Home Blog Page 155

ಬೆಂಗಳೂರಿಗಿಂತ ಮಂಗಳೂರು ವಾಯುಮಟ್ಟ ತೀವ್ರ ಕುಸಿತ; ತಜ್ಞರ ಎಚ್ಚರಿಕೆ

0

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ಮಂಗಳೂರಿನ ವಾಯು ಗುಣಮಟ್ಟ ತೀವ್ರ ಹದಗೆಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಎಸ್, ರಾಜ್ಯದ ಹಲವು ನಗರಗಳ ವಾಯು ಗುಣಮಟ್ಟ ತೀವ್ರವಾಗಿ ಕುಸಿದಿದ್ದು, ಆತಂಕ ಸೃಷ್ಟಿಸಿದೆ.
ಬೆಂಗಳೂರಿನಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ (AQI) 135 ಆಗಿ “ಕಳಪೆ” ಮಟ್ಟವನ್ನು ತಲುಪಿದ್ದು, ಮಂಗಳೂರಿನಲ್ಲಿ 194 ರೊಂದಿಗೆ “ಅನಾರೋಗ್ಯಕರ” ಮಟ್ಟವಾಗಿದೆ. ಮೈಸೂರು 156, ಬೆಳಗಾವಿ 170, ಕಲಬುರ್ಗಿ 146, ಶಿವಮೊಗ್ಗ 179, ಬಳ್ಳಾರಿ 152, ಹುಬ್ಬಳ್ಳಿ 159, ಉಡುಪಿ 179, ವಿಜಯಪುರ 146 ರಂತೆ ಇತರ ನಗರಗಳಲ್ಲೂ ವಾಯು ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿದೆ.

WHO ಮಾನದಂಡದ ಪ್ರಕಾರ, ಈ ಮಟ್ಟದ ವಾಯು ಉಸಿರಾಡುವುದು ದೀರ್ಘಕಾಲ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಸಾರ್ವಜನಿಕರಿಗೆ ಹೊರಗೆ ಹೆಚ್ಚು ಸಮಯ ಕಳೆದರೆ ಮಾಸ್ಕ್ ಧರಿಸುವುದು, ಗಾಳಿ ಶುದ್ಧೀಕರಣ ಉಪಕರಣಗಳನ್ನು ಬಳಸುವುದು ಮತ್ತು ವಾಯು ಮಾಲಿನ್ಯ ಇರುವ ಪ್ರದೇಶವನ್ನು ತಪ್ಪಿಸುವುದು ಸೂಕ್ತ ಎಂದು ತಜ್ಞರು ಸೂಚಿಸಿದ್ದಾರೆ

ಕೇರಳ ಸ್ಟೋರಿ 2 ಚಿತ್ರ ಬಹಿಷ್ಕರಿಸುವಂತೆ ಪಿಣರಾಯಿ ವಿಜಯನ್‌ ಕರೆ

ತಿರುವನಂತಪುರಂ: ಚುನಾವಣೆ ಹೊಸ್ತಿಲಲ್ಲಿರುವ ಕೇರಳದಲ್ಲಿ ಕೇರಳ ಸ್ಟೋರಿ 2 ಸಿನಿಮಾ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಸೆನ್ಸಾರ್ ಮಂಡಳಿ ಯುಎ ಸರ್ಟಿಫಿಕೇಟ್ ನೀಡಿದ್ದು, ಚಿತ್ರ ಫೆ.27ರಂದು ಬಿಡುಗಡೆಯಾಗಲಿದೆ. ಆದರೆ ಸಿನಿಮಾ ಬಿಡುಗಡೆಯ ಮುನ್ನವೇ ರಾಜ್ಯ ರಾಜಕೀಯದಲ್ಲಿ ಕಾವು ಹೆಚ್ಚಾಗಿದೆ.

ಚಿತ್ರದಲ್ಲಿ ಕೇರಳದ ಜಾತ್ಯತೀತ ಮೌಲ್ಯಗಳಿಗೆ ಧಕ್ಕೆ ತರುವ ಮತ್ತು ಧಾರ್ಮಿಕ ಸೌಹಾರ್ದತೆಗೆ ವಿರೋಧಿಯಾದ ಅಂಶಗಳಿವೆ ಎಂದು ಆರೋಪಿಸಿರುವ ಸಿಎಂ ಪಿಣರಾಯಿ ವಿಜಯನ್, ಜನತೆ ಚಿತ್ರವನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದಾರೆ. ಚುನಾವಣಾ ಹೊಸ್ತಿಲಲ್ಲಿ ಈ ಹೇಳಿಕೆ ಮತ್ತಷ್ಟು ಸಂಚಲನ ಮೂಡಿಸಿದೆ.

ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಜನತೆಗೆ ಕರೆ ನೀಡುವ ಬದಲು ನ್ಯಾಯಾಲಯದ ಮೆಟ್ಟಿಲೇರುವುದು ಸೂಕ್ತ ಎಂದು ಪ್ರತಿಕ್ರಿಯಿಸಿದೆ. ಸರ್ಕಾರ ಸಿನಿಮಾ ತಡೆಯಲು ಬಯಸಿದರೆ ಕಾನೂನು ಮಾರ್ಗ ಅನುಸರಿಸಬೇಕು ಎಂದು ಒತ್ತಾಯಿಸಿದೆ.

ಇದೀಗ ಪ್ರಕರಣ ನ್ಯಾಯಾಲಯದ ಅಂಗಳಕ್ಕೇರಿದೆ. ಕಣ್ಣೂರು ಮೂಲದ ಶ್ರೀದೇವ್ ನಂಬೂದಿರಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ಚಿತ್ರದ ಟ್ರೇಲರ್‌ನಲ್ಲಿ ಕೇರಳವನ್ನು ಕೆಟ್ಟದಾಗಿ ಬಿಂಬಿಸಿರುವ ಅಂಶಗಳಿವೆ ಎಂದು ಆರೋಪಿಸಿದ್ದಾರೆ. ಕೋಮು-ಪ್ರಾದೇಶಿಕ ಸಂಘರ್ಷಕ್ಕೆ ಎಡೆಮಾಡಿಕೊಡುವ ಹಾಗೂ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಅಂಶಗಳಿರುವುದರಿಂದ ಫಿಲ್ಮ್ ಸರ್ಟಿಫಿಕೇಟ್ ರದ್ದುಪಡಿಸಿ, ಚಿತ್ರ ಬಿಡುಗಡೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿಬಿಎಫ್‌ಸಿಗೆ ಕೇರಳ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದ್ದು, ಫೆ.24ರಂದು ವಿಚಾರಣೆ ನಡೆಯಲಿದೆ. ವಿಚಾರಣೆ ಫಲಿತಾಂಶವೇ ಚಿತ್ರ ಬಿಡುಗಡೆ ಭವಿಷ್ಯವನ್ನು ನಿರ್ಧರಿಸಲಿದೆ.

ಕೊಪ್ಪಳ ಗ್ಯಾಂಗ್ ರೇಪ್ ಪ್ರಕರಣ: 3 ಅಪರಾಧಿಗಳಿಗೆ ಮರಣದಂಡನೆ, ಕುಟುಂಬಗಳು ಬೀದಿಗೆ!

0

ಕೊಪ್ಪಳ: ಕುಡಿದ ಅಮಲಿನಲ್ಲಿ, ಗಾಂಜಾ ಮತ್ತಿನಲ್ಲಿ 100 ರೂ. ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಇಬ್ಬರು ಮಹಿಳೆಯರ ಮೇಲೆ ಗ್ಯಾಂಗ್ ರೇಪ್ ನಡೆಸಿ, ಓರ್ವನನ್ನು ಕೊಲೆ ಮಾಡಿದ ಭೀಕರ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಕೊಪ್ಪಳದಲ್ಲಿ ನಡೆದ ವಿದೇಶಿ ಮಹಿಳೆ ಮೇಲಿನ ಈ ದುರಂತ ಪ್ರಕರಣಕ್ಕೆ ಗಂಗಾವತಿ ನ್ಯಾಯಾಲಯ ಕಠಿಣ ತೀರ್ಪು ನೀಡಿದ್ದು, 3 ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.

ಕಳೆದ ವರ್ಷ ಮಾ.06ರಂದು ನಡೆದ ಈ ಅಮಾನವೀಯ ಘಟನೆಯಲ್ಲಿ ಸಂತ್ರಸ್ತರಿಗೆ ನ್ಯಾಯ ದೊರೆತಿದೆ. ಆದರೆ ಅಪರಾಧಿಗಳ ಕುಟುಂಬಗಳು ಮಾತ್ರ ಸಂಕಷ್ಟದಲ್ಲಿ ಮುಳುಗಿವೆ. ಬಳ್ಳಾರಿ ಜೈಲಿನಲ್ಲಿ ಬಂಧಿತರಾಗಿರುವ ಆರೋಪಿಗಳನ್ನು ನೋಡಲು ಹೋಗುವ ಸ್ಥಿತಿಯಲ್ಲೂ ಅವರ ಕುಟುಂಬಸ್ಥರು ಇಲ್ಲದಂತಾಗಿದೆ.

ಶಿಕ್ಷೆ ಘೋಷಣೆಯಾದ ಬಳಿಕ ಶರಣಬಸವ ತಂದೆ ಮನನೊಂದು ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಅಕ್ಕಪಕ್ಕದವರು ಕಾಪಾಡಿದರೆಂದು ಶರಣಬಸವ ತಾಯಿ ಕಣ್ಣೀರಿಡುತ್ತಿದ್ದಾರೆ.

