ಬೇಡಿಕೆ ಸಾಕಾರಗೊಳ್ಳಲು ಸಂಘಟನೆ ಅವಶ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ಬೇಡಿಕೆಗಳನ್ನು ಸಾಕಾರಗೊಳಿಸಲು ಸಂಘಟನೆ ಅವಶ್ಯ. ಗದಗ ಜಿಲ್ಲಾ ಪಟಾಕಿ ವ್ಯಾಪಾರಸ್ಥರ ಸಂಘಟನೆಯನ್ನು ಅಸ್ತಿತ್ವಕ್ಕೆ ತಂದಿರುವದು ಯೋಗ್ಯವಾಗಿದ್ದು, ಸಂಘಟನೆಯ ಬಲವರ್ಧನೆಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಮಣಕವಾಡದ ಅನ್ನದಾನೇಶ್ವರ ದೇವ ಮಂದಿರದ ಪೂಜ್ಯ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.

Advertisement

ಅವರು ಸೋಮವಾರ ಗದುಗಿನ ಶ್ರೀಮತಿ ಉಷಾದೇವಿ ಜಿ.ಕುಷ್ಟಗಿ ರೋಟರಿ ಕಮ್ಯೂನಿಟಿ ಕೇರ್ ಸೆಂಟರ್‌ನಲ್ಲಿ ಗದಗ ಜಿಲ್ಲಾ ಪಟಾಕಿ ವ್ಯಾಪಾರಸ್ಥರ ಸಂಘದ ಉದ್ಘಾಟನಾ ಸಮಾರಂಭ ಹಾಗೂ ಶ್ರಮಿಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.

ನಾವಿಂದು ಪರಿಸರವನ್ನು ಸಂರಕ್ಷಿಸುವ ಮೂಲಕ ಪರಿಶುದ್ಧ ವಾತಾವರಣ ಸೃಷ್ಟಿಯಾಗುವಂತೆ ನೋಡಿಕೊಳ್ಳುವದು ಅವಶ್ಯವಿದೆ. ಇಲ್ಲವಾದಲ್ಲಿ ಬರಲಿರುವ ದಿನಮಾನಗಳಲ್ಲಿ ಆಕ್ಸಿಜನ್ ಸೆಂಟರ್‌ಗಳ ಮೂಲಕ ಉಸಿರಾಟ ನಡೆಸುವ ಕಾಲ ಬರಬಹುದು ಎಂದರು.

ಉದ್ಘಾಟಕರಾಗಿ ಆಗಮಿಸಿದ್ದ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಮಾತನಾಡಿ, ಗದುಗಿನಲ್ಲಿ ಇಂತಹ ಸಂಘಟನೆಯೊಂದನ್ನು ಹುಟ್ಟು ಹಾಕಿರುವದು ಅಭಿನಂದನೀಯ. ಈ ಸಂಘಟನೆಯು ಬಲವರ್ಧನೆಗೊಂಡು ಪಟಾಕಿ ವ್ಯಾಪಾರಸ್ಥರ ಸೌಲಭ್ಯಗಳನ್ನು ಪಡೆಯುವ ಕಾರ್ಯ ಆಗಲಿ. ಪರಿಸರ ಸಮತೋಲನಕ್ಕೆ ನಾವು ಬದ್ಧತೆಯಿಂದ ಕಾರ್ಯ ಮಾಡಬೇಕಿದೆ. ಜೊತೆಗೆ ಪರಿಸರ ಸ್ನೇಹಿ ಪಟಾಕಿ ಬಳಕೆಗೆ ನಾವು ಮುಂದಾಗಬೇಕಿದೆ ಎಂದರಲ್ಲದೆ, ವ್ಯಾಪಾರಸ್ಥರ ಸಮಸ್ಯೆಗಳಿದ್ದಲ್ಲಿ ಸಚಿವರ ಮೂಲಕ ಪರಿಹಾರ ಕಂಡುಕೊಳ್ಳಲು ತಾವೂ ಸಹಕಾರ ನೀಡುವದಾಗಿ ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶ್ರೀಧರಗೌಡ ಧರ್ಮಾಯತ ಮಾತನಾಡಿ, ಗದಗ ಸೇರಿದಂತೆ ಗದಗ ಜಿಲ್ಲೆಯ ವಿವಿಧ ತಾಲೂಕಿನ ಪಟಾಕಿ ವ್ಯಾಪಾರಸ್ಥರು ದೀಪಾವಳಿ ಹಾಗೂ ಗಣೇಶ ಚತುರ್ಥಿಯ ಸಂದರ್ಭದಲ್ಲಿ ವ್ಯಾಪಾರ ವಹಿವಾಟು ಮಾಡಲು ಬಹಳಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಪಟಾಕಿ ಮಾರಾಟಕ್ಕಾಗಿ ಪ್ರತ್ಯೇಕವಾಗಿ ತಾತ್ಕಾಲಿಕವಾಗಲಿ, ಶಾಶ್ವತವಾಗಲಿ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ಮಾರ್ಗದರ್ಶನ ಮಾಡಬೇಕೆಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ತಾತನಗೌಡ ಪಾಟೀಲ, ವಿದ್ಯಾದಾನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ, ದತ್ತಾ ಡೆವಲಪರ್ಸ್ನ ಪಾಲುದಾರರಾದ ಎಸ್.ಎಚ್. ಶಿವನಗೌಡರ, ಗಣ್ಯ ವ್ಯಾಪಾರಸ್ಥರಾದ ಸದಾಶಿವ ಮದರಿಮಠ ಮಾತನಾಡಿದರು.

