ಬಾಗಲಕೋಟೆ;- ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್ ಸರ್ಕಾರದ ಆಯಸ್ಸು ಕಡಿಮೆ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ. ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲೂ ಬಿಜೆಪಿ ಸರ್ಕಾರ ರಚನೆಯಾಗುವುದೇ ಎಂಬ ಪ್ರಶ್ನೆಗೆ ಅವರವರ ಹೊಡೆದಾಟದಿಂದಾಗಿಯೇ ಸರ್ಕಾರ ಬೀಳಲಿದೆ ಎಂದು ಹೇಳಿದರು.
ನಮ್ಮದು ರಾಜಕೀಯ ಪಕ್ಷವಾಗಿದ್ದು, ಎಣ್ಣೆ ಬಂದಾಗ ಕಣ್ಣು ಮುಚ್ಚಿ ಕೂರುವುದಿಲ್ಲ. ರಾಜಕೀಯ ಪಕ್ಷವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದರು. ಆಪರೇಷನ್ ಕಮಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮಗೆ ಆಪರೇಷನ್ ಕಮಲ ಮಾಡುವ ಅವಶ್ಯಕತೆಯಿಲ್ಲ. ಪಕ್ಷಕ್ಕೆ ಯಾರನ್ನು ಕರೆ ತರುವ ಅವಶ್ಯಕತೆಯೂ ನಮಗಿಲ್ಲ. ಅವರವರೇ ಕಚ್ಚಾಡಿ ಇಂದು ಬೀದಿಗೆ ಬಂದಿದ್ದಾರೆ. ಹಾಲು ಕುಡಿದು ಸಾಯುವವರಿಗೆ ವಿಷ ಹಾಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.
ಸರ್ಕಾರ ಕೆಡವಲು ಬಿಜೆಪಿ ಮುಂದಾಗಿದೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಉತ್ತರಿಸಿದ ಅವರು, ಬಿಜೆಪಿ ಮೇಲೆ ಆರೋಪ ಮಾಡಲು ಅವರ ಬಳಿ ಯಾವುದೇ ಆಧಾರಗಳು ಇಲ್ಲ. ಅವರಿಗೆ ಅಭದ್ರತೆ ಕಾಡುತ್ತಿದೆ. ಅದಕ್ಕಾಗಿಯೇ ಇಂಥ ಮಾತು ಆಡುತ್ತಿದ್ದಾರೆ. ಅವರಲ್ಲೇ ಕಚ್ಚಾಡಿ ನೆಲಕಚ್ಚುತ್ತಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದರು