Home Blog Page 155

ರಾಜ್ಯದಲ್ಲೇ ನಂ.1 ಸಾಧನೆ ಮಾಡಿದ ಹಂಪಸಾಗರ ನಾಡಕಚೇರಿ

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ತಾಲೂಕು ವ್ಯಾಪ್ತಿಯ ಹಂಪಸಾಗರ ನಾಡಕಚೇರಿಯ ಅಟಲ್ ಜಿ ಜನಸ್ನೇಹಿ ಕೇಂದ್ರವು ವಿವಿಧ ಪ್ರಮಾಣಪತ್ರಗಳ ಅರ್ಜಿಗಳನ್ನು ನಿಗದಿತ ಅವಧಿಗೂ ಮುನ್ನ ಶೇ.100 ರಷ್ಟು ವಿಲೇವಾರಿ ಮಾಡಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದೆ.

ಈ ಸಾಧನೆ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಆರ್. ಕವಿತಾ ಅವರಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿ ಶುಭ ಹಾರೈಸಿದರು.

ಅಟಲ್ ಜಿ ಜನಸ್ನೇಹಿ ಕೇಂದ್ರ ಯೋಜನೆಯಡಿ ಸಾರ್ವಜನಿಕರಿಗೆ ಪ್ರಮಾಣಪತ್ರಗಳನ್ನು ಶೀಘ್ರ ವಿತರಿಸುವಲ್ಲಿ ಹಂಪಸಾಗರ ನಾಡಕಚೇರಿ ಕಾರ್ಯಕ್ಷಮತೆ ಮೆರೆದಿದ್ದು, ಉಪ ತಹಸೀಲ್ದಾರ್ ಆಸಿಫ್ ಅಲಿ ಅವರಿಗೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಲಭಿಸಿದೆ.

354 ಅರ್ಜಿಗಳ ಶೇ.100 ವಿಲೇವಾರಿ

ನವೆಂಬರ್ 2025ರ ಅವಧಿಯಲ್ಲಿ ನಾಡಕಚೇರಿಯಲ್ಲಿ ಸ್ವೀಕರಿಸಲಾದ 354 ಅರ್ಜಿಗಳನ್ನು ನಿಗದಿತ ಅವಧಿಗೂ ಮುನ್ನವೇ ಸಂಪೂರ್ಣವಾಗಿ ವಿಲೇವಾರಿ ಮಾಡುವ ಮೂಲಕ 10 ಸಿಗ್ಮಾ ಮಟ್ಟ ಸಾಧಿಸಲಾಗಿದೆ.

16.00 ವಿಲೇವಾರಿ ಸೂಚ್ಯಂಕದ ಪ್ರಕಾರ 17 ಪಟ್ಟು ವೇಗದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಿ, 1000ಕ್ಕಿಂತ ಕಡಿಮೆ ಅರ್ಜಿಗಳನ್ನು ಸ್ವೀಕರಿಸುವ ನಾಡಕಚೇರಿ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಲಾಗಿದೆ.

ಸಿಬ್ಬಂದಿ ಕಾರ್ಯತತ್ಪರತೆಗೆ ಮೆಚ್ಚುಗೆ

ಅಟಲ್ ಜಿ ಜನಸ್ನೇಹಿ ಕೇಂದ್ರಾಲಯದ ಪರವಾಗಿ ಹಂಪಸಾಗರ ನಾಡಕಚೇರಿ ಸಿಬ್ಬಂದಿ ತಂಡಕ್ಕೆ ಅಭಿನಂದನಾ ಪತ್ರ ನೀಡಲಾಗಿದ್ದು, ಸಿಬ್ಬಂದಿಯ ಸಹಕಾರ, ಕಾರ್ಯತತ್ಪರತೆ ಹಾಗೂ ಸಾರ್ವಜನಿಕ ಸೇವೆಯ ಮೇಲಿನ ಬದ್ಧತೆಯೇ ಈ ಸಾಧನೆಗೆ ಕಾರಣ ಎಂದು ಉಲ್ಲೇಖಿಸಲಾಗಿದೆ.

ಮುಂದಿನ ದಿನಗಳಲ್ಲೂ ಇದೇ ರೀತಿಯ ಕಾರ್ಯಕ್ಷಮತೆ ಮತ್ತು ಜನಸೇವೆಯನ್ನು ಮುಂದುವರಿಸುವಂತೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಿಜಿಟಲ್ ಸಹಿಯೊಂದಿಗೆ ನೀಡಲಾದ ಅಭಿನಂದನಾ ಪತ್ರವು ಸಿಬ್ಬಂದಿಯಲ್ಲಿ ಮತ್ತಷ್ಟು ಉತ್ಸಾಹ ತುಂಬಿದೆ.

