ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮಂಗಳವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಪಟ್ಟಣದ ಮತಕೇಂದ್ರ ಸಂಖ್ಯೆ-88ರಲ್ಲಿ ಮತದಾನ ನಡೆದು ಮದ್ಯಾಹ್ನದ ವೇಳೆಗೆ ಮತದಾರರು ಮತಕೇಂದ್ರಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಮತದಾನ ಮಾಡಲು ಬಂದ ಬಸನಗೌಡ ಪಾಟೀಲ ಎನ್ನುವ ವ್ಯಕ್ತಿಯ ಬದಲಾಗಿ ಯಾರೋ ಅಪರಿಚಿತ ವ್ಯಕ್ತಿ ಮತದಾನ ಮಾಡಿರುವದು ತಿಳಿದು ಬಂದಿದೆ. ತನಗೆ ಮತದಾನಕ್ಕೆ ಅವಕಾಶವಿಲ್ಲ ಎಂದು ತಿಳಿದ ವ್ಯಕ್ತಿ ತೀವ್ರ ಅಕ್ರೋಶ ವ್ಯಕ್ತಪಡಿಸಿ, ಬೇರೊಬ್ಬ ವ್ಯಕ್ತಿಗೆ ಮತದಾನಕ್ಕೆ ಅವಕಾಶ ನೀಡಿ ನಿರ್ಲಕ್ಷ್ಯ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಘಟನೆ ನಡೆದಿದೆ.
ಮತದಾನ ಕೇಂದ್ರದಲ್ಲಿ ಮದ್ಯಾಹ್ನ 2 ಗಂಟೆಯ ಸುಮಾರಿಗೆ ಆಗಮಿಸಿದಾಗ, ತಮ್ಮ ಹೆಸರಿನಲ್ಲಿ ಮತದಾನವಾಗಿರುವದು ತಿಳಿದು, ನನಗೆ ಮತದಾನಕ್ಕೆ ಅವಕಾಶ ನೀಡಿ ಎಂದು ಒತ್ತಾಯಿಸಿದರು. ಈ ವೇಳೆ ಮತಕೇಂದ್ರಕ್ಕೆ ಆಗಮಿಸಿದ ತಹಸೀಲ್ದಾರ ವಾಸುದೇವ ಸ್ವಾಮಿಯವರು ಘಟನೆಯನ್ನು ತಿಳಿದುಕೊಂಡು, ಸದರಿ ವ್ಯಕ್ತಿಗೆ ಟೆಂಡರ್ ಮತದಾನ ಎಂದು ಮತಪತ್ರವನ್ನು ನೀಡಿ ಮತದಾನಕ್ಕೆ ಅವಕಾಶ ನೀಡಿದರು. ಇಂತಹ ಕೆಲವು ಜನರ ಮತಗಳನ್ನು ನಕಲಿ ಮತದಾನ ಮಾಡಿ ಹೋಗಿರುವುದಾಗಿ ಅಲ್ಲಲ್ಲಿ ಕೇಳಿಬಂದಿತು.
ಕೆಲವು ಕಡೆಗಳಲ್ಲಿ ಹೊಸದಾಗಿ ಮತದಾನಕ್ಕೆ ಅವಕಾಶ ಪಡೆದಿರುವ ಯುವ ಮತದಾರರ ಮತ ಕೇಂದ್ರಗಳ ಬದಲಾವಣೆಯಾಗಿದ್ದು ಕಂಡು ಬಂದಿತು. ಪಟ್ಟಣದಲ್ಲಿ ಕುಟುಂಬದವರು ಮಾಡುತ್ತಿರುವ ಮತಕೇಂದ್ರದಲ್ಲಿ ಹೆಸರಿದೆ ಎಂದು ತಿಳಿದು ಅಲ್ಲಿ ಮತದಾರರ ಯಾದಿಯಲ್ಲಿ ಹುಡುಕಿದಾಗ ಹೆಸರು ಕಂಡು ಬರಲಿಲ್ಲ. ಆದರೆ ಮೊದಲ ಮತದಾನ ಮಾಡುವ ಹುಮ್ಮಸ್ಸಿನಲ್ಲಿದ್ದ ಅವರು ದೂರವಾದರೂ ಸಹ ತಮ್ಮ ಮತಕೇಂದ್ರವನ್ನು ಹುಡುಕಿ ಮತ ಚಲಾಯಿಸಿದರು.
ತಾಲೂಕಿನ ಮತದಾನ ಕೇಂದ್ರವೊಂದರಲ್ಲಿ ವ್ಯಕ್ತಿಯೋರ್ವ ಲೋಕಸಭಾ ಚುನಾವಣೆಯ ಮತದಾನ ಕಾಲಕ್ಕೆ ಮುಂಜಾನೆ ತಾಲೂಕಿನ ಗುಲಗಂಜಿಕೊಪ್ಪ ಗ್ರಾಮದ ಮತಗಟ್ಟೆ ಸಂಖ್ಯೆ-157ರಲ್ಲಿ ತಾನು ವೋಟ್ ಮಾಡುವದನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಅದನ್ನು ವಾಟ್ಸಪ್ ಗ್ರೂಪ್‌ಗಳಿಗೆ ಶೇರ್ ಮಾಡಿದ್ದು, ಈ ವಿಡಿಯೋ ಚಿತ್ರೀಕರಣದ ಬಗ್ಗೆ ರಾಣೆಬೆನ್ನೂರ ಸುದ್ದಿ ವಾಹಿನಿಯಲ್ಲಿ ಪ್ರಕಟಿಸಿದ್ದು ತಿಳಿದು ಬಂದಿದ್ದು, ಈ ಕುರಿತಂತೆ ಚುನಾವಣೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಚುನಾವಣಾ ಅಧಿಕಾರಿ ಮಹೇಶ ಹಡಪದ ವಿಷಯದ ಬಗ್ಗೆ ವಿಚಾರಿಸಿ ಖಾತ್ರಿಪಡಿಸಿಕೊಂಡು, ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪಿಎಸ್‌ಐ ಈರಪ್ಪ ರಿತ್ತಿ ತನಿಖೆ ಕೈಗೊಂಡಿದ್ದಾರೆ.