ಚೆನ್ನೈ: ಚೆನ್ನೈಯಿಂದ ಸಿಂಗಾಪುರಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿ 200ಕ್ಕೂ ಹೆಚ್ಚು ಪ್ರಯಾಣಿಕರು ಐದು ಗಂಟೆಗಳ ಕಾಲ ವಿಮಾನದೊಳಗೆ ಕಾಯಬೇಕಾದ ಘಟನೆ ನಡೆದಿದೆ.
ವಿಮಾನಕ್ಕೆ ಹತ್ತಿದ ಬಳಿಕವೂ ಹಾರಾಟ ಪ್ರಾರಂಭವಾಗದೆ ಸುಮಾರು ಐದು ಗಂಟೆಗಳ ಕಾಲ ಪ್ರಯಾಣಿಕರು ಕುಳಿತೇ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು. ಈ ವಿಳಂಬದಿಂದ ಬೇಸತ್ತ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು. ಕೆಲವರು ವಿಮಾನ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಘಟನೆಯ ಬಳಿಕ ಇಂಡಿಗೋ ಸಂಸ್ಥೆ ಸ್ಪಷ್ಟನೆ ನೀಡಿದೆ. ವಿಮಾನದ ಒಳಭಾಗದ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರುವುದನ್ನು ಪೈಲಟ್ ಗಮನಿಸಿದ ಕಾರಣ ತಾಂತ್ರಿಕ ತಂಡಕ್ಕೆ ಮಾಹಿತಿ ನೀಡಲಾಗಿದೆ. ಸಮಸ್ಯೆಯನ್ನು ಪರಿಶೀಲಿಸುವ ಪ್ರಕ್ರಿಯೆ ನಡೆಯುತ್ತಿದ್ದುದರಿಂದ ಹಾರಾಟ ವಿಳಂಬವಾಗಿದೆ ಎಂದು ತಿಳಿಸಿದೆ.
ಇದಲ್ಲದೆ, ಈ ಮಧ್ಯೆ ಕಾಕ್ಪಿಟ್ ಸಿಬ್ಬಂದಿ ತಮ್ಮ ಕರ್ತವ್ಯ ಸಮಯ ಮಿತಿಯನ್ನು ಮೀರಿದ ಕಾರಣ ಬದಲಿ ಸಿಬ್ಬಂದಿಯನ್ನು ನಿಯೋಜಿಸಬೇಕಾಯಿತು. ಇದರ ಪರಿಣಾಮವಾಗಿ ವಿಮಾನ ಹಾರಾಟ ಮತ್ತಷ್ಟು ತಡವಾಯಿತು ಎಂದು ಸಂಸ್ಥೆ ವಿವರಿಸಿದೆ.
ಒಟ್ಟಿನಲ್ಲಿ ತಾಂತ್ರಿಕ ತೊಂದರೆ ಹಾಗೂ ಸಿಬ್ಬಂದಿ ಬದಲಾವಣೆ ಕಾರಣಗಳಿಂದ ಪ್ರಯಾಣಿಕರು ನಿರೀಕ್ಷೆಗಿಂತ ಹೆಚ್ಚು ಸಮಯ ವಿಮಾನದೊಳಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.



