ವಿಜಯಸಾಕ್ಷಿ ಸುದ್ದಿ, ಗದಗ: ನಿಜಶರಣ ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಮಾಜದ ಸುಧಾರಣೆಗೆ ಶ್ರಮಿಸಿದವರು ಎಂದು ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಬುಧವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬಿಗರ ಚೌಡಯ್ಯನವರು 12ನೇ ಶತಮಾನದ ಶಿವಶರಣರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದ್ದಾಗಿತ್ತು. ಬಸವಣ್ಣನವರಿಂದ ಲಿಂಗದ ದೀಕ್ಷೆಯನ್ನು ಪಡೆದರು. ಕಾಯಕ ಅಥವಾ ವ್ಯಕ್ತಿನಾಮವಾದ ಅಂಬಿಗರ ಚೌಡಯ್ಯ ಎಂಬುದೇ ಇವರ ವಚನಗಳ ಅಂಕಿತವಾಗಿದೆ. ಅಂಬಿಗರ ಚೌಡಯ್ಯನವರು ನೇರವಾದ ನುಡಿ, ದಿಟ್ಟವಾದ ನಡೆಗೆ ಹೆಸರಾಗಿದ್ದರು. ನಿಷ್ಠುರವಾದಿಗಳಾಗಿದ್ದು, ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರ ಹೊಡೆದೋಡಿಸಿ ಸಮಾಜ ಸುಧಾರಣೆಗೆ ಶ್ರಮಿಸಿದವರು. ನಾವು ವೈಚಾರಿಕವಾಗಿ ಬದುಕಲು ಕಲಿಯಬೇಕು. ಸ್ವಾಭಿಮಾನ, ಆತ್ಮ ವಿಶ್ವಾಸದಿಂದ ಬದುಕಬೇಕು. ಅಂಬಿಗರ ಚೌಡಯ್ಯನವರ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರಿಗೆ ಸನ್ಮಾನಿಸಲಾಯಿತು.
ನರೇಗಲ್ಲದ ಉಪನ್ಯಾಸಕ ಶಿವಾನಂದ ಗೋಗೇರಿ ಅಂಬಿಗರ ಚೌಡಯ್ಯನವರ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಡಿವೈಎಸ್‌ಪಿ ವಿದ್ಯಾಧರ ನಾಯಕ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹನಬರಟ್ಟಿ, ಅಂಬಿಗರ ಚೌಡಯ್ಯ ಸಮಾಜದ ಜಿಲ್ಲಾಧ್ಯಕ್ಷ ಜೆ.ಬಿ. ಗಾರವಾಡ, ಉಪಾಧ್ಯಕ್ಷ ಸಿ.ಪಿ. ಬಾರಕೇರ, ತಾಲೂಕಾಧ್ಯಕ್ಷ ಡಾ. ಗಣೇಶ ಸುಲ್ತಾನಪುರ, ಪ್ರಮುಖರಾದ ಯಶೋಧಾ ಜಾಲಗಾರ, ಶಕುಂತಲಾ ಜಕನೂರ, ಪ್ರೇಮಾ ಮನಗೂಳಿ, ಕೀರ್ತಿ ಜಕನೂರ, ಪ್ರಕಾಶ ಪೂಜಾರ, ಕೆ.ಎನ್. ಸುಣಗಾರ, ಮಂಜುನಾಥ ಸುಣಗಾರ, ಸುಭಾಸ ಕದಡಿ, ಮಾಲತೇಶ ಬಾರ್ಕಿ, ಮಾರುತಿ ಕೌದಿ, ಚಂದ್ರಶೇಖರ ಅಂಬಿಗೇರ, ವಿವಿಧ ಇಲಾಖೆಯ ಅಧಿಕಾರಿಗಳು, ಸಮಾಜದ ಪ್ರಮುಖರು, ಗಣ್ಯರು, ಹಿರಿಯರು ಹಾಜರಿದ್ದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ಮಾತನಾಡಿ, ಅಂಬಿಗರ ಚೌಡಯ್ಯನವರು ನೇರ ನಿಷ್ಠುರವಾದಿಗಳಾಗಿದ್ದರು. ಕಾಯಕ ನಿಷ್ಠೆಗೆ ಹೆಸರಾದ ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ತಾರತಮ್ಯ ಹೋಗಲಾಡಿಸಿ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದರು. ಸಮಾಜ ಸುಧಾರಣೆಯಾಗಬೇಕಾದರೆ ಶಿಕ್ಷಣವೊಂದೇ ಮಾರ್ಗವಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು ಎಂದರು.