ಪ್ರಮುಖ ಆರೋಪಿ ಮಲ್ಲಯ್ಯ ಅಲಿಯಾಸ್ ಹಂದಿ ಮಲ್ಲನ ಪರಿಸ್ಥಿತಿ ಇನ್ನಷ್ಟು ದಯನೀಯವಾಗಿದೆ. ಈತನಿಗೆ 4 ತಿಂಗಳ ಮಗು ಇದೆ. ಪತ್ನಿ ತನ್ನ ತಾಯಿಯೊಂದಿಗೆ ಗುಡಿಸಲಿನಲ್ಲಿ ವಾಸವಿದ್ದು, 4 ತಿಂಗಳ ಮಗುವಿನ ಜೊತೆ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ.

ಅಪರಾಧಿಗಳಿಗೆ ಶಿಕ್ಷೆ ಜಾರಿಯಾಗಿದೆ. ತೀರ್ಪು ಪ್ರಶ್ನಿಸಿ ಹೈಕೋರ್ಟ್‌ಗೆ ಹೋಗುವ ಅವಕಾಶವಿದೆ. ಆದರೆ ಕೂಲಿ ಕೆಲಸ ಮಾಡಿದರೆ ಮಾತ್ರ ಹೊಟ್ಟೆ ತುಂಬುವ ಪರಿಸ್ಥಿತಿಯಲ್ಲಿರುವ ಕುಟುಂಬಗಳಿಗೆ ಇದೀಗ ನರಕ ದರ್ಶನವಾಗಿದೆ. ಕುಡಿತ ಮತ್ತು ಗಾಂಜಾ ಮತ್ತದಲ್ಲಿ ಮಾಡಿದ 1 ಕೃತ್ಯದಿಂದ 3 ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಪ್ರೇಮಕ್ಕೆ ಬಲಿಯಾದ ಮನೆಕೆಲಸದಾಕೆ: 20 ಸಾವಿರ ಸಾಲಕ್ಕಾಗಿ 3.4 ಲಕ್ಷ ಚಿನ್ನ ಕಳವು!

0

ಬೆಂಗಳೂರು: ಪ್ರಿಯಕರನ ಸಾಲ ತೀರಿಸಲು ಆಂಟಿಯೇ ಕಳ್ಳಿಯಾಗಿ 3.4 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನಾಭರಣ ಕಳವು ಮಾಡಿರುವ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಾಬುಸಾಪಾಳ್ಯದಲ್ಲಿ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿತೆಯನ್ನು ಪ್ರಮೀಳಾ ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯಕರ ಸುಧಾಕರ್ ಪರಾರಿಯಾಗಿದ್ದಾನೆ. ಕಳವು ಮಾಡಿದ ಚಿನ್ನಾಭರಣವನ್ನು ಮಾರಾಟ ಮಾಡಿ ಬಂದ ಹಣವನ್ನು ಪ್ರಿಯಕರನಿಗೆ ನೀಡಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಮೀಳಾಗೆ ಮದುವೆಯಾಗಿ ಗಂಡ ಬಿಟ್ಟಿದ್ದರೆ, ಸುಧಾಕರ್‌ಗೆ ಮದುವೆಯಾಗಿ 2 ಮಕ್ಕಳಿದ್ದಾರೆ. ಬೊಮ್ಮನಹಳ್ಳಿಯ ಗಾರ್ಮೆಂಟ್ಸ್‌ನಲ್ಲಿ ಇಬ್ಬರು ಕೆಲಸ ಮಾಡುವಾಗ ಪರಿಚಯವಾಗಿ ಪ್ರೀತಿಯಾಗಿತ್ತು. ನಂತರ ಪ್ರಮೀಳಾ ಗಾರ್ಮೆಂಟ್ಸ್ ಕೆಲಸ ಬಿಟ್ಟು ಖಾಸಗಿ ಅಪಾರ್ಟ್ಮೆಂಟ್‌ನಲ್ಲಿ ಮನೆಕೆಲಸಕ್ಕೆ ಸೇರಿದ್ದಳು.

ಸಂಕ್ರಾಂತಿ ಹಬ್ಬದ ವೇಳೆ ಸುಧಾಕರ್ 20 ಸಾವಿರ ರೂ. ಸಾಲ ತೀರಿಸಲು ಕೇಳಿದ್ದ. ಪ್ರಿಯಕರನಿಗಾಗಿ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿ, ಅದನ್ನು ಬೊಮ್ಮನಹಳ್ಳಿಯ ಚಿನ್ನದ ಅಂಗಡಿಯಲ್ಲಿ ಮಾರಾಟ ಮಾಡಿ ಹಣ ನೀಡಿದ್ದಳು.

