Home Blog Page 156

ಕೇಸರಿಮಯವಾದ ಗದಗ-ಬೆಟಗೇರಿ ಅವಳಿ ನಗರ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಗುರುವಾರ ಶ್ರೀರಾಮ ಸೇನೆ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಅತ್ಯಂತ ವೈಭವದಿಂದ ಜರುಗಿತು. ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಮೂರ್ತಿಯ ಮೆರವಣಿಗೆಯು ಅವಳಿ ನಗರವನ್ನು ಕೇಸರಿಮಯವಾಗಿಸಿತ್ತು.

ಈ ಬಾರಿಯ ಮೆರವಣಿಗೆಯಲ್ಲಿ ಕೇವಲ ಶಿವಾಜಿ ಮಹಾರಾಜರಷ್ಟೇ ಅಲ್ಲದೆ, 17 ಅಡಿ ಎತ್ತರದ ಪ್ರಭು ಶ್ರೀರಾಮ, ಸಹಸ್ರಾರ್ಜುನ, ಮಹರ್ಷಿ ವಾಲ್ಮೀಕಿ, ವೀರಮಾತೆ ಕಿತ್ತೂರು ರಾಣಿ ಚನ್ನಮ್ಮ, ಸಂತ ಸೇವಾಲಾಲ್ ಹಾಗೂ ಪಾಂಡುರಂಗ ವಿಠ್ಠಲನ ಮೂರ್ತಿಗಳು ಸಾರ್ವಜನಿಕರ ಗಮನ ಸೆಳೆದವು. ಈಚೆಗಷ್ಟೇ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದವರ ಭಾವಚಿತ್ರಗಳು ಮೆರವಣಿಗೆಗೆ ಮೆರುಗು ನೀಡಿದವು. ಅಲ್ಲದೇ ನಗರದ ಪ್ರಮುಖ ವೃತ್ತಗಳು ಮತ್ತು ರಸ್ತೆಗಳಲ್ಲಿ ಕೇಸರಿ ಧ್ವಜ ಹಾಗೂ ಬಂಟಿಂಗ್‌ಗಳನ್ನು ಕಟ್ಟುವ ಮೂಲಕ ಸಂಘಟಕರು ಹಬ್ಬದ ವಾತಾವರಣ ನಿರ್ಮಿಸಿದ್ದರು.

ಮೆರವಣಿಗೆಯಲ್ಲಿ ಗದಗ ಮಾತ್ರವಲ್ಲದೆ ಹುಬ್ಬಳ್ಳಿ, ಬಾಗಲಕೋಟೆ, ಕೊಪ್ಪಳ ಮತ್ತು ಹಾವೇರಿ ಜಿಲ್ಲೆಗಳಿಂದ ಹಿಂದೂ ಸಂಘಟನೆಗಳು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಕೊರಳಲ್ಲಿ ಕೇಸರಿ ಶಾಲು, ಹಣೆಯಲ್ಲಿ ಕುಂಕುಮ ಧರಿಸಿದ್ದ ಯುವಕರು ಕಿವಿಗಡಚಿಕ್ಕುವ ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದರು. ಮೆರವಣಿಗೆಯುದ್ದಕ್ಕೂ ‘ಜೈ ಶಿವಾಜಿ’, ‘ಜೈ ಶ್ರೀರಾಮ್’ ಎಂಬ ಘೋಷಣೆಗಳು ಮೊಳಗಿದವು. ಮೆರವಣಿಗೆ ಸಾಗುವ ದಾರಿಯಲ್ಲಿ ವಿವಿಧ ಸಂಘಟನೆಗಳಿಂದ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಶಿವಾಜಿ ಜಯಂತಿ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಸಂಜೆಯವರೆಗೂ ಸಾಗಿದ ಮೆರವಣಿಗೆಯು, ಮುನ್ಸಿಪಲ್ ಮೈದಾನದಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡಿತು.

