಗೆದ್ದಿದೆ.
ಭಾರತಕ್ಕೆ ನಿರ್ಣಾಯಕವಲ್ಲದ ಈ ಪಂದ್ಯದಲ್ಲಿ ಓಮನ್ ಸುಲಭದ ಸುತ್ತಾಗ ಬಹುದೆಂಬ ನಿರೀಕ್ಷೆಯಿತ್ತು. ಆದರೆ, ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದ್ದ ಒಮಾನ್ ತಂಡವು ನಿರೀಕ್ಷೆಗೂ ಮೀರಿ ಪ್ರತಿರೋಧ ತೋರಿ ಗಮನ ಸೆಳೆಯಿತು. ಪ್ರಬಲ ಭಾರತ ತಂಡವನ್ನು 200ರೊಳಗೆ ನಿಯಂತ್ರಿಸಿದ್ದ ಒಮಾನ್, ಬ್ಯಾಟಿಂಗ್‌ನಲ್ಲೂ ಉತ್ತಮ ನಿರ್ವಹಣೆ ತೋರಿತು.
ಅಬುದಾಬಿಯ ಶೇಕ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಇದಕ್ಕುತ್ತರವಾಗಿ ಓಮನ್ ತಂಡ 20 ಓವರ್ ಗಳು ಮುಗಿದಾಗ 4 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಲಷ್ಟೇ ಶಕ್ತವಾಯಿತು. ಆದರೆ ಒಂದೊಂದು ವಿಕೆಟ್ ಗೂ ಭಾರತದ ಬೌಲಿಂಗ್ ಪಡೆಯನ್ನು ಪರದಾಡುವಂತೆ ಮಾಡಿದ ಓಮನ್ ಬ್ಯಾಟಿಂಗ್ ಪಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಓಮನ್ ತಂಡದ ಆರಂಭಿಕ ಬ್ಯಾಟರ್ ಗಳ ವಿಕೆಟ್ ಕೀಳಲು ಭಾರತ ತಂಡ ಬಹಳ ಪ್ರಯಾಸ ಪಡಬೇಕಾಯಿತು. ನಾಯಕ ಜತಿಂದರ್ ಸಿಂಗ್ ಮತ್ತು ಆಮಿರ್ ಕಲೀಮ್ ಅವರು ಮೊದಲ ವಿಕೆಟ್ ಗೆ 8.3 ಓವರ್ ಗಳಲ್ಲಿ 56 ರನ್ ಪೇರಿಸಿದರು. ಈ ಜೋಡಿಯನ್ನು ಬೇರ್ಪಡಿಸಿದ್ದು ಸ್ಪಿನ್ನರ್ ಕುಲ್ದೀಪ್ ಯಾದವ್. ಜತಿಂದರ್ ಸಿಂಗ್ ಅವರು ಔಟಾಗುವ ಮುನ್ನ 15 ಎಸೆತಗಳಲ್ಲಿ 38 ರನ್ ಗಳಿಸಿದರು.
ಬಳಿಕ ಜೊತೆಯಾದ ಆಮಿರ್ ಕಲೀಂ ಮತ್ತು ಹಮೀದ್ ಮಿರ್ಝಾ ಜೋಡಿಯು ಭಾರತದ ಪಾಲಿಗೆ ಅಕ್ಷರಶಃ ಸೋಲಿನ ರುಚಿ ತೋರಿಸಲು ಹೊರಟ ಹಾಗಿತ್ತು. ಇವರಿಬ್ಬರು 2ನೇ ವಿಕೆಟ್ ಗೆ 93 ರನ್ ಗಳ ಜೊತೆಯಾಟವಾಡಿದರು. ಕೊನೆಯ 3 ಓವರ್ ಗಳಲ್ಲಿ ಓಮನ್ ಗೆ ಬೇಕಿದ್ದುದ್ದು 48 ರನ್ ಗಳು . ಈ ಹಂತದಲ್ಲಿ ಆಮೀಕ್ ಕಲೀಂ ಅವರು ಹರ್ಷಿತ್ ರಾಣಾ ಅವರ ಬೌಲಿಂಗ್ ನಲ್ಲಿ ನಿರಂತರ 2 ಬೌಂಡರಿ ಹೊಡೆದು ಓಮನ್ ಪಾಳಯದಲ್ಲಿ ಹರ್ಷ ತುಂಬಿದ್ದರು. ಆದರೆ 4ನೇ ಎಸೆತದಲ್ಲಿ ಕಲೀಂ ಅವರು ಹೊಡೆದ ಚೆಂಡನ್ನು ಲೆಗ್ ಲಾಂಗ್ ನಲ್ಲಿದ್ದ ಹಾರ್ದಿಕ್ ಪಾಂಡ್ಯ ಅವರು ಉತ್ತಮ ಫೀಲ್ಡೀಂಗ್ ಮೂಲಕ ಕ್ಯಾಚ್ ಹಿಡಿದರು.
