ಜನರ ಮನಸ್ಥಿತಿ ಬದಲಾಗಬೇಕು : ರಾಜಕುಮಾರ ಸಿ.

0
Organized training workshop for implementing officers
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ದೇಶದಲ್ಲಿ ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ಜನರು ಮಕ್ಕಳು, ಮಹಿಳೆ ವಿಷಯದಲ್ಲಿ ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳುತ್ತಿಲ್ಲ. ಎಲ್ಲೆಡೆ ಮಕ್ಕಳು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅವರ ಮೇಲಿನ ಶೋಷಣೆ ತಪ್ಪುತ್ತಿಲ್ಲ. ಇದಕ್ಕೆ ಪರಿಹಾರವೆಂದರೆ ಜನರ ಮನಸ್ಥಿತಿ ಬದಲಾಗಬೇಕು. ಪರಸ್ಪರ ಪ್ರೀತಿ, ವಿಶ್ವಾಸ, ಗೌರವ ಹೆಚ್ಚಿಸುವ ಕಾರ್ಯಚಟುವಟಿಕೆಗಳು ಎಲ್ಲೆಡೆ ಮೂಡಿಬರಬೇಕು ಎಂದು ಪ್ರಭಾರ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರಾಜಕುಮಾರ ಸಿ. ಹೇಳಿದರು.

Advertisement

ಅವರು ಶುಕ್ರವಾರ ಬೆಳಿಗ್ಗೆ ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಪೋಕ್ಸೊ ಕಾಯ್ದೆ-2012, ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಹಾಗೂ ಕರ್ನಾಟಕ ರಾಜ್ಯ ತಿದ್ದುಪಡಿ ಕಾಯ್ದೆ-2019, ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕುರಿತು ಅನುಷ್ಠಾನಾಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪೋಕ್ಸೊ ವಿಶೇಷ ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ನೋಡಿದಾಗ, ಈ ಅಮಾನವೀಯ ಘಟನೆಗಳು ಜರುಗಲು ಅವರಲ್ಲಿ ಕಾನೂನು ಅರಿವಿನ ಕೊರತೆ ಸಹ ಕಾಣುತ್ತದೆ. ಮಕ್ಕಳಲ್ಲಿ ಪೋಕ್ಸೊ ಮತ್ತು ಬಾಲ್ಯ ವಿವಾಹ ನಿಷೇಧ ಕಾನೂನುಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಅಸಹನೀಯ ಘಟನೆಗಳು ನಡೆದಾಗ ಯಾರನ್ನು, ಹೇಗೆ, ಎಲ್ಲಿ ಸಂಪರ್ಕಿಸಬೇಕು ಎಂಬ ತಿಳುವಳಿಕೆ ಮಕ್ಕಳಿಗೆ ಇರಬೇಕು. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಕಾರ್ಯಕ್ರಮ ರೂಪಿಸಿ, ಜಾರಿಗೊಳಿಸಬೇಕೆಂದು ಅವರು ಹೇಳಿದರು.

ತಾಲೂಕಾ ವೈದ್ಯಾಧಿಕಾರಿ ಡಾ. ಕೆ.ಎನ್. ತನುಜಾ ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವಿಲ್ ನ್ಯಾಯಾಧೀಶ ಪರುಶರಾಮ ದೊಡ್ಡಮನಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ರಕ್ಷಣಾ ಘಟಕದ ಮಹಮ್ಮದ ಅಲಿ ತಹಸೀಲ್ದಾರ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀತಾ ವಾಡಕರ ವಂದಿಸಿದರು.

ವೇದಿಕೆಯಲ್ಲಿ ಸರ್ಕಾರಿ ಅಭಿಯೋಜಕಿ ಶೈಲಾ ಅಂಗಡಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಎಸ್.ಎಂ. ಹುಡೆದಮನಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಪಿ. ಸುರೇಶ ಇದ್ದರು.

ಮಕ್ಕಳ ಜಾಗೃತಿಗಾಗಿ ಕಾರ್ಯಾಗಾರದಲ್ಲಿ ವಿವಿಧ ರೀತಿಯ ಪೋಸ್ಟರ್, ಸ್ಟಿಕರ್‌ಗಳನ್ನು ಅತಿಥಿಗಳು ಬಿಡುಗಡೆ ಮಾಡಿದರು. ಕಾರ್ಯಾಗಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು, ನ್ಯಾಯವಾದಿಗಳು, ಪ್ಯಾನಲ್ ವಕೀಲರು ಭಾಗವಹಿಸಿದ್ದರು.

ವಿಶೇಷ ಉಪನ್ಯಾಸಗಳು 

ಕಾರ್ಯಾಗಾರದಲ್ಲಿ 2ನೇ ಅಧಿಕ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ಪೋಕ್ಸೊ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ ಶೈಲಾ ಅಂಗಡಿ ಅವರು ಪೋಕ್ಸೊ ಕಾಯ್ದೆ-2012, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೀಗಲ್ ಮತ್ತು ಪ್ರೋಬೆಷನ್ ಅಧಿಕಾರಿ ನೂರಜಹಾನ್ ಕಿಲ್ಲೇದಾರ ಅವರು ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಹಾಗೂ ಕರ್ನಾಟಕ ರಾಜ್ಯ ತಿದ್ದುಪಡಿ ಕಾಯ್ದೆ-2019 ಕುರಿತು ಮತ್ತು ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಮಂಜುಳಾ ಎಸ್.ಆರ್ ಅವರು ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕುರಿತು ವಿಶೇಷ ಉಪನ್ಯಾಸ ನೀಡಿ, ತರಬೇತಿಯಲ್ಲಿನ ಅನುಷ್ಠಾನ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.


Spread the love

LEAVE A REPLY

Please enter your comment!
Please enter your name here