ಒಕ್ಕಲಗೇರಿ ಓಣಿಯ ರಾಚೋಟೇಶ್ವರ ದೇವಸ್ಥಾನದಲ್ಲಿ ಶಿವಾಜಿ ಮಹಾರಾಜರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಅಲ್ಲಿಂದ ಆರಂಭಗೊಂಡ ಮೆರವಣಿಗೆಯು ಜುಮ್ಮಾ ಮಸೀದಿ, ಬಸವೇಶ್ವರ ವೃತ್ತ, ಹುಯಿಲಗೋಳ ನಾರಾಯಣರಾವ್ ವೃತ್ತದ ಮಾರ್ಗವಾಗಿ ಮುನ್ಸಿಪಲ್ ಕಾಲೇಜು ಮೈದಾನದವರೆಗೆ ಸಾಗಿತು. ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಕಟ್ಟಡಗಳ ಮೇಲೇರಿ ಸಾವಿರಾರು ಜನರು ಈ ಭವ್ಯ ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ಶಿವಾಜಿ ಮಹಾರಾಜರು ಸ್ವಾಭಿಮಾನದ ಪ್ರತೀಕ: ಡಿಸಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಛತ್ರಪತಿ ಶಿವಾಜಿ ಮಹಾರಾಜರು ಶಕ್ತಿಯ ಸಂಕೇತ ಹಾಗೂ ಸ್ವಾಭಿಮಾನದ ಪ್ರತೀಕ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇವರುಗಳ ಸಹಯೋಗದಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಛತ್ರಪತಿ ಶಿವಾಜಿ ಅಪ್ಪಟ ದೇಶಪ್ರೇಮಿಯಾಗಿದ್ದರು. ದೇಶ ಕಂಡ ಅಪ್ರತಿಮ ಸಂಘಟನಾಕಾರ. ತಾಯಿ ಜೀಜಾಬಾಯಿಯ ಪ್ರೇರಣೆಯಿಂದ ಶಿವಾಜಿ ಮಹಾರಾಜರು ಸಂಸ್ಕಾರವಂತರಾಗಿ ಆದರ್ಶ ಜೀವನ ನಡೆಸಲು ಕಾರಣವಾಯಿತು. ಜೀಜಾಬಾಯಿಯವರ ಸ್ವರಾಜ್ಯದ ಕನಸು ನನಸು ಮಾಡಿದ ಅಪ್ರತಿಮ ವೀರ ಶಿವಾಜಿ ಮಹಾರಾಜರು. ಶಿವಾಜಿ ಮಹಾರಾಜರ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಉಪನ್ಯಾಸಕರಾದ ಹಿರಿಯ ವಕೀಲ ಸುಧೀರಸಿಂಹ ಘೋರ್ಪಡೆ ಮಾತನಾಡಿ, ಶಿವಾಜಿಯವರ ತತ್ವಗಳು ಒಂದೇ ಸಮುದಾಯಕ್ಕೆ ಅಲ್ಲದೇ ಎಲ್ಲ ಸಮುದಾಯಕ್ಕೆ ಸೀಮಿತವಾಗಿವೆ. ಕ್ರಿ.ಶ 1630ರಲ್ಲಿ ಶಿವನೇರಿ ದುರ್ಗದಲ್ಲಿ ಶಿವಾಜಿ ಮಹಾರಾಜರ ಜನನವಾಗುತ್ತದೆ. ಪರಕೀಯರ ಆಳ್ವಿಕೆಯಲ್ಲಿ ಇರಬಾರದು ಎಂಬುದು ಜೀಜಾಮಾತೆಯು ಬಯಕೆಯಾಗಿತ್ತು. ಶಿವಾಜಿ ಮಹಾರಾಜರು ತಮ್ಮ 13ನೇ ವರ್ಷದಲ್ಲಿ ಸ್ವರಾಜ್ಯ ಸ್ಥಾಪನೆಯ ಕನಸು ಕಂಡು ಮಾವಳಿಯರ, ರೈತರು, ಗುಡ್ಡಗಾಡು ಜನರ ಸಂಘಟನೆಯೊಂದಿಗೆ ಮೊಘಲರ ವಶದಲ್ಲಿರುವ ಕೋಟೆಗಳನ್ನು ವಶಪಡಿಸಿಕೊಂಡರು. ಇವರು ಸಮರ್ಥ ಆಡಳಿತಗಾರರಾಗಿದ್ದರು ಎಂದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ. ಬಸವರಾಜ ಜಕ್ಕಲಿ, ಸುರೇಶ ಬೇಂದ್ರೆ, ಕೃಷ್ಣಾಜಿ ತುಕ್ಕಪ್ಪನವರ, ಮುರಿಗೆಪ್ಪ ಶೆಟ್ಟರ್, ಅಜಿತ ಘೋರ್ಪಡೆ, ಯಲ್ಲಪ್ಪ ಬೇಂದ್ರೆ ಸೇರಿದಂತೆ ಸಮಾಜದ ಹಿರಿಯರು, ಮಹಿಳೆಯರು, ಮುಖಂಡರು, ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.