“ಸಮಯಪಾಲನೆ, ಕಾರ್ಯತತ್ಪರತೆ ಮತ್ತು ಸಾರ್ವಜನಿಕ ಸೇವೆಯ ಬದ್ಧತೆಯಿಂದಲೇ ರಾಜ್ಯ ಮಟ್ಟದ ಸಾಧನೆ ಸಾಧ್ಯವಾಗಿದೆ.”

ಕವಿತಾ ಎಸ್. ಮನ್ನಿಕೇರಿ, ಜಿಲ್ಲಾಧಿಕಾರಿ

ಬೆಳಗಾವಿಯಲ್ಲಿ ಹಿರಿಯ ವೈದ್ಯ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಬೆಳಗಾವಿ: ಬೆಳಗಾವಿಯಲ್ಲಿ ಹಿರಿಯ ವೈದ್ಯರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವೈದ್ಯಕೀಯ ವಲಯದಲ್ಲಿ ಶಾಕ್ ಉಂಟುಮಾಡಿದೆ. ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಡ್ಸೆವಾಡಿಯ ನಿವಾಸದಲ್ಲಿ ಈ ಘಟನೆ ನಡೆದಿದೆ.

79 ವರ್ಷದ ಡಾ. ದಿನೇಶ್ ಲಕ್ಷ್ಮಣ ಭಟ್ಕಳ ಆತ್ಮಹತ್ಯೆ ಮಾಡಿಕೊಂಡ ವೈದ್ಯರಾಗಿದ್ದಾರೆ. ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದವರಾಗಿದ್ದು, ದೀರ್ಘಕಾಲ ವೈದ್ಯರಾಗಿ ಸೇವೆ ಸಲ್ಲಿಸಿ ಬಳಿಕ ಬೆಳಗಾವಿಯಲ್ಲಿ ವಾಸವಾಗಿದ್ದರು.

ಶುಕ್ರವಾರ ಬೆಳಗ್ಗೆ ಮನೆಯ ಬಾಲ್ಕನಿಯಲ್ಲಿ ತಾವೇ ತಮ್ಮ ಮೇಲೆ ಗುಂಡು ಹಾರಿಸಿಕೊಂಡಿದ್ದಾರೆ ಎನ್ನಲಾಗಿದೆ. ಗುಂಡಿನ ಸದ್ದು ಕೇಳಿ ಮನೆಯವರು ಹಾಗೂ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ.

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಟಿಳಕವಾಡಿ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ, ಡಾ. ಭಟ್ಕಳ ಅವರು ಅನಾರೋಗ್ಯ ಮತ್ತು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಪೊಲೀಸರ ತನಿಖೆಯ ಬಳಿಕ ಸ್ಪಷ್ಟವಾಗಲಿದೆ.

ಮಾನಸಿಕ ಒತ್ತಡ ಅನುಭವಿಸುತ್ತಿದ್ದರೆ ಅಥವಾ ಭಾವನಾತ್ಮಕ ಬೆಂಬಲ ಅಗತ್ಯವಿದ್ದರೆ ಸ್ನೇಹ ಫೌಂಡೇಶನ್ 04424640050 ಅಥವಾ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸಹಾಯವಾಣಿ 9152987821 ಸಂಪರ್ಕಿಸಬಹುದು.

ಪ್ರಧಾನಿ ಮೋದಿಗೆ ಝಲ್ಮುರಿ ನೀಡಿದ್ದ ವ್ಯಾಪಾರಿಗೆ ಪಾಕ್ – ಬಾಂಗ್ಲಾದೇಶದಿಂದ ಕೊಲೆ ಬೆದರಿಕೆ ಕರೆ!

ಕೋಲ್ಕತ್ತಾ: ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನಪ್ರಿಯ ಬಂಗಾಳಿ ತಿನಿಸಾದ ಝಲ್ಮುರಿ ನೀಡಿ ದೇಶದ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳದ ಜಲ್ಮುರಿ ಮಾರಾಟಗಾರ ಇದೀಗ ಬೆದರಿಕೆ ಕರೆಗಳಿಂದ ಆತಂಕಕ್ಕೀಡಾಗಿದ್ದಾನೆ.

ಜಾರ್ಗ್ರಾಮ್‌ನ ರಸ್ತೆಬದಿ ಝಲ್ಮುರಿ ಅಂಗಡಿ ನಡೆಸುತ್ತಿರುವ ಬಿಕ್ರಮ್ ಸೌ ಅವರಿಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆರೋಪಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಪದೇ ಪದೇ ಫೋನ್ ಹಾಗೂ ವೀಡಿಯೊ ಕರೆಗಳ ಮೂಲಕ ಕೊಲೆ ಬೆದರಿಕೆ ಹಾಕಲಾಗುತ್ತಿದೆ ಎಂದು ಬಿಕ್ರಮ್ ಸೌ ತಿಳಿಸಿದ್ದಾರೆ.

