ವಿಜಯಸಾಕ್ಷಿ ಸುದ್ದಿ, ಗದಗ: ಫೆಬ್ರವರಿ 13, 2025ರಂದು ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2024 ಮಂಡನೆಯನ್ನು ವಿರೋಧಿಸಿ ಸೋಷಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಗದಗ ಜಿಲ್ಲಾ ಸಮಿತಿ ವತಿಯಿಂದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಬಿಲಾಲ್ ಗೋಕಾವಿ ಅವರ ನೇತೃತ್ವದಲ್ಲಿ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಬಿಲಾಲ್ ಗೋಕಾವಿ, ಈ ಮಸೂದೆ ಅಸಾಂವಿಧಾನಿಕ ಮಾತ್ರವಲ್ಲದೇ ವಕ್ಫ್ ಸಂಪತ್ತನ್ನು ಕಸಿಯುವ ಕೋಮುವಾದಿ ಸರ್ಕಾರದ ಹುನ್ನಾರವಾಗಿದೆ. ಜಿಲ್ಲಾಧಿಕಾರಿಗಳಿಗೆ ನ್ಯಾಯಾಂಗ ಅಧಿಕಾರ ನೀಡುವುದು ಸಂಪೂರ್ಣವಾಗಿ ಅನ್ಯಾಯಕರ ಮತ್ತು ಸಂವಿಧಾನ ವಿರೋಧಿಯಾಗಿದೆ.
ಈ ಮಸೂದೆಯನ್ನು ಹಿಂದಕ್ಕೆ ತೆಗೆದುಕೊಳ್ಳದಿದ್ದರೆ ದೇಶದಾದ್ಯಂತ ಪ್ರತಿಭಟನೆಗಳು ನಡೆಯಲಿವೆ ಎಂದು ಒಕ್ಕೂಟದ ಪರವಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ವಕ್ಫ್ ಕಾಯ್ದೆಯ ಅನುಷ್ಠಾನವನ್ನು ತನ್ನ ಬಹುಮತದ ಬಲದಿಂದ ದುರುಪಯೋಗಪಡಿಸಿಕೊಂಡು ದೇಶವನ್ನು ಕೇಸರಿ ಬಣ್ಣದಿಂದ ಮುಚ್ಚಲು ಪ್ರಯತ್ನಿಸುತ್ತಿದೆ. ಈ ಮಸೂದೆ ಮುಸ್ಲಿಂ ಸಮುದಾಯದ ಹಕ್ಕುಗಳ ಮೇಲೆ ನೇರ ದಾಳಿ, ಹಾಗೆಯೇ ವಕ್ಫ್ ಸಂಸ್ಥೆಗಳ ಶಕ್ತಿಯನ್ನು ಕುಂದಿಸುತ್ತಿವೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಗದಗ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಫ್ಫಾನ್ ತರಫದಾರ್, ಜಿಲ್ಲಾ ಉಪಾಧ್ಯಕ್ಷ ಹಿದಾಯತುಲ್ಲಾ ಕಾಗದಗಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಬಾಗೇವಾಡಿ, ಎಸ್‌ಡಿಪಿಐ ಮುಖಂಡರಾದ ಅನ್ವರ್ ಮುಲ್ಲಾ, ಜಿಲಾನಿ ಲಕ್ಕುಂಡಿ, ಮುಸ್ತಾಕ್ ಕಟ್ಟಿಮನಿ, ಇಸ್ಮಾಯಿಲ್ ಅಣ್ಣಿಗೇರಿ ಇತರರು ಉಪಸ್ಥಿತರಿದ್ದರು.