ಎಆರ್ ರೆಹಮಾನ್ – ಈ ಹೆಸರು ಕೇಳಿದರೆ ಸಾಕು ಸಂಗೀತ ಪ್ರೇಮಿಗಳಲ್ಲಿ ಗೌರವ ಮೂಡುತ್ತದೆ. ಕಳೆದ ಹಲವು ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿ ನಂಬರ್–1 ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ರೆಹಮಾನ್, ಇಂದಿಗೂ ಸೂಪರ್ ಹಿಟ್ ಹಾಡುಗಳ ಮೂಲಕ ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಬಾಲಿವುಡ್ ಮಾತ್ರವಲ್ಲದೆ ಹಾಲಿವುಡ್ನಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ರೆಹಮಾನ್, ಈಗ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.
ಹೌದು, ಸಂಗೀತ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರೂ, ಎಆರ್ ರೆಹಮಾನ್ ಮೊದಲ ಬಾರಿಗೆ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ಪಾತ್ರವೊಂದರಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಈ ಹಿಂದೆ ಕೆಲ ಆಲ್ಬಂ ಹಾಡುಗಳು, ಯೂಟ್ಯೂಬ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದರೂ, ಸಿನಿಮಾ ಪಾತ್ರದಲ್ಲಿ ನಟಿಸಿದ್ದು ಇದೇ ಮೊದಲು.
ರೆಹಮಾನ್ ಅವರು ತಮಿಳಿನ ‘ಮೂನ್ ವಾಕ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ನಾಯಕ ಖ್ಯಾತ ನಟ-ನೃತ್ಯಗಾರ ಪ್ರಭುದೇವ. ಪ್ರಭುದೇವ ಹಾಗೂ ರೆಹಮಾನ್ ನಡುವಿನ ಆತ್ಮೀಯ ಸ್ನೇಹವೇ ಈ ವಿಶೇಷ ನಿರ್ಧಾರಕ್ಕೆ ಕಾರಣವಾಗಿದೆ. ಮನೋಜ್ ಎನ್ಎಸ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾವನ್ನು ಬಿಹೈಂಡ್ ವುಡ್ಸ್ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡುತ್ತಿದೆ.
ನೃತ್ಯದ ಹಿನ್ನೆಲೆಯ ಮೇಲೆ ಸಾಗುವ ಹಾಸ್ಯ ಪ್ರಧಾನ ಕಥೆ ಹೊಂದಿರುವ ‘ಮೂನ್ ವಾಕ್’ ಸಿನಿಮಾದಲ್ಲಿ, ಎಆರ್ ರೆಹಮಾನ್ ಕೋಪಿಷ್ಟ ಸಿನಿಮಾ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ, ಸಿನಿಮಾದಲ್ಲಿನ ಪಾತ್ರದ ಹೆಸರೂ ಸಹ ಎಆರ್ ರೆಹಮಾನ್ ಎಂದೇ ಇರುತ್ತದೆ.
ಇನ್ನೊಂದು ಕುತೂಹಲಕಾರಿ ವಿಷಯವೇನೆಂದರೆ, ‘ಮೂನ್ ವಾಕ್’ ಸಿನಿಮಾದ ಎಲ್ಲಾ ಐದು ಹಾಡುಗಳನ್ನು ರೆಹಮಾನ್ ಅವರೇ ಹಾಡಿದ್ದಾರೆ. ಇದು ಅವರ ಕರಿಯರ್ನಲ್ಲೇ ಮೊದಲ ಬಾರಿ ಒಂದು ಸಂಪೂರ್ಣ ಸಿನಿಮಾ ಆಲ್ಬಂಗೆ ಸ್ವತಃ ಧ್ವನಿ ನೀಡಿರುವ ಘಟನೆ.
ಈಗಾಗಲೇ ಸಿನಿಮಾದ ಹಲವು ದೃಶ್ಯಗಳ ಚಿತ್ರೀಕರಣ ಮುಗಿಸಿರುವ ರೆಹಮಾನ್, ನಟನೆಯನ್ನು ಬಹಳ ಎಂಜಾಯ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಇತ್ತ ‘ಪೆದ್ದಿ’ ಸಿನಿಮಾದ ಹಾಡುಗಳು ಸಕ್ಸಸ್ ಕಂಡಿದ್ದು, ‘ರಾಮಾಯಣ’ ಸಿನಿಮಾಕ್ಕೂ ಸಂಗೀತ ನೀಡುತ್ತಿರುವ ರೆಹಮಾನ್, ಪ್ರಸ್ತುತ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.