ವೀರಣ್ಣ ಅಂಗಡಿ ಹಾಗೂ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು. ಸ್ವರಸಿಂಧು ನೃತ್ಯ ಪ್ರದರ್ಶಿಸಿದರು.

ಗೆರಿಲ್ಲಾ ಯುದ್ಧ ನೀತಿ ಅನುಸರಿಸುತ್ತಿದ್ದರು. 1674ರಲ್ಲಿ ರಾಯಗಡದಲ್ಲಿ ಶಿವಾಜಿಯವರಿಗೆ ಪಟ್ಟಾಭಿಷೇಕವಾಯಿತು. ಅವರು `ಛತ್ರಪತಿ’ ಎಂದು ಘೋಷಿಸಿಕೊಂಡರು. ಇದು ಕೇವಲ ಒಬ್ಬ ವ್ಯಕ್ತಿಯ ಪಟ್ಟಾಭಿಷೇಕವಾಗಿರಲಿಲ್ಲ, ಶತಮಾನಗಳ ಪರಕೀಯರ ಆಳ್ವಿಕೆಯ ನಂತರ ಹಿಂದೂ ಸಾಮ್ರಾಜ್ಯವೊಂದು ತಲೆ ಎತ್ತಿ ನಿಂತ ಐತಿಹಾಸಿಕ ಕ್ಷಣವಾಗಿತ್ತು ಎಂದು ಸುಧೀರಸಿಂಹ ಘೋರ್ಪಡೆ ಶಿವಾಜಿ ಮಹಾರಾಜರ ಶೌರ್ಯ, ಪರಾಕ್ರಮ ಸೇರಿದಂತೆ ಜೀವನ ಸಾಧನೆ ಕುರಿತು ವಿವರಿಸಿದರು.

11 ವರ್ಷಗಳ ಬಳಿಕ ಕರ್ನಾಟಕ ರಣಜಿ ಫೈನಲ್ ಪ್ರವೇಶ!

0

ಲಕ್ನೋ: 11 ವರ್ಷದ ಬಳಿಕ ಕರ್ನಾಟಕ ತಂಡ ರಣಜಿ ಟ್ರೋಫಿ ಫೈನಲ್‌ ಪ್ರವೇಶಿಸಿದೆ.

