ಚಾಮರಾಜನಗರ:- ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಚೆನ್ನಿಪುರದೊಡ್ಡಿಯಲ್ಲಿ ಕೊಟ್ಟ ಸಾಲ ವಸೂಲಿ ಮಾಡುವ ವೇಳೆ ಅವಾಚ್ಯ ಶಬ್ಧದಿಂದ ನಿಂದಿಸಿದ ಎಂದು ವ್ಯಕ್ತಿಯೊಬ್ಬನನ್ನು ಕೊಚ್ಚಿ ಕೊಂದಿರುವ ಘಟನೆ ಜರುಗಿದೆ.
ಮೃತನನ್ನು ಉಮೇಶ್ ಎಂದು ಗುರುತಿಸಲಾಗಿದ್ದು, ಆತ ತನ್ನ ಸಂಬಂಧಿ ಸ್ವಾಮಿ ಗೌಡನಿಗೆ ಸಾಲ ನೀಡಿದ್ದ. ಕೆಲ ದಿನಗಳ ಬಳಿಕ ಸಾಲ ವಾಪಸ್ ಕೇಳಿದ್ದಕ್ಕೆ ಕುಡಿದ ಅಮಲಿನಲ್ಲಿದ್ದ ಸ್ವಾಮಿ ಗೌಡ ರೊಚ್ಚಿಗೆದ್ದು ಉಮೇಶ್‌ನ ತಲೆ ಹಾಗೂ ಮುಖಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿ, ಬಳಿಕ ಕತ್ತು ಕೊಯ್ದಿದ್ದಾನೆ.
ತೀವ್ರ ಗಾಯಗೊಂಡ ಉಮೇಶ್‌ನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮಾಹಿತಿ ಪಡೆದ ಚಾಮರಾಜನಗರ ಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಸ್ವಾಮಿ ಗೌಡನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೊಲೆ ಮಾಡಲು ಪ್ರಚೋದನೆ ನೀಡಿದ ಆರೋಪದ ಮೇಲೆ ಕೆಂಡಗಣ್ಣ ಎಂಬ ವ್ಯಕ್ತಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ದೇವಸ್ಥಾನ ಹಾಗೂ ವೈಯಕ್ತಿಕ ವಿಚಾರವಾಗಿ ಇಬ್ಬರ ನಡುವೆ ಹಿಂದಿನಿಂದಲೂ ವೈಷಮ್ಯ ಇತ್ತು ಎನ್ನಲಾಗಿದೆ. ಶವವನ್ನು ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