ಏಪ್ರಿಲ್ 19ರಂದು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಕ್ರಮ್ ಸೌ ಅವರ ಅಂಗಡಿಗೆ ಭೇಟಿ ನೀಡಿ ಝಲ್ಮುರಿ ಸವಿದಿದ್ದರು. ಈ ಘಟನೆ ಬಳಿಕ ಝಲ್ಮುರಿ ವ್ಯಾಪಾರಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದರು.

ಈಗ ಬೆದರಿಕೆ ಕರೆಗಳು ತಮ್ಮನ್ನು ಹಾಗೂ ಕುಟುಂಬದವರನ್ನು ತೀವ್ರ ಆತಂಕಕ್ಕೀಡು ಮಾಡಿವೆ ಎಂದು ಬಿಕ್ರಮ್ ಸೌ ಹೇಳಿದ್ದಾರೆ.

ಕೆಲವರು ಕರೆ ಮಾಡಿ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಸುತ್ತಿದ್ದಾರೆ. ಇನ್ನೂ ಕೆಲವರು ಅಸಭ್ಯ ಮತ್ತು ನಿಂದನೀಯ ಪದಗಳನ್ನು ಬಳಸಿ ಅವಾಚ್ಯವಾಗಿ ಮಾತನಾಡುತ್ತಿದ್ದಾರೆ” ಎಂದು ಅವರು ದೂರಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ, ಪ್ರಧಾನಿ ಮೋದಿ ಭೇಟಿ ಬಳಿಕ ಬಿಕ್ರಮ್ ಸೌ ಅವರ ಅಂಗಡಿಗೆ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ದೇಶಾದ್ಯಂತ ಗಮನ ಸೆಳೆದಿರುವ ಈ ಝಲ್ಮುರಿ ಅಂಗಡಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.

CET ಅಭ್ಯರ್ಥಿಗಳಿಗೆ ಮಹತ್ವದ ಸುದ್ದಿ: CBSE ಹಾಗೂ ಬೇರೆ ರಾಜ್ಯಗಳ ಅಂಕ ದಾಖಲಿಸಲು ಲಿಂಕ್ ಬಿಡುಗಡೆ

ಬೆಂಗಳೂರು: ಸಿಬಿಎಸ್‌ಇ, ಸಿಐಎಸ್‌ಸಿಇ ಮತ್ತು ಇತರೆ ರಾಜ್ಯ ಪರೀಕ್ಷಾ ಮಂಡಳಿಗಳಿಂದ 12ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ತಮ್ಮ ಅಂಕಗಳನ್ನು ಪರಿಶೀಲಿಸಿ ದೃಢೀಕರಿಸಲು ಹಾಗೂ ಅಂಕ ಪಟ್ಟಿ ಅಪ್ ಲೋಡ್ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್ ಸೈಟ್ ನಲ್ಲಿ ಲಿಂಕ್ ಬಿಡುಗಡೆ ಮಾಡಿದೆ.

ನಿಗದಿತ ಲಿಂಕ್ ಮೂಲಕ ಲಾಗಿನ್ ಆದ ತಕ್ಷಣ ಅಭ್ಯರ್ಥಿಗಳಿಗೆ ತಮ್ಮ ಅಂಕಗಳು ಪ್ರದರ್ಶನವಾಗುತ್ತದೆ. ಅವು ಸರಿ ಇದ್ದರೆ ದೃಢೀಕರಿಸಬೇಕು. ಒಂದು ವೇಳೆ ಇದುವರೆಗೂ ಅಂಕಗಳನ್ನು ನಮೂದಿಸದೇ ಇದ್ದರೆ ಅಂತಹವರು ಕೂಡ ಅಂಕಗಳನ್ನು ದಾಖಲಿಸಬಹುದು. ನಂತರ ಅದಕ್ಕೆ ಪೂರಕವಾದ ಅಂಕಪಟ್ಟಿಯನ್ನು ಅಪ್ ಲೋಡ್ ಮಾಡಬೇಕು. ಇದೆಲ್ಲ ಮಾಡಲು ಮೇ‌ 24ರವರೆಗೂ ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಭ್ಯರ್ಥಿಗಳು ಧೃಡೀಕರಿಸಿ ಸಲ್ಲಿಸುವ ಅಂಕಗಳನ್ನೇ ನಿಯಮಾನುಸಾರ ಮೆರಿಟ್ ನಿರ್ಧರಿಸಲು ಉಪಯೋಗಿಸ ಲಾಗುವುದು ಹಾಗೂ ಸೀಟು ಹಂಚಿಕೆಯ ನಂತರ ಆಯಾ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಸಂದರ್ಭದಲ್ಲಿ ಅಂಕಗಳನ್ನು ಪರಿಶೀಲಿಸಲಾಗುವುದು. ಅಭ್ಯರ್ಥಿಗಳು ತಪ್ಪು ಮಾಹಿತಿ ನೀಡಿದಲ್ಲಿ ಸೀಟು ರದ್ದುಗೊಳ್ಳುತ್ತದೆ ಮತ್ತು ಅಭ್ಯರ್ಥಿತನವನ್ನು ತೆಗೆದು ಹಾಕಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

2026 ಹಾಗೂ ಅದಕ್ಕಿಂತ ಮೊದಲಿನ ವರ್ಷಗಳಲ್ಲಿ ಉತ್ತೀರ್ಣರಾದವರು ಕೂಡ ಅಂಕಗಳನ್ನು ದಾಖಲಿಸಬಹುದು ಎಂದು ಅವರು ವಿವರಿಸಿದ್ದಾರೆ.

ರಾಜ್ಯ ಪಠ್ಯಕ್ರಮದಲ್ಲಿ ಓದಿದ ಅಭ್ಯರ್ಥಿಗಳ ಅಂಕಗಳ ವಿವರವನ್ನು ಆನ್ ಲೈನ್ ಮೂಲಕ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಲಭ್ಯವಾಗಲಿದೆ. ಹೀಗಾಗಿ ರಾಜ್ಯ ಮಂಡಳಿಯ ಅಭ್ಯರ್ಥಿಗಳು ಅಂಕ ದಾಖಲಿಸುವ ಅಗತ್ಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಡಿಕೆಶಿ ಕಾಕ್ರೋಚ್ ಪಾರ್ಟಿಗೆ ಅಧ್ಯಕ್ಷರಾಗಿ 50 ಸೀಟು ಗೆದ್ದು ತೋರಿಸಲಿ: ನಿಖಿಲ್ ಕುಮಾರಸ್ವಾಮಿ ಕಿಡಿ

ಬೆಂಗಳೂರು: ನಾನು ಕನ್ನಡ ನಾಡಿನ ಹುಡುಗ, ಇಲ್ಲಿ ನಾನು ತೆರಿಗೆ ಕಟ್ತಾ ಇದ್ದೇನೆ. ನಾಡಿನ ಜನರ ಪರವಾಗಿ ಸಾಮಾನ್ಯ ಪ್ರಜೆಯಾಗಿ ಪ್ರಶ್ನೆ ಮಾಡ್ತಿದ್ದೇನೆ. ಇದು ನನ್ನ ಸ್ಟೇಟಸ್ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಜೆ.ಪಿ. ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟೇಟಸ್ ಬಗ್ಗೆ ಟೀಕೆ ಮಾಡಿದ ಡಿಕೆಶಿಗೆ ನಾನು ಕಾಮನ್ ಮ್ಯಾನ್ ಆಗಿ ಬರ್ತೇನೆ. ನನಗೆ ಯಾವ ಸ್ಟೇಟಸ್ ಕೂಡ ಬೇಡ ಎಂದು ಟಾಂಗ್ ಕೊಟ್ಟರು.

“ಕಾಕ್ರೋಚ್ ಪಾರ್ಟಿಗೆ ಅಧ್ಯಕ್ಷರಾಗಿ”

ಸೋಶಿಯಲ್ ಮೀಡಿಯಾದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಅಂತ ಸೆನ್ಸೇಷನ್ ಶುರುವಾಗಿದೆ. ಉಪಮುಖ್ಯಮಂತ್ರಿಗಳು ಅಲ್ಲಿಗೆ ಹೋಗಿ ಅಧ್ಯಕ್ಷರಾಗಲಿ” ಎಂದು ನಿಖಿಲ್ ವ್ಯಂಗ್ಯವಾಡಿದರು. ನಿನ್ನೆ ಪ್ರತಿಭಟನೆಯಲ್ಲಿ ಸಿಎಂ ಹಾಗೂ ಡಿಸಿಎಂ ಐ ಆಮ್ ಕಾಕ್ರೋಚ್ ಟೀ-ಶರ್ಟ್ ಬಿಡುಗಡೆ ಮಾಡಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದವರಾಗಿ ಕಾಕ್ರೋಚ್ ಪಾರ್ಟಿ ಟೀ-ಶರ್ಟ್ ಬಿಡುಗಡೆ ಮಾಡಿದ್ದಾರೆ” ಎಂದು ಕಿಡಿಕಾರಿದರು.

