HomeChikkamagaluruಜೀವನದಲ್ಲಿ ನಿರ್ದಿಷ್ಟ ಗುರಿಯಿರಬೇಕು : ರಂಭಾಪುರಿ ಶ್ರೀಗಳು

ಜೀವನದಲ್ಲಿ ನಿರ್ದಿಷ್ಟ ಗುರಿಯಿರಬೇಕು : ರಂಭಾಪುರಿ ಶ್ರೀಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು : ಸ್ವಾರ್ಥ ರಹಿತವಾದ ಬದುಕಿಗೆ ಬೆಲೆ-ನೆಲೆಯಿದೆ. ಅದರಲ್ಲಿ ಅಂಥ ಅದ್ಭುತ ಶಕ್ತಿಯಿದೆ. ಜೀವನದಲ್ಲಿ ಉತ್ಸಾಹ ಇದ್ದರೆ ಸಾಧನೆ ಸಿದ್ಧಿಯಾಗುತ್ತದೆ. ಜನ ಮೆಚ್ಚುವಂತಹ ಕೆಲಸ ದೊಡ್ಡದಾದರೆ ದೈವ ಮೆಚ್ಚುವಂತಹ ಕೆಲಸ ಅದಕ್ಕಿಂತಲೂ ದೊಡ್ಡದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ಮಾಚಗೊಂಡನಹಳ್ಳಿ ಶ್ರೀ ಬೇರುಗಂಡಿ ಬೃಹನ್ಮಠದ ಶ್ರೀ ಸಿದ್ಧೇಶ್ವರಸ್ವಾಮಿ ದೇವಾಲಯದ ಕಳಸಾರೋಹಣ ಹಾಗೂ ರೇಣುಕ ಮಹಾಂತ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರದ ವರ್ಧಂತಿ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯ ಜೀವನದಲ್ಲಿ ನಿರ್ದಿಷ್ಟ ಗುರಿಯಿರಬೇಕು. ಆ ಗುರಿ ಸಾಧನೆಗಾಗಿ ನಿರಂತರ ಪ್ರಯತ್ನ ಬೇಕು.
ಮನುಷ್ಯನಲ್ಲಿ ದೃಢ ಸಂಕಲ್ಪ ಗಟ್ಟಿಯಾಗಿದ್ದರೆ ಸತ್ಫಲ ಕಟ್ಟಿಟ್ಟ ಬುತ್ತಿ. ಕರ್ತವ್ಯದ ಕಾಲು ದಾರಿ ಕೀರ್ತಿಯ ಹೆದ್ದಾರಿ. ಸೌಂದರ್ಯ ಜನರ ಗಮನ ಸೆಳೆಯಬಹುದು. ಆದರೆ ವ್ಯಕ್ತಿತ್ವ ಮನಸ್ಸನ್ನು ಆವರಿಸುತ್ತದೆ.
ಭಾರವಿಲ್ಲದ ನೋಟಿಗೆ ಇರುವ ಬೆಲೆ ಭಾವನೆಗಳಿರುವ ಮನುಷ್ಯನಿಗೆ ಇಲ್ಲ. ಬದುಕಿಗೆ ಬಲ ಬರಬೇಕಾಗಿದ್ದರೆ ಸತ್ಕಾರ್ಯ ಸೇವಾ ಮನೋಭಾವ ಮತ್ತು ಉತ್ತಮ ಸಂಸ್ಕಾರ ಪಡೆದರೆ ಬಾಳಿನಲ್ಲಿ ಶ್ರೇಯಸ್ಸನ್ನು ಕಾಣಬಹುದು. ಶ್ರೀ ಮಠದ ಪರಿಸರದಲ್ಲಿ ಅಭಿವೃದ್ಧಿ ಕಾರ್ಯಗಳು ಶ್ರೀಗಳವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿವೆ ಎಂದರು.
ಸಮಾರಂಭ ಉದ್ಘಾಟಿಸಿದ ಶಾಸಕ ಟಿ.ಡಿ. ರಾಜೇಗೌಡರು ಮಾತನಾಡಿ, ಬೆಂದು ಬಸವಳಿದ ಮನಸ್ಸಿಗೆ ನೆಮ್ಮದಿ ಸಿಗಲು ಮನುಷ್ಯ ಧಾರ್ಮಿಕ ಕ್ಷೇತ್ರಗಳಿಗೆ ಹೋಗಬೇಕಾಗುತ್ತದೆ. ಶಾಚಿತಿ-ನೆಮ್ಮದಿಗಿಂತ ಮಿಗಿಲಾದ ಯಾವುದೇ ಸಂಪತ್ತಿಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ, ಸಾಮಾಜಿಕ ಚಿಂತನಗಳು ಸಕಲರ ಬದುಕಿನಲ್ಲಿ ಆಶಾ ಕಿರಣವಾಗಿವೆ. ಧರ್ಮ ಪಾಲನೆಯಿಂದ ಜೀವನ ಉಜ್ವಲಗೊಳ್ಳುವುದೆಂದರು.