ಫೆ. 24 ರಿಂದ ಹುಬ್ಬಳ್ಳಿಯಲ್ಲಿ ಜಮ್ಮು ಕಾಶ್ಮೀರ ತಂಡದೊಂದಿಗೆ ಪಂದ್ಯ ನಡೆಯಲಿದೆ. ಉತ್ತರಾಖಂಡ 826 ರನ್‌ಗಳ ಬೃಹತ್ ಗುರಿಯನ್ನು ಹೊಂದಿದ್ದು, ದಿನದ ಅಂತ್ಯಕ್ಕೆ 62 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 260 ರನ್‌ ಮಾಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರೀ ಮುನ್ನಡೆ ಪಡೆದಿರುವ ಕರ್ನಾಟಕ ಸುಲಭವಾಗಿ ಫೈನಲ್‌ ಪ್ರವೇಶಿಸಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ರವಿಚಂದ್ರನ್‌ ಸ್ಮರಣ್‌ 127 ರನ್‌ (149 ಎಸೆತ, 12 ಬೌಂಡರಿ, 3 ಸಿಕ್ಸ್‌) ಮತ್ತು ಕೆಎಲ್‌ ರಾಹುಲ್‌ 86 ರನ್‌ (103 ಎಸೆತ, 5 ಬೌಂಡರಿ, 5 ಸಿಕ್ಸ್‌) ಹೊಡೆದಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 232 ರನ್‌ ಹೊಡೆಯಲಿರುವ ದೇವದತ್‌ ಪಡಿಕಲ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಜಮ್ಮು ಕಾಶ್ಮೀರ ತಂಡ 6 ವಿಕೆಟ್‌ಗಳ ಜಯ ಸಾಧಿಸಿ ಮೊದಲ ಬಾರಿ ಫೈನಲ್‌ ಪ್ರವೇಶಿಸಿದೆ.

ಹುಬ್ಬಳ್ಳಿಯಲ್ಲಿ ಪಂದ್ಯ ನಡೆಯುತ್ತಿರುವುದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಸುರಕ್ಷತೆ ಸಂಬಂಧಿತ ಕೆಲಸಕಾರ್ಯಗಳು ನಡೆಯುತ್ತಿರುವ ಕಾರಣ. ಕರ್ನಾಟಕ 2014-15 ರಣಜಿ ಟ್ರೋಫಿ ಚಾಂಪಿಯನ್ ಆಗಿದ್ದು, ಅಭಿನವ್‌ ಮುಕುಂದ್‌ ನೇತೃತ್ವದಲ್ಲಿ ತಮಿಳುನಾಡು ವಿರುದ್ಧ 762 ರನ್‌ ಮೊದಲ ಇನ್ನಿಂಗ್ಸ್‌ ಮತ್ತು 217 ರನ್‌ ಅಂತರದಿಂದ ಜಯ ಪಡೆದಿತ್ತು. ಆ ಪಂದ್ಯದಲ್ಲಿ ಕೆಎಲ್‌ ರಾಹುಲ್‌ 188 ರನ್‌ ಹಾಗೂ ಕರುಣ್‌ ನಾಯರ್‌ 328 ರನ್‌ ಹೊಡೆದು, ತ್ರಿಶತಕ ಹೊಡೆಯುವ ಕರುಣ್‌ ನಾಯರ್‌ ಪಂದ್ಯಶ್ರೇಷ್ಠ ಗೌರವ ಪಡೆದಿದ್ದರು.

ರನ್‌ ಸ್ಕೋರ್ ವಿವರ:

ಕರ್ನಾಟಕ ಮೊದಲ ಇನ್ನಿಂಗ್ಸ್:
736/10.

ಉತ್ತರಾಖಂಡ ಮೊದಲ ಇನ್ನಿಂಗ್ಸ್: 233/10.

ಕರ್ನಾಟಕ ಎರಡನೇ ಇನ್ನಿಂಗ್ಸ್: 323/10.

ಉತ್ತರಾಖಂಡ ಎರಡನೇ ಇನ್ನಿಂಗ್ಸ್: 260/6.

3 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ತಿಂಡಿ ಆಸೆ ತೋರಿಸಿ ಹೇಯ ಕೃತ್ಯ; ಕಾಮುಕ ಅರೆಸ್ಟ್!

0

ಹೈದರಾಬಾದ್: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ತಿಂಡಿ ಆಸೆ ತೋರಿಸಿ 3 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.