ಅಲ್ಲಿಗೆ ಕಲೀಂ ಹೋರಾಟ ಮುಕ್ತಾಯಗೊಂಡಿತು. ಕಲೀಂ ಅವರು 46 ಎಸೆತದಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದ 64 ರನ್ ಗಳಿಸಿದರು. ಇದಾದ ಬಳಿಕ ಹಮೀದ್ ಮಿರ್ಝಾ ಅವರು ಅರ್ಧಶತಕ ಹೊಡೆದರೂ ತಂಡವನ್ನು ಗೆಲುವಿನ ದಡ ತಲುಪಿಸುವಲ್ಲಿ ಯಶಸ್ವಿಯಾಗಲಿಲ್ಲ. 33 ಎಸೆತಗಳಿಂದ 5 ಬೌಂಡರಿ ಮತ್ತು 2 ಸಿಕ್ಸರ್ ಗಳನ್ನು ಒಳಗೊಂಡ 51 ರನ್ ಗಳಿಸಿದ ಅವರು ಹಾರ್ದಿಕ ಪಾಂಡ್ಯ ಬೌಲಿಂಗ್ ನಲ್ಲಿ ರಿಂಕು ಸಿಂಗ್ ಗೆ ಕ್ಯಾಚಿತ್ತು ಔಟಾದರು. ಈ ಮೂಲಕ ಜತೀಂದರ್ ಸಿಂಗ್ ಬಳಗ ಟೀಂ ಇಂಡಿಯಾ ವಿರುದ್ಧ 21 ರನ್ ಗಳಿಂದ ಪರಾಭವಗೊಂಡಿತು. ಈ ಗೆಲುವಿನ ಮೂಲಕ ಭಾರತ ತಂಡ ಎ ಬಣದಿಂದ ಅಜೇಯವಾಗಿ ಸೂಪರ್ 4ರ ಹಂತವನ್ನು ಪ್ರವೇಶಿಸಿದೆ.
ಕ್ಯಾಪ್ಟನ್ ಸೂರ್ಯ ಹೇಳಿದ್ದೇನು?
ಓಮನ್ ವಿರುದ್ಧದ ತಮ್ಮ ತಂಡದ ಪ್ರದರ್ಶನದ ಬಗ್ಗೆ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ತೃಪ್ತಿ ವ್ಯಕ್ತಪಡಿಸಿದ್ದು, ಮುಂದಿನ ಪಂದ್ಯದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವುದಾಗಿ ಹೇಳಿದ್ದಾರೆ. ಓಮನ್ ತಂಡದ ಪ್ರದರ್ಶನವನ್ನು ಶ್ಲಾಘಿಸುತ್ತಾ, “ಒಟ್ಟಾರೆಯಾಗಿ, ಓಮನ್ ಅದ್ಭುತ ಕ್ರಿಕೆಟ್ ಆಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರ ಕೋಚ್ ಸುಲಕ್ಷಣ ಕುಲಕರ್ಣಿ ಸರ್ ತುಂಬಾ ಕಠಿಣವಾಗಿದ್ದಾರೆಂದು ನನಗೆ ತಿಳಿದಿತ್ತು” ಎಂದು ಹೇಳಿದರು. ಓಮನ್ ತಂಡದ ಬ್ಯಾಟಿಂಗ್ ನೋಡುವುದು ಅದ್ಭುತವಾಗಿತ್ತು ಮತ್ತು ಅದನ್ನು ನಾನು ಸಂಪೂರ್ಣವಾಗಿ ಆನಂದಿಸಿದೆ ಎಂದು ಸೂರ್ಯ ಹೇಳಿದ್ದಾರೆ.
ಸೂಪರ್ ಫೋರ್ ತಲುಪಿದ ಮೊದಲಿಗರಾದ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಅಂತಿಮವಾಗಿ ಭಾನುವಾರದ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ನೀವು ಸಿದ್ಧರಿದ್ದೀರಾ ಎಂದು ಕೇಳಿದಾಗ, ನಮ್ಮ ತಂಡವು ಸೂಪರ್ ಫೋರ್‌ಗೆ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಹೇಳಿದರು.