ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳ ಹಕ್ಕುಗಳ ಕಾಯಿದೆ 2009ರನ್ವಯ 6ರಿಂದ 14 ವರ್ಷ ವಯಸ್ಸಿನ ಎಲ್ಲಾ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುವಂತೆ, ದಾಖಲಾದ ಎಲ್ಲಾ ಮಕ್ಕಳು ಪ್ರತಿ ದಿನ ಶಾಲೆಗೆ ಹಾಜರಾಗಿ ಆಯಾ ವರ್ಗ ವಿಷಯಕ್ಕೆ ನಿಗದಿಪಡಿಸಿದ ಸಾಮರ್ಥ್ಯಗಳನ್ನು ಮಕ್ಕಳು ಕಲಿಯುವಂತೆ ಶಿಕ್ಷಕರು ಪೂರ್ವ ತಯಾರಿಯೊಂದಿಗೆ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಚಟುವಟಿಕೆ ಆಧಾರಿತ ಪರಿಣಾಮಕಾರಿ ಕಲಿಕಾ ಭೋದನೆ ಪ್ರಕ್ರಿಯೆಯಲ್ಲಿ ತೊಡಗಬೇಕು ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಹೇಳಿದರು.
ಶ್ರೀ ಮಹಾವೀರ ಜೈನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವ, ವಿಶೇಷ ದಾಖಲಾತಿ ಆಂದೋಲನ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ವಿಶ್ಲೇಷಣೆ ಕುರಿತು ಜಿಲ್ಲೆಯ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಶಾಲಾ ಮುಖ್ಯ ಶಿಕ್ಷಕರುಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸರಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಶಾಲಾ ವ್ಯಾಪ್ತಿಗೆ ತರಲು ವಿಶೇಷ ದಾಖಲಾತಿ ಆಂದೋಲನ ಪ್ರಾರಂಭಿಸಲಾಗಿದ್ದು, ಜು.31ರವರೆಗೂ ನಡೆಯಲಿದೆ. ದಾಖಲಾತಿ ಆಂದೋಲನವನ್ನು ಜನವಸತಿ, ಶಾಲೆ, ಕ್ಲಸ್ಟರ್, ಬ್ಲಾಕ್, ಜಿಲ್ಲಾ ಹಂತದಲ್ಲಿ ಆಯೋಜಿಸಬೇಕು. ಈ ಪ್ರಕ್ರಿಯೆಯಲ್ಲಿ ಶಿಕ್ಷಕರು, ಎಸ್‌ಡಿಎಂಸಿ ಹಾಗೂ ಸ್ಥಳೀಯರು ಎಲ್ಲ ಮನೆಗಳಿಗೆ ಶಾಲಾ ಅವಧಿಗೆ ಮುನ್ನ ಹಾಗೂ ನಂತರ ಭೇಟಿ ನೀಡಿ, ಪೋಷಕರೊಂದಿಗೆ ಸಮಾಲೋಚನೆ ನಡೆಸಿ ಸರ್ಕಾರದ ಆಶಯ ಹಾಗೂ ಸೌಲಭ್ಯಗಳ ಕುರಿತು ಅರಿವು ಮೂಡಿಸಲು ಸೂಚಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಎಫ್. ಪೂಜಾರ ಮಾತನಾಡಿ, ಇಲಾಖೆಯ ಅನೇಕ ಒತ್ತಡಗಳಲ್ಲಿಯೂ ನಮ್ಮೆಲ್ಲ ಶಿಕ್ಷಕರ ಪ್ರಯತ್ನದಿಂದ ಗುಣಾತ್ಮಕ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಲಾಖಾಧಿಕಾರಿಗಳ ಮಾರ್ಗದರ್ಶನ, ಸತತ ಭೇಟಿಯಿಂದ ಒಳ್ಳೆಯ ಕಲಿಕಾ ವಾತಾವರಣ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಜಿಲ್ಲಾ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಎಚ್.ಬಿ. ರಡ್ಡೇರ್ ಫಲಿತಾಂಶ ವಿಶ್ಲೇಷಣೆಯನ್ನು ಮಾಡಿದರು. ಶಿಕ್ಷಣಾಧಿಕಾರಿ ಎಂ.ಎಚ್. ಕಂಬಳಿ ಬಾಲ್ಯ ವಿವಾಹ ಕಾಯ್ದೆ, ತಡೆಗಟ್ಟುವ ಕ್ರಮಗಳು ಕುರಿತು ಮಾತನಾಡಿದರು. ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿದರು.
ವೇದಿಕೆ ಮೇಲೆ ಗದಗ ಶಹರದ ಕ್ಷೇತ್ರ ಶಿಕ್ಷಣಧಿಕಾರಿಗಳಾದ ಆರ್.ವಿ. ಶಟ್ಟೇಪ್ಪನವರ, ಶರಣಪ್ಪ ನಾಗರಳ್ಳಿ, ಎ.ಎಸ್. ಪಾಟೀಲ, ಲಲಿತ ವಾಣಿಕ್ಯಾಳ, ಸರೋಜಿನಿ ಬಂಡಿವಡ್ಡರ, ಶ್ರೀಧರ್ ಬಡಿಗೇರ, ಚಂದ್ರಕಾAತ ಕಬಾಡಿ ಉಪಸ್ಥಿತರಿದ್ದರು. ಎಸ್.ಬಿ. ದೊಡ್ಡನವರ ಪ್ರಾರ್ಥಿಸಿದರು. ಶ್ರೀಧರ್ ಬಡಿಗೇರ ಸ್ವಾಗತಿಸಿದರು. ಪ್ರಕಾಶ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ಎಂ.ಎಚ್. ಸವದತ್ತಿ ವಂದಿಸಿದರು.
ಮಕ್ಕಳನ್ನು ಆಕರ್ಷಿಸುವ ಹಾಗೆ ಕಲಿಕಾ ವಾತಾವರಣ ಸಿದ್ಧಗೊಳಿಸಿ, ಆಟದ ಮೈದಾನ, ಶೌಚಾಲಯದ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಸೌಲಭ್ಯಗಳೊಂದಿಗೆ ಮಕ್ಕಳನ್ನು ಶಾಲೆಯತ್ತ ಕೈಬೀಸಿ ಕರೆಯುವ ಹಾಗೆ ಕಲಿಕಾ ವಾತಾವರಣ ನಿರ್ಮಿಸಿ, ಶಾಲಾ ಪ್ರಾರಂಭೋತ್ಸವವನ್ನು ಆಚರಿಸಬೇಕು. ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪರಿಣಾಮವಾಗಿ ಬೋಧಿಸುವ ಪ್ರಕ್ರಿಯೆಯಲ್ಲಿ ತೊಡಗಬೇಕು ಎಂದು ಆರ್.ಎಸ್. ಬುರಡಿ ಸೂಚಿಸಿದರು.


