ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಮನರೇಗಾ ಯೋಜನೆಯ ಹೆಸರು ಬದಲಾವಣೆ ಮಾಡಿ ಕೇಂದ್ರ ಸರಕಾರ ಗಾಂಧೀಜಿ ವಿರುದ್ಧ ತನ್ನ ದ್ವೇಷವನ್ನು ಹೊರಹಾಕಿದ್ದಲ್ಲದೆ ಬಡ ಕಾರ್ಮಿಕರಿಗೆ ಅನ್ಯಾಯ ಮಾಡಿದೆ. ಇದು ದ್ವೇಷ ರಾಜಕಾರಣದ ಭಾಗ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ, ವಕೀಲ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ 20 ವರ್ಷಗಳಿಂದ ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಜೀವನಕ್ಕೆ ಭದ್ರತೆ ಒದಗಿಸಿದೆ. ಆದರೆ ಈಗಿನ ಕೇಂದ್ರ ಸರ್ಕಾರ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರಿನಲ್ಲಿರುವ ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆದುಹಾಕಿ ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಯೋಜನೆ (ವಿಬಿ ಜಿ-ರಾಮ್-ಜಿ) ಎಂದು ಮರುನಾಮಕರಣ ಮಾಡಿ, ಮಹಾತ್ಮ ಗಾಂಧಿಯವರಿಗೆ ಅವಮಾನ ಮಾಡಿದೆ.
ಈ ಬದಲಾವಣೆಯಿಂದ ಸುಮಾರು 1 ಕೋಟಿಗೂ ಅಧಿಕ ಬಡ ಕಾರ್ಮಿಕರಿಗೆ ಅನ್ಯಾಯವಾಗುತ್ತದೆ. ಕೇಂದ್ರ ಸರ್ಕಾರದ ಈ ಧೋರಣೆ ಅಮಾನವೀಯವಾಗಿದೆ ಎಂದು ಅವರು ವಿರೋಧ ವ್ಯಕ್ತಪಡಿಸಿದ್ದಾರೆ.



