Home Blog Page 123

ಹಾವೇರಿ ಎನ್‌ಎಚ್ 48 ದುರಂತ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ, ನವದಂಪತಿ ಸಾವು

0

ಹಾವೇರಿ: ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮದುವೆಯಾಗಿ ಕೇವಲ 15 ದಿನಗಳಾಗಿದ್ದ ನವದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿ 48 ನಲ್ಲಿ ನಡೆದಿದೆ.

ನಿಂತಿದ್ದ ಲಾರಿಗೆ ಕಾರು ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಜ್ಜಿಹೋಗಿದೆ. ಮೃತರನ್ನು ಹಾವೇರಿ ನಗರದ ನಿವಾಸಿಗಳಾದ ಕಾರ್ತಿಕ್ ಹೂಗಾರ (34) ಹಾಗೂ ಅವರ ಪತ್ನಿ ಐಶ್ವರ್ಯ (30) ಎಂದು ಗುರುತಿಸಲಾಗಿದೆ. ದೇವರ ದರ್ಶನಕ್ಕೆ ತೆರಳಿ ವಾಪಸ್ ಮನೆಗೆ ಬರುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಅಪಘಾತದಲ್ಲಿ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಗೆ ರವಾನೆ ಮಾಡಲಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ, ಕಾರಿನೊಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದರು. ತಡಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ನಿಖರ ಕಾರಣದ ಬಗ್ಗೆ ತನಿಖೆ ಮುಂದುವರಿದಿದೆ.

ಈ ದುರಂತದಿಂದ ಎರಡೂ ಕುಟುಂಬಗಳಲ್ಲಿ ಆಕ್ರಂದನ ಮುಗಿಲುಮುಟ್ಟಿದ್ದು, ಹಾವೇರಿ ನಗರದಲ್ಲಿ ಶೋಕ ವಾತಾವರಣ ಮನೆಮಾಡಿದೆ.

Ali Khamenei Death: ಇಸ್ರೇಲ್-ಅಮೆರಿಕ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆ!

0

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಕೆಲವೇ ಗಂಟೆಗಳ ಒಳಗೆ, ಇರಾನ್ ಮಾಧ್ಯಮವೂ ಸುಪ್ರೀಂ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ದೃಢಪಡಿಸಿದೆ.

ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಖಮೇನಿ ಸಾವನ್ನಪ್ಪಿದ್ದಾರೆ ಎಂದು ಸ್ಟೇಟ್ ಮೀಡಿಯಾ ಖಚಿತಪಡಿಸಿದೆ. ಈ ಬೆಳವಣಿಗೆಯಿಂದ ಇರಾನ್ ದೇಶಾದ್ಯಂತ 40 ದಿನಗಳ ಶೋಕಾಚರಣೆ ಘೋಷಿಸಲಾಗಿದೆ.

ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ವೇದಿಕೆ ‘ಟ್ರುತ್ ಸೋಶಿಯಲ್’ನಲ್ಲಿ ಖಮೇನಿಯನ್ನು “ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಗಳಲ್ಲಿ ಒಬ್ಬ” ಎಂದು ವಿವರಿಸಿ, ಇದರಿಂದ ಅಮೆರಿಕ ಮತ್ತು ಜಾಗತಿಕ ನ್ಯಾಯವು ಸಾಧ್ಯವಾಯಿತು ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, ಇರಾನ್‌ನ ಐಆರ್‌ಜಿಸಿ, ಸೇನೆ ಮತ್ತು ಭದ್ರತಾ ಪಡೆಗಳು ಮುಂದಿನ ಹೋರಾಟಕ್ಕೆ ತಯಾರಾಗಿಲ್ಲವೆಂಬ ಮಾಹಿತಿ ಲಭ್ಯವಾಗಿದೆ.

