ವಿಜಯಸಾಕ್ಷಿ ಸುದ್ದಿ, ಧಾರವಾಡ: ನಮ್ಮ ಮಕ್ಕಳು ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕು. ಸ್ಪರ್ಧಾತ್ಮಕ ದಿನಗಳಲ್ಲಿ ಕೇವಲ ಶಾಲಾ ವಿದ್ಯೆ ಸಾಲದು. ಜೊತೆಗೆ ವ್ಯಕ್ತಿತ್ವ ಬೆಳೆಸಿಕೊಳ್ಳಲು ಇಂತಹ ಗೀತ ಗಾಯನ ಕಲಿಕೆ ಅವಶ್ಯ ಎಂದು ಧಾರವಾಡ ಜಿಲ್ಲಾ ಸ್ಕೌಟ್ ಗೈಡ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀಶೈಲ ಕರಿಕಟ್ಟಿ ಹೇಳಿದರು.
ಧಾರವಾಡ ಜಿಲ್ಲಾ ಸ್ಕೌಟ್ ಗೈಡ್ಸ್ ಸಂಸ್ಥೆಯ ಆವರಣದಲ್ಲಿ ಜರುಗಿದ ಗೀತ ಗಾಯನ ಸ್ಪರ್ಧೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಳಗಾವಿ ಶೈಕ್ಷಣಿಕ ವಿಭಾಗಗಳ ಎಂಟು ಜಿಲ್ಲೆಗಳ ವಿವಿಧ ಊರುಗಳಿಂದ ಸುಮಾರು ೫೦೦ ಮಕ್ಕಳು ಸ್ಕೌಟ್ ಗೈಡ್ಸ್ ಕಬ್ಸ್, ಬುಲ್‌ಬುಲ್, ರೋವರ್ಸ್, ರೇಂಜರ್ಸ್ ವಿಭಾಗಗಳಿಂದ ಪಾಲ್ಗೊಂಡಿದ್ದರು. ಸ್ಕೌಟ್ ಗೈಡ್ಸ್ ರೋವರ್ಸ್-ರೇಂಜರ್ಸ್ ವಿಭಾಗಗಳಲ್ಲಿ ವಿಜೇತ ಶಾಲೆಗಳಿಗೆ ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷ ವಿ.ವಿ. ಕಟ್ಟಿಯವರ ವಹಿಸಿದ್ದರು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್.ಎಸ್. ಕೆಳದಿಮಠ, ಬೆಳಗಾವಿ ವಿಭಾಗದ ಸ್ಕೌಟ್ ಗೈಡ್ಸ್ ಮುಖ್ಯಸ್ಥ ಜೆ.ಬಿ. ಮನ್ನಿಕೇರಿ, ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿಗಳಾದ ಎಸ್.ಎಂ. ಹುಡೇದಮನಿ ಹಾಗೂ ಗಿರೀಶ್ ಕಾಂಬಳೆ, ಕೋಶಾಧಿಕಾರಿ ಬಸವರಾಜ ಕಡಕೋಳ, ಸಂಸ್ಥೆಯ ಪದಾಧಿಕಾರಿಗಳಾದ ಡಿ.ಡಿ. ಮಾಳಗಿ, ಎಸ್.ಐ. ನೇಕಾರ, ಭಾಗಿರಥಿ ಕಲಕಾಂಬರ, ಎಸ್.ವಿ. ಮೊರಬ, ತರಬೇತುದಾರರಾದ ಸಿ.ಎಂ. ಕೆಂಗಾರ, ಶಮಶಾದ ಬೇಗಂಮನಿಯಾರ, ಡಿಓಸಿ ಸಿದ್ದಪ್ಪ ಪೂಜಾರ, ಕಾರ್ಯದರ್ಶಿಗಳಾದ ಎಸ್.ಎನ್. ಸಾವಳಗಿ, ಜಿ.ಎ. ಬೆಳಹಾರ, ಜೆ.ಆರ್. ಜವಳಿ ಉಪಸ್ಥಿತರಿದ್ದರು.