ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ನಗರದ ಮಯೂರಾ ಸರ್ಕಲ್ ಬಳಿ ಪ್ರೀತಿಸಿ ಮದುವೆಯಾಗಿದ್ದ ನವದಂಪತಿಗಳ ಮೇಲೆ ಯುವತಿ ಕುಟುಂಬದವರು ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ಮೂಲದ ಎಸ್‌ಟಿ ಸಮುದಾಯದ ಸಂದೀಪ್ (24) ಮತ್ತು ಬಲಿಜಿಗ ಸಮುದಾಯದ ಕೀರ್ತನಾ (19) ಕಳೆದ ಒಂದು ವರ್ಷದಿಂದ ಪ್ರೀತಿಯಲ್ಲಿದ್ದರು. ಇವರು ಎರಡು ದಿನದ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಮನೆಯಲ್ಲಿ ಮಗಳು ಕಾಣದಿರುವ ಸಂಬಂಧ ಕೀರ್ತನ ಪೋಷಕರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.
ಅದರಂತೆ ರಕ್ಷಣೆ ಕೋರಿ ಇಂದು ಪೊಲೀಸ್ ಠಾಣೆಗೆ ನವದಂಪತಿ ಬರುತ್ತಿದ್ದ ವೇಳೆ ಕಾರಿನ ಮೇಲೆ ಯುವತಿ ಕುಟುಂಬಸ್ಥರು ಅಟ್ಯಾಕ್ ಮಾಡಿದ್ದಾರೆ. ಪರಿಣಾಮ ಕಾರಿನ ಗಾಜು ಪುಡಿಪುಡಿಯಾಗಿದೆ. ಪೊಲೀಸರ ಮುಂದೆ ಮಗಳನ್ನ ವಾಪಸ್ ಕಳುಹಿಸಿಕೊಡುವಂತೆ ಒತ್ತಾಯಿಸಿದ್ದಾರೆ. ಆದರೆ ಯುವತಿ ನಾನು ಯಾವುದೇ ಕಾರಣಕ್ಕೂ ತಂದೆ-ತಾಯಿ ಜೊತೆ ಹೋಗಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾಳೆ. ಇದೀಗ ಚಿಕ್ಕಬಳ್ಳಾಪುರದ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಎರಡು ಕುಟುಂಬಸ್ಥರು ತಮಗೆ ನ್ಯಾಯ ನೀಡುವಂತೆ ಆಗ್ರಹಿಸಿದ್ದಾರೆ.



