ವಿಜಯಸಾಕ್ಷಿ ಸುದ್ದಿ, ಡಂಬಳ: ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಹಾಗೂ ಗುರುವಾರ ಹಗಲು ರಾತ್ರಿ ಧಾರಾಕಾರ ಮಳೆಯಾಗಿದ್ದು, ಈರುಳ್ಳಿ ಬೆಳೆದ ರೈತರಲ್ಲಿ ಆತಂಕ ಮೂಡಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಮೆಕ್ಕೆಜೋಳ, ಈರುಳ್ಳಿ, ಶೇಂಗಾ ಬೆಳೆಗಳು ಕೊಳೆತುಹೋಗುವ ಭಯ ಆವರಿಸಿದೆ.
ಕಟಾವು ಹಂತದಲ್ಲಿರುವ, ಕಟಾವು ಮಾಡಿ ಜಮೀನಿನಲ್ಲಿರುವ ಈರುಳ್ಳಿ ಬೆಳೆಗಳನ್ನು ಮತ್ತು ಕಟಾವು ಮಾಡಿ ಡಂಬಳ ಗ್ರಾಮದ ಎಪಿಎಂಸಿ, ತೋಂಟದಾರ್ಯ ಮಠದ ಆವರಣದ ಮುಂದೆ, ತಾಂಬೋಟಿಯವರ ಜಮೀನಿನಲ್ಲಿ, ಶ್ರೀ ಹಾಲೇಶ್ವರ ಗದ್ದುಗೆಯ ಖಾಲಿ ಜಾಗದಲ್ಲಿ ನೂರಾರು ರೈತರು ಈರುಳ್ಳಿ ಬೆಳೆಗೆ ತಾಡಪತ್ರಿಗಳನ್ನು ಮುಚ್ಚಿ ಬೆಳೆ ರಕ್ಷಣೆಗೆ ಮುಂದಾದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಕ್ತ ಬೆಳೆ ಹಾನಿ ಪರಿಹಾರ ಮತ್ತು ಈರುಳ್ಳಿ ಖರೀದಿ ಕೇಂದ್ರಗಳನ್ನು ತೆರೆದು ಸೂಕ್ತ ಬೆಲೆ ಕೊಡಿಸಲು ಜನ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಮುಂದೆ ಬರಬೇಕು ಎಂದು ಡಂಬಳ ಹೋಬಳಿಯ ರೈತರಾದ ರಾಮಣ್ಣ, ಮಂಜುಪ್ಪ ಸೇರಿದಂತೆ ರೈತ ಸಂಘಟನೆಗಳು ಒತ್ತಾಯಿಸಿವೆ.