ಒಂದೇ ದಿನದಲ್ಲಿ ಇರಾನ್ ದೇಶವು ಬಹಳಷ್ಟು ನಾಶವಾಗಿದೆ, ಆದರೆ ಮಧ್ಯಪ್ರಾಚ್ಯ ಮತ್ತು ಜಗತ್ತಿನಲ್ಲಿ ಶಾಂತಿ ಸ್ಥಾಪಿಸುವವರೆಗೆ ನಿಖರ ಮತ್ತು ದೊಡ್ಡ ದಾಳಿಗಳನ್ನು ಮುಂದುವರಿಸಲು ನಾವು ತಯಾರಾಗಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ. ಈ ಘಟನೆ ಮಧ್ಯಪ್ರಾಚ್ಯ ಭದ್ರತೆ ಮತ್ತು ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಹೊಸ ಉದ್ವಿಗ್ನತೆ ಉಂಟುಮಾಡಿದೆ, ಹಾಗೂ ಜಾಗತಿಕ ಸಮುದಾಯ ಮತ್ತು ಮಧ್ಯಪ್ರಾಚ್ಯ ಪ್ರದೇಶದ ರಾಜ್ಯಗಳಿಗೆ ಗಂಭೀರ ಪರಿಣಾಮ ಬೀರಲಿದೆ.

 

ಮಂಗಳೂರು ಏರ್‌ಪೋರ್ಟ್‌ನಿಂದ ದುಬೈಗೆ ವಿಮಾನಗಳ ಹಾರಾಟ ತಾತ್ಕಾಲಿಕ ಸ್ಥಗಿತ!

ಮಂಗಳೂರು: ಇಸ್ರೇಲ್–ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಿಂದ ವಿಮಾನ ಹಾರಾಟದಲ್ಲಿ ತಾತ್ಕಾಲಿಕ ವ್ಯತ್ಯಯ ಕಂಡುಬಂದಿದೆ.

ನಿಗದಿಯಾಗಿದ್ದ ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನಗಳು ಹಠಾತ್ ರದ್ದುಗೊಳಿಸಲ್ಪಟ್ಟಿದ್ದು, ಪ್ರಮುಖವಾಗಿ ದುಬೈಗೆ ತೆರಳುವ ವಿಮಾನಗಳು ಸ್ಥಗಿತಗೊಂಡಿರುವುದರಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರದ್ದಾದ ವಿಮಾನಗಳು:

  • 9.25 AM: ಮಂಗಳೂರು – ಮಸ್ಕತ್, ಏರ್ ಇಂಡಿಯಾ ಎಕ್ಸ್‌ಪ್ರೆಸ್
  • 1.20 PM: ಮಂಗಳೂರು – ದುಬೈ, ಏರ್ ಇಂಡಿಯಾ ಎಕ್ಸ್‌ಪ್ರೆಸ್
  • 7.15 PM: ಮಂಗಳೂರು – ದುಬೈ, ಇಂಡಿಗೋ
  • 8.15 PM: ಮಂಗಳೂರು – ದುಬೈ, ಏರ್ ಇಂಡಿಯಾ ಎಕ್ಸ್‌ಪ್ರೆಸ್
  • 8.55 PM: ಮಂಗಳೂರು – ಬಹರೇನ್, ಏರ್ ಇಂಡಿಯಾ ಎಕ್ಸ್‌ಪ್ರೆಸ್
  • 9.05 PM: ಮಂಗಳೂರು – ಅಬುಧಾಬಿ, ಇಂಡಿಗೋ

ಸೂಚನೆಗಳು:

  • ಇರಾನ್ ವಾಯು ಮಾರ್ಗದಲ್ಲಿ ವಿಮಾನ ಹಾರಾಟ ನಿಷೇಧಗೊಂಡಿರುವ ಹಿನ್ನೆಲೆಯಲ್ಲಿ ಗಲ್ಪ್ ರಾಷ್ಟ್ರಗಳಿಗೆ ತೆರಳುವ ಎಲ್ಲಾ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ.
  • ಪ್ರಯಾಣಿಕರಿಗೆ ತಮ್ಮ ವಿಮಾನ ಸಂಸ್ಥೆಯಿಂದ ಹಾರಾಟ ಖಚಿತಗೊಂಡ ನಂತರ ಮಾತ್ರ ವಿಮಾನ ನಿಲ್ದಾಣಕ್ಕೆ ಆಗಮಿಸಲು ಅಧಿಕಾರಿಗಳು ಮನವಿ ಮಾಡಿದ್ದಾರೆ.
  • ಹೆಚ್ಚಿನ ಮಾಹಿತಿ ಮತ್ತು ಟಿಕೆಟ್ ಸಂಬಂಧಿ ವಿಚಾರಗಳಿಗಾಗಿ ಸಂಸ್ಥೆಗಳ ವೆಬ್‌ಸೈಟ್ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಇಸ್ರೇಲ್–ಇರಾನ್ ಸಂಘರ್ಷದಿಂದ ಮಧ್ಯಪ್ರಾಚ್ಯದ ಗಾಳಿಯ ಉದ್ವಿಗ್ನತೆ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಮಂಗಳೂರು ವಿಮಾನ ನಿಲ್ದಾಣದಿಂದ ಹೊರಡುವ ಪ್ರಯಾಣಿಕರು ಈ ಕಾರಣಕ್ಕೆ ಪರದಾಡುವ ಪರಿಸ್ಥಿತಿಯಲ್ಲಿದ್ದಾರೆ.

