ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ಸರಕಾರ ಕೋರಿದ ಪರಿಹಾರದ ಪೈಕಿ ಶೇ. 20ಕ್ಕಿಂತ ಕಡಿಮೆ ಹಣವನ್ನು ಕೇಂದ್ರ ಬಿಡುಗಡೆ ಮಾಡಿದೆ. ಈ ಬಗ್ಗೆ ಸುಪ್ರಿಂಕೋರ್ಟ್ ನಲ್ಲಿ ನಮ್ಮ ಹೋರಾಟ ಮುಂದುವರೆಸಲಾಗುವುದು. ಮೇ 5ರಂದು ಪ್ರಕರಣದ ಮತ್ತೆ ವಿಚಾರಣೆಗೆ ಬರಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ತಾಲೂಕಿನ ಹುಲಕೋಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ 18 ಸಾವಿರ ಕೋಟಿ ರೂ. ಬರ ಪರಿಹಾರ ಕೇಳಿತ್ತು. ಆದರೆ ಕೇಂದ್ರ ಸರಕಾರ ಕೇವಲ 3400 ಕೋಟಿ ರೂ. ಬಿಡುಗಡೆ ಮಾಡಿದ್ದು, ಈ ಬಗ್ಗೆ ಕಾನೂನು ಹೋರಾಟ ಮುಂದುವರಿಸಲಾಗುವುದು. ರಾಜ್ಯ ಸರಕಾರ ಈಗಾಗಲೇ ಮೊದಲ ಕಂತಿನ ಬರ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಿದೆ. ಕೇಂದ್ರ ಸರಕಾರ ನೀಡಿದ 3400 ಕೋಟಿ ರೂ.ಗಳನ್ನು ಇನ್ನೊಂದು ವಾರದಲ್ಲಿ ರೈತರ ಖಾತೆಗೆ ಜಮೆ ಮಾಡಲಾಗುವುದು. ರೈತರಿಗೆ ಪರಿಹಾರ ವಿತರಣೆಯಲ್ಲಿ ಯಾವುದೇ ವಿಳಂಬವಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೇಂದ್ರ ಪರಿಹಾರ ಕೊಟ್ಟಿದೆ ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಕಳೆದ ವರ್ಷ ಸಪ್ಟೆಂಬರ್ನಲ್ಲಿ ಬರ ಪರಿಹಾರ ಕೋರಿದ್ದೆವು. 7 ತಿಂಗಳಾದರೂ ಹಣ ಬಿಡುಗಡೆ ಮಾಡದೆ, ಈಗ ಕೊಟ್ಟಿರುವ ಅಲ್ಪ ಹಣದ ಬಗ್ಗೆ ಅಭಿಮಾನ ವ್ಯಕ್ತಪಡಿಸುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.