ಪುರಾಣ, ಪ್ರವಚನಗಳನ್ನು ನಿರಂತರ ಆಲಿಸಬೇಕು

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಸಮಾಜದ ಒಳಿತಿಗಾಗಿ ತನ್ನ ಜೀವನವನ್ನು ಮುಡುಪಾಗಿಟ್ಟ ಗುಡ್ಡಾಪೂರ ದಾನಮ್ಮ ದೇವಿಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುಂಡರಗಿಯ ನಾಡೋಜ ಡಾ. ಅನ್ನದಾನೀಶ್ವರ ಸ್ವಾಮೀಜಿಗಳು ಹೇಳಿದರು.

Advertisement

ಇಲ್ಲಿಯ ಅನ್ನದಾನೀಶ್ವರ ಶಾಖಾ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಗುಡ್ಡಾಪೂರ ದಾನಮ್ಮ ದೇವಿ ಪುರಾಣ ಮುಕ್ತಾಯ ಸಮಾರಂಭದ ಸಾನ್ನಿಧ್ಯ ವಹಿಸ್ಯಿವರು ಆಶೀರ್ವಚನ ನೀಡುತ್ತಿದ್ದರು.

ಹರ್ಲಾಪೂರದ ಕೊಟ್ಟೂರೇಶ್ವರ ಮಠದ ಡಾ. ಕೊಟ್ಟೂರೇಶ್ವರ ಶ್ರೀಗಳು ಮಾತನಾಡಿ, ಆಚಾರ, ವಿಚಾರ, ಜ್ಞಾನ, ಮತ್ತು ಭಕ್ತಿ ಭಾವನೆಗಳಿಂದ ಈ ಸಮಾಜದ ಉದ್ಧಾರಕ್ಕಾಗಿಯೇ ಬದುಕು ಸಾಗಿಸಿದ ಗುಡ್ಡಾಪೂರ ದಾನಮ್ಮ ದೇವಿಯಂತೆಯೇ ಅನ್ನದಾನೀಶ್ವರ ಶ್ರೀಗಳು ಧಾರ್ಮಿಕ ಚಿಂತನೆಗಳ, ಪ್ರಚವನಗಳ ಮೂಲಕ ಹಾಗೂ ತಮ್ಮ ಅದ್ಭುತ ಸಾಹಿತ್ಯ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರಿಗೆ ಹಣ, ಸಂಪತ್ತು ಕೊಡುವುದು ಬೇಡ, ತಮ್ಮ ಭಕ್ತಿಯನ್ನು ಕೊಟ್ಟರೆ ಸಾಕು ಅವರ ಆರ್ಶಿವಾದ ದೊರೆತು ಜೀವನ ಪಾವನವಾಗುತ್ತದೆ. ಇಂದು ಕೆಲವು ದೇವಸ್ಥಾನ, ಮಠ-ಮಾನ್ಯಗಳು ಸ್ವಾರ್ಥಕ್ಕಾಗಿ ಹುಟ್ಟಿಕೊಂಡು ಹಣ ಸಂಪಾದನೆಯ ಕೇಂದ್ರಗಳಾಗಿದ್ದು, ಭಕ್ತರು ಜಾಗೃತರಾಗಿರಬೇಕು ಎಂದು ಎಚ್ಚರಿಕೆ ನೀಡಿದ ಅವರು ಸಕಾಲ, ಅಕಾಲ, ಪೂರ್ವ ಕಾಲದ ಮರಣದ ಕುರಿತು ವಿವರಿಸಿದರು.