ಸುಮಾರು 1 ತಿಂಗಳ ಬಳಿಕ ಮನೆ ಮಾಲೀಕರಿಗೆ ಚಿನ್ನ ಕಳವು ಆಗಿರುವುದು ಗೊತ್ತಾಗಿ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದರು. ಆರಂಭದಲ್ಲಿ ತನಗೇನು ಗೊತ್ತಿಲ್ಲವೆಂದು ಪ್ರಮೀಳಾ ನಾಟಕವಾಡಿದ್ದಳು. ಆದರೆ ಪೊಲೀಸ್ ವಿಚಾರಣೆಯ ವೇಳೆ ಅಸಲಿ ಸತ್ಯ ಬಾಯಿಬಿಟ್ಟಿದ್ದಳು.

ಪೊಲೀಸರು ಆರೋಪಿತೆಯಿಂದ ಒಟ್ಟು 3.4 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಪರಾರಿಯಾಗಿರುವ ಸುಧಾಕರ್ ಬಂಧನಕ್ಕಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನ ವಿದ್ಯುತ್‌ ವ್ಯತ್ಯಯ; ಈ ಏರಿಯಾಗಳಲ್ಲಿ 8 ತಾಸು ಇರಲ್ಲ ಪವರ್‌!

0

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ಇಂದು ಮತ್ತು ನಾಳೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಪವರ್ ಕಟ್ ಇರಲಿದೆ. ಕೆಎಂಎಫ್, ವೈಎನ್‌ಕೆ ನ್ಯೂ ಟೌನ್ 208, 407, ‘ಬಿ’ ಸೆಕ್ಟರ್, ಸಿಬಿ ಸಾಂದ್ರ, ಅಲ್ಲಾಳಸಂದ್ರ, ಶಾರದನಗರ, ಜನಪ್ರಿಯ, ಅನ್ರಿಯಾ, ಮಾರುತಿನಗರ, ಕೋಗಿಲು, ಬಿಬಿ ರಸ್ತೆ ಯಲಹಂಕ ಇತ್ಯಾದಿ.ಬಾಗಲೂರು ಕ್ರಾಸ್, ವೆಂಕಟಾಲ್, ನಿಟ್ಟೆ ಕಾಲೇಜು, ಬಿಎಸ್‌ಎಫ್, ಐಎಎಫ್, ಇಂಟರ್‌ನ್ಯಾಶನಲ್ ಸ್ಕೂಲ್, ಕಾಗೆನ್‌ಅಡ್ಯಾನ್‌ಕಾಲೇಜ್, ರಾಯಣ್ಣನ ಶಾಲೆ ಪಾಲನಹಳ್ಳಿ, ದ್ವಾರಖಾನಗರ,

ತಿರುಮಲ ನಗರ, ಅತ್ತೂರು ಬಡಾವಣೆ 1ನೇ ಅಡ್ಡರಸ್ತೆಯಿಂದ 10ನೇ ಅಡ್ಡರಸ್ತೆ, ಎಸ್ಕಾರ್ಟ್ಸ್ ಬಡಾವಣೆ, ದೊಡ್ಡಬೆಟ್ಟಹಳ್ಳಿ, ಟಿಪ್ಪು ವೃತ್ತ, ಚಿಕ್ಕಬೆಟ್ಟಹಳ್ಳಿ, ಕಾವೇರಿ ಬಡಾವಣೆ, ಗಿರಿಧಾಮನಗರ, ಎಎಂಎಸ್ ಬಡಾವಣೆ, ವ್ಯತ್ಯಾಸ ಬಡಾವಣೆ, ಜೆಲ್ಲಿ ಯಂತ್ರ, ಎಂ.ಎಸ್. ಪಾಳ್ಯ, ಶಿಕ್ಷಕರ ಬಡಾವಣೆ, ಬೆಲ್ 6ನೇ ಬ್ಲಾಕ್, ಎಚ್‌ಎಂಟಿ 3ನೇ ಬ್ಲಾಕ್, ಎಚ್‌ಎಂಟಿ 4ನೇ ಬ್ಲಾಕ್, ಎಚ್‌ಎಂಟಿ 6ನೇ ಬ್ಲಾಕ್ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್‌ ಇರುವುದಿಲ್ಲ. ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಕೋರಿದೆ.

ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣ; ಇಂದಿನ ಹವಾಮಾನ ವರದಿ ಹೀಗಿದೆ!

0

ಬೆಂಗಳೂರು:- ಕಳೆದ ಹಲವಾರು ದಿನಗಳಿಂದ ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ ಆವರಿಸಿದ್ದು, ಇಂದೂ ಸಹ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶುಷ್ಕ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹತ್ತಾರು ದಿನಗಳಿಂದ ರಾಜ್ಯದಲ್ಲಿ ಒಣ ಹವೆ ಆವರಿಸಿದೆ. ಇನ್ನೂ ಕೆಲ ದಿನಗಳ ಕಾಲ ಇದೇ ವಾತಾವರಣ ಮುಂದುವರೆಯಬಹುದು. ದಕ್ಷಿಣ ಒಳನಾಡಿನ ಮೈಸೂರು , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ , ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ.

ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು-ಚಪ್ಪಲಿ ತೂರಾಟ; ಬಾಗಲಕೋಟೆಯಲ್ಲಿ ಉದ್ವಿಗ್ನ ಸ್ಥಿತಿ!

0

ಬಾಗಲಕೋಟೆ: ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಹಳೆಯ ಕಿಲ್ಲಾ ಓಣಿಯಲ್ಲಿ ದುಷ್ಕರ್ಮಿಗಳಿಂದ ಕಲ್ಲು-ಚಪ್ಪಲಿ ತೂರಾಟ ನಡೆದಿದೆ.

ಘಟನೆಯಲ್ಲಿ ಹಿಂದೂ ಕಾರ್ಯಕರ್ತ ಪ್ರಕಾಶ್ ಅರಕೇರಿ ತಲೆಗೆ ಗಾಯವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳದಲ್ಲಿ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಈ ವೇಳೆ ತರಕಾರಿ ಮಾರುಕಟ್ಟೆಯ ಮೂರು ತಳ್ಳುಗಾಡಿಗಳಿಗೆ ಬೆಂಕಿ ಹಚ್ಚಲಾಗಿದೆ.

ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ತಕ್ಷಣವೇ ಬೆಂಕಿ ನಂದಿಸಿ, ವ್ಯಾಪಾರಿಗಳಿಗೆ ಸಹಾಯ ಮಾಡಿದ್ದಾರೆ. ವ್ಯಾಪಾರಿ ಜನ್ನತಬಿ ದೊಡ್ಡಮನಿ ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವಕರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ಕಲ್ಲೆಸೆದವರ ಬಂಧನ ಮತ್ತು ಐಜಿಪಿ ಆಗಮಿಸುವಂತೆ ಆಗ್ರಹಿಸಿದ್ದಾರೆ. ಪೊಲೀಸರ ಮನವೊಲಿಸಿ ಪ್ರತಿಭಟನೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ದುರಂತದ ಬಳಿಕ ಹಳೆ ಬಾಗಲಕೋಟೆ, ನವನಗರ, ವಿದ್ಯಾಗಿರಿ ಪ್ರದೇಶಗಳಲ್ಲಿ ನಿನ್ನೆ ಮಧ್ಯರಾತ್ರಿ–ಇಂದು ಮಧ್ಯರಾತ್ರಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಆದೇಶದಂತೆ, ಸಾರ್ವಜನಿಕ ಸ್ಥಳದಲ್ಲಿ 4 ಕ್ಕಿಂತ ಹೆಚ್ಚು ಜನ ಸೇರಿ ಓಡಾಡಲು, ಅಪಾಯಕಾರಿ ಶಸ್ತ್ರಾಸ್ತ್ರ ಬಳಕೆ, ಅನುಮತಿ ಇಲ್ಲದೆ ಸಭೆ/ಧರಣಿ ನಡೆಸಲು ನಿಷೇಧಿಸಲಾಗಿದೆ.

ಹಿಂದೂಗಳಿಗೆ ಸೇವಾಲಾಲರ ಆಧ್ಯಾತ್ಮಿಕತೆ, ಶಿವಾಜಿ ಶೌರ್ಯ ಅಗತ್ಯವಿದೆ: ಸೋಮಲಿಂಗ ಶ್ರೀಗಳು

ವಿಜಯಸಾಕ್ಷಿ ಸುದ್ದಿ, ಗದಗ: ಶಿವಾಜಿ ಮಹಾರಾಜರು ಕೇವಲ ಯುದ್ಧ ಮಾಡಿ ಹಿಂದೂ ಸಾಮ್ರಾಜ್ಯ ಕಟ್ಟಲಿಲ್ಲ. ಆಧ್ಯಾತ್ಮಿಕತೆಯ ಮೂಲಕವೂ ಕಟ್ಟಿದ್ದಾರೆ. ಸಂತ ಸೇವಾಲಾಲರ ಆಧ್ಯಾತ್ಮಿಕತೆ, ಶಿವಾಜಿ ಮಹಾರಾಜರ ಶೌರ್ಯದಿಂದ ಹಿಂದೂಗಳು ಹಿಂದೂಗಳಾಗಿ ಉಳಿಯಲು ಸಾಧ್ಯವಾಗಿದೆ. ಕೆಲವು ಮಠಾಧೀಶರು ಹಿಂದೂ ದೇವರುಗಳಿಗೆ ಅವಮಾನ ಮಾಡುತ್ತಿದ್ದಾರೆ. ಅವರಿಗೆ ಸೇವಾಲಾಲರ ಆಧ್ಯಾತ್ಮಿಕತೆ ಉಪಯೋಗಕ್ಕೆ ಬರುವುದಿಲ್ಲ. ಶಿವಾಜಿ ಮಹಾರಾಜರಂತಹ ಪರಾಕ್ರಮ ಬೇಕಾಗಿದೆ ಎಂದು ವಿಜಯಪುರ ಜಿಲ್ಲೆಯ ಶಂಕರಲಿಂಗ ಗುರುಪೀಠದ ಶ್ರೀ ಸೋಮಲಿಂಗ ಶ್ರೀಗಳು ನುಡಿದರು.

ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಹಿಂದೂ ಸಂಘಟನೆಗಳ ಒಕ್ಕೂಟ, ಶಿವ ರಾಮಕೃಷ್ಣ ಸೇವಾ ಟ್ರಸ್ಟ್ ಗದಗ, ದಲಿತ ಮಿತ್ರ ಮೇಳ ಹಾಗೂ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಮಿತಿ-2026 ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 399ನೇ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಪಠ್ಯಪುಸ್ತಕದಲ್ಲಿ ಕೇವಲ ಅಪ್ಜಲಖಾನ್, ಬಾಬರ್, ಅಕ್ಬರ್ ಚರಿತ್ರೆ ತೋರಿಸಲಾಗಿದೆ. ಆದರೆ, ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ತೋರಿಸಲಿಲ್ಲ. ಮುಸಲ್ಮಾನ ದೊರೆಗಳು 6 ಸಾವಿರಕ್ಕೂ ಹೆಚ್ಚು ಮಂದಿರಗಳನ್ನು ಕೆಡವಿ ಮಸೀದಿಗಳಾಗಿ ಪರಿವರ್ತನೆ ಮಾಡಿದರು. ಇಂತಹ ಇತಿಹಾಸದ ಘಟನೆಗಳಿಂದ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ಸನಾತನ ಸಂಸ್ಕೃತಿಗೆ ತನ್ನದೇ ಆದ ಇತಿಹಾಸವಿದೆ. ಮಕ್ಕಳಿಗೆ ಶಿವಾಜಿ ಮಹಾರಾಜ, ಸಂಗೊಳ್ಳಿ ರಾಯಣ್ಣ, ರಾಣಿ ಚನ್ನಮ್ಮ, ಬಸವಣ್ಣನವರ ಇತಿಹಾಸ ತಿಳಿಸಬೇಕಿದೆ ಎಂದರು.

ಈ ವೇಳೆ ಶಿವಪ್ಪ ನಾಯಕ್, ವಿಜಯಕುಮಾರ ಗಡ್ಡಿ, ಲಕ್ಷ್ಮಣ್ ಸಂತರು, ಮಹೇಶ್ ರೋಖಡೆ, ಸೋಮು ಗುಡಿ, ಸಹದೇವ ಗಣಾಚಾರಿ, ಕೆ.ಸಿ. ಮಲ್ಲಾಪೂರ, 2025ರ ಸಮಿತಿಯ ವಿರೂಪಾಕ್ಷಪ್ಪ ಹೆಬ್ಬಳ್ಳಿ, ಸುರೇಶ್ ಲಮಾಣಿ, ರಾಜಣ್ಣ ಮಲ್ಲಾಡದ, ರವಿಕಾಂತ್ ಅಂಗಡಿ, ವೆಂಕಟೇಶ್ ರಾಥೋಡ್, ಮೋಹನ್ ಗ್ವಾರಿ, ಶರತರಾವ್ ಹುಯಿಲಗೋಳ, ಅಜ್ಜಣ್ಣ ಮಲ್ಲಾಡದ, ರಾಜು ಮುಧೋಳ, ಅವಿನಾಶ್ ಜೈನ್, ಮಂಜು ಗಜಾಕೋಶ, ಫಕ್ಕಿರಸಾಬ್ ಬಾಂಡಗೆ, ಕುಮಾರ ನಡಗೇರಿ, ಐ.ಎಸ್. ಪೂಜಾರ, ರವಿ ಕರಬಸಣ್ಣನವರ, ಅನಿಲ ಅಬ್ಬಿಗೇರಿ, ಬಸವರಾಜ ಹುಬ್ಬಳ್ಳಿ, ಸಂತೋಷ್ ಪವಾರ, ದೇವು ಲಮಾಣಿ, ವಿಠ್ಠಲ ತೋಟದ, ವಿಠ್ಠಲ ಬಾಂಡಗೆ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮ ಯಶಸ್ವಿಗೊಳಿಸಲು ಸಾಕಷ್ಟು ಪೂರ್ವತಯಾರಿ ನಡೆಸಲಾಗಿತ್ತು. ಎಲ್ಲ ಹಿಂದೂ ಬಾಂಧವರು ಸ್ವಇಚ್ಛೆಯಿಂದ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿದ್ದಾರೆ. ನಮ್ಮತನವನ್ನು ನಾವು ಕಾಪಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಬೇರೆಯವರ ನೋವಿಗೆ ನಾವು ಸ್ಪಂದಿಸಬೇಕಿದೆ. ರಾಜು ಖಾನಪ್ಪನವರ ಹಿಂದೂತ್ವಕ್ಕಾಗಿ ನಿರಂತರ ಜಾಗೃತಿ, ಹೋರಾಟ ಮಾಡುತ್ತಾ ಬಂದಿದ್ದಾರೆ. ನಾವೆಲ್ಲರೂ ಅವರಿಗೆ ಬೆನ್ನೆಲುಬಾಗಿ ನಿಲ್ಲೋಣ.