ಸಂಘದ ಅಧ್ಯಕ್ಷ ಶ್ರೀಧರಗೌಡ ಧರ್ಮಾಯತ ಬೇಡಿಕೆಯ ಮನವಿಯನ್ನು ಕೃಷ್ಣಗೌಡ ಪಾಟೀಲರ ಮೂಲಕ ಸಚಿವ ಎಚ್.ಕೆ. ಪಾಟೀಲರಿಗೆ ಸಲ್ಲಿಸಿದರು. ಸಮಾರಂಭದಲ್ಲಿ ರಾಜು ಪವಾರ, ರಾಚಪ್ಪ ಕಾಡಪ್ಪನವರ, ಪ್ರಹ್ಲಾದ ಹೆಬಸೂರ, ಶ್ರೀಕಾಂತ ಮೇರವಾಡೆ, ಸತ್ಯನಾರಾಯಣ ಸುರೇಬಾನ, ಮುರಳೀಧರ ಹಬೀಬ, ಸರಸ್ವತಿಬಾಯಿ ಮೇರವಾಡೆ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕಿನ ಪಟಾಕಿ ವ್ಯಾಪಾರಸ್ಥರು ಪಾಲ್ಗೊಂಡಿದ್ದರು. ಸಾನ್ವಿ ಹೆಬಸೂರ ಹಾಗೂ ಶುಭಂ ಸುರೇಬಾನ ಪ್ರಾರ್ಥಿಸಿದರು, ಪ್ರೊ. ಬಾಹುಬಲಿ ಜೈನರ್ ನಿರೂಪಿಸಿ ವಂದಿಸಿದರು.

ಪದಾಧಿಕಾರಿಗಳು

ಸಂಘದ ಅಧ್ಯಕ್ಷರಾಗಿ ಶ್ರೀಧರಗೌಡ ಧರ್ಮಾಯತ, ಉಪಾಧ್ಯಕ್ಷರಾಗಿ ವಾಸುದೇವ ಸುರೇಬಾನ, ಕಾರ್ಯದರ್ಶಿಯಾಗಿ ಸಂಕೇತ ಹೆಬಸೂರ, ಸಹ ಕಾರ್ಯದರ್ಶಿಯಾಗಿ ನಾಗರಾಜ ಸುರೇಬಾನ, ಖಜಾಂಚಿಯಾಗಿ ಯಲ್ಲಪ್ಪ ಧಾರವಾಡ, ಸಂಘಟನಾ ಕಾರ್ಯದರ್ಶಿಯಾಗಿ ವಿಜಯಕುಮಾರ ಮೇರವಾಡೆ ಅಧಿಕಾರ ವಹಿಸಿಕೊಂಡರು. ಇವರೊಂದಿಗೆ ಇತರ ಪದಾಧಿಕಾರಿಗಳನ್ನು ಪೂಜ್ಯರು ಸನ್ಮಾನಿಸಿದರು.


Spread the love

LEAVE A REPLY

Please enter your comment!
Please enter your name here