ಪುರಾಣ ಪ್ರವಚನ ಮುಕ್ತಾಯ ಮಾಡಿದ ಆಧ್ಯಾತ್ಮಿಕ ಚಿಂತಕಿ ಡಾ. ಗಿರಿಜಾ ಹಸಬಿ ಮಾತನಾಡಿ, ಶರೀರ, ಬುದ್ಧಿ, ಆತ್ಮ ವಿಕಾಸವಾಗಲು ಶರಣರ, ಮಹಾತ್ಮರ ಚರಿತ್ರೆಗಳನ್ನು ಆಲಿಸಬೇಕು. ಅರಿಷಡ್ವರ್ಗಗಳನ್ನು ತ್ಯಜಿಸಿ ಸತ್ಕಾರ್ಯಗಳಲ್ಲಿ ತೊಡಗಿಕೊಂಡು ತನು-ಮನ ಶುದ್ಧಿ ಮಾಡಿಕೊಳ್ಳಬೇಕು. ನಮ್ಮಲ್ಲಿಯ ವಿಕಾರಗಳ ಅಂಗಗಳನ್ನು ತೊರೆದು ವೈಜ್ಞಾನಿಕವಾದ ಲಿಂಗ ಪೂಜೆ ನಿಷ್ಠರಾಗಬೇಕು. ಮನುಷ್ಯನಲ್ಲಿಯ ಮನ, ನಿಶ್ಚಯ, ಮತ್ತು ಆವರಣ ಎಂಬ ಮೂರು ದೋಷಗಳನ್ನು ಕಳೆದುಕೊಳ್ಳಲು ದಾರ್ಶನಿಕರ ತತ್ವಗಳನ್ನು ಅಳವಡಿಸಿಕೊಂಡು ನಿನ್ನನ್ನು ನೀನು ಅರಿತರೆ ದೇವನಾಗಬಹುದು ಎಂದು ವಿವರಿಸಿದರು.

ಸೇವಾ ನಿವೃತ್ತಿಯಾದ ಸುರೇಶ ಹುಬ್ಬಳ್ಳಿ, ಮಹೇಶ ಪಾಟೀಲ, ಶರಣಪ್ಪ ನವಚಿದ್ರ ಹಾಗೂ ಪುರಾಣ ಸೇವಾ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಷಡಕ್ಷರಯ್ಯ ಬದ್ನಿಮಠ, ಬಸನಗೌಡ ಪಾಟೀಲ ಸಂಗೀತ ಸೇವೆ ನೀಡಿದರು.

ವೇ.ಮೂ ಶಂಕ್ರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಯುವ ಧುರೀಣ ವೀರಯ್ಯ ಗಂಧದ, ಗ್ರಾ.ಪಂ ಸದಸ್ಯರಾದ ಪೀರಸಾಬ ನದಾಫ್, ರಮೇಶ ಭಾವಿ, ವಿರೂಪಾಕ್ಷಪ್ಪ ಬೆಟಗೇರಿ, ರಜೀಯಾಬೇಗಂ ತಹಸೀಲ್ದಾರ, ಪಿ.ಡಿ.ಒ ಅಮೀರನಾಯಕ ಉಪಸ್ಥಿತರಿದ್ದರು. ಅಮರೇಶ ಕರೆಕಲ್ಲ ಸ್ವಾಗತಿಸಿದರು. ಮುತ್ತುರಾಜ್ ಗಡ್ಡಿ ನಿರೂಪಿಸಿದರು.

ದಾನಮ್ಮ ದೇವಿಯಂತಹ ಶರಣೆಯರು, ಶರಣರು ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಬಾಳಿದ್ದಾರೆ. ಅಲ್ಲಮಪ್ರಭುಗಳು, ಅಜಗಣ್ಣ, ಮುಕ್ತಾಯಕ್ಕರು ಮೌಲ್ಯಯುತ ಬದುಕು ಈ ಗ್ರಾಮದಲ್ಲಿ ನೆಲೆಯೂರಿದೆ. ಇಂತಹ ಪವಿತ್ರವಾದ ಸ್ಥಾನದಲ್ಲಿ ಪ್ರಾಣಿಗಳಿಗಿಂತ ಕೀಳಾಗದೇ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ನಿತ್ಯ ನಿರಂತರ ಪುರಾಣ, ಪ್ರವಚನಗಳನ್ನು ಆಲಿಸಬೇಕು ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ಸಲಹೆ ನೀಡಿದರು.


Spread the love

LEAVE A REPLY

Please enter your comment!
Please enter your name here