ಬೆಂಗಳೂರು:- ಕರ್ನಾಟಕದ ಜಾತಿ ಗಣತಿ ವರದಿ ಕೊನೆಗೂ ಬಹಿರಂಗವಾಗಿದೆ. ಆದರೆ, ಸರ್ಕಾರ ಈ ವರದಿಯನ್ನು ಇನ್ನೂ ಸಂಪೂರ್ಣವಾಗಿ ಜನರ ಮುಂದೆ ಇರಿಸಿಲ್ಲ. ಈಗ ಬರುತ್ತಿರುವ ಜಾತಿ ಗಣತಿ ವರದಿಯ ಅಂಕಿ – ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇದೊಂದು ವಿವಾದಕ್ಕೆ ಕಾರಣವಾಗಿದೆ.
ಈ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಜಾತಿ ಗಣತಿ ವರದಿ ಬಿಸಿತುಪ್ಪವಾಗಿ ಪರಿಣಮಿಸಿದ್ದು, ಸರ್ಕಾರಕ್ಕೆ ಸಲ್ಲಿಸಿರುವ ವರದಿ ಬಹಿರಂಗವಾಗುತ್ತಿದ್ದಂತೆ ಎಲ್ಲೆಲ್ಲೂ ಕೋಲಾಹಲ ಎದ್ದಿದೆ. ರಾಜ್ಯದ ಪ್ರಬಲ ಒಕ್ಕಲಿಗ ಸಮುದಾಯ ಸರ್ಕಾರದ ವಿರುದ್ಧ ಸಿಡಿದೆದ್ದಿದೆ. ಒಕ್ಕಲಿಗರು ಜಾತಿ ಗಣತಿ ವಿರುದ್ಧ ದಂಗೆ ಏಳುವ ಸೂಚನೆ ಕೊಟ್ಟಿದ್ದಾರೆ. ಇವತ್ತು ಸಭೆ ಸೇರಿದ ಒಕ್ಕಲಿಗ ಸಂಘದ ಪದಾಧಿಕಾರಿಗಳು, ಕರ್ನಾಟಕ ಬಂದ್ ರೀತಿಯ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಜಾತಿ ಗಣತಿ ವರದಿ ಜಾರಿಯಾದರೆ ಸರ್ಕಾರವೇ ಪತನವಾಗಲಿದೆ. ಹೊಸದಾಗಿ ಸರ್ವೆ ಮಾಡದಿದ್ದರೆ, ನಾವೇ 100 ಕೋಟಿ ರೂ. ಖರ್ಚು ಮಾಡಿ ಜನಗಣತಿ ಮಾಡುತ್ತೇವೆ ಎಂದು ಸವಾಲು ಎಸೆದಿದ್ದಾರೆ. ಅಷ್ಟೇ ಅಲ್ಲದೇ ಶೀಘ್ರವೇ ನಿರ್ಮಲಾನಂದ ಸ್ವಾಮೀಜಿ, ನಂಜಾವಧೂತ ಶ್ರೀಗಳ ಜೊತೆ ಚರ್ಚಿಸಿ ಮುಂದಿನ ಹೋರಾಟ ನಡೆಸಲು ತೀರ್ಮಾನಿಸಿದ್ಧಾರೆ.