ವಿಜಯಸಾಕ್ಷಿ ಸುದ್ದಿ, ಗದಗ: ಅಭ್ಯರ್ಥಿಗಳ ಆಸಕ್ತಿ ಹಾಗೂ ಶಿಕ್ಷಣಕ್ಕನುಗುಣವಾಗಿ ಉದ್ಯೋಗ ಪಡೆಯಲು ಎರಡು ದಿನಗಳ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಇದರ ಸದುಪಯೋಗವನ್ನು ಜಿಲ್ಲೆಯ ನಿರುದ್ಯೋಗಿ ಯುವಜನತೆ ಪಡೆಯಬೇಕು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಇವರ ಸಹಯೋಗದೊಂದಿಗೆ ಸಂಕಲ್ಪ ಯೋಜನೆಯಡಿ ಆಯೋಜಿಸಲಾದ ಎರಡು ದಿನಗಳ ಗದಗ ಜಿಲ್ಲಾ ಮಟ್ಟದ ಉದ್ಯೋಗ ಮೇಳ -2025ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯೋಗ ಮೇಳದಲ್ಲಿ ಈವರೆಗೆ 6243 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ ನೋಂದಣಿ ನಡೆದಿದೆ ಎಂದರಲ್ಲದೆ, ಉದ್ಯೋಗ ಮೇಳದ ಉದ್ದೇಶ ಈಡೇರಿಕೆಗಾಗಿ ವೈಜ್ಞಾನಿಕವಾಗಿ ಶ್ರಮವಹಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಅವರನ್ನು ಸಚಿವ ಎಚ್.ಕೆ. ಪಾಟೀಲ ಪ್ರಶಂಸಿಸಿದರು.
ಅಭ್ಯರ್ಥಿಗಳಾದ ಭೀಮಾಂಬಿಕಾ, ಪ್ರಶಾಂತ ಮಾಚೇನಹಳ್ಳಿ, ಮಂಜುಳಾ ಕಟಗಲಿ ಹಾಗೂ ಆನಂದ ಸಿದ್ನಿಕೊಪ್ಪ ಅವರುಗಳಿಗೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಅವರು ಸಂಸ್ಥೆಗಳಿಂದ ಉದ್ಯೋಗ ಆಯ್ಕೆ ಪತ್ರಗಳನ್ನು ವಿತರಿಸಿದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ ಪಾಲ್ಗೊಂಡು ಮಾತನಾಡಿ, ಗದಗನಲ್ಲಿ ಬೃಹತ್ ಪ್ರಮಾಣದಲ್ಲಿ ಉದ್ಯೋಗ ಮೇಳ ಆಯೋಜಿಸಿದ್ದಕ್ಕಾಗಿ ಜಿಲ್ಲಾಡಳಿತ, ಸರ್ಕಾರ ಹಾಗೂ ಸಚಿವರಾದ ಎಚ್.ಕೆ. ಪಾಟೀಲ ಅವರಿಗೆ ಅಭಿನಂದನೆಗಳನ್ನು ತಿಳಿಸಿದರಲ್ಲದೆ, ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಸರ್ಕಾರ ಪ್ರಯತ್ನಿಸುತ್ತಿದೆ. ಅಭ್ಯರ್ಥಿಗಳು ಕೇವಲ ಸರ್ಕಾರಿ ನೌಕರಿ ಮೇಲೆ ಅವಲಂಬನೆಯಾಗದೆ ಖಾಸಗಿ ಹಾಗೂ ಸ್ವಾವಲಂಬಿ ಉದ್ಯೋಗಿಗಳಾಗಲು ಕರೆ ನೀಡಿದರು.
ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಗದಗ-ಬೆಟಗೇರಿನಗರ ಸಭೆಯ ನೂತನ ಅಧ್ಯಕ್ಷ ಕೃಷ್ಣ ಪರಾಪೂರ, ಉಪಾಧ್ಯಕ್ಷೆ ಶಕುಂತಲಾ ಅಕ್ಕಿ, ಸಿದ್ದು ಪಾಟೀಲ, ಕೃಷ್ಣಗೌಡ ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಜಿ.ಪಂ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ, ಜಿಲ್ಲಾ ಕೌಶಲ್ಯಾಬಿವೃದ್ಧಿ ಅಧಿಕಾರಿ ಡಾ. ಮಲ್ಲೂರ ಬಸವರಾಜ ಹಾಜರಿದ್ದರು.
ಕೇಂದ್ರ ಸರ್ಕಾರ ಸ್ಕಿಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಸೇರಿದಂತೆ ಹಲವಾರು ಯೋಜನೆಗಳ ಜಾರಿ ಮೂಲಕ ಉದ್ಯಮಿಗಳಾಗಲು ಉದ್ಯೋಗ ಪಡೆಯಲು ಸಹಕಾರಿಯಾಗಿದೆ. ಗ್ರಾಮೀಣ ಯುವಜನರಲ್ಲಿರಲ್ಲಿ ಕೌಶಲ್ಯ ಹಾಗೂ ಕಮ್ಯುನಿಕೇಶನ್ ಅಗತ್ಯವಿದೆಯೆಂದು ವಿ.ಪ ಸದಸ್ಯ ಎಸ್.ವಿ. ಸಂಕನೂರ ಅಭಿಪ್ರಾಯಪಟ್ಟರು.
ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ನಮ್ಮ ನಿರೀಕ್ಷೆಗೂ ಮೀರಿ 64ಕ್ಕೂ ಅಧಿಕ ಸಂಸ್ಥೆಯ ಉದ್ಯೋಗದಾತರು ಆಗಮಿಸಿದ್ದು, ಅಭ್ಯರ್ಥಿಗಳು ಇದರ ಪ್ರಯೋಜನ ಪಡೆಯಬೇಕು. ಗದಗ ಜಿಲ್ಲೆಯ ಯುವ ಜನತೆ ಆಧುನಿಕ ಕೃಷಿ, ಆಹಾರ ತಯಾರಿಕೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ನೈಪುಣ್ಯತೆಯನ್ನು ಸಾಧಿಸಿದ್ದಾರೆ. ಅವರಿಗೆ ಉದ್ಯೋಗದಾತರು ಕೆಲಸ ನೀಡಿದಲ್ಲಿ ನಿಮ್ಮ ಸಂಸ್ಥೆಯ ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗಲಿದೆ.
– ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.