“50% ಸ್ಥಳೀಯರಿಗೆ ಉದ್ಯೋಗ ಕಾನೂನು ತನ್ನಿ”

ಬಿಡದಿ ಕೈಗಾರಿಕಾ ಮಹಾ ಯೋಜನೆ ಭೂಸ್ವಾಧೀನವನ್ನು ತೀವ್ರವಾಗಿ ಖಂಡಿಸಿದ ನಿಖಿಲ್, ಈ ಯೋಜನೆ ಹೆಚ್.ಡಿ. ಕುಮಾರಸ್ವಾಮಿ ಅವರ ಕನಸಿನ ಕೂಸಾಗಿದ್ದರೂ, ‘ಕೃಷ್ಣಾ’ ಕಚೇರಿಯಲ್ಲಿ ರೈತರೊಂದಿಗೆ ಸಭೆ ನಡೆಸಿದ ಬಳಿಕ ಅವರ ಮನವಿಗೆ ಸ್ಪಂದಿಸಿ ಯೋಜನೆಯನ್ನು ಕೈಬಿಡಲಾಗಿತ್ತು ಎಂದು ನೆನಪಿಸಿದರು.

“ಆದರೆ ಈಗಿನ ಸರ್ಕಾರ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ‘ಅಲ್ಲಿ ರೈತರೇ ಇಲ್ಲ’ ಎಂದು ಡಿಸಿಎಂ ಹಠ ಹಿಡಿದಿದ್ದಾರೆ. ಕೃಷಿ ಜಮೀನನ್ನೇ ಏಕೆ ರೈತರಿಂದ ಬಲವಂತವಾಗಿ ಕಿತ್ತುಕೊಳ್ಳುತ್ತಿದ್ದೀರಿ? ಡಿಸಿಎಂ ಮೊದಲು ಹಳ್ಳಿಗಳಿಗೆ ಬಂದು ರೈತರ ಕ್ಷಮೆ ಕೇಳಲಿ” ಎಂದರು.

“ಅಷ್ಟೊಂದು ಮಾತಾಡುವ ಡಿಸಿಎಂ, ಈ ಯೋಜನೆಯಲ್ಲಿ ಸ್ಥಳೀಯರಿಗೆ ಕಡ್ಡಾಯವಾಗಿ ಶೇ. 50ರಷ್ಟು ಉದ್ಯೋಗ ನೀಡಲೇಬೇಕು ಎಂಬ ಕಾನೂನನ್ನು ತರಲಿ ನೋಡೋಣ, ಆಗ ನಾನು ಒಪ್ಪುತ್ತೇನೆ. ಕುಮಾರಸ್ವಾಮಿ ಅವರಿಗೆ ಚಾಲೆಂಜ್ ಮಾಡುವುದನ್ನು ಬಿಟ್ಟು ರೈತರ ಪ್ರಶ್ನೆಗಳಿಗೆ ಉತ್ತರಿಸಲಿ. ನಾನು ಯಾವುದೇ ಸ್ಟೇಟಸ್ ಇಲ್ಲದೆ ಕಾಮನ್ ಮ್ಯಾನ್ ಆಗಿ ಹಳ್ಳಿಗಳಿಗೆ ಬರಲು ಸಿದ್ಧ” ಎಂದು ಸವಾಲು ಹಾಕಿದರು.

ಬಾಲಕನಿಗೆ ಇಂಜೆಕ್ಷನ್ ಚುಚ್ಚಿ ಪರಾರಿಯಾದ ಮುಸುಕುಧಾರಿಗಳ ತಂಡ: ಪೋಷಕರಲ್ಲಿ ಆತಂಕ

0

ಧಾರವಾಡ: ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮದಲ್ಲಿ ನಡೆದ ಅನುಮಾನಾಸ್ಪದ ಘಟನೆಯೊಂದು ಪೋಷಕರಲ್ಲಿ ಭೀತಿ ಮೂಡಿಸಿದೆ. 10 ವರ್ಷದ ಬಾಲಕನನ್ನು ತಡೆದು ಅಪರಿಚಿತರು ಇಂಜೆಕ್ಷನ್ ಚುಚ್ಚಿ ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮಣಿಕಂಠ ಗಾಣಿಗೇರ ಎಂಬ ಬಾಲಕ ರಸ್ತೆ ಮೂಲಕ ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ವಿಳಾಸ ಕೇಳುವ ನೆಪದಲ್ಲಿ ಮಾತು ಆರಂಭಿಸಿದ್ದಾರೆ. ಬಳಿಕ ಏಕಾಏಕಿ ಬಾಲಕನ ಬಾಯಿಯನ್ನು ಹಿಡಿದು ಇಂಜೆಕ್ಷನ್ ಚುಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಬಳಿಕ ಬಾಲಕ ಅಸ್ವಸ್ಥಗೊಂಡ ಹಿನ್ನೆಲೆ ಕುಟುಂಬಸ್ಥರು ತಕ್ಷಣ ಕುಂದಗೋಳ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಬಾಲಕನಿಗೆ ಯಾವ ಇಂಜೆಕ್ಷನ್ ನೀಡಲಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಇದರಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆ ಮಾಡಿದ್ದು, ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ.