 

ಇರಾನ್ ಯುದ್ಧದ ಎಫೆಕ್ಟ್; ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ; ಇಲ್ಲಿದೆ ದರಪಟ್ಟಿ

0

ಇರಾನ್ ಯುದ್ಧದ ಎಫೆಕ್ಟ್ ನಿಂದಾಗಿ ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ ಆಗಿದ್ದು, ಗೋಲ್ಡ್ ಪ್ರಿಯರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,54,630 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,68,710 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 29,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,54,630 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 29,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 32,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 1ಕ್ಕೆ):-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,871 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,463 ರೂ.

18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,653 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 295 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-

24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,871 ರೂ.

22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,463 ರೂ.

ಬೆಳ್ಳಿ ಬೆಲೆ 1 ಗ್ರಾಂಗೆ: 295 ರೂ.

ಕಲಬುರಗಿ ಮಹಾನಗರ ಪಾಲಿಕೆ ಬಜೆಟ್ʼಗೂ ಮುನ್ನ ಖಮೇನಿ ಹತ್ಯೆಗೆ ಸಂತಾಪ!

ಕಲಬುರಗಿ: ಮಹಾನಗರ ಪಾಲಿಕೆ ಬಜೆಟ್ ಮಂಡನೆಗೂ ಮುನ್ನ ಇರಾನ್ ಪರಮೋಚ್ಚ ನಾಯಕ ಅಯೊತೊಲ್ಲಾ ಅಲಿ ಖಮೇನಿ ಹತ್ಯೆಗೆ ಸಂತಾಪ ಸೂಚಿಸಿರುವ ಘಟನೆ ನಡೆದಿದೆ.

ನಗರದ ಟೌನ್ ಪ್ರದೇಶದಲ್ಲಿರುವ ಪಾಲಿಕೆ ಸಭಾಂಗಣದಲ್ಲಿ ಇಂದು ಬಜೆಟ್ ಮಂಡನೆ ನಡೆಯುತ್ತಿದ್ದ ಸಂದರ್ಭದಲ್ಲಿ, ವಾರ್ಡ್ ನಂ.24 ಸದಸ್ಯೆ ಸಯೀದಾ ನೂರ್ ಫಾತೀಮಾ ಜೈದಿ ಅವರು ಸಂತಾಪ ನಿರ್ಣಯವನ್ನು ಮಂಡಿಸಿದರು.

ನಿರ್ಣಯದ ಬಳಿಕ ಪಾಲಿಕೆ ಮೇಯರ್, ಆಯುಕ್ತರು ಹಾಗೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಸದಸ್ಯರು ಕೂಡ ಸಂತಾಪ ಸೂಚಿಸಿದರು.

ಹೊಸ ಸಿಲಿಂಡರ್ ಜೋಡಿಸುವಾಗ ದುರಂತ: ಭೀಕರ ಸ್ಫೋಟಕ್ಕೆ ಮನೆ ಛಿದ್ರ ಛಿದ್ರ

ಬೆಂಗಳೂರು: ಲಗ್ಗೆರೆ ರಾಜೀವ್ ನಗರದಲ್ಲಿರುವ ಮನೆಯೊಂದರಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು ಆತಂಕದ ಘಟನೆ ನಡೆದಿದೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಲು ಕಾರ್ಯಾಚರಣೆ ನಡೆಸಿತು.

