ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಶಾಸಕ ಡಾ.ಚಂದ್ರು ಲಮಾಣಿ ಮತ್ತು ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಪಟ್ಟಣದ ದೂದನಾನಾ ದರ್ಗಾಕ್ಕೆ ಹೊಂದಿಕೊಂಡಿರುವ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಅತಿಕ್ರಮಣ ಮಾಡಿಕೊಂಡಿದ್ದ ರಸ್ತೆಯನ್ನು ಹಾಗೂ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಚರಂಡಿ ಕಾಮಗಾರಿಯನ್ನು ಪರಿಶೀಲಿಸಿ, ಸಿಟಿ ಸರ್ವೆ ಅಧಿಕಾರಿಗಳನ್ನು ಕರೆಯಿಸಿ ಪಂಚನಾಮೆ ಮಾಡಿ ಸ್ಥಳ ಪರಿಶೀಲನೆ ನಡೆಸಿದರು. ಎರರೂ ಸಮಾಜಗಳ ಮುಖಂಡರೊಂದಿಗೆ ಚರ್ಚಿಸಿ ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಯನ್ನು ಇತ್ಯರ್ಥಪಡಿಸಿ, ಆ ರಸ್ತೆಯನ್ನು ಮುಂಬರುವ ನಗರೋತ್ಥಾನ ಕಾಮಗಾರಿಯಲ್ಲಿ ಡಾಂಬರೀಕರಣ ಮಾಡಲು ಸೂಚಿಸಿದರು.
ಚರಂಡಿಯ ಮೇಲೆ ಮತ್ತು ಚರಂಡಿ ಮುಂದೆ ಸರಕಾರಿ ರಸ್ತೆಗೆ ಹೊಂದಿಕೊಂಡು ಹಾಕಿರುವ ಅನಧಿಕೃತ ಗೂಡಂಗಡಿಗಳನ್ನು ಪೊಲೀಸ್ ಇಲಾಖೆಯೊಂದಿಗೆ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರ ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿಗಳು ತೆರವುಗೊಳಿಸಲು ಪ್ರಾರಂಭಿಸಿದರು. ಈ ವೇಳೆ ಗೂಡಂಗಡಿಗಳವರು ಸ್ವಯಂಪ್ರೇರಿತರಾಗಿ ಅಂಗಡಿಗಳ ಮುಂದಿನ ತಮ್ಮ ಸಾಮಗ್ರಿಗಳನ್ನು ತೆರವುಗಳೊಳಿಸಿಕೊಂಡರು.
ಇಲ್ಲಿನ ಚರಂಡಿ ನೀರು ಹರಿದ ಹೋಗುವ ಮಾರ್ಗವೂ ಮುಚ್ಚಿಹೋಗಿದ್ದು, ಮೊದಲಿನ ಸ್ಥಳದಲ್ಲಿಯೇ ಚರಂಡಿ ಮಾಡುವಂತೆ ಒತ್ತಾಯ ಕೇಳಿಬಂದಿತು. ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ದೂದನಾನಾ ದರ್ಗಾ ಭಾವೈಕ್ಯತೆಯ ಕೇಂದ್ರವಾಗಿದ್ದು, ಇಲ್ಲಿ ದೇಶದ ಮೂಲೆ ಮೂಲೆಗಳಿಂದ ಜನರು ಆಗಮಿಸುತ್ತಾರೆ.
ಇದರ ಸುತ್ತಮುತ್ತಲಿನ ವಾತಾವರಣ ಸುಂದರವಾಗಿರುವಂತೆ ನೋಡಿಕೊಳ್ಳುವದು ನಮ್ಮೆಲ್ಲರ ಕರ್ತವ್ಯವಾಗಿದೆ. ಅಲ್ಲದೆ ಇಲ್ಲಿಗೆ ಬರುವ ಭಕ್ತರ ಅನೂಕೂಲಕ್ಕೆ ಬೇಕಾಗುವ ಸೌಲಭ್ಯಗಳನ್ನು ಸರಿಯಾಗಿ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕು. ಇಲ್ಲಿ ಒತ್ತುವರಿ ಮಾಡಿಕೊಂಡು ಜನರಿಗೆ ತೊಂದರೆ ಮಾಡುವದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾದಿಕಾರಿ ಮಹೇಶ ಹಡಪದ, ಆರೋಗ್ಯ ನೀರಿಕ್ಷಕ ಮಂಜುನಾಥ ಮುದಗಲ್, ಪುರಸಭೆ ಸಿಬ್ಬಂದಿಗಳು, ಪಿಎಸ್‌ಐಗಳಾದ ಈರಪ್ಪ ರಿತ್ತಿ, ವಿ.ಜಿ. ಪವಾರ ಮತ್ತು ಸಿಬ್ಬಂದಿಗಳು, ಮುಖಂಡರು ಹಾಜರಿದ್ದರು.
ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಮಾತನಾಡಿ, ಸಾವಿರಾರು ಜನರು ಬರುವ ಈ ಪವಿತ್ರ ಸ್ಥಳದ ಸುತ್ತಲೂ ಗಲೀಜು ತುಂಬಿಕೊಂಡಿದ್ದರೆ ಚೆನ್ನಾಗಿರುತ್ತದೆಯೇ ಎಂದು ಪ್ರಶ್ನಿಸಿದರು. ಇಲ್ಲಿ ಎಲ್ಲರೂ ಒಂದಾಗಿ ಹೋಗಬೇಕು, ಅತಿಕ್ರಮಣ ಮಾಡಿದ ಅಂಗಡಿಗಳನ್ನು ಮುಲಾಜಿಲ್ಲದೆ ತೆಗೆದು ಹಾಕಿ, ಎರಡೂ ಸಮಾಜ ಬಾಂಧವರು ಒಗ್ಗಟ್ಟಿನಿಂದ ಸಾಗುವ ಮೂಲಕ ಸಣ್ಣ ಪುಟ್ಟ ಗೊಂದಲಗಳನ್ನು ನಿವಾರಿಸಿಕೊಳ್ಳಬೇಕು ಎಂದು ಹೇಳಿದರು.