  • ಜಗದೀಶ್ ಎಸ್.ಪಿ.
    ಜಯಂತ್ಯುತ್ಸವದ ಮಾಜಿ ಅಧ್ಯಕ್ಷ.

“ಹಿಂದೂಗಳು ಹಿಂದೂಗಳಾಗಿಯೇ ಉಳಿಯಲು ಛತ್ರಪತಿ ಶಿವಾಜಿ ಮಹಾರಾಜರು ಪ್ರಮುಖ ಕಾರಣೀಕರ್ತರಾಗಿದ್ದಾರೆ. ಆದರೆ, ಇಂದು ಅದೇ ಹಿಂದೂಗಳಲ್ಲಿ ಜಾತಿ ಎಂಬ ವಿಷಬೀಜ ಹೊಕ್ಕಿರುವುದು ದುರಂತದ ಸಂಗತಿಯಾಗಿದೆ. ಮಹಾಪುರುಷರಿಗೆ ಯಾವುದೇ ಜಾತಿಗಳು ಇರಲಿಲ್ಲ. ಯುವಕರು ಹಿಂದೂ ಸಂಘಟನೆಗಳನ್ನು ಅಪ್ಪಿಕೊಂಡು ಸಮಾಜವನ್ನು ಒಂದುಗೂಡಿಸಬೇಕು. ಮಹಿಳೆಯರು ಹಿಂದೂ ಸಂಘಟನೆಯಲ್ಲಿ ಪಾಲ್ಗೊಳ್ಳಬೇಕಿದೆ”

  • ರಾಜು ಖಾನಪ್ಪನವರ.
    ಕ.ರಾ.ಹಿಂ ಸಂಘಟನೆಗಳ ಒಕ್ಕೂಟದ
    ರಾಜ್ಯ ಸಂಚಾಲಕ.

ಮಹಾಶಿವರಾತ್ರಿ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಗದಗ ಇವರ ವತಿಯಿಂದ ಮಹಾಶಿವರಾತ್ರಿಯ ಅಂಗವಾಗಿ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶ್ರದ್ಧಾ ಸ್ವರ ಸಂಗೀತ ವೆಲ್ಫೇರ್ ಟ್ರಸ್ಟ್ ಸಂಸ್ಥೆಯ ಮಕ್ಕಳು ಯಶಸ್ವಿಯಾಗಿ ಭಾಗವಹಿಸಿ ಸಂಗೀತ ಹಾಗೂ ಭರತನಾಟ್ಯ ಕಾರ್ಯಕ್ರಮವನ್ನು ಪ್ರದರ್ಶಿಸಿದರು.

ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಉದ್ಘಾಟಿಸಿ ಮಾತನಾಡಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದಲ್ಲಿ ಮೌಲ್ಯ ಮತ್ತು ಸಂಸ್ಕೃತಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಡಿ.ಆರ್. ಪಾಟೀಲ್, ಬಿ.ಬಿ. ಅಸೂಟಿ, ಬಿ.ಕೆ. ಜಯಂತಿ ಅಕ್ಕನವರು, ಬಿ.ಕೆ. ಸಾವಿತ್ರಿ ಅಕ್ಕನವರು, ಅಕ್ಬರಸಾಬ್ ಬಬರ್ಚಿ ಮುಂತಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷರಾದ ಜ್ಯೋತಿ ಉಜ್ವಲ್ ಕಬಾಡಿ, ಭರತನಾಟ್ಯ ಶಿಕ್ಷಕಿ ವರ್ಷಾ ಕಲಕಂಬಿ ನೇತೃತ್ವದಲ್ಲಿ ನಡೆದ ಭರತನಾಟ್ಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಶ್ರದ್ಧಾ ಕಬಾಡಿ, ಅಪೂರ್ವ, ವೈಷ್ಣವಿ, ವೇದಾ, ಸ್ಪೂರ್ತಿ, ವೈಷ್ಣವಿ ಗುಳೇದಗುಡ್ಡ ಹಾಗೂ ಮೇಧಾ ಭಾಗವಹಿಸಿದ್ದರು.