19 ವರ್ಷದ ಯುವಕ ಬಂಧಿತ ಆರೋಪಿ. ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ವರದಿಯಾಗಿದೆ. ಆರೋಪಿಯು ಮಗುವಿಗೆ ತಿಂಡಿ ಕೊಡಿಸುವ ಆಸೆ ತೋರಿಸಿ ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ. ಆನಂತರ ಬಾಲಕಿ ಅಳುವುದನ್ನು ಕಂಡು ತಾಯಿ ಕೇಳಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಈ ಸಂಬಂಧ ತಾಯಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರಿನನ್ವಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

K. M ದೊಡ್ಡಿ ಸಮೀಪ ನಾಡಬಾಂಬ್ ಸ್ಫೋಟ: ಹಸುವಿನ ಬಾಯಿ ಛಿದ್ರ, ಸ್ಥಿತಿ ಗಂಭೀರ!

0

ಮಂಡ್ಯ:- ಜಿಲ್ಲೆಯ ಮದ್ದೂರು ತಾಲ್ಲೂಕಿನ K. M. ದೊಡ್ಡಿ ಸಮೀಪದ ಹರಳಹಳ್ಳಿ ಗ್ರಾಮದಲ್ಲಿ ನಾಡಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರಗೊಂಡ ದುರ್ಘಟನೆ ಸಂಭವಿಸಿದೆ.

ಗ್ರಾಮದ ರೈತ ಮಹಿಳೆ ರಾಜಮ್ಮಣಿ ಅವರಿಗೆ ಸೇರಿದ ಹಸು ತೆಕ್ಕಲು ಜಮೀನಿನಲ್ಲಿ ಹುಲ್ಲು ಮೇಯುತ್ತಿದ್ದ ವೇಳೆ ಮಧ್ಯಾಹ್ನ ಸುಮಾರು 12.30ರ ಹೊತ್ತಿಗೆ ನಾಡಬಾಂಬ್ ಸ್ಫೋಟಗೊಂಡಿದೆ.

ಸ್ಫೋಟದ ಪರಿಣಾಮ ಹಸುವಿನ ಬಾಯಿ ಸಂಪೂರ್ಣ ಛಿದ್ರಗೊಂಡಿದ್ದು, ಹಸುವಿನ ಸ್ಥಿತಿ ಗಂಭೀರವಾಗಿದೆ. ಕಾಡುಪ್ರಾಣಿಗಳನ್ನು ಬೇಟೆಯಾಡಲು ಅಕ್ರಮವಾಗಿ ಇಡಲಾಗಿದ್ದ ನಾಡಬಾಂಬ್‌ಗೆ ಹಸು ಬಲಿಯಾಗಿರುವುದು ತಿಳಿದುಬಂದಿದೆ. ಹಸುವನ್ನೇ ಆಧಾರವಾಗಿ ಜೀವನ ಸಾಗಿಸುತ್ತಿದ್ದ ಬಡ ರೈತ ಮಹಿಳೆ ಹಸುವಿನ ಸ್ಥಿತಿ ಕಂಡು ಗೋಳಾಡುತ್ತಿರುವ ದೃಶ್ಯ ಮನಕಲುಕುವಂತಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, K. M. ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಟಿಎಂಗೆ ಹಾಕಬೇಕಿದ್ದ ಕೋಟ್ಯಂತರ ರೂ. ಹಣ ಲಪಟಾಯಿಸಿದ ಆರೋಪ: ಸಿಎಂಎಸ್ ಸಿಬ್ಬಂದಿ ವಿರುದ್ಧ ಗಂಭೀರ ಆರೋಪ!

0

ಹಾಸನ:- ನಗರದ ಎಟಿಎಂಗಳಿಗೆ ಹಾಕಬೇಕಿದ್ದ ಕೋಟಿ ಕೋಟಿ ರೂ. ಹಣವನ್ನು ದುರುಪಯೋಗಪಡಿಸಿಕೊಂಡು ಕಂಪನಿಗೆ ಸುಳ್ಳು ಲೆಕ್ಕ ನೀಡಿರುವ ಗಂಭೀರ ಆರೋಪ ಕ್ಯಾಶ್ ಮ್ಯಾನೆಜ್‍ಮೆಂಟ್ ಸರ್ವಿಸಸ್ ಕಂಪನಿ ವಿರುದ್ಧ ಕೇಳಿಬಂದಿದೆ.