ಘಟನೆ ಸಂಬಂಧ ಕುಂದಗೋಳ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿ ಹಾಗೂ ಇತರೆ ಮಾಹಿತಿಗಳ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ.

ಹಿರಿಯೂರು ಫ್ಲೈಓವರ್ ಬಳಿ ಆಂಬುಲೆನ್ಸ್-ಲಾರಿ ನಡುವೆ ಭೀಕರ ಅಪಘಾತ

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಹೊಸಪೇಟೆಯಿಂದ ಬೆಂಗಳೂರಿಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಲಾರಿಗೆ ಡಿಕ್ಕಿ ಹೊಡೆದು ಜಖಂಗೊಂಡ ಘಟನೆ ಹಿರಿಯೂರು ತಾಲ್ಲೂಕಿನ ಫ್ಲೈಓವರ್ ಔಟರಿಂಗ್ ಬಳಿ ನಡೆದಿದೆ.

ಶುಕ್ರವಾರ ಮುಂಜಾನೆ ನಡೆದ ಈ ಅಪಘಾತದಲ್ಲಿ ಆಂಬುಲೆನ್ಸ್‌ನ ಮುಂಭಾಗ ಸಂಪೂರ್ಣ ಹಾನಿಗೊಳಗಾಗಿದ್ದು, ಅಪಘಾತದ ತೀವ್ರತೆ ಎಷ್ಟಿತ್ತು ಎಂಬುದು ದೃಶ್ಯಗಳಿಂದಲೇ ಸ್ಪಷ್ಟವಾಗುತ್ತಿದೆ. ರೋಗಿಯನ್ನು ತುರ್ತು ಚಿಕಿತ್ಸೆಗೆ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ರೋಗಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ, ವಾಹನ ಸಂಚಾರವನ್ನು ಮರುಸ್ಥಾಪಿಸಿದರು.

ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಸಾರ್ವಜನಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದು, ವಿಶೇಷವಾಗಿ ಮುಂಜಾನೆ ವೇಳೆಯ ಸಂಚಾರದಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಶಿಕ್ಷಣ ಕ್ರಾಂತಿ: 1,000 ಕೆಪಿಎಸ್ ಶಾಲೆಗಳಿಗೆ ಜೂನ್ 1ರಂದು ಶಿವಮೊಗ್ಗದಲ್ಲಿ ಚಾಲನೆ

ಶಿವಮೊಗ್ಗ: ಕರ್ನಾಟಕದಲ್ಲಿ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ದಿಟ್ಟ ಹೆಜ್ಜೆಯಾಗಿ 1,000 ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣಕ್ಕೆ ಜೂನ್ 1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಮೊಗ್ಗದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ನಡೆಯಲಿರುವ ಈ ರಾಜ್ಯಮಟ್ಟದ ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಸಚಿವರು, ಪ್ರತಿ ಶಾಲೆಗೆ ಸರಾಸರಿ 3.5 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಆಧುನಿಕ ಸೌಲಭ್ಯಗಳೊಂದಿಗೆ ಶಿಕ್ಷಣ ನೀಡುವ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದರು.

ಒಂದೇ ಆವರಣದಲ್ಲಿ ಪ್ರಾಥಮಿಕದಿಂದ ಪ್ರೌಢಶಿಕ್ಷಣದವರೆಗೆ ಎಲ್ಲಾ ಸೌಲಭ್ಯಗಳು ದೊರೆಯಲಿದ್ದು, ಈ ಶಾಲೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಶಾಕಿರಣವಾಗಲಿವೆ ಎಂದು ಹೇಳಿದರು.

ರಾಜ್ಯದ 800 ಶಾಲೆಗಳನ್ನು ಶಿಕ್ಷಣ ಇಲಾಖೆ ಹಾಗೂ 200 ಶಾಲೆಗಳನ್ನು ಅಲ್ಪಸಂಖ್ಯಾತರ ಇಲಾಖೆ ನಿರ್ಮಾಣ ಮಾಡಲಿದೆ ಎಂದು ಮಾಹಿತಿ ನೀಡಿದರು.

