ಬೆಂಗಳೂರು: ಯಾವುದನ್ನೇ ಆಗಲಿ ತಿಳಿದು ಮಾತನಾಡಬೇಕು. ತಿಳಿಯದೇ ಮಾತನಾಡಿದರೆ ಅದರ ಇಂಪ್ಯಾಕ್ಟ್ ಸಮಾಜದಲ್ಲಿ ಹೆಚ್ಚಾಗುತ್ತದೆ. ಸಮಾಜದಲ್ಲಿ ಏನಾಗುತ್ತಿದೆ ಎಂಬುದನ್ನು ಅರಿತು ಹೇಳಿಕೆ ನೀಡಬೇಕು ಎಂದು ಗೃಹ ಸಚಿವ ಜಿ. ಪರಮೇಶ್ವರ್ ವಾಗ್ದಾಳಿ ನಡೆಸಿದರು.
ಬಳ್ಳಾರಿ ಘರ್ಷಣೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮರಣೋತ್ತರ ಪರೀಕ್ಷೆಯನ್ನು ಎರಡು ಬಾರಿ ನಡೆಸಲಾಗಿದೆ ಎಂಬ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, “ಯಾವುದನ್ನೇ ಆಗಲಿ ತಿಳಿದು ಮಾತನಾಡಬೇಕು.
ತಿಳಿಯದೇ ಮಾತನಾಡಿದರೆ ಅದರ ಪರಿಣಾಮ ಸಮಾಜದ ಮೇಲೆ ಬೀರುತ್ತದೆ. ಈಗಾಗಲೇ ವೈದ್ಯರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಎರಡು ಬಾರಿ ಪೋಸ್ಟ್‌ಮಾರ್ಟಂ ನಡೆದಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನು ನಾಯಕರು ಗಮನಿಸಿದ್ದಾರಾ? ನಾನು ವೈದ್ಯರ ಹೇಳಿಕೆಯನ್ನು ಒಪ್ಪುತ್ತೇನೆ” ಎಂದು ಸ್ಪಷ್ಟಪಡಿಸಿದರು.
ಮುಂದುವರಿದು ಮಾತನಾಡಿದ ಅವರು, “ನಾನು ಗೃಹ ಸಚಿವನಾಗಿ ಯಾವ ಸಂದರ್ಭದಲ್ಲಿ ಏನು ಮಾಡಬೇಕು, ಯಾವ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ. ನಾನು 38 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನನಗೂ ಸಾಕಷ್ಟು ಅನುಭವವಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ತೀರ್ಮಾನಗಳನ್ನು ತೆಗೆದುಕೊಂಡಿದ್ದೇನೆ. ಕೇವಲ ಒಂದೇ ಒಂದು ಘಟನೆ ಆಧರಿಸಿ ಸರ್ಟಿಫಿಕೇಟ್ ನೀಡುವುದು ಸರಿಯಲ್ಲ” ಎಂದು ಕಿಡಿಕಾರಿದರು.