ಹಾಸನ ನಗರದ ಗೌರಿಕೊಪ್ಪಲಿಯಲ್ಲಿರುವ ಸಿಎಂಎಸ್ ಕಚೇರಿಯಿಂದ ಪ್ರತಿದಿನ ಕೆನರಾ ಬ್ಯಾಂಕ್, ಎಸ್‌ಬಿಐ, ಬ್ಯಾಂಕ್ ಆಫ್ ಬರೋಡ, ಐಡಿಬಿಐ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್ ಸೇರಿ ಒಟ್ಟು 15 ಬ್ಯಾಂಕ್‌ಗಳ 28 ಎಟಿಎಂಗಳಿಗೆ ಹಣ ತುಂಬಲಾಗುತ್ತಿತ್ತು. ಫೆಬ್ರವರಿ 6ರಂದು ನಡೆದ ಆಡಿಟ್‌ನಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿರಲಿಲ್ಲ. ಆದರೆ ಫೆ.18ರಂದು ನಡೆದ ಮರು ಆಡಿಟ್‌ನಲ್ಲಿ 2 ಕೋಟಿಗೂ ಅಧಿಕ ಹಣದ ಕೊರತೆ ಬೆಳಕಿಗೆ ಬಂದಿದ್ದು, ಕಂಪನಿಯ ಸಿಬ್ಬಂದಿ ನಂದೀಶ್ ಹಾಗೂ ಮಧು ಹಣ ಹಾಕದೇ ಹಾಕಿರುವುದಾಗಿ ಎಂಟ್ರಿ ಮಾಡಿ ನಗದು ಲಪಟಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆ ಬೆಂಗಳೂರಿನಿಂದ ಸಿಎಂಎಸ್ ಮೇಲಾಧಿಕಾರಿಗಳು ಹಾಸನಕ್ಕೆ ಆಗಮಿಸಿ ವಿಶೇಷ ಆಡಿಟ್ ನಡೆಸುತ್ತಿದ್ದು, ಪರಿಶೀಲನೆ ಬಳಿಕ ಸಂಪೂರ್ಣ ಮೊತ್ತ ಸ್ಪಷ್ಟವಾಗಲಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲು ತೀರ್ಮಾನಿಸಲಾಗಿದೆ.

Job Vacancy| ನಿಮ್ಮದು 10th ಪಾಸಾಗಿದ್ಯಾ!? ಹಾಗಿದ್ರೆ ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸಿ!

0

ಗದಗ:- ಜಿಲ್ಲೆಯ ಲಕ್ಷ್ಮೀಶ್ವರ ತಾಲೂಕು ಕಾನೂನು ಸೇವಾ ಸಮಿತಿಯು ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಕರ್ನಾಟಕ ಸರ್ಕಾರದ ವ್ಯಾಪ್ತಿಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಅರ್ಜಿಗಳನ್ನು ಆಫ್‌ಲೈನ್ ಮೂಲಕ ಫೆಬ್ರವರಿ 21ರೊಳಗಾಗಿ ಸಲ್ಲಿಸಬೇಕು. ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು 10ನೇ ತರಗತಿ ಪೂರ್ಣಗೊಳಿಸಿರಬೇಕು ಹಾಗೂ ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು.

ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನಿಗದಿತ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ನೋಂದಾಯಿತ ಅಂಚೆ ಅಥವಾ ಸ್ಪೀಡ್ ಪೋಸ್ಟ್ ಮೂಲಕ ನಿಗದಿತ ವಿಳಾಸಕ್ಕೆ ಕೊನೆಯ ದಿನಾಂಕದೊಳಗಾಗಿ ಕಳುಹಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಮೊದಲು ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.

