ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಸವಣೂರ ರಸ್ತೆ ಬದಿಯಲ್ಲಿ ಬಾರ್-ರೆಸ್ಟೋರೆಂಟ್ ಪ್ರಾರಂಭ ವಿರೋಧಿಸಿ ಮಂಗಳವಾರ ರಾತ್ರಿ ಸ್ಥಳೀಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಾರ್ ಮಾಲೀಕ ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ-ತಳ್ಳಾಟದಿಂದ ಬುಧವಾರವೂ ಈ ವಿಷಯದ ಕುರಿತು ಪಟ್ಟಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ವಾರ್ಡ್ ನಂ 17, 18ರ ವ್ಯಾಪ್ತಿಯ ಜನವಸತಿ ಪ್ರದೇಶದ ಹತ್ತಿರವೇ ಬಾರ್&ರೆಸ್ಟೋರೆಂಟ್ ಪ್ರಾರಂಭಕ್ಕೆ ಅಬಕಾರಿ ಇಲಾಖೆಯಿಂದ ಒಂದೂವರೆ ವರ್ಷದ ಹಿಂದೆಯೇ ಪರವಾನಗಿ ಪಡೆದಿದ್ದರು. ವಾರ್ಡ್ನ ಮಹಿಳೆಯರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಾರ್ ಪ್ರಾರಂಭಿಸಲು ಹಿಂದೆ ಸರಿದಿದ್ದರು. ವರ್ಷದ ನಂತರ ಮಂಗಳವಾರ ರಾತ್ರಿ ಏಕಾಏಕಿ ಮದ್ಯದ ಬಾಟಲಿಗಳ ದಾಸ್ತಾನು ತಂದು ಬಾರ್ ಪ್ರಾರಂಭಿಸಲು ಮುಂದಾಗಿದ್ದರು. ಅಕ್ಕಪಕ್ಕದಲ್ಲಿಯೇ ದೇವಸ್ಥಾನ, ವಿದ್ಯಾರ್ಥಿ ನಿಲಯ, ಆಸ್ಪತ್ರೆಗಳಿವೆ. ಇಲ್ಲಿ ಬಾರ್ ಪ್ರಾರಂಭವಾದರೆ ನಿತ್ಯದ ಬದುಕಿಗೆ ತೊಂದರೆಯಾಗುತ್ತದೆ. ನಮ್ಮ ಪ್ರಾಣ ಹೋದರೂ ಇಲ್ಲಿ ಬಾರ್ ಪ್ರಾರಂಭಿಸಲು ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಈ ವೇಳೆ ಬಾರ್ ಮಾಲೀಕ ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ-ತಳ್ಳಾಟ ನಡೆದು ಕೊನೆಗೆ ಬಾರ್ ಮಾಲೀಕ ಮತ್ತು ಸಿಬ್ಬಂದಿಗಳು ಬೀಗ ಹಾಕಿಕೊಂಡು ಹೋಗಿದ್ದಾರೆ. ಬುಧವಾರ ಬೆಳಿಗ್ಗೆ ಬಾರ್ ಮಾಲೀಕ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾತ್ರಿ ನಡೆದ ಘಟನೆಯಲ್ಲಿ ತಮಗೂ ಪೆಟ್ಟಾಗಿವೆ ಎಂದು ವಯೋವೃದ್ಧರಾದ ನೀಲಮ್ಮ ಹುರಕನವರ, ಸಿದ್ದಮ್ಮ ಶರಸೂರಿ, ಪಾರಮ್ಮ ಗದ್ದಿ, ದೇವಕ್ಕ ಇಮ್ಮಡಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೊಳಗಾಗಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಪಾರಮ್ಮ ಗದ್ದಿ ಅವರ ಕೈ ಮೂಳೆ ಮುರಿದಿರುವ ಬಗ್ಗೆ ವರದಿಯಾಗಿದೆ.
ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ನೀಡಿದ್ದು, ರಾತ್ರಿಯವರೆಗೂ ಪ್ರಕರಣ ದಾಖಲಾಗಿಲ್ಲ. ಪ್ರತಿಭಟನೆಗಾಗಿ ನಿವಾಸಿಗಳು ಬಾರ್ ಮುಂದೆ ಟೆಂಟ್ ಹಾಕಿದ್ದು, ಪೊಲೀಸರು ಮುಂಜಾಗೃತಾ ಕ್ರಮ ಕೈಗೊಂಡಿದ್ದಾರೆ.