ಪಿಯುಸಿ ಪರೀಕ್ಷೆ-2 ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಒಟ್ಟಾರೆ ಫಲಿತಾಂಶ ಶೇ.92.25ಕ್ಕೆ ಏರಿಕೆಯಾಗಿದೆ. ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಾಗಿದ್ದು, ಶೇ.60ಕ್ಕೂ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳ ಪ್ರಮಾಣವೂ ಹೆಚ್ಚಾಗಿದೆ ಎಂದು ಹೇಳಿದರು.

ಈ ತಿಂಗಳ ಅಂತ್ಯದೊಳಗೆ ಎಸ್‌ಎಸ್‌ಎಲ್‌ಸಿ ಎರಡನೇ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ 12 ಕರ್ನಾಟಕ ಪಬ್ಲಿಕ್ ಶಾಲೆಗಳಿದ್ದು, ಹೊಸದಾಗಿ 19 ಶಾಲೆಗಳನ್ನು ಉನ್ನತೀಕರಿಸಲಾಗುತ್ತಿದೆ. ಖಾಸಗಿ ಸಂಸ್ಥೆಯೊಂದು ಸಿಎಸ್‌ಆರ್ ನಿಧಿಯಿಂದ 12 ಕೋಟಿ ರೂ. ಸಹಾಯ ಮಾಡಲು ಮುಂದಾಗಿದೆ ಎಂದರು.

ಎಸೆಸೆಲ್ಸಿಯಲ್ಲಿ 600ಕ್ಕೂ ಹೆಚ್ಚು ಅಂಕ ಪಡೆದ ಜಿಲ್ಲೆಯ 867 ವಿದ್ಯಾರ್ಥಿಗಳನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ಇದೇ ವೇಳೆ ಬಿರುಗಾಳಿ ಮತ್ತು ಮಳೆಯಿಂದ ಅಡಿಕೆ ಬೆಳೆ ಹಾನಿಗೀಡಾದ ರೈತರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಕೆಲಸ ಮುಗಿಸಿ ಇಬ್ಬರು ಯುವಕರೊಂದಿಗೆ ತೆರಳಿದ್ದ ಯುವತಿ ಅನುಮಾನಾಸ್ಪದ ಸಾವು: ಇಬ್ಬರು ಪೊಲೀಸ್ ವಶಕ್ಕೆ

ಹಗರಿಬೊಮ್ಮನಹಳ್ಳಿ: ಪಟ್ಟಣದ ಆಡಳಿತ ವಿಧಾನಸೌಧದ ಸಮೀಪದ ಅಗ್ನಿಶಾಮಕ ಠಾಣೆ ಬಳಿ ಗುರುವಾರ ರಾತ್ರಿ ಮಹಿಳೆಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ಆತಂಕ ಹಾಗೂ ಸಂಚಲನಕ್ಕೆ ಕಾರಣವಾಗಿದೆ. ತಲೆಗೆ ಗಂಭೀರ ಗಾಯಗಳಾಗಿರುವ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಪ್ರಕರಣಕ್ಕೆ ಕೊಲೆ ಶಂಕೆ ವ್ಯಕ್ತವಾಗಿದೆ.

ಮೃತ ಮಹಿಳೆಯನ್ನು ಪಟ್ಟಣದ ರಾಮರಹೀಮ್ ನಗರ ನಿವಾಸಿ ಪ್ರಿಯಾಂಕ (27) ಎಂದು ಗುರುತಿಸಲಾಗಿದೆ.

ಅಂಗಡಿಯಿಂದ ಹೊರಟ ಬಳಿಕ ನಡೆದೇನು?

ಪ್ರಿಯಾಂಕ ಕಳೆದ ಕೆಲವು ತಿಂಗಳಿಂದ ಪಟ್ಟಣದ “ಮಿಯಾ ಫ್ಯಾಷನ್” ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ರಾತ್ರಿ ಸುಮಾರು 8.30ರವರೆಗೆ ಅಂಗಡಿಯಲ್ಲಿ ಕೆಲಸ ನಿರ್ವಹಿಸಿದ್ದ ಅವರು, ಬಳಿಕ ಇಬ್ಬರು ಯುವಕರೊಂದಿಗೆ ತೆರಳಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಇದಾದ ಕೆಲವೇ ಸಮಯದಲ್ಲಿ ಪಟ್ಟಣದ ಹೊರವಲಯದ ಅಗ್ನಿಶಾಮಕ ಠಾಣೆ ಸಮೀಪ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ತಲೆಗೆ ಗಂಭೀರ ಗಾಯ – ಹರಿದ ಬಟ್ಟೆಗಳು

ಘಟನಾ ಸ್ಥಳದಲ್ಲಿ ಯುವತಿಯ ತಲೆಯಿಂದ ಹೆಚ್ಚಿನ ರಕ್ತಸ್ರಾವವಾಗಿರುವುದು ಕಂಡು ಬಂದಿದೆ. ಅಲ್ಲದೇ, ಮೃತೆಯ ಬಟ್ಟೆಗಳು ಹರಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ಅಪಘಾತವೋ, ಹಿಟ್ ಅಂಡ್ ರನ್ ಪ್ರಕರಣವೋ ಅಥವಾ ಕೊಲೆಯೋ ಎಂಬುದರ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.

