ಬೆಂಗಳೂರು:- ದೇಶದಲ್ಲೇ ಬೆಂಗಳೂರಿನ ನಮ್ಮ ಮೆಟ್ರೋ ಅತ್ಯಂತ ದುಬಾರಿ ಎಂದು ರಾಜ್ಯ ಸರ್ಕಾರದ ವಿರುದ್ದ ತೇಜಸ್ವಿ ಸೂರ್ಯ ವಾಗ್ದಾಳಿ ಮಾಡಿದ್ದಾರೆ.
ಈ ಸಂಬಂಧ x ಮಾಡಿರುವ ಅವರು, ಪ್ರತಿದಿನ ಸರಾಸರಿ 10 ಲಕ್ಷ ಜನರು ಪ್ರಯಾಣಿಸುವ ನಮ್ಮ ಮೆಟ್ರೋ ದೇಶದಲ್ಲೇ ಅತ್ಯಂತ ದುಬಾರಿಯಾಗಿದೆ. ರಾಜ್ಯ ಸರ್ಕಾರ ತಕ್ಷಣವೇ ದರ ಇಳಿಕೆ ಮಾಡಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಆಗ್ರಹ ಮಾಡಿದ್ದಾರೆ.
ದೆಹಲಿ ಮೆಟ್ರೋ ಕೂಡ ಇತ್ತೀಚೆಗೆ ದರ ಏರಿಕೆ ಮಾಡಿದೆ. ಆದರೆ, ಕನಿಷ್ಠ 1 ರೂ.ನಿಂದ ಗರಿಷ್ಠ 4 ರೂ. ವರೆಗೆ ದರ ಏರಿಕೆ ಮಾಡಲಾಗಿದೆ. ಇಷ್ಟು ಪ್ರಮಾಣದಲ್ಲಿ ದರ ಹೆಚ್ಚಳ ಮಾಡಿದರೆ ಯಾರೂ ವಿರೋಧಿಸುವುದಿಲ್ಲ. ಸರ್ಕಾರಕ್ಕೆ ಆದಾಯದ ಅಗತ್ಯವಿದೆ ಎಂಬುದನ್ನು ಅರ್ಥ ಮಾಡಿಕೊಂಡು ಸುಮ್ಮನಾಗುತ್ತಾರೆ. ಆದರೆ, ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ದರ ಸುಮಾರು ಶೇ 136 ರಷ್ಟು ಹೆಚ್ಚಳ ಮಾಡಿದ್ದಾರೆ. 25 ರೂ.ನಷ್ಟು ದರ ಏರಿಕೆ ಮಾಡಲಾಗಿದೆ. ಇದನ್ನು ಯಾರು ಸಹಿಸುತ್ತಾರೆ ಎಂದು ಸೂರ್ಯ ಪ್ರಶ್ನಿಸಿದ್ದಾರೆ.
ಬೆಂಗಳೂರು ನಮ್ಮ ಮೆಟ್ರೋದಲ್ಲಿ ಮುಖ್ಯವಾಗಿ ಐಟಿ ಮತ್ತು ಬಿಟಿ ವಲಯದ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಸಂಚರಿಸುತ್ತಾರೆ. ಬಿಎಂಆರ್ಸಿಎಲ್ ಮೆಟ್ರೋ ಪ್ರಯಾಣ ದರಗಳನ್ನು ಹೆಚ್ಚಿಸಿದ್ದರಿಂದ ಬೆಂಗಳೂರು ಮೆಟ್ರೋ ದೇಶದಲ್ಲೇ ಅತ್ಯಂತ ದುಬಾರಿಯಾಗಿದೆ. ನಮ್ಮ ಸರ್ಕಾರ ಶೇ 136 ರಷ್ಟು ದರ ಹೆಚ್ಚಳ ಮಾಡಿತು. ಇದಕ್ಕೆ ವ್ಯತಿರಿಕ್ತವಾಗಿ, ದೆಹಲಿ ಮೆಟ್ರೋ ದರ ಹೆಚ್ಚಳವು ಸಮಂಜಸ ಮತ್ತು ಕೈಗೆಟುಕುವಂತಿದ್ದು, ಗರಿಷ್ಠ 4 ರೂ. ಹೆಚ್ಚಳವಾಗಿದೆ ಎಂದು ಎಕ್ಸ್ ಮೂಲಕ ತೇಜಸ್ವಿ ಸೂರ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಬ್ಬ ಸಾಮಾನ್ಯ ಮೆಟ್ರೋ ಬಳಕೆದಾರನು ತನ್ನ ನಿವಾಸದಿಂದ ಕೆಲಸಕ್ಕೆ 25 ಕಿ.ಮೀ.ಗಿಂತ ಹೆಚ್ಚು ದೂರ ಪ್ರಯಾಣಿಸಿದರೆ, ಪ್ರತಿ ಪ್ರಯಾಣಕ್ಕೆ ಸುಮಾರು 90 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಇದು ಮೆಟ್ರೋ ತಲುಪುವುದಕ್ಕೆ ಮತ್ತು ಮೆಟ್ರೋ ಇಳಿದ ನಂತರದ ಪ್ರಯಾಣದ ಹೆಚ್ಚುವರಿ ವೆಚ್ಚಗಳನ್ನು ಹೊರತುಪಡಿಸಿದ ಲೆಕ್ಕ. ಈ ದುರದೃಷ್ಟಕರ ಪರಿಸ್ಥಿತಿಯು ಸಾರ್ವಜನಿಕ ಸಾರಿಗೆಯನ್ನು ಅಳವಡಿಸಿಕೊಳ್ಳುವುದನ್ನು ಮತ್ತು ಖಾಸಗಿ ವಾಹನಗಳನ್ನು ಪ್ರೋತ್ಸಾಹಿಸುವುದನ್ನು ನಿರುತ್ಸಾಹಗೊಳಿಸುತ್ತಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.