ವಿಜಯಸಾಕ್ಷಿ ಸುದ್ದಿ, ಗದಗ: ಕೆಲ ದಿನಗಳ ಹಿಂದೆ ದೇಶದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ಹೀನ ಕೃತ್ಯಕ್ಕೆ ಪ್ರತ್ಯುತ್ತರವಾಗಿ ಪಾಕಿಸ್ತಾನದ ನಾಗರಿಕರಿಗೆ ತೊಂದರೆಯಾಗದಂತೆ ಉಗ್ರರ ಅಡಗುತಾಣಗಳನ್ನು ಪತ್ತೆ ಮಾಡಿ ಧ್ವಂಸ ಮಾಡಲಾಗಿದೆ. ಈ ಸಾಧನೆ ನಮ್ಮ ದೇಶದ ಗರ್ವವನ್ನು ಹೆಚ್ಚಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೆಮ್ಮೆಯಿಂದ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ `ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಏಪ್ರಿಲ್ 22ರಂದು ಪಹಲ್ಗಾಮದಲ್ಲಿ ಉಗ್ರರ ಅಟ್ಟಹಾಸಕ್ಕೆ 26 ಅಮಾಯಕ ನಾಗರಿಕರು ಬಲಿಯಾದರು. ಇದಕ್ಕೆ ಪ್ರತಿಯಾಗಿ ಆಪರೇಶನ್ ಸಿಂಧೂರ ಮಾಡಿದ್ದಾರೆ. ಇದರಲ್ಲಿ ಭಾಗಿಯಾದ ರಕ್ಷಣಾ ಪಡೆಯ ಮುಖ್ಯಸ್ಥರಿಗೆ, ಪ್ರಧಾನಮಂತ್ರಿ ನರೇಂದ್ರ ಮೋದಿ, ಅಜಿತ ದೋವೆಲ್, ಕರ್ನಲ್ ಸೋಫಿಯಾ ಖುರೇಶಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್‌ಗೆ ಅಭಿನಂದನೆ ಸಲ್ಲಿಸಿದರಲ್ಲದೆ, ಈ ಸಂದರ್ಭದಲ್ಲಿ ನಾವೆಲ್ಲರೂ ರಾಷ್ಟçದ ಪರವಾಗಿ ನಿಲ್ಲೋಣ ಎಂದರು.
ಕರ್ನಾಟಕ ಖನಿಜ ಅಬಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರೋಣ ಶಾಸಕರಾದ ಜಿ.ಎಸ್. ಪಾಟೀಲ ಮಾತನಾಡಿ, ಯುದ್ಧ ಪ್ರಾರಂಭವಾದರೆ ಎಲ್ಲಿಗೆ ತಲುಪುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ರಷ್ಯಾ–ಉಕ್ರೇನ್ ನಡುವೆ ಪ್ರಾರಂಭವಾದ ಯುದ್ಧ ಇಂದಿಗೂ ನಡೆಯುತ್ತಿದೆ. ಯುದ್ಧದಲ್ಲಿ ಜನಸಾಮಾನ್ಯರ ಜೀವಹಾನಿಯಾಗಬಾರದು. ಸಭೆಗೆ ಆಗಮಿಸಿದ ಮಾಜಿ ಸೈನಿಕರನ್ನು ನೋಡಿ ನನಗೆ ದೇಶಭಕ್ತಿ ಇಮ್ಮಡಿಗೊಳ್ಳುತ್ತದೆ ಎಂದು ನುಡಿದರು.
ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಉಗ್ರರ ದಾಳಿ ಹೀನ ಕೃತ್ಯವಾಗಿದೆ. ಯುದ್ಧ ನಡೆದಲ್ಲಿ ಜನರ ಜೀವ ರಕ್ಷಣೆಗೆ ಮುಂಜಾಗ್ರತಾ ಕ್ರಮಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೈಗೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ದೇಶ ಮತ್ತು ರಾಜ್ಯದಲ್ಲಿ ಯುದ್ಧ ಎದುರಿಸಲು ನಾವೆಲ್ಲ ಸನ್ನದ್ಧರಾಗಬೇಕು. ದಾಳಿಗೆ ಪ್ರತಿ ದಾಳಿ ಮಾಡಿದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜನಸಾಮಾನ್ಯರಿಗೆ ಜಾಗೃತಿ ಮೂಡಿಸೋಣ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾತನಾಡಿ, ಈ ಸಭೆಯು ನಮಗೆಲ್ಲ ಪ್ರೇರಣೆ ಮತ್ತು ಜಾಗೃತಿ ಮೂಡಿಸಿದೆ. ಜಿಲ್ಲಾ, ತಾಲೂಕು ಮಟ್ಟದಲ್ಲಿ ತಮ್ಮ ನಿರೀಕ್ಷೆಗೆ ತಕ್ಕಂತೆ ನಾವು ಕಾರ್ಯನಿರ್ವಹಿಸಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಮಾತನಾಡಿ, ಯುದ್ಧ ನಡೆದಾಗ ಜಿಲ್ಲಾಡಳಿತ ನೀಡುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ಯಾವುದೇ ಕಾರಣಕ್ಕೂ ದೇಶದ ಆಂತರಿಕ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳುವುದು ಜನರ ಕರ್ತವ್ಯವಾಗಿದೆ ಎಂದು ನಿರ್ದೇಶನ ನೀಡಿದರು.
