ಮೈಸೂರು: ರಾಜ್ಯದಲ್ಲಿ ಐದು ವರ್ಷಗಳ ಕಾಲ ನಮ್ಮ ತಂದೆಯವರೇ ಮುಖ್ಯಮಂತ್ರಿ ಆಗಿರುತ್ತಾರೆ. ಈ ವಿಚಾರ ಈಗ ಸಂಪೂರ್ಣವಾಗಿ ಸೆಟ್ಲ್ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಈ ಬಗ್ಗೆ ಹೈಕಮಾಂಡ್ ಈಗಾಗಲೇ ನಮ್ಮ ತಂದೆಗೆ ಗ್ರೀನ್ ಸಿಗ್ನಲ್ ನೀಡಿದೆ. ಕೆಲವರು ನಾಯಕತ್ವ ಬದಲಾವಣೆಗಾಗಿ ಪ್ರಯತ್ನಿಸಿದ್ದರು. ಆದರೆ ಆ ಪ್ರಯತ್ನಕ್ಕೆ ಹೈಕಮಾಂಡ್ ಒಪ್ಪಿಗೆ ನೀಡಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸುತ್ತಾರೆ ಎಂದು ಸ್ಪಷ್ಟಪಡಿಸಿದರು.
ಪಕ್ಷದಲ್ಲಿ ಈಗ ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆಗಳು ನಡೆಯುತ್ತಿಲ್ಲ. ಈ ವಿಷಯವನ್ನು ಮಾಧ್ಯಮಗಳಲ್ಲಿ ಮಾತ್ರ ಚರ್ಚಿಸಲಾಗುತ್ತಿದೆ. ನಮ್ಮ ಪಕ್ಷದೊಳಗೆ ಯಾವುದೇ ಗೊಂದಲಗಳಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಇದೇ ವೇಳೆ ಮುಡಾ ಪ್ರಕರಣದಲ್ಲಿ ನ್ಯಾಯಾಲಯದಿಂದ ಸಿಎಂ ಕುಟುಂಬಕ್ಕೆ ಕ್ಲೀನ್ಚಿಟ್ ದೊರೆತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ದೂರುದಾರರು ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಆ ಪ್ರಕ್ರಿಯೆ ಮುಗಿದ ನಂತರ ಸೈಟ್ ವಾಪಸ್ ಪಡೆಯುವ ಬಗ್ಗೆ ನಮ್ಮ ತಾಯಿ ತೀರ್ಮಾನ ಕೈಗೊಳ್ಳುತ್ತಾರೆ. ಈ ವಿಚಾರವನ್ನು ಈಗ ಸದ್ಯಕ್ಕೆ ನಾವು ಚರ್ಚೆ ಮಾಡಿಲ್ಲ ಎಂದು ಹೇಳಿದರು.
ಪ್ರಕರಣದಲ್ಲಿ ಇನ್ನೂ ಕೆಲವು ಕಾನೂನು ಪ್ರಕ್ರಿಯೆಗಳು ಬಾಕಿ ಇದ್ದು, ಅವು ಪೂರ್ಣಗೊಂಡ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಸದ್ಯಕ್ಕೆ ನಮ್ಮ ತಾಯಿಗೆ ಈ ಪ್ರಕರಣದಲ್ಲಿ ಕ್ಲೀನ್ಚಿಟ್ ದೊರೆತಿರುವುದು ಸಂತೋಷ ತಂದಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.



