ವಿಜಯಸಾಕ್ಷಿ ಸುದ್ದಿ, ಗದಗ: ಭಾರತದ ಎಲ್ಲ ಭಾಷೆ, ಲಿಪಿಗಳನ್ನು ಅಧ್ಯಯನ ಮಾಡಿದ ಭಾಷಾ ತಜ್ಞ ಆಚಾರ್ಯ ವಿನೋಭಾ ಭಾವೆ ಅವರು ‘ಕನ್ನಡ ಭಾಷೆ ವಿಶ್ವ ಭಾಷೆಗಳ ರಾಣಿ’ ಎಂದು ಬಣ್ಣಿಸಿದ್ದಾರೆ. ಕನ್ನಡ ಭಾಷೆಯ ಹಿರಿಮೆ ಬಹು ದೊಡ್ಡದು ಎಂದು ಗದುಗಿನ ಶಿವಾನಂದ ಬೃಹನ್ಮಠದ ಪೂಜ್ಯ ಜ.ಸದಾಶಿವಾನಂದ ಮಹಾಸ್ವಾಮಿಗಳು ಹೇಳಿದರು.
ಅವರು ಬುಧವಾರ ನಗರದ ಗದಗ ಹೆಲ್ಪಿಂಗ್ ಹ್ಯಾಂಡ್ಸ್ ಫೌಂಡೇಶನ್ ಹಾಗೂ ಗದಗ ಅಪ್ಪುರಾಜ್ ಇವೆಂಟ್ಸ್ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ-2024 ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಧಕ ಮಹನೀಯರಿಗೆ `ಕನ್ನಡ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅಕ್ಷರಗಳನ್ನು ದುಂಡಾಗಿ ಬರೆಯುವ ವಿಧಾನ ಯಾವುದಾದರೂ ಭಾಷೆಯಲ್ಲಿದ್ದರೆ ಅದು ಕನ್ನಡದಲ್ಲಿ ಮಾತ್ರ.ಇಂತಹ ಭಾಷೆ ಹಲವು ಕಾರಣಗಳಿಂದಾಗಿ ಅಳಿವಿನ ಅಂಚಿನಲ್ಲಿದೆ. ಪರಿಶುದ್ಧ ಕನ್ನಡ ಮಾತನಾಡುವುದು, ಬರೆಯುವದು ಕಷ್ಟವಾಗುತ್ತಿದೆ. ಇದ್ದ ಸರ್ಕಾರಿ ಕನ್ನಡ ಶಾಲೆಗಳ ಬಾಗಿಲು ಮುಚ್ಚಿಕೊಂಡು ಕನ್ನಡ ನಾಡಿನಲ್ಲಿ ಕನ್ನಡ ಹೊರತು ಅನ್ಯಭಾಷೆಗಳ ಶಾಲೆಗಳು ತೆರೆದುಕೊಳ್ಳುತ್ತಿವೆ. ಜ್ಞಾನಾರ್ಜನೆಗೆ ಇತರ ಭಾಷೆಗಳು ಅಗತ್ಯ. ಆದರೆ ಕನ್ನಡ ಭಾಷೆಗೆ ಮೊದಲ ಆದ್ಯತೆ ದೊರೆಯಬೇಕು. ಸುಂದರ, ಮಧುರ, ಮಂಜುಳವಾದ ಕನ್ನಡ ಭಾಷೆ ಇನ್ನಷ್ಟು ಸಮೃದ್ಧಗೊಳ್ಳಬೇಕು. ಕನ್ನಡ ಔಪಚಾರಿಕ ಭಾಷೆಯಾಗಿ ನೇಪಥ್ಯಕ್ಕೆ ಸರಿಯುತ್ತಿದೆ ಎಂದರು.
ಈ ಹಿನ್ನಲೆಯಲ್ಲಿ ಸಹಾಯಹಸ್ತದ ಈ ಸಂಸ್ಥೆಯು ನಿರಂತರವಾಗಿ ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ವೈವಿಧ್ಯಮಯ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿರುವದು ಅಭಿನಂದನೀಯ. ಅಪ್ಪುರಾಜ ಭದ್ರಕಾಳಮ್ಮನಮಠ ಹಾಗೂ ಗೆಳೆಯರ ಬಳಗ ಒಳ್ಳೆಯ ಕೆಲಸ ಮಾಡುತ್ತಿದ್ದು, ಈ ಕಾರ್ಯ ಮುಂದುವರೆಯಲಿ ಎಂದರು.
ಮುಖ್ಯ ಅತಿಥಿಗಳಾಗಿ ಗಣ್ಯರಾದ ತಾತನಗೌಡ ಪಾಟೀಲ, ಶಿವಯ್ಯ ನಾಲತ್ವಾಡಮಠ, ರಾಜು ಗುಡಿಮನಿ, ಅಕ್ಬರಸಾಬ ಬಬರ್ಚಿ, ರಾಜು ಕುರಡಗಿ, ಎಸ್.ಎಚ್. ಶಿವನಗೌಡ್ರ, ಬಸವರಾಜ ತಿರ್ಲಾಪೂರ, ಸಂತೋಷ ತೋಟಗಂಟಿಮಠ, ವಿಜಯಕುಮಾರ ಹಿರೇಮಠ, ಇರ್ಫಾನ ಡಂಬಳ ಆಗಮಿಸಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಗದುಗಿನ ಜ.ಪಂಚಾಚಾರ್ಯ ಮಾಂಗಲ್ಯ ಮಂದಿರದ ಗೌರವಾಧ್ಯಕ್ಷ ಚಂದ್ರು ಬಾಳಿಹಳ್ಳಿಮಠ, ಈ ಸಂಸ್ಥೆಯು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಸಂಯೋಜಿಸಿ ಜನಮುಖಿ, ಸಮಾಜಮುಖಿ ಕಾರ್ಯ ಮಾಡುತ್ತಿದೆ. ಈ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಿವೆ ಎಂದರು.
ಗದಗ ಹೆಲ್ಪಿಂಗ್ ಹ್ಯಾಂಡ್ಸ್ ಫೌಂಡೇಶನ್ ಹಾಗೂ ಗದಗ ಅಪ್ಪುರಾಜ್ ಇವೆಂಟ್ಸ್ ಅಧ್ಯಕ್ಷ ಅಪ್ಪುರಾಜ ಭದ್ರಕಾಳಮ್ಮನಮಠ ಸ್ವಾಗತಿಸಿದರು. ನಾಶೀರ್ ಚಿಕೇನಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಆರ್.ಜೆ. ರಶೀದ್ ನಿರೂಪಿಸಿದರು. ಕೊನೆಗೆ ಶಿವಯೋಗಿ ಟೆಂಗಿನಕಾಯಿ ವಂದಿಸಿದರು.