ಮೂರು ಅಂತಸ್ತಿನ ಮನೆಯ ಮೊದಲ ಮಹಡಿಯಲ್ಲಿ ಈ ಅವಘಡ ಸಂಭವಿಸಿದ್ದು, ಹರಗಯ್ಯ ಎಂಬುವವರ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಘಟನೆಯ ಒಂದು ಗಂಟೆ ಮುನ್ನವೇ ಹೊಸ ಎಲ್‌ಪಿಜಿ ಸಿಲಿಂಡರ್ ತಂದು ಜೋಡಿಸಲಾಗಿತ್ತು. ಅದನ್ನು ಅಳವಡಿಸುವ ವೇಳೆ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಘಟನೆ ಸಂಭವಿಸಿದ ಕ್ಷಣದಲ್ಲೇ ಮನೆಯವರು ಹೊರಗೆ ಓಡಿಬಂದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಹರಗಯ್ಯ ಅವರ ಪತ್ನಿ ಭಾಗ್ಯಮ್ಮ ಸೇರಿದಂತೆ ಐವರು ಕುಟುಂಬ ಸದಸ್ಯರು ಮನೆಯಲ್ಲಿ ವಾಸವಾಗಿದ್ದು, ಅದೃಷ್ಟವಶಾತ್ ಯಾರಿಗೂ ಗಾಯವಾಗಿಲ್ಲ.

ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ.

 

80 ಕೋಟಿ ಮೌಲ್ಯದ ಆಸ್ತಿ ಕಬಳಿಕೆ: ಬೆಸ್ಕಾಂ ಅಧಿಕಾರಿಗಳು ಸೇರಿ ಹಲವರ ವಿರುದ್ಧ ಕೇಸ್ ದಾಖಲು!

0

ಬೆಂಗಳೂರು: ಪೊಲೀಸ್ ಇಲಾಖೆಗೆ ಸೇರಿದ ಸುಮಾರು 80 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಕಬಳಿಸಲು ಯತ್ನಿಸಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಬೆಸ್ಕಾಂ, ಬಿಬಿಎಂಪಿ ಅಧಿಕಾರಿಗಳು ಹಾಗೂ ಕೆಲವು ಖಾಸಗಿ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮಲ್ಲೇಶ್ವರಂನ ಹಳೆಯ ಪೊಲೀಸ್ ಠಾಣೆ ಮತ್ತು ಪೊಲೀಸ್ ವಸತಿಗೃಹಗಳಿರುವ ಈ ಜಾಗಕ್ಕೆ 100 ವರ್ಷಕ್ಕೂ ಅಧಿಕ ಇತಿಹಾಸವಿದೆ. 1913ರ ನಕ್ಷೆಯಲ್ಲಿಯೇ ಈ ಸ್ಥಳವನ್ನು ಪೊಲೀಸ್ ವಸತಿ ಪ್ರದೇಶವೆಂದು ಗುರುತಿಸಲಾಗಿದ್ದು, ಪ್ರಸ್ತುತವೂ ನಾಲ್ವರು ಇನ್ಸ್‌ಪೆಕ್ಟರ್‌ಗಳ ಕುಟುಂಬಗಳು ಇಲ್ಲಿ ವಾಸಿಸುತ್ತಿವೆ.

ಈ ಪ್ರಕರಣವು ಲೋಕಾಯುಕ್ತ ಇನ್ಸ್‌ಪೆಕ್ಟರ್ ಕುಮಾರ್ ಅವರ ಮನೆಗೆ ಬಂದ ವಿದ್ಯುತ್ ಬಿಲ್ಲಿನಲ್ಲಿ ‘ಮಹಾಲಕ್ಷ್ಮೀ’ ಎಂಬ ಖಾಸಗಿ ವ್ಯಕ್ತಿಯ ಹೆಸರು ಕಾಣಿಸಿಕೊಂಡ ಹಿನ್ನೆಲೆ ಬೆಳಕಿಗೆ ಬಂದಿದೆ. ಅನುಮಾನಗೊಂಡ ಅವರು ಸಂಬಂಧಿತ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಆಸ್ತಿ ದಾಖಲೆಗಳನ್ನು ಅಕ್ರಮವಾಗಿ ಮಹಾಲಕ್ಷ್ಮೀ ಹೆಸರಿಗೆ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ.

