ವಿಜಯಸಾಕ್ಷಿ ಸುದ್ದಿ, ಗದಗ: ಭಾರತದ ಸಂವಿಧಾನವು ನಮ್ಮ ಹೆಮ್ಮೆಯಾಗಿದ್ದು, ಇದು ಭಾರತದ ಸರ್ವೋಚ್ಛ ಕಾನೂನು ಆಗಿದೆ. ಭಾರತೀಯ ಪೌರರಾದ ನಾವು ಸಂವಿಧಾನವನ್ನು ಅರಿತು ಗೌರವಿಸಬೇಕೆಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ಅವರು ಶುಕ್ರವಾರ ಗದುಗಿನ ಶಾಸ್ತ್ರೀಜಿ ಮಹಿಳಾ ಬಿಎಡ್ ಕಾಲೇಜಿನಲ್ಲಿ ಪ್ರಶಿಕ್ಷಣಾರ್ಥಿಗಳಿಗಾಗಿ ಏರ್ಪಡಿಸಿದ್ದ ಪೌರತ್ವ ತರಬೇತಿ ಶಿಬಿರದಲ್ಲಿ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ವಿಷಯವಾಗಿ ಉಪನ್ಯಾಸ ನೀಡಿದರು.
ನಮ್ಮ ದೇಶವು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಸಮನ್ವಯತೆ, ಭ್ರಾತೃತ್ವ, ಭಾವೈಕ್ಯತೆ ಇಲ್ಲಿ ನೆಲೆ ನಿಂತಿದೆ. ಪ್ರತಿಯೊಬ್ಬರಿಗೂ ಹಕ್ಕು ಮತ್ತು ಕರ್ತವ್ಯಗಳಿದ್ದು, ಅವುಗಳನ್ನು ಸದ್ವಿನಿಯೋಗಗೊಳಿಸಬೇಕೆಂದರು.
ಜೆ.ಸಿ.ಎಸ್ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಮಹಾಂತ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತವು ಸುಖ, ಶಾಂತಿ, ಸಮೃದ್ಧಿಯ ಆಗರವಾಗಿದ್ದು, ಇಲ್ಲಿಯ ಪೌರರಾದ ನಾವು ಪುಣ್ಯವಂತರು. ಮುಖ್ಯವಾಗಿ ನಮ್ಮಲ್ಲಿ ದೇಶಾಭಿಮಾನ ಬೆಳೆದು ಬರಬೇಕು ಎಂದರು.
ಶಿಬಿರದ ಸಂಯೋಜಕರಾದ ಪ್ರೊ. ಎಂ.ಸಂದೀಪ ಮಾತನಾಡಿ, ಭವ್ಯ ಭಾರತಕ್ಕೆ ಬಹು ದೊಡ್ಡ ಇತಿಹಾಸವಿದ್ದು, ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮಲ್ಲಿ ಸಂಸ್ಕೃತಿ, ಮೌಲ್ಯಗಳು ನಮಗೆ ಸದಾ ದಾರಿ ತೋರುತ್ತವೆ ಎಂದರು.
ಪ್ರೊ. ನಿರ್ಮಲಾ ಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ದೇಶದ ಇತಿಹಾಸದ ಪುಟಗಳಲ್ಲಿ ಧರ್ಮ, ತ್ಯಾಗದ ಮನೋಭಾವನೆಗಳು ಮೂಡಿ ಬಂದಿವೆ. ಹಿರಿಯರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದರು.
ವೇದಿಕೆಯ ಮೇಲೆ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಅಕ್ಷಯ ಹಿರೇಮಠ, ಕುಸುಮಾ ಹಿರೇಮಠ, ಪ್ರೊ. ಎಸ್.ಡಿ. ದೇಶಪಾಂಡೆ, ಪ್ರೊ. ರಾಜೇಸಾಬ ಕೆರೂರ, ಪ್ರೊ. ಗಂಗಪ್ಪ ಎಚ್ ಉಪಸ್ಥಿತರಿದ್ದರು.
ಸಂಜನಾ ಹಿರೇಮಠ, ಸುಷ್ಮಾ ಗಾಣಿಗೇರ ಪ್ರಾರ್ಥಿಸಿದರು. ಪೂಜಾ ಮದಗುಣಕಿ ಸ್ವಾಗತಿಸಿದರು. ಪ್ರೊ. ವನಜಾಕ್ಷೀ ಅರಳೇಲೇಮಠ ಪರಿಚಯಿಸಿದರು. ಮೇಘಾ ತಾಂಶಿ ನಿರೂಪಿಸಿದರು. ಶಕುಂತಲಾ ಗುಳೇದ ವಂದಿಸಿದರು.
ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ಶಿಲ್ಪಾ ಹೊನ್ನಗುಡಿ ವಹಿಸಿ ಮಾತನಾಡಿ, ವಿದ್ಯಾರ್ಥಿ ಹಂತದಲ್ಲಿ ಮಕ್ಕಳಿಗೆ ದೇಶಾಭಿಮಾನ ಮೂಡಿಸುವ ಕೆಲಸವಾಗಬೇಕು. ಪೌರತ್ವ ಶಿಬಿರವು ಇದಕ್ಕೆ ಪೂರಕವಾಗಿದೆ ಎಂದರು.