ವಿಜಯಸಾಕ್ಷಿ ಸುದ್ದಿ, ಡಂಬಳ: ಹವಾಮಾನ ವೈಪರಿತ್ಯ, ನಿರಂತರ ಮಳೆಯಿಂದಾಗಿ ಈರುಳ್ಳಿ ಇಳುವರಿ ಕುಂಠಿತವಾಗಿದ್ದಷ್ಟೇ ಅಲ್ಲದೆ, ಇದೀಗ ದರ ಕುಸಿತದಿಂದ ಬೆಳೆಗಾರರನ್ನು ಅಕ್ಷರಶಃ ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಡಂಬಳ ಸೇರಿದಂತೆ ತಾಲೂಕಿನ ಡೋಣಿ, ಡೋಣಿ ತಾಂಡ, ಅತ್ತಿಕಟ್ಟಿ, ಮುರಡಿ ತಾಂಡ, ಕದಾಂಪುರ ಮುಂತಾದ ಕಡೆಗಳಲ್ಲಿ ಮುಂಗಾರು ಹಂಗಾಮಿನಲ್ಲಿ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ.
ಡಂಬಳ ಸುತ್ತಮುತ್ತ ರೆಡ್ ಈರುಳ್ಳಿ ಎಂದು ಕರೆಯುವ ಸ್ಥಳೀಯ ತಳಿಯ ಈರುಳ್ಳಿ ಬೆಳೆಯಲಾಗುತ್ತದೆ. ಇಲ್ಲಿ ಬೆಳೆಯುವ ಈರುಳ್ಳಿ ಗಾತ್ರದಲ್ಲಿ ಸ್ವಲ್ಪ ದೊಡ್ಡದು ಮತ್ತು ಚಿಕ್ಕದಾಗಿದ್ದರೂ ಕೂಡಾ ರುಚಿಗೆ ಹೆಸರಾಗಿದೆ. ಜೂನ್ ಅಥವಾ ಜುಲೈ ತಿಂಗಳಲ್ಲಿ ನಾಟಿ ಮಾಡಿ ಅಗಸ್ಟ್-ಸಪ್ಟೆಂಬರ್, ಅಕ್ಟೋಬರ್‌ನಲ್ಲಿ ಬೆಳೆ ಕಟಾವು ಮಾಡಲಾಗುತ್ತದೆ.
ಇದೀಗ ಈರುಳ್ಳಿ ಬೆಲೆ 600ರಿಂದ 1000 ರೂ.ಗೆ ಕುಸಿದಿದೆ. ಈರುಳ್ಳಿ ಬೆಳೆದ ರೈತರು, ಉತ್ತಮ ಬೆಲೆ ದೊರೆಯಬಹುದೆಂಬ ನಿರೀಕ್ಷೆಯಲ್ಲಿ ತಾವು ಬೆಳೆದ ಈರುಳ್ಳಿಯನ್ನು ತಮ್ಮ ಹೊಲಗಳಲ್ಲಿಯೇ ಕಿತ್ತು ಹಾಕಿದ್ದರೆ, ಕೆಲ ರೈತರು ಈರುಳ್ಳಿ ಕೊಯಿಲು ಮಾಡಿ ತಂದು ಮಾರಾಟಕ್ಕೆ ಸಿದ್ಧಪಡಿಸುತ್ತಿದ್ದಾರೆ. ಆದರೆ, ಬೆಳೆಯನ್ನು ಮಾರುಕಟ್ಟೆಗೆ ಕೊಂಡುಹೋದರೆ ಬೆಲೆ ಕುಸಿತದಿಂದ ಕಂಗಾಲಾಗುವಂತಾಗಿದೆ. ರೈತರಿಗೆ ನ್ಯಾಯ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗುತ್ತಿರುವುದರಿಂದ ಕೆಲ ರೈತರು ಬೆಲೆ ಬರುವುದಿಲ್ಲ ಎಂದು ಟ್ರ್ಯಾಕ್ಟರ್ ಮೂಲಕ ರೋಟರ್ ಹೊಡೆಯಲು ಮುಂದಾಗಿದ್ದು, ಈರುಳ್ಳಿ ಬೆಳೆ ಮಣ್ಣು ಸೇರುವ ಸಂದರ್ಭ ಎದುರಾಗಿದೆ.
ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿಯನ್ನು ಮಾರಾಟಗಾರರು 25-30 ರೂ.ಗಳಂತೆ ಮಾರಾಟ ಮಾಡುತ್ತಿದ್ದಾರೆ. ಆದರೆ ಈ ಬೆಲೆ ಮಾತ್ರ ಬೆಳೆದ ರೈತರಿಗೆ ಸಿಗುತ್ತಿಲ್ಲ. ರೈತರು ಬೆಳೆದ ಈರುಳ್ಳಿ ಕ್ವಿಂಟಲ್‌ಗೆ 600ರಿಂದ 1000 ರೂ.ಗೆ ಕೇಳುತ್ತಿರುವುದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಶೀಘ್ರವಾಗಿ ಈರುಳ್ಳಿ ಬೆಲೆಗೆ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿಗೆ ಮುಂದಾಗಿ, ರೈತರು ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ. ರೈತರ ಆರ್ಥಿಕ ಸಂಕಷ್ಟವನ್ನು ತಡೆಯುವ ಕಾರ್ಯಕ್ಕೆ ಸರ್ಕಾರಗಳು ಮುಂದಾಗಬೇಕು ಎನ್ನುತ್ತಾರೆ ಡಂಬಳ ಹೋಬಳಿಯ ಈರುಳ್ಳಿ ಬೆಳೆಗಾರರು.
“ಲಕ್ಷಾಂತರ ರೂ ಸಾಲ ಮಾಡಿ ರೈತರು ಈರುಳ್ಳಿ ಬೆಳೆದಿದ್ದು, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅತಿ ಶೀಘ್ರವಾಗಿ ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿಸಬೇಕು. ರಾಷ್ಟ್ರೀಯಕೃತ ಬ್ಯಾಂಕ್‌ಗಳಲ್ಲಿ ರೈತರ ಮಾಡಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು”
– ವಾಯ್.ಎನ್. ಗೌಡರ
ಸಾಮಾಜಿಕ ಹೋರಾಟಗಾರರು, ಮುಂಡರಗಿ.