ಇದೇ ವೇಳೆ, ಬಿಬಿಎಂಪಿ ಮೂಲಕ ಇ-ಖಾತಾವನ್ನೂ ಅಕ್ರಮವಾಗಿ ಮಾಡಿಸಿಕೊಂಡಿರುವುದು ಹಾಗೂ ಕೃಷ್ಣಮೂರ್ತಿ ಎಂಬಾತನಿಗೆ ಜಾಗ ಮಾರಾಟ ಮಾಡಲು ಒಪ್ಪಂದ ಪತ್ರ  ಮಾಡಿಕೊಂಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಇನ್ನೂ, “ಅಧಿಕಾರಿಗಳು ಇದ್ದರೂ ಜಾಗ ಖಾಲಿ ಮಾಡಿಸುತ್ತೇವೆ” ಎಂದು ಆರೋಪಿಗಳಿಂದ ಬೆದರಿಕೆ ಹಾಕಲಾಗಿದೆ ಎಂಬುದೂ ತಿಳಿದುಬಂದಿದೆ. ಲೋಕಾಯುಕ್ತ ಇನ್ಸ್‌ಪೆಕ್ಟರ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಮಲ್ಲೇಶ್ವರಂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

“ರಮ್” ರೋಗಗಳಿಗೆ ಔಷಧಿ ಎನ್ನುವುದು ಸತ್ಯವೇ? ಇಲ್ಲಿದೆ ನೋಡಿ ಉತ್ತರ

0

ರಮ್‌ನ್ನು ಕೇವಲ ಮದ್ಯಪಾನವೆಂದು ಮಾತ್ರ ನೋಡುವವರಿದ್ದಾರೆ. ಆದರೆ ಕೆಲವು ಮಂದಿ ಇದನ್ನು ಔಷಧೀಯ ಗುಣಗಳನ್ನೂ ಹೊಂದಿದೆ ಎಂದು ನಂಬುತ್ತಾರೆ. ಆದರೆ ತಜ್ಞರ ಪ್ರಕಾರ, ರಮ್ ಸೇರಿದಂತೆ ಯಾವುದೇ ಮದ್ಯವನ್ನು ಆರೋಗ್ಯದ ದೃಷ್ಟಿಯಿಂದ ಬಳಸುವಾಗ ಎಚ್ಚರಿಕೆ ಅಗತ್ಯವಾಗಿದೆ.

ರಮ್ ಎಂದರೇನು?
ರಮ್‌ನ್ನು ಸಾಮಾನ್ಯವಾಗಿ ಕಬ್ಬಿನ ಸಕ್ಕರೆ ಅಥವಾ ಮಲಾಸಿಸ್‌ನಿಂದ ತಯಾರಿಸಲಾಗುತ್ತದೆ. ಇದನ್ನು ವಿವಿಧ ಹಂತಗಳಲ್ಲಿ ಫರ್ಮೆಂಟೇಶನ್ ಮತ್ತು ಡಿಸ್ಟಿಲೇಶನ್ ಮೂಲಕ ಸಂಸ್ಕರಿಸಲಾಗುತ್ತದೆ. ಸಾಮಾನ್ಯವಾಗಿ ಇದರಲ್ಲಿ 40 ರಿಂದ 60 ಶೇಕಡಾ ಆಲ್ಕೋಹಾಲ್ ಅಂಶವಿರುತ್ತದೆ.

ಆರೋಗ್ಯದ ಮೇಲೆ ಪರಿಣಾಮ:
ಕೆಲವು ಅಧ್ಯಯನಗಳ ಪ್ರಕಾರ, ಮಿತ ಪ್ರಮಾಣದಲ್ಲಿ ಮದ್ಯ ಸೇವನೆ ಕೆಲವರಿಗೆ ತಾತ್ಕಾಲಿಕ ವಿಶ್ರಾಂತಿ ಅಥವಾ ದೇಹದಲ್ಲಿ ಉಷ್ಣತೆಯ ಅನುಭವ ನೀಡಬಹುದು. ಚಳಿಗಾಲದಲ್ಲಿ ದೇಹಕ್ಕೆ ಬಿಸಿ ನೀಡುತ್ತದೆ ಎಂಬ ಭಾವನೆಯೂ ಇದೆ. ಕೆಲವರು ನಿದ್ರೆಗೆ ಸಹಾಯಕ ಎಂದು ನಂಬುತ್ತಾರೆ.