ವಿಚ್ಛೇದನದ ಬಳಿಕ ಮಗನೊಂದಿಗೆ ವಾಸ

ಮೂಲಗಳ ಪ್ರಕಾರ, ಪ್ರಿಯಾಂಕ ಸುಮಾರು ಒಂದೂವರೆ ವರ್ಷದ ಹಿಂದೆ ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯ ಯುವಕನೊಂದಿಗೆ ವಿವಾಹವಾಗಿದ್ದರು. ಆದರೆ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನ ಮುರಿದು ವಿಚ್ಛೇದನವಾಗಿತ್ತು. ಬಳಿಕ ಅವರು ತಮ್ಮ ಮಗನೊಂದಿಗೆ ರಾಮರಹೀಮ್ ನಗರದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.

ಇಬ್ಬರು ಯುವಕರು ವಶಕ್ಕೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ತನಿಖೆಯ ನಂತರವೇ ಘಟನೆಯ ನಿಜಸ್ವರೂಪ ಬಹಿರಂಗವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ವಿಜಯನಗರ ಜಿಲ್ಲಾ ಎಸ್‌ಪಿ ಜಾಹ್ನವಿ, ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಹಾಗೂ ಸಿಪಿಐ ವಿಕಾಸ್ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮೃತೆಯ ಪೋಷಕರು ಠಾಣೆಗೆ ಆಗಮಿಸಿ ದೂರು ಸಲ್ಲಿಸಲು ಮುಂದಾಗಿದ್ದಾರೆ. ಪ್ರಕರಣ ದಾಖಲಾಗಿದ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ಮಂಡ್ಯದ ಬಲಮುರಿಯಲ್ಲಿ ದುರಂತ: ಕಾವೇರಿ ನದಿಯಲ್ಲಿ ಮುಳುಗಿ ಟೆಕ್ ಕಂಪನಿ ಉದ್ಯೋಗಿಗಳಿಬ್ಬರ ಸಾವು

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಬಲಮುರಿ ಪ್ರವಾಸಿ ತಾಣದಲ್ಲಿ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಆತಂಕ ಮೂಡಿಸಿದೆ. ಮೃತಪಟ್ಟವರು ಮೈಸೂರಿನ ಕೈಗಾರಿಕಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕರು ಎಂಬುದು ತಿಳಿದುಬಂದಿದೆ.

ಚಾಮರಾಜನಗರ ಜಿಲ್ಲೆಯ ತಮರವಾಡಿ ಗ್ರಾಮದ ಮೊಹನ್ ಕುಮಾರ್ (21) ಮತ್ತು ಮೈಸೂರಿನ ಕೆಳಹಳ್ಳಿ ಗ್ರಾಮದ ರವಿಚಂದ್ರ (21) ಮೃತ ಯುವಕರು. ಇಬ್ಬರೂ ಐಟಿಐ ಮುಗಿಸಿ ಬೆಳಗೊಳ ಕೈಗಾರಿಕಾ ಪ್ರದೇಶದ ಕೇನ್ಸ್ ಟೆಕ್ನಾಲಜಿಯಲ್ಲಿ ಉದ್ಯೋಗದಲ್ಲಿದ್ದರು.

ಸ್ನೇಹಿತ ವಿಕಾಸ್ ಜೊತೆ ಮೂವರು ಬಲಮುರಿಗೆ ಬಂದಿದ್ದ ವೇಳೆ ಕಾವೇರಿ ನದಿಗೆ ಇಳಿದ ಇಬ್ಬರು ಆಳವಾದ ನೀರಿನಲ್ಲಿ ಸಿಲುಕಿ ಮುಳುಗಿದ್ದಾರೆ ಎನ್ನಲಾಗಿದೆ.

ಘಟನೆ ಗಮನಿಸಿದ ವಿಕಾಸ್ ತಕ್ಷಣ ಸ್ಥಳೀಯ ರೈತರ ನೆರವಿನಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಆರ್‌ಎಸ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ಸ್ಥಳೀಯ ಈಜುಗಾರರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರ ಶವಗಳನ್ನು ಹೊರತೆಗೆಯಲಾಗಿದೆ. ಬಳಿಕ ಮೃತದೇಹಗಳನ್ನು ಮೈಸೂರಿನ ಕೆಆರ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.

ಘಟನೆ ಸಂಬಂಧ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

error: Content is protected !!