ವಿಜಯಸಾಕ್ಷಿ ಸುದ್ದಿ, ಧಾರವಾಡ: ಸರಕಾರದಿಂದ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜಿಸುತ್ತಿರುವುದರಿಂದ ಅಧಿಕಾರಿಗಳು ಉದ್ಯೋಗದಾತರಿಗೆ ಮತ್ತು ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲವಾಗುವಂತೆ ವ್ಯವಸ್ಥಿತವಾಗಿ ಉದ್ಯೋಗ ಮೇಳ ಸಂಘಟಿಸಬೇಕೆಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚಿಸಿದರು.
ಅವರು ಸೋಮವಾರ ಮಧ್ಯಾಹ್ನ ಜಿ.ಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜನೆ ಕುರಿತು ವಿವಿಧ ಇಲಾಖೆ ಅಧಿಕಾರಿಗಳ ಮತ್ತು ಅವಳಿ ನಗರದ ಕೈಗಾರಿಕೋದ್ಯಮಿಗಳೊಂದಿಗೆ ಪೂರ್ವಭಾವಿ ಸಭೆ ಜರುಗಿಸಿ ಮಾತನಾಡಿದರು.
ಅರ್ಹತೆ ಇರುವ ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗ ದೊರೆಯಬೇಕು. ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲವಾಗಲು ಸರ್ಕಾರದಿಂದಲೇ ಉದ್ಯೋಗ ಮೇಳ ಆಯೋಜಿಸಿ, ಖಾಸಗಿ ಕೈಗಾರಿಕೆಗಳಲ್ಲಿ ಉದ್ಯೋಗ ಕಲ್ಪಿಸಲು ಈ ಉದ್ಯೋಗ ಮೇಳ ಸಂಘಟಿಸಲಾಗುತ್ತಿದೆ ಎಂದರು.
ಉದ್ಯೋಗ ಮೇಳವನ್ನು ವ್ಯವಸ್ಥಿತವಾಗಿ ಸಂಘಟಿಸಬೇಕು. ಮೇಳ ಪೂರ್ವದ ಒಂದು ವಾರ ಮೊದಲೇ ಉದ್ಯೋಗಾಂಕ್ಷಿಗಳ ಮಾಹಿತಿ, ಬೇಡಿಕೆ ಸಂಗ್ರಹಿಸಿ, ಮ್ಯಾಪಿಂಗ್ ಮಾಡಬೇಕು. ಅವಳಿ ನಗರದ ಕೈಗಾರಿಕೋದ್ಯಮಿಗಳಿಂದ ಕಾರ್ಮಿಕರ ಬೇಡಿಕೆ ಪಡೆಯಬೇಕು. ಅದಕ್ಕೆ ಅನುಗುಣವಾಗಿ ಕಾರ್ಯಕ್ರಮ ರೂಪಿಸಬೇಕೆಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರವು, ಖಾಸಗಿ ವಲಯದ ಉದ್ಯೋಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಮಾಲೀಕರನ್ನು, ಉದ್ಯೋಗದಾತರನ್ನು ಉತ್ತೇಜಿಸುವ ದೃಷ್ಟಿಯಿಂದ ಹಾಗೂ ಈ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಖಾಸಗಿ ವಲಯದಲ್ಲಿ ಉದ್ಯೋಗಾವಕಾಶ ಪಡೆಯಲು ಅನುಕೂಲವಾಗುವಂತೆ ಆಶಾದೀಪ ಎಂಬ ನೂತನ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯನ್ನು ಕರ್ನಾಟಕ ರಾಜ್ಯ ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ (ಆಶಾದೀಪ ಯೋಜನೆ) ಸೊಸೈಟಿಯ ಮೂಲಕ ಜಾರಿಗೊಳಿಸಲಾಗುತ್ತಿದೆ ಎಂದು ಸಚಿವ ಸಂತೋಷ ಎಸ್.ಲಾಡ್ ತಿಳಿಸಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಜಿಲ್ಲೆಯ ಕೈಗಾರಿಕಾ ವಲಯಗಳಲ್ಲಿ ಉದ್ಯೋಗ ಮೇಳ ಆಯೋಜನೆ ಕುರಿತು ಸಭೆ ಜರುಗಿಸಿ, ಕಾರ್ಮಿಕರ ಬೇಡಿಕೆ ಪಟ್ಟಿ ಪಡೆಯಲಾಗುತ್ತದೆ ಎಂದು ತಿಳಿಸಿದರು.
ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪೊಲೀಸ್ ಅಧಿಕ್ಷಕ ಡಾ. ಗೋಪಾಲ ಬ್ಯಾಕೋಡ ವೇದಿಕೆಯಲ್ಲಿದ್ದರು. ಜಿ.ಪಂ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನವರ ಸ್ವಾಗತಿಸಿದರು. ಕೌಶಲ್ಯಾಭಿವೃದ್ಧಿ ಅಧಿಕಾರಿ ರವೀಂದ್ರ ದ್ಯಾಬೇರಿ ಸಭೆ ನಿರ್ವಹಿಸಿ, ವಂದಿಸಿದರು.
ಸಭೆಯಲ್ಲಿ ಕೈಗಾರಿಕೆ, ಕಾರ್ಮಿಕ, ಕೌಶಲ್ಯಾಭಿವೃದ್ಧಿ ಇಲಾಖೆಗಳು, ಕಾಲೇಜು ಶಿಕ್ಷಣ, ಐಟಿಐ, ಇಂಜಿನಿಯರಿಂಗ್ ಕಾಲೇಜುಗಳು, ಚೆಂಬರ್ ಆಫ್ ಕಾಮರ್ಸ್, ತಾರಿಹಾಳ ಮತ್ತು ಬೇಲೂರು ಕೈಗಾರಿಕಾ ಪ್ರದೇಶದ ಸಂಘಗಳ ಪದಾಧಿಕಾರಿಗಳು, ವಿವಿಧ ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕೈಗಾರಿಕೆಗಳು ತಮ್ಮ ತಮ್ಮ ಉದ್ಯೋಗ ಬೇಡಿಕೆ, ನೀಡುವ ವೇತನ, ಅರ್ಹತೆಗಳು ಮತ್ತು ಬೇಡಿಕೆ ಸಂಖ್ಯೆಯನ್ನು ಸಲ್ಲಿಸಬೇಕು. ಈ ಎಲ್ಲ ಮಾಹಿತಿಯನ್ನು ದಾಖಲಿಸಿ ಉದ್ಯೋಗ ಮೇಳ ವೆಬ್‌ಸೈಟ್ ಹಾಗೂ ಕೌಶಲ್ಯ ಕರ್ನಾಟಕ ವೆಬೆಸೈಟ್‌ಗೆ ಜೋಡಿಸಬೇಕು. ಉದ್ಯೋಗ ಆಕಾಂಕ್ಷಿಗಳು ಈ ಲಿಂಕ್ ನೋಡಿ, ತಮ್ಮ ಉದ್ಯೋಗ ಸ್ಥಳ ಮತ್ತು ಕೈಗಾರಿಕೆಗಳನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗ ಆಕಾಂಕ್ಷಿಗಳಿಗೆ ಕೈಗಾರಿಕೆಗಳು ಉದ್ಯೋಗ ನೀಡಿದಲ್ಲಿ ಉದ್ಯೋಗಿಗೆ ಸರಕಾರದ ಕಾರ್ಮಿಕ ಇಲಾಖೆಯಿಂದ ಆಶಾದೀಪ ಯೋಜನೆಯಡಿ ಎರಡು ವರ್ಷಗಳವರೆಗೆ ಪ್ರತಿ ತಿಂಗಳು 6 ಸಾವಿರ ರೂ.ಗಳ ಸಹಾಯಧನ ನೀಡುತ್ತದೆ. ಕೈಗಾರಿಕೆಗಳು ಎಸ್.ಸಿ., ಎಸ್.ಟಿ. ಸಮುದಾಯದವರಿಗೆ ಉದ್ಯೋಗ ನೀಡಿ ಪ್ರೋತ್ಸಾಹಿಸಬೇಕು ಮತ್ತು ಆಶಾದೀಪ ಯೋಜನೆ ಪ್ರಯೋಜನ ಪಡೆಯಬೇಕು.
– ಸಂತೋಷ್ ಲಾಡ್.
ಕಾರ್ಮಿಕ ಇಲಾಖೆ ಸಚಿವರು.