ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡಿದ್ದು, ಸಮಾರಂಭಕ್ಕೆ ಸಹಾಯ ಸಹಕಾರ ಮತ್ತು ಶ್ರಮಿಸಿದ ಎಲ್ಲ ಮಹನೀಯರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸುವ ಮುಖಾಂತರ ಅವರನ್ನು ಸ್ಮರಿಸುವ ಕಾರ್ಯವನ್ನು ಮಾಡುತ್ತಿರುವುದು ಸಂತೋಷವನ್ನಿಡು ಮಾಡುತ್ತಿದೆ ಎಂದು ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರಮಠದ ಪೂಜ್ಯ ಶ್ರೀ ಶಿವಶಾಂತವೀರ ಶರಣರು ಹೇಳಿದರು.
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರದಮ ನಿಮಿತ್ತ ಹಮ್ಮಿಕೊಂಡಿದ್ದ ಗದಗ ಉತ್ಸವ-2025ರ ಅಭಿನಂದನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಅಧ್ಯಕ್ಷ ತಾತನಗೌಡ ಎಸ್.ಪಾಟೀಲ ಮಾತನಾಡಿ, ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಲು ಸಹಾಯ-ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಸಂಸ್ಥೆಯ ಸದಸ್ಯರಾದ ರಮೇಶ ಶಿಗ್ಲಿ ಪ್ರಾರ್ಥಿಸಿದರು. ಪ್ರಾಸ್ತಾವಿಕವಾಗಿ ಸಂಸ್ಥೆಯ ಮಾಜಿ ಅಧ್ಯಕ್ಷ ಸಂಗಮೇಶ ದುಂದೂರ ಮಾತನಾಡಿದರು. ಸಮಾರಂಭದಲ್ಲಿ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಪ್ರಾಯೋಜಕತ್ವ ವಹಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ಉತ್ಸವ ಸಮಿತಿ ಚೇರಮನ್, ಕೋ-ಚೇರಮನ್ ಹಾಗೂ ವಿವಿಧ ಉಪ ಸಮಿತಿ ಸದಸ್ಯರಿಗೆ, ಸಂಸ್ಥೆಯ ಪದಾಧಿಕಾರಿಗಳಿಗೆ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸಂಸ್ಥೆಯ ಸಹ ಗೌರವ ಕಾರ್ಯದರ್ಶಿ ರಾಘವೇಂದ್ರ ಎಸ್.ಕಾಲವಾಡ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಉಪಾಧ್ಯಕ್ಷ ಶರಣಬಸಪ್ಪ ಎಸ್.ಗುಡಿಮನಿ ವಂದಿಸಿದರು ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಅಶೋಕಗೌಡ ಕೆ.ಪಾಟೀಲ ತಿಳಿಸಿದ್ದಾರೆ.
ನಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜಕ್ಕೆ ಸಲ್ಲಿಸುವುದರ ಜೊತೆಗೆ ಅವಕಾಶ ಸಿಕ್ಕಾಗ ಒಳ್ಳೆಯ ಕೆಲಸ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ನಮ್ಮ ಧರ್ಮವಾಗಿದೆ. ಪ್ರತಿಯೊಬ್ಬರೂ ತಾವು ಮಾಡುವ ಉದ್ಯೋಗದಲ್ಲಿ ತೃಪ್ತಿ, ನೆಮ್ಮದಿ, ಕಾಣಬೇಕು. ತನ್ನ ಉದ್ಯೋಗ ಬೆಳೆಯುವದರ ಜೊತೆಗೆ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುವ ವ್ಯಕ್ತಿಗಳನ್ನು ಮಕ್ಕಳ ಹಾಗೆ ನೋಡಿಕೊಳ್ಳವುದರಿಂದ ವೃತ್ತಿಯ ಜೊತೆಗೆ ಉದ್ಯಮವೂ ಬೆಳೆಯುತ್ತದೆ ಎಂದು ಶ್ರೀ ಶಿವಶಾಂತವೀರ ಶರಣರು ಹೇಳಿದರು.