ನೊಣವಿನಕೆರೆ ಡಾ. ಕರಿವೃಷಭ ಶಿವಯೋಗೀಶ್ವರ ಸ್ವಾಮಿಗಳು ನೇತೃತ್ವ ವಹಿಸಿ ಲಿಂ.ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ ವಿಶ್ವ ಬಂಧುತ್ವದ ಚಿಂತನೆಗಳನ್ನು ಹಂಚಿಕೊಂಡರು. ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ದರಾಮೇಶ್ವರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಚಿಕ್ಕಮಗಳೂರು ಶಂಕರದೇವರಮಠದ, ಹುಣಸಘಟ್ಟ ಹಾಲುಸ್ವಾಮಿಮಠದ, ಬೀರೂರು ಬಾಳೆಹೊನ್ನೂರು ಖಾಸಾ ಮಠದ, ತೆಂಡೇಕೆರೆ ಮಠದ, ಹೆಗ್ಗಡಹಳ್ಳಿ ಹಿರೇಮಠದ, ಸಂಗೊಳ್ಳಿ ಹಿರೇಮಠದ, ನೆಗಳೂರು ಹಿರೇಮಠದ, ಹಣ್ಣೆ ಮಠದ ಶ್ರೀಗಳು ಉಪಸ್ಥಿತರಿದ್ದರು.
ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಮಾಜಿ ಶಾಸಕ ಎಮ್.ಪಿ. ಕುಮಾರಸ್ವಾಮಿ, ಹೆಚ್.ಎಮ್. ಲೋಕೇಶ್, ಕೆ.ವಿ. ವೀರರಾಜಗೌಡರು, ಮಹೇಶ್ ಕೆ.ಎಸ್, ಚಿಕ್ಕಮಗಳೂರಿನ ಜಿ.ಎಮ್. ರಾಜಶೇಖರ ಸೇರಿದಂತೆ ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.
 ಅರ್ಪಿತಾ ಮತ್ತು ಎನ್.ಎನ್. ಯುವರಾಜ ದಂಪತಿಗಳಿಗೆ ವಿಶೇಷ ಗುರುರಕ್ಷೆಯಿತ್ತು ಆಶೀರ್ವದಿಸಿದರು. ದೇವಿ ಗುರುಕುಲದವರಿಂದ ಪ್ರಾರ್ಥನೆ, ಬಿ.ಎ. ಶಿವಶಂಕರ್ ಇವರಿಂದ ಸ್ವಾಗತ, ವೇದಶ್ರೀ ಇವರಿಂದ ಭರತ ನಾಟ್ಯ ಜರುಗಿತು. ಗೋಣಿಬೀಡು ಮೋಹನ್ ರಾಜಣ್ಣ ಮತ್ತು ರಂಭಾಪುರಿ ಪೀಠದ ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯ ಸ್ವಾಮಿಗಳು, ಬದುಕಲು ಹಣ ಬೇಕು. ಹೊಂದಿಕೊಂಡು ಬಾಳಲು ಗುಣ ಬೇಕು. ಕೆಟ್ಟವರು ತುಂಬಾ ಬೆಳೆಯಬಹುದು. ಆದರೆ ಉಳಿಯಲು ಸಾಧ್ಯವಿಲ್ಲ. ಒಳ್ಳೆಯವರನ್ನು ತುಂಬಾ ತುಳಿಯಬಹುದು ಆದರೆ ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಶ್ರೀ ರಂಭಾಪುರಿ ಜಗದ್ಗುರುಗಳವರ ಮಾರ್ಗದರ್ಶನ ಲಿಂ.ಚಂದ್ರಶೇಖರ ಶ್ರೀಗಳ ಆಶೀರ್ವಾಧ ಮತ್ತು ಭಕ್ತರ ಸಹಕಾರದಿಂದ ಇಷ್ಟೆಲ್ಲ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದರು.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!