ಬೆಳಗಾವಿ:- 2A ಮೀಸಲಾತಿಗಾಗಿ ನಡೆಯುತ್ತಿರುವ ನಮ್ಮ ಹೋರಾಟಕ್ಕೆ ಬೆದರಿಕೆ ಹಾಕಲಾಗ್ತಿದೆ ಎಂದು ಬಸವಜಯ ಮೃತ್ಯುಂಜಯ ಶ್ರೀ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿಗಾಗಿ ಡಿ.10ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ. ನಮ್ಮ ಹೋರಾಟ ತಡೆಯಲು ನಮ್ಮ ಮುಖಂಡರಿಗೆ ಕರೆಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಈ ರೀತಿ ಪ್ರಯತ್ನ ಮಾಡಿದ್ರೇ ಮುಖ್ಯಮಂತ್ರಿಗಳೇ ನಿಮ್ಮ ಪಕ್ಷಕ್ಕೇ ಕೆಟ್ಟ ಹೆಸರು ಬರುತ್ತೆ ಎಂದರು.
ಡಿಸೆಂಬರ್ 10ರಂದು 10 ಸಾವಿರಕ್ಕೂ ಅಧಿಕ ವಕೀಲರು, ಐದು ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳ ಮೂಲಕ ರ್ಯಾಲಿ ಮಾಡುತ್ತೇವೆ. ಸರ್ಕಾರ ಈ ಸಮಾಜದ ಹೋರಾಟಕ್ಕೆ ಸ್ಪಂದನೆ ಮಾಡುತ್ತಿಲ್ಲ. ಲಕ್ಷಾಂತರ ಜನ ಹೋರಾಟಕ್ಕೆ ಬರಲು ತಯಾರಾಗಿದ್ದಾರೆ. 4 ವರ್ಷ ಶಾಂತ ರೀತಿಯಲ್ಲಿ ಹೋರಾಟ ಮಾಡಿದ್ದೇವೆ. ನಮ್ಮ ಹೋರಾಟ ತಡೆಯುವ ಕೆಲಸವನ್ನ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ನಮ್ಮ ಹಕ್ಕನ್ನ ಕೇಳುವ ಪ್ರಯತ್ನ ನಾವು ಮಾಡುತ್ತೇವೆ. ಪ್ರತಿ ಊರಿಂದ ಒಂದು ಟ್ರ್ಯಾಕ್ಟರ್ ಜೊತೆಗೆ ಹತ್ತು ಜನರನ್ನ ಕರೆದುಕೊಂಡು ಬರಬೇಕು. ಸೂರ್ಯ, ಚಂದ್ರ ಇರೋದು ಎಷ್ಟು ಸತ್ಯ ನಾವು ಹೋರಾಟ ಮಾಡೋದು ಅಷ್ಟೇ ಸತ್ಯ ಎಂದು ತಿಳಿಸಿದ್ದಾರೆ.