ಅಧಿಕೃತ ಲಿಂಕ್ ಅಥವಾ ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆದು, ನಿಗದಿತ ಸರಿಯಾದ ಮಾಹಿತಿ ತುಂಬಿರಿ.

ಅಧಿಸೂಚನೆಯಲ್ಲಿ ಸೂಚಿಸಿದ್ದರೆ ಮಾತ್ರ ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಿ.

ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ನೋಂದಾಯಿತ ಅಂಚೆ (Registered Post) ಅಥವಾ ಸ್ಪೀಡ್ ಪೋಸ್ಟ್ ಮೂಲಕ ಮೇಲಿನ ವಿಳಾಸಕ್ಕೆ ಫೆಬ್ರವರಿ 21 ರ ಒಳಗಾಗಿ ತಲುಪಿಸಿ.

ಅರ್ಜಿ ಸಲ್ಲಿಸುವ ವಿಳಾಸ:
ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ತಲುಪಿಸಬೇಕು:

ಸದಸ್ಯ ಕಾರ್ಯದರ್ಶಿಗಳು,

ತಾಲೂಕು ಕಾನೂನು ಸೇವೆಗಳ ಸಮಿತಿ,

ನ್ಯಾಯಾಲಯ ಸಂಕೀರ್ಣ, ಲಕ್ಷ್ಮೇಶ್ವರ,

ಗದಗ ಜಿಲ್ಲೆ – 582116.

ಬೆಂಗಳೂರು| ಏಕಾಏಕಿ ಹೊತ್ತಿ ಉರಿದ ಪೇಪರ್ ಗೋದಾಮು!

0

ಬೆಂಗಳೂರು:- ಪೇಪರ್ ಗೋದಾಮಿಗೆ ಬೆಂಕಿ ತಗುಲಿ ಭಾರೀ ಅನಾಹುತ ಸಂಭವಿಸಿರುವ ಘಟನೆ ಗೊಲ್ಲರಹಟ್ಟಿ ಸಮೀಪದಲ್ಲಿ ಜರುಗಿದೆ.

ಏಕಾಏಕಿ ಗೋದಾಮಿಗೆ ಬೆಂಕಿ ತಗುಲಿದ ಪರಿಣಾಮ, ಪೇಪರ್, ರಟ್ಟು ಸುಟ್ಟು ಭಸ್ಮವಾಗಿದೆ. ಬೆಂಕಿ ಹೊತ್ತಿಕೊಳ್ಳುತಿದ್ದಂತೆ ಕಾರ್ಮಿಕರು ಹೊರಗಡೆ ಓಡಿ ಬಂದಿದ್ದಾರೆ.

ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರಿನಲ್ಲಿ ಆಘಾತಕಾರಿ ಘಟನೆ; ಚೆಂಡಿನ ಆಕಾರದ ವಸ್ತು ಸ್ಫೋಟ, ಸ್ವಲ್ಪದರಲ್ಲೇ ಬಾಲಕ ಬಚಾವ್!

0

ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ‌ ಬಂದಾರು ಗ್ರಾಮದಲ್ಲಿ ಚೆಂಡಿನ ಆಕಾರದ ವಸ್ತು ಸ್ಫೋಟಗೊಂಡು ಓರ್ವ ಬಾಲಕನಿಗೆ ಗಾಯವಾಗಿರುವಂತಹ ಘಟನೆ ಜರುಗಿದೆ.