ಆದರೆ ಅಪಾಯಗಳೇ ಹೆಚ್ಚು:
ವೈದ್ಯಕೀಯ ತಜ್ಞರು ಸ್ಪಷ್ಟವಾಗಿ ಹೇಳುವುದೇನೆಂದರೆ, ರಮ್ ಅಥವಾ ಯಾವುದೇ ಮದ್ಯವನ್ನು ಔಷಧಿಯಂತೆ ಬಳಸುವುದು ಸರಿಯಲ್ಲ. ನಿಯಮಿತವಾಗಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಲಿವರ್ ಹಾನಿ, ಹೃದಯ ಸಮಸ್ಯೆಗಳು, ರಕ್ತದೊತ್ತಡ, ಮಾನಸಿಕ ಸಮಸ್ಯೆಗಳು ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

ತಪ್ಪು ಕಲ್ಪನೆಗಳಿಗೆ ಎಚ್ಚರ:
ಕೀಲು ನೋವು, ಶೀತ, ಮಧುಮೇಹ ಅಥವಾ ಕ್ಯಾನ್ಸರ್‌ಂತಹ ಕಾಯಿಲೆಗಳನ್ನು ರಮ್ ಗುಣಪಡಿಸುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಇಂತಹ ಮಾಹಿತಿಗಳನ್ನು ನಂಬಿ ಸ್ವಯಂ ಚಿಕಿತ್ಸೆಗೆ ಮುಂದಾಗುವುದು ಅಪಾಯಕಾರಿ.

ವೈದ್ಯರ ಸಲಹೆ ಮುಖ್ಯ:
ಆರೋಗ್ಯ ಸಮಸ್ಯೆಗಳಿಗಾಗಿ ಸದಾ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಮದ್ಯಪಾನವನ್ನು ನಿಯಂತ್ರಿತವಾಗಿ ಅಥವಾ ಸಂಪೂರ್ಣವಾಗಿ ತಪ್ಪಿಸುವುದೇ ಆರೋಗ್ಯದ ದೃಷ್ಟಿಯಿಂದ ಸುರಕ್ಷಿತ.

ಮಾ.3ರಂದು ಪುಟ್ಟರಾಜ ಗವಾಯಿಗಳ 112ನೇ ಜಯಂತ್ಯುತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ: ಡಾ. ಪಂಡಿತ ಪುಟ್ಟರಾಜ ಕವಿಗವಾಯಿಗಳು ಅವರ 112ನೇ ಜಯಂತ್ಯುತ್ಸವವನ್ನು ಮಾರ್ಚ್ 3ರಂದು ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಕೆ.ಎಚ್. ಪಾಟೀಲ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿರುವ ಈ ಕಾರ್ಯಕ್ರಮದ ಅಂಗವಾಗಿ ಸರ್ವಧರ್ಮ ಸಾಮೂಹಿಕ ವಿವಾಹ ನಡೆಯಲಿದೆ ಎಂದು ದಿ. ಕೆ. ಎಚ್. ಪಾಟೀಲ್ ಅಭಿಮಾನಿಗಳ ಸಂಘದ ಅಧ್ಯಕ್ಷ ಪೀರಸಾಬ ಕೌತಾಳ ತಿಳಿಸಿದ್ದಾರೆ.

ಶನಿವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 3ರಂದು ಬೆಳಿಗ್ಗೆ 9 ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ 1012 ಕುಂಭೋತ್ಸವದೊಂದಿಗೆ ಭವ್ಯ ಮೆರವಣಿಗೆ ಜರುಗಲಿದೆ. ನಂತರ ಮಧ್ಯಾಹ್ನ 12.30ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳು ಹಾಗೂ ಶಿವಕುಮಾರ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠಾಧೀಶರು ವಹಿಸಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ ಡಿ. ಆರ್. ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆನಂದಸ್ವಾಮಿ ಗಡ್ಡದೇವರಮಠ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಇದೇ ವೇಳೆ ಮಾರ್ಚ್ 2ರಂದು ಸಂಜೆ 6.30ಕ್ಕೆ ಸಾಂಸ್ಕೃತಿಕ ರಸಮಂಜರಿ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸತ್ಕಾರ ಸಮಾರಂಭ ಏರ್ಪಡಿಸಲಾಗಿದೆ. ಪುಟ್ಟರಾಜ ಗವಾಯಿಗಳ ಭಕ್ತರು ಹಾಗೂ ಕೆ.ಎಚ್. ಪಾಟೀಲ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪೀರಸಾಬ ಕೌತಾಳ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರಮೇಶ್ ಮುಳಗುಂದ, ಆನಂದ ಸಾಲಿಗ್ರಾಮ, ಚಂದ್ರು ಕಡಕೊಳ, ದಾವಲಸಾಬ ಇರಕಲ್, ವಿನೋದ್ ಶಿದ್ಲಿಂಗ ಸೇರಿದಂತೆ ಅನೇಕರಿದ್ದರು.

ಮಾ. 11ರಿಂದ ಸರ್ಕಾರಿ ವೈದ್ಯಾಧಿಕಾರಿ–ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಮಲ್ಲಿಕಾರ್ಜುನ

0

ವಿಜಯಸಾಕ್ಷಿ ಸುದ್ದಿ, ಗದಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮಾರ್ಚ್ 11ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಎಚ್ಚರಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಇಲಾಖೆಯ ಪ್ರಮುಖ ಬೇಡಿಕೆಗಳನ್ನು ಹಲವು ಬಾರಿ ಸರ್ಕಾರದ ಗಮನಕ್ಕೆ ತರಲಾಗಿದೆ. ಆದಾಗ್ಯೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಹೋರಾಟದ ಮಾರ್ಗ ಹಿಡಿಯಲಾಗಿದೆ ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಮಾರ್ಚ್ 11ರಿಂದ 15ರವರೆಗೆ ರಾಜ್ಯದ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ನೌಕರರು ಕಪ್ಪುಪಟ್ಟಿ ಧರಿಸಿ ಹೊರರೋಗಿಗಳ ಚಿಕಿತ್ಸೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

ಈ ಅವಧಿಯಲ್ಲಿ ಸರ್ಕಾರದಿಂದ ಸ್ಪಷ್ಟ ನಿರ್ಧಾರ ಹೊರಬರದಿದ್ದರೆ, ಮಾರ್ಚ್ 16ರಿಂದ ತುರ್ತು ಸೇವೆಗಳನ್ನೂ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಗೈರುಹಾಜರಾಗಿ ಮುಷ್ಕರ ಮುಂದುವರಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಬಳ್ಳಾರಿ ಮಾತನಾಡಿ, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಹಾಗೂ ನೌಕರರ ಹೋರಾಟಕ್ಕೆ ಸಂಘದಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಘೋಷಿಸಿದರು.

ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಸಂಘದ ಜಿಲ್ಲಾಧ್ಯಕ್ಷ ಡಾ. ಶರಣು ಗಾಣಿಗೇರ, ಮಲ್ಲಿಕಾರ್ಜುನ ಕಲಕಂಬಿ, ಡಾ. ಅರುಣಪ್ರಸಾದ, ಅಜಯಕುಮಾರ ಕಲಾಲ, ಡಾ. ಪ್ರಲ್ಹಾದ ಹೊಸಮನಿ, ರವಿ ಗುಂಜೀಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಮುಖ ಬೇಡಿಕೆಗಳು

*ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕ ಔಷಧಿಗಳ ಸರಬರಾಜು

*ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ತಿದ್ದುಪಡಿ

*ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿಯನ್ನು ನಿಯಮಿತವಾಗಿ ಪ್ರಕಟಣೆ

*ಅರ್ಹ ಅಧಿಕಾರಿ–ನೌಕರರಿಗೆ ಮುಂಬಡ್ತಿ ನೀಡುವುದು ಸೇರಿದಂತೆ ಇತರ ಆಡಳಿತಾತ್ಮಕ ಸಮಸ್ಯೆಗಳ ಪರಿಹಾರ

error: Content is protected !!