ಕನ್ನಡ ಸಿನಿಪ್ರಿಯರಿಗೆ ನಿರಾಸೆ ಸುದ್ದಿ ಕೇಳಿಬಂದಿದೆ. ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಆಸ್ಕರ್ ರೇಸ್ನಲ್ಲಿ ಸ್ಪರ್ಧಿಸಿದ್ದ ಕನ್ನಡದ ಎರಡು ಭರವಸೆಯ ಚಿತ್ರಗಳಾದ — ‘ಕಾಂತಾರ ಚಾಪ್ಟರ್ 1’ ಮತ್ತು ‘ಮಹಾವತಾರ ನರಸಿಂಹ’ — ಅಂತಿಮ ನಾಮಿನೇಷನ್ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿವೆ.
ಭಾರತದಿಂದ ಐದು ಸಿನಿಮಾಗಳು ಆಸ್ಕರ್ ರೇಸ್ನಲ್ಲಿ ಇದ್ದರೂ, ಕನ್ನಡದಿಂದ ಭಾರಿ ನಿರೀಕ್ಷೆ ಮೂಡಿಸಿದ್ದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಎರಡು ಚಿತ್ರಗಳು ಕೊನೆಯ ಹಂತದಲ್ಲಿ ಹೊರಬಿದ್ದಿವೆ.
ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದ ‘ಕಾಂತಾರ ಚಾಪ್ಟರ್ 1’ ಸಿನಿಮಾ ಜಾಗತಿಕ ಮಟ್ಟದಲ್ಲಿ ಸುಮಾರು 850 ಕೋಟಿ ರೂಪಾಯಿ ವಹಿವಾಟು ಮಾಡಿ, ಭಾರತೀಯ ಚಿತ್ರರಂಗದ ಮಟ್ಟವನ್ನು ಮತ್ತೊಮ್ಮೆ ಎತ್ತಿಹಿಡಿದಿತ್ತು. ಭಾರತೀಯ ಸಂಸ್ಕೃತಿ, ಜನಪದ ಅಸ್ಮಿತೆಯನ್ನು ವಿಶ್ವಮಟ್ಟಕ್ಕೆ ತಲುಪಿಸಿದ್ದ ಈ ಚಿತ್ರವು ಆಸ್ಕರ್ ಗೆಲ್ಲಬಹುದು ಎಂಬ ಭರವಸೆ ಹುಟ್ಟಿಸಿತ್ತು.
ಇನ್ನೊಂದೆಡೆ, ‘ಮಹಾವತಾರ ನರಸಿಂಹ’ ಸಿನಿಮಾ ಅನಿಮೇಶನ್ ವಿಭಾಗದಲ್ಲಿ ಭಾರತದ ಮೊದಲ ಆಯ್ಕೆಯಾದ ಸಿನಿಮಾ ಎಂಬ ಹೆಗ್ಗಳಿಕೆಯನ್ನು ಪಡೆದಿತ್ತು. ಆದರೆ, ಅಂತಿಮ ಪಟ್ಟಿಯಲ್ಲಿ ಈ ಚಿತ್ರಕ್ಕೂ ಸ್ಥಾನ ಸಿಗದೆ ನಿರಾಸೆ ಮೂಡಿಸಿದೆ.
ಆದರೂ, ಆಸ್ಕರ್ ವೇದಿಕೆಯಲ್ಲಿ ಕನ್ನಡ ಚಿತ್ರಗಳು ಚರ್ಚೆಗೆ ಬಂದಿರುವುದೇ ದೊಡ್ಡ ಸಾಧನೆ ಎಂಬುದಾಗಿ ಸಿನಿಪ್ರಿಯರು ಅಭಿಪ್ರಾಯಪಟ್ಟಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಾಧನೆ ಕನ್ನಡ ಚಿತ್ರರಂಗದ ಶಕ್ತಿಯನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿದೆ.