ಅಭೀಶ್ ಗಾಯಗೊಂಡ ಬಾಲಕನಾಗಿದ್ದು, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಸದ್ಯ ಬಾಲಕ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮನೆ ಅಂಗಳದಲ್ಲಿ ಬಾಲಕ ಅಭೀಶ್ ಆಟ ಆಡುತ್ತಿದ್ದ. ಈ ವೇಳೆ ಚೆಂಡಿನಾಕಾರದ ವಸ್ತು ಪತ್ತೆಯಾಗಿದೆ. ಬಾಲ್ ರೀತಿ ಇದ್ದ ಬಾಂಬ್​​ನಿಂದ ಮಕ್ಕಳು ಕ್ರಿಕೆಟ್ ಆಡಿದ್ದಾರೆ. ಓರ್ವ ಬಾಲಕ ಪತ್ತೆಯಾದ ಚೆಂಡಿನಾಕಾರದ ವಸ್ತುವನ್ನು ಬೌಲ್ ಮಾಡಿದ್ದು, ಅಭೀಶ್ ಬ್ಯಾಟ್​ನಿಂದ ಹೊಡೆದಾಗ ಬ್ಲಾಸ್ಟ್ ಆಗಿದೆ. ಈ ವೇಳೆ ಅಭೀಶ್​ಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾಡು ಹಂದಿ ಬೇಟೆ ಆಡಲು ಇಟ್ಟಿದ್ದ ಬಾಂಬ್​ ಎಂದು ಶಂಕಿಸಲಾಗಿದೆ.

ಘಟನೆ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 9(B), 1(b) ಸ್ಫೋಟಕಗಳ ಕಾಯ್ದೆ, 125 A BNS ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ.

ಮಂಗಳೂರು| ಐರ್ಲೆಂಡ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಕನ್ನಡಿಗ!

0

ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆಯ ಯುವಕನೋರ್ವ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಐರ್ಲೆಂಡ್ ನಲ್ಲಿ ಜರುಗಿದೆ.

31 ವರ್ಷದ ಸಾಂಜೋ ಸುನೀಲ್ ಮೃತ ಯುವಕ. ಸದ್ಯ ಸುನೀಲ್ ಅನುಮಾನಾಸ್ಪದ ಸಾವಿನ ಬಗ್ಗೆ ಐರ್ಲೆಂಡ್ ಪೊಲೀಸರು ತನಿಖೆ ನಡೆಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರುಪಾಡಿ ವಿಮಲಗಿರಿ ಸಾಂಜೋ ಸುನೀಲ್​​ ಐರ್ಲೆಂಡ್​ನ ಡಬ್ಲಿನ್​ನ ಫಿಂಗ್ಲಾಸ್​ನ ಚಾರ್ಲ್ಸ್​ಟೌನ್​ನಲ್ಲಿರುವ ಮನೆಯೊಂದರಲ್ಲಿ ವಾಸವಾಗಿದ್ದರು. ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸುನೀಲ್ ಮೃತದೇಹ ಪತ್ತೆ ಆಗಿದೆ. ಪತ್ನಿ ಕೆಲಸಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಆತ್ಮಹತ್ಯೆ ಅಥವಾ ಬೇರೆ ಏನಾದರೂ ಆಗಿದೆಯಾ ಎಂದು ಸದ್ಯ ಐರ್ಲೆಂಡ್ ಪೊಲೀಸರು ತನಿಖೆ ನಡೆಸಿದ್ದಾರೆ.

ವರ್ಷದ ಹಿಂದೆ ಕಡಬ ಮೂಲದ ಯುವತಿಯನ್ನ ಸಾಂಜೋ ಸುನೀಲ್ ವಿವಾಹವಾಗಿದ್ದರು. ಮೊದಲು ಇಸ್ರೇಲ್​ನಲ್ಲಿ ಕೆಲಸ ಮಾಡಿಕೊಂಡಿದ್ದ ಸುನೀಲ್, ಪತ್ನಿ ಐರ್ಲೆಂಡ್​ನಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದ ಹಿನ್ನೆಲೆ ಕೆಲವು ತಿಂಗಳ ಹಿಂದಷ್ಟೇ ಐರ್ಲೆಂಡ್​ಗೆ ತೆರಳಿ ವಾಸವಾಗಿದ್ದರು. ಸದ್ಯ ಸುನೀಲ್ ಅನುಮಾನಾಸ್ಪದ ಸಾವು ಸಾಕಷ್ಟು ಅನುಮಾನ ಹುಟ್ಟುಹಾಕಿದೆ.

error: Content is protected !!