ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: 2ಎ ಮೀಸಲಾತಿಗಾಗಿ ನಡೆಯುತ್ತಿದ್ದ ಹೋರಾಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹತ್ತಿಕ್ಕುವ ಕುತಂತ್ರ ಮಾಡಿದ್ದರಿಂದ ಇಷ್ಟೊಂದು ರಾದ್ದಾಂತವಾಗಲು ಕಾರಣವಾಯಿತು ಎಂದು ವೀರಶೈವ ಪಂಚಮಸಾಲಿ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ್ ಪೂಜಾರ್ ಆರೋಪಿಸಿದರು.
ಪಟ್ಟಣದ ವೀರಶೈವ ಪಂಚಮಸಾಲಿ ಸೌಹಾರ್ದ ಪತ್ತಿನ ಸಹಕಾರ ಸಂಘದಲ್ಲಿ ಶನಿವಾರ ೨ಎ ಮೀಸಲಾತಿ ಹೋರಾಟದ ವೇಳೆ ನಡೆದ ಗಲಭೆಯನ್ನು ಖಂಡಿಸಿ ನಡೆದ ಸಭೆಯಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರದ ಈ ಕ್ರಮದಿಂದ ಹೋರಾಟ ನಿಲ್ಲದು. ಇದಕ್ಕೆ ತಕ್ಕ ಪಾಠವನ್ನು ಸಮಾಜ ಕಲಿಸಲಿದೆ. ಬಸವಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಹೋರಾಟ ಶಾಂತಿಯುತವಾಗಿ ನಡೆದಿತ್ತು, ಆದರೆ ವ್ಯವಸ್ಥಿತವಾಗಿ ಹೋರಾಟವನ್ನು ಮಣಿಸುವ ಯತ್ನ ನಡೆಯಿತಲ್ಲದೆ, ಹಲವರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಲಾಗಿದೆ. ಪಂಚಮಸಾಲಿ ಸಮಾಜದ ಮಕ್ಕಳ ಶಿಕ್ಷಣ, ಯುವ ಜನರ ಉದ್ಯೋಗ, ಮಹಿಳೆಯರ ಕಲ್ಯಾಣ, ರೈತ ಕಾರ್ಮಿಕರ ಅಬ್ಯುದಯ ಸೇರಿದಂತೆ ಸರ್ವರ ಏಳಿಗೆಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದರು.
ನಮ್ಮ ಸಮಾಜದಲ್ಲೂ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಹಲವಾರು ಕುಟುಂಬಗಳಿದ್ದು, ೨ಎ ಮೀಸಲಾತಿಯಿಂದ ಸಮಾಜವು ಹೆಚ್ಚಿನ ಮುನ್ನೆಲೆಗೆ ಬರಲು ಸಹಕಾರಿಯಾಗಲಿದೆ ಎಂದರು.