`ಆಧ್ಯಾತ್ಮ ವಿದ್ಯಾ ವಿದ್ಯಾನಾಂ’ ಎಂದು ಗೀತೆಯಲ್ಲಿ ಹೇಳಿರುವಂತೆ ಆಧ್ಯಾತ್ಮ ವಿದ್ಯೆಯೇ ವಿದ್ಯೆ ಎಂದು ತಿಳಿದು ಸಾಧನೆ ಮಾಡುವುದು ಸರಿಯಾದ ಮಾರ್ಗ. ದೇಹ, ಇಂದ್ರಿಯ, ಮನಸ್ಸು ಮತ್ತು ಬುದ್ಧಿಗಳನ್ನು ತಾನೇ ಎಂದು ಭ್ರಮಿಸಿ ಮನಸ್ಸನ್ನು ಬಾಹ್ಯದ ಕ್ಷಣಿಕ ಭಾಗ್ಯಗಳಿಗೆ ಹಾತೊರೆದರೆ ಜನ್ಮ ಸಾಫಲ್ಯವಾದೀತೇ?! ಆ ದಾರಿಯಲ್ಲಿ ಯುವಕವಿ ಶಿವಾನಂದ ಭಜಂತ್ರಿಯವರ ಮೊದಲ ಮೆಟ್ಟಿಲಿನ ಮೊದಲ ಆಧ್ಯಾತ್ಮಿಕ ಕೃತಿಯೇ `ನಮ್ಮೆಲ್ಲರ ಅಮ್ಮ ಕರಿಯಮ್ಮ’ ಕೃತಿ.
ಈ ನೆಲದ ಪ್ರತಿಯೊಂದು ಊರುಗಳಲ್ಲಿ ಐತಿಹಾಸಿಕತೆ ಇರುವ ದೇವಸ್ಥಾನಗಳು ಸಿಗುತ್ತವೆ. ಅದರಲ್ಲಿ ಗದಗಿನ ಪುರವಾಸಿನಿಯಾದ ಕರಿಯಮ್ಮ ದೇವಿಯ ಪುರಾಣವು ಅದ್ಭುತ, ಅಷ್ಟೇ ಸ್ವಾರಸ್ಯಕರವಾದದ್ದು. ಕರಿಯಮ್ಮದೇವಿಯ ಬಗ್ಗೆ ಈಗಾಗಲೇ ನಾಡಿನ ಹಲವಾರು ಲೇಖಕರು, ಕವಿಗಳು ಸಾಕಷ್ಟು ಪುಸ್ತಕಗಳು, ಲೇಖನಗಳು ಬರೆದಿದ್ದಾರೆ. ಮೂಲತಃ ಕೇರಳದ ಮಲೀಯಾಳದಲ್ಲಿ ನೆಲೆಸಿರುವ ದೇವಿಯು ದಿವ್ಯ ಮಹಿಮೆಯನ್ನು, ಅವತಾರಗಳನ್ನು ದುಷ್ಟರ ಶಿಕ್ಷೆ, ಶಿಷ್ಟರ ರಕ್ಷೆಗಾಗಿ ತನ್ನ ಭಕ್ತರ ಸುಖ-ಸಂತೋಷಕ್ಕಾಗಿ ನೆಲೆನಿಂತವಳು ಅಮ್ಮ ಕರಿಯಮ್ಮದೇವಿ.
ಶ್ರೀ ಕರಿಯಮ್ಮದೇವಿಯ ಶಕ್ತಿ, ಭಕ್ತಿ, ಮಮತೆಯಲ್ಲಿ ಕಥಾ ವಸ್ತುವನ್ನಾಗಿಸಿಕೊಂಡು ಉತ್ತಮ ಕವನಗಳನ್ನು ಈ ಕೃತಿಯಲ್ಲಿ ನೋಡಬಹುದು. ಹೃದಯದ ಅಂತನಾದವನ್ನು ತಾಯಿಯ ಪಾದದಲ್ಲಿ ಇಟ್ಟು ಬೇಡುವ ಭಾವ ಎಲ್ಲರ ಮನವನ್ನು ಸ್ಪಂದಿಸುತ್ತದೆ.
300 ಕ್ಕೂ ಹೆಚ್ಚು ವರ್ಷಗಳ ಇತಿಹಾಸದ ಪುರಾಣಗಳಿಂದ ಅಮ್ಮನ ಗುಣಗಾನ ನಾವು ಕೇಳಬಹುದು, ಪ್ರತ್ಯಕ್ಷ ದರ್ಶನ ಮಾಡಬಹುದು. ನಗರದ ಮಸಾರಿ ಭಾಗದ ಕರಿಯಮ್ಮನ ಕಲ್ಲು ಬಡಾವಣೆಯಲ್ಲಿ ನೆಲೆಸಿದ ಅಮ್ಮ ಕರಿಯಮ್ಮ ದೇವಿ ಜಾತ್ರೆಯ ಕಡುಬಿನ ಕಾಳಗ ಮಾರ್ಚ್ 31ರ ಸಂಜೆ 7 ಗಂಟೆಗೆ ನಡೆಯಲಿದ್ದು, ವೇದಿಕೆಯಲ್ಲಿ `ನಮ್ಮೆಲ್ಲರ ಅಮ್ಮ ಕರಿಯಮ್ಮ’ ಕೃತಿಯು ಗಣ್ಯಮಾನ್ಯರಿಂದ ಸಕಲ ಭಕ್ತರ ಸಮ್ಮುಖದಲ್ಲಿ ಭಕ್ತಿಪೂರ್ವಕವಾಗಿ ಬಿಡುಗಡೆಯಾಗುತ್ತಿದೆ. ಅಮ್ಮ ಕರಿಯಮ್ಮದೇವಿಯು ಕವಿ ಶಿವಾನಂದ ಭಜಂತ್ರಿಯವರಿಗೆ ಅನುಗ್ರಹಿಸಿ, ಮುಂದೆಯೂ ಅತ್ಯುತ್ತಮವಾದ ಕೃತಿಯನ್ನು ಸಾಹಿತ್ಯ ಲೋಕಕ್ಕೆ ತರಲಿ ಎಂದು ಹಾರೈಸುತ್ತೇನೆ.
– ಡಾ. ತಯಬಅಲಿ ಅ.ಹೊಂಬಳ.
ಮಕ್ಕಳ ಸಾಹಿತಿ, ಗದಗ.