ಕರ್ನಲ್ ಭುವನ್ ಕರೆ ಮಾತನಾಡಿ, ನಾವು ಈ ಹಿಂದೆ ಯುದ್ಧ ನಡೆದ ಸಂದರ್ಭದಲ್ಲಿ ಮಾಹಿತಿಯ ಸೋರಿಕೆಯಿಂದ ಎದುರಾಳಿಯನ್ನು ಎದುರಿಸಲು ಕಷ್ಟವಾಗಿತ್ತು. ಹಾಗಾಗಿ ದೇಶದ ಆಂತರಿಕ ಮಾಹಿತಿಯನ್ನು ನಾಗರಿಕರು ಯಾವುದೇ ರೀತಿಯಲ್ಲಿ ಹಂಚಿಕೊಳ್ಳದಂತೆ ಗೌಪ್ಯತೆ ಕಾಪಾಡಿಕೊಳ್ಳಬೇಕು. ಗಾಳಿ ಸುದ್ದಿ, ಸುಳ್ಳು ಸುದ್ದಿ-ವದಂತಿಗಳಿಗೆ ಜನರು ಕಿವಿಗೊಡಬಾರದು. ಯಾವುದೇ ವಿಷಯವಿದ್ದರೂ ಅದರ ಸತ್ಯಾಂಶ ಅರಿಯಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸಲಿಂಗಪ್ಪ ಮುಂಡರಗಿ ಮಾತನಾಡಿ, ಹಾಲಿ ಸೈನಿಕರ ಕುಟುಂಬಕ್ಕೆ ನಾವು ಧೈರ್ಯ ತುಂಬೋಣ. ಅಗತ್ಯವಿದ್ದಲ್ಲಿ ನಾವೂ ಯುದ್ಧದಲ್ಲಿ ಹೋರಾಡಲು ಸದಾ ಸಿದ್ಧರೆಂದು ಸಭೆಗೆ ತಿಳಿಸಿದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಹಾಗೂ ಆರ್.ಡಿ.ಪಿ.ಆರ್ ವಿಶ್ವವಿದ್ಯಾಲಯದ ಕುಲಪತಿ ಸುರೇಶ ನಾಡಗೌಡರ ಮಾತನಾಡಿದರು. ಈ ಸಂದರ್ಭದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾದಿಕಾರದ ಅಧ್ಯಕ್ಷರಾದ ಬಿ.ಬಿ. ಅಸೂಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಮಾಜಿ ಸೈನಿಕರುಗಳು, ಪೊಲೀಸ್ ಪಡೆಗಳು, ಎನ್‌ಸಿಸಿ, ಎನ್‌ಎಸ್‌ಎಸ್, ಹೋಮ್ ಗಾರ್ಡ್ಸ್ ಹಾಜರಿದ್ದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಪಹಲ್ಗಾಮ್‌ದಲ್ಲಿ ಕೇವಲ ಪುರುಷರನ್ನು ಹತ್ಯೆ ಮಾಡಿ ಮಹಿಳೆಯರ ಸಿಂಧೂರವನ್ನು ಅಳಿಸಿದ ಪರಿಣಾಮವಾಗಿ ಆಪರೇಷನ್ ಸಿಂಧೂರ ಕೈಗೊಳ್ಳಲಾಗಿದೆ. ಉಗ್ರರು ಪುನಃ ದೇಶದ ಮೇಲೆ ದಾಳಿ ಮಾಡಲು ಹೊಂಚು ಹಾಕುತ್ತಿರಬಹುದು. ಅದನ್ನು ಸಮರ್ಥವಾಗಿ ಎದುರಿಸಲು ಎಲ್ಲರೂ ಸಿದ್ಧರಾಗೋಣ ಎಂದರು.
“ದೇಶದಲ್ಲಿರುವ 140 ಕೋಟಿ ಜನರು ಸೈನಿಕರಿಗೆ ಬೆಂಬಲ ನೀಡಿದ್ದೇವೆ. ನಾಗರಿಕರಾಗಿ ನಮ್ಮ ಜವಾಬ್ದಾರಿ-ಕರ್ತವ್ಯಗಳಿವೆ. ಜಿಲ್ಲೆಯಲ್ಲಿರುವ ಜನರನ್ನು ನಾವು ಜಾಗೃತ ಮಾಡಬೇಕು. ಜಿಲ್ಲೆಯಲ್ಲಿ ಮಾಜಿ ಸೈನಿಕರು, ಎನ್‌ಸಿಸಿ, ಎನ್‌ಎಸ್‌ಎಸ್, ಪೊಲೀಸ್ ಇಲಾಖೆಯವರು ಸಾರ್ವಜನಿಕರಿಗೆ ಈ ಕುರಿತು ಜಾಗೃತಿ ಮೂಡಿಸಬೇಕು. ಆಪರೇಶನ್ ಸಿಂಧೂರ ನಡೆದ ನಂತರ ಜಗತ್ತಿನ ಬಹುತೇಕ ರಾಷ್ಟ್ರಗಳು ಭಾರತದ ಬೆನ್ನಿಗೆ ನಿಂತಿವೆ. ಇದು ಅಭಿಮಾನದ ಸಂಗತಿ. ಎಲ್ಲ ಸಂದರ್ಭದಲ್ಲಿಯೂ ಸೈನಿಕರಿಗೆ ಬೆಂಬಲವಾಗಿ ನಿಲ್ಲುತ್ತೇವೆ”
– ಡಾ. ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.