ವಿಜಯಸಾಕ್ಷಿ ಸುದ್ದಿ, ಗದಗ: ಪಹಲ್ಗಾಮ್‌ನ ಭಯೋತ್ಪಾದಕ ಕೃತ್ಯಕ್ಕೆ ಪ್ರತೀಕಾರವಾಗಿ ಕೇಂದ್ರ ಸರ್ಕಾರ ಉಗ್ರ ನೆಲೆಗಳ ಮೇಲೆ ಕೈಗೊಂಡ ಕ್ಷಿಪಣಿ ದಾಳಿ ಭಾರತೀಯರ ಶೌರ್ಯವನ್ನು ಜಗತ್ತಿಗೆ ಸಾರಿ ಹೇಳಿದೆ ಎಂದು ಬಿಜೆಪಿ ಮುಖಂಡ ವಿಜಯಕುಮಾರ ಗಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಾರತವನ್ನು ಕೆಣಕಿದರೂ, ಭಯೋತ್ಪಾದಕರು ಭಾರತೀಯ ನಾಗರಿಕರ ರಕ್ತ ಹರಿಸಿದರೂ ನಾವು ಸುಮ್ಮನೆ ಕೂರುತ್ತಿದ್ದ ಕಾಲವೊಂದಿತ್ತು. ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಭಾರತೀಯ ಸೈನ್ಯಕ್ಕೆ ಹೊಸ ತೇಜಸ್ಸು ಬಂದಿದೆ. ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ನಡೆದ ಬಾಲಾಕೋಟ್ ದಾಳಿಯಲ್ಲಿ ನಮ್ಮ ಶಕ್ತಿ ಏನೆಂದು ವಿಶ್ವಕ್ಕೆ ತೋರಿಸಿದ್ದೆವು. ಈಗ ಮತ್ತೊಮ್ಮೆ ಉಗ್ರರು ನಮ್ಮನ್ನು ಕೆಣಕಿದಾಗ ಅವರ ಆಶ್ರಯತಾಣಗಳನ್ನು ನಾಶ ಮಾಡುವ `ಆಪರೇಶನ್ ಸಿಂಧೂರ’ ಭಾರತೀಯರ ಶಕ್ತಿ ಏನೆಂದು ಮತ್ತೊಮ್ಮೆ ಸಾಬೀತು ಮಾಡಿದೆ.
ಇಂಥಹ ದಿಟ್ಟ ಕ್ರಮ ಕೈಗೊಂಡ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ಸೇನಾ ಮುಖಂಡರು ಅಭಿನಂದನಾರ್ಹರು. ಬಿಜೆಪಿ ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ಕೇಳುತ್ತಿದ್ದ ಪ್ರತಿಪಕ್ಷಗಳಿಗೆ ಇಂದು ಉತ್ತರ ಸಿಕ್ಕಿದ್ದು, ಭಾರತವನ್ನು ಕೆಣಕಿದರೆ ಪ್ರಧಾನಿ ಮೋದಿ ಪ್ರತೀಕಾರ ತೀರಿಸಿಕೊಳ್ಳದೆ ಬಿಡುವುದಿಲ್ಲ ಎಂದು ಮತ್ತೆ ರುಜುವಾತಾಗಿದೆ. ಭಯೋತ್ಪಾದಕ ಶಕ್ತಿಗಳನ್ನು ಬುಡಸಮೇತ ನಿರ್ನಾಮ ಮಾಡುವ ಅವಶ್ಯಕತೆಯಿದ್ದು, ಇಂಥ ದುಷ್ಟ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಪಾಕಿಸ್ತಾನದ ಎದೆಯಲ್ಲೂ ಆಪರೇಶನ್ ಸಿಂಧೂರ ಭಯ ಹುಟ್ಟುಹಾಕಿದೆ ಎಂದಿದ್ದಾರೆ.



