ವಿಜಯಸಾಕ್ಷಿ ಸುದ್ದಿ, ಗದಗ : ನರಗುಂದ ತಾಲೂಕಿನ ಆಯ್ದ ನಾಲ್ಕು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಸಮರ್ಪಕ ಅನುಷ್ಟಾನ ಕುರಿತು ಕಾಮಗಾರಿ ಸ್ಥಳಕ್ಕೆ ರಾಷ್ಟ್ರೀಯ ಮಟ್ಟದ ಮಾನಿಟರಿಂಗ್ ತಂಡ ಭೇಟಿ ನೀಡಿ ಗುಣಮಟ್ಟವನ್ನು ಪರಿಶೀಲಿಸಿತು. ಎನ್.ಎಲ್.ಎಂ ತಂಡದ ಸದಸ್ಯರಾದ ಬಿಪಿನ್ ತಂಬಿ ಮತ್ತು ಸುಬೈರ್.ಕೆ ಅವರು ಜಂಟಿಯಾಗಿ ಗ್ರಾ.ಪಂಗಳಿಗೆ ಭೇಟಿ ನೀಡಿ ಕಾಮಗಾರಿಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದರು.
ಎರಡು ದಿನಗಳವರೆಗೆ ನರಗುಂದ ತಾಲೂಕಿಗೆ ಭೇಟಿ ನೀಡಿರುವ ಎನ್.ಎಲ್.ಎಂ ತಂಡದ ಸದಸ್ಯರು ಸೋಮವಾರ ಮತ್ತು ಮಂಗಳವಾರ ಕೊಣ್ಣೂರು, ಶಿರೋಳ, ಹದಲಿ ಹಾಗೂ ಬನಹಟ್ಟಿ ಗ್ರಾಮ ಪಂಚಾಯತಗಳಿಗೆ ಭೇಟಿ ನೀಡಿದರು. ಭೇಟಿ ಸಂದರ್ಭದಲ್ಲಿ ನರೇಗಾ ಫಲಾನುಭವಿಗಳು, ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಹಾಗೂ ವಸತಿ ಯೋಜನೆಯ ಫಲಾನುಭವಿಗಳ ಜೊತೆ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಿಕೊಂಡರು.
2022-23 ಮತ್ತು 2023-24ರ ಸಾಲಿನಲ್ಲಿ ಮುಕ್ತಾಯಗೊಂಡ ಕೇಂದ್ರ ಸರ್ಕಾರದ ಯೋಜನೆಗಳ ಕಾಮಗಾರಿಗಳ ಆಯ್ದ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟವನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದರು. ಬಳಿಕ ಯೋಜನೆಯ ಫಲಾನುಭವಿಗಳನ್ನು ಸಂದರ್ಶಿಸಿ ಯೋಜನೆಯ ಉದ್ದೇಶ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಿಂದ ಫಲಾನುಭವಿಗಳಿಗೆ ಇರುವ ಸೌಲಭ್ಯಗಳ ಬಗ್ಗೆ ಕೂಲಿಕಾರ್ಮಿಕರಲ್ಲಿ ಜಾಗೃತಿ ಮೂಡಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಸೇರಿದಂತೆ ಪ್ರಮುಖ ಕೇಂದ್ರ ಸರ್ಕಾರದ ಯೋಜನೆಗಳಡಿ ಮುಕ್ತಾಯಗೊಂಡ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಸಮರ್ಪಕವಾಗಿ ಕಾಮಗಾರಿಗಳು ಅನುಷ್ಟಾನವಾಗಿರುವ ಬಗ್ಗೆ ಪರಿಶೀಲಿಸಿದರು.
ಯೋಜನೆಯಡಿ ಫಲಾನುಭವಿಗಳು ಪಡೆದುಕೊಂಡ ಸವಲತ್ತುಗಳನನು ಪರಿಶೀಲಿಸಿ ಯೋಜನೆಯಡಿ ಫಲಾನುಭವಿಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆಯೇ ಎಂಬುದರ ಕುರಿತು ಸಮಾಲೋಚಿಸಿದರು. ಸಂಜೀವಿನಿ ಒಕ್ಕೂಟದಿಂದ ಮಹಿಳೆಯರು ನಡೆಸುತ್ತಿರುವ ಗುಡಿ ಕೈಗಾರಿಕೆಗಳು ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಪ್ರಧಾನ ಕುಟುಂಬಗಳನ್ನು ಆರ್ಥಿಕವಾಗಿ ಸಬಲರನ್ನಾಗಿಸಿವೆಯೇ ಎಂಬುದನ್ನು ಪರಿಶೀಲಿಸಿದರು.
ತಾಲೂಕಿಗೆ ಎರಡು ದಿನಗಳ ಕಾಲ ಭೇಟಿ ನೀಡಿದ ನ್ಯಾಷನಲ್ ಲೆವಲ್ ಮಾನಿಟರಿಂಗ್ ಟೀಂನ್ನು ನರಗುಂದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್.ಕೆ. ಇನಾಮದಾರ ಮತ್ತು ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಸಂತೋಷಕುಮಾರ್ ಪಾಟೀಲ್ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪಿಡಿಓ ಗಳಾದ ಮಂಜುನಾಥ ಗಣಿ, ವಾಯ್.ಬಿ. ಸಂಕನಗೌಡರ, ಬಿ.ಎಸ್. ಮೆಣಸಗಿ, ನರೇಗಾ ವಿಭಾಗದ ತಾಲೂಕು ಐಇಸಿ ಸಂಯೋಜಕ ಸುರೇಶ ಬಾಳಿಕಾಯಿ, ತಾಂತ್ರಿಕ ಸಹಾಯಕ ಹನಮಂತ ಡಂಬಳ, ತಾಲೂಕು ಸಂಜೀವಿನಿ ಒಕ್ಕೂಟದ ಅಧಿಕಾರಿ ಮೋಹನಕೃಷ್ಣ, ವಸತಿ ನೋಡಲ್ ಅಧಿಕಾರಿ ವಿನಾಯಕ್ ಬೋವಿ ಹಾಗೂ ಗ್ರಾ.ಪಂಗಳ ಸಿಬ್ಬಂದಿ ವರ್ಗ ಹಾಗೂ ನರೇಗಾ ಸಿಬ್ಬಂದಿ ವರ್ಗ ಹಾಜರಿದ್ದರು.
ಭೇಟಿ ಸಂದರ್ಭದಲ್ಲಿ ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ 5 ನರೇಗಾ ಕೂಲಿಕಾರರನ್ನು ಭೇಟಿಯಾಗಿ ಉದ್ಯೋಗ ಚೀಟಿ ಪರಿಶೀಲಿಸಿದರು. ಉದ್ಯೋಗ ಚೀಟಿಯಲ್ಲಿ ಕೂಲಿಕಾರರು ಕೆಲಸ ಮಾಡಿದ ವಿವರವನ್ನು ದಾಖಲಿಸಲಾಗಿದೆಯೇ ಎಂದು ಪರಿಶೀಲಿಸಿ ನರೇಗಾ ಯೋಜನೆಯಡಿ ಫಲಾನುಭವಿಗಳಿಗಿರುವ ಸೌಲಭ್ಯಗಳ ಬಗ್ಗೆ ಕೂಲಿಕಾರರಿಂದ ಮಾಹಿತಿ ಪಡೆದುಕೊಂಡರು.