ಉಜ್ವಲ್ ಕಬಾಡಿ ಹಾರ್ಮೋನಿಯಂ ಸಾಥ್ ಮತ್ತು ಹನುಮಂತ ಮೈತ್ರಿ ತಬಲಾ ಸಾಥ್ ನೀಡಿದರು.

ಸಂಸ್ಥೆಯ ಕಾರ್ಯದರ್ಶಿ ಉಜ್ವಲ್ ಕಬಾಡಿ ಮುಂತಾದವರು ಉಪಸ್ಥಿತರಿದ್ದರು.

ಬೈಕ್ ಅಡ್ಡಗಟ್ಟಿದ ಮುಸ್ಲಿಂ ಯುವಕರು; ಚಿಕ್ಕಮಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ!

0

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿಗೆ ಸಂಬಂಧಿಸಿದ ಘಟನೆ ಬೆಳಕಿಗೆ ಬಂದಿದೆ.

ದಲಿತ ಕ್ರಿಶ್ಚಿಯನ್ ಅಪ್ರಾಪ್ತ ಬಾಲಕನು ಮುಸ್ಲಿಂ ಅಪ್ರಾಪ್ತ ಯುವತಿಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಕೆಲವು ಯುವಕರು ಅಡ್ಡಗಟ್ಟಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಈ ಘಟನೆ ಚಿಕ್ಕಮಗಳೂರಿನ ಮಾರ್ಕೆಟ್ ರಸ್ತೆಯಲ್ಲಿ ನಡೆದಿದ್ದು, ಬಾಲಕನ ಸಹೋದರ ನೀಡಿದ ದೂರಿನ ಆಧಾರದಲ್ಲಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ 8 ಯುವಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದುವರೆಗೆ ಇಬ್ಬರನ್ನು ಬಂಧಿಸಲಾಗಿದೆ.

ಈ ಕುರಿತು ಚಿಕ್ಕಮಗಳೂರು ಎಸ್‌ಪಿ ಜಿತೇಂದ್ರ ಕುಮಾರ್ ದಯ್ಮಾ ಮಾತನಾಡಿ, “ಬಾಲಕ ಮತ್ತು ಬಾಲಕಿ ಇಬ್ಬರೂ ಅಪ್ರಾಪ್ತರು. ಬೈಕ್‌ನಲ್ಲಿ ತೆರಳುತ್ತಿದ್ದಾಗ ಕೆಲವರು ಅಡ್ಡಗಟ್ಟಿ ಬೆದರಿಕೆ ಹಾಕಿದ್ದು, ಮೇಲ್ನೋಟಕ್ಕೆ ಇದು ನೈತಿಕ ಪೊಲೀಸ್ ಗಿರಿಯ ಪ್ರಕರಣವಾಗಿದೆ. ಇಬ್ಬರನ್ನು ಬಂಧಿಸಿದ್ದು, ಉಳಿದವರ ಬಗ್ಗೆ ತನಿಖೆ ಮುಂದುವರಿದಿದೆ ಎಂದರು.

ಬಾಲಕನ ತಾಯಿ ಪಲ್ಲವಿ ಮಾತನಾಡಿ, ಆ ಹುಡುಗಿ ನಮ್ಮ ಮನೆಗೆ ಬರುತ್ತಿರುತ್ತಾಳೆ. ಆರೋಗ್ಯ ಸಮಸ್ಯೆಯಿಂದ ಮನೆಯಲ್ಲಿರಬೇಕೆಂದು ಕೇಳಿದ್ದು, ಬಿಡಲು ಹೋಗುತ್ತಿದ್ದಾಗ ಜ್ಯೋತಿ ಟಾಕೀಸ್ ಬಳಿ 30–40 ಜನ ಅಡ್ಡಗಟ್ಟಿದರು. ಇಬ್ಬರು ಮಾತ್ರ ಹಲ್ಲೆ ಮಾಡಿದ್ದಾರೆ. ನಮ್ಮ ಮಕ್ಕಳಲ್ಲಿ ಯಾವುದೇ ತಪ್ಪಿಲ್ಲ, ಧರ್ಮ ಆಧಾರದಲ್ಲಿ ಪ್ರಶ್ನೆ ಏರ್ಪಟ್ಟಿದೆ ಎಂದರು.

ಒಟ್ಟಾರೆ ಘಟನೆ ಬಗ್ಗೆ ಪ್ರಸ್ತುತ ತನಿಖೆ ನಡೆಯುತ್ತಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ ಎನ್ನಲಾಗಿದೆ.

error: Content is protected !!