ಬೆಂಗಳೂರು:- ನಗರದಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಇದಕ್ಕೆ ಸವಾರರ ಅವೈಜ್ಞಾನಿಕ ಒನ್‌ವೇ ಸಂಚಾರವೇ ಪ್ರಮುಖ ಕಾರಣ ಎಂಬುದು ಸಂಚಾರಿ ಪೊಲೀಸರ ಆಂತರಿಕ ಸಮೀಕ್ಷೆಯಿಂದ ಬಹಿರಂಗವಾಗಿದೆ.
50–100 ಮೀಟರ್ ಮಾತ್ರವೆಂದು ನಿಯಮ ಉಲ್ಲಂಘಿಸಿ ಒನ್‌ವೇಗಳಲ್ಲಿ ನುಗ್ಗುವ ಸವಾರರಿಂದ ಎದುರುಬರುವ ವಾಹನಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು, ಇದರಿಂದ ನಗರದಲ್ಲಿ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಈ ಹಿನ್ನೆಲೆ ಟ್ರಾಫಿಕ್ ಹತೋಟಿಗೆ ಮೊದಲ ಹೆಜ್ಜೆಯಾಗಿ ಬೆಂಗಳೂರು ಸಂಚಾರಿ ಪೊಲೀಸರು ಆರ್‌ಟಿಓ ಜೊತೆ ಕೈಜೋಡಿಸಿ ಒನ್‌ವೇ ಸವಾರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ವಿಶೇಷ ತಂಡಗಳನ್ನು ರಚಿಸಿ ನಿಯಮ ಉಲ್ಲಂಘಿಸುವ ಸವಾರರನ್ನು ಪತ್ತೆಹಚ್ಚಿ, ಅವರ ಚಾಲನಾ ಪರವಾನಗಿಗಳನ್ನು ಆರ್‌ಟಿಓಗೆ ರವಾನೆ ಮಾಡಲಾಗುತ್ತಿದ್ದು, ಪೊಲೀಸರ ಶಿಫಾರಸಿನ ಮೇರೆಗೆ ಇಂತಹ ಡಿಎಲ್‌ಗಳನ್ನು ಮೂರು ತಿಂಗಳ ಕಾಲ ಅಮಾನತು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.



