Home Blog Page 157

ಸೋಲುವ ಭಯದಲ್ಲಿ ಹಿಮಂತ್ ಬಿಸ್ವಾಸ್ ಶರ್ಮಾ ಆಧಾರರಹಿತ ಹೇಳಿಕೆ: ಡಿ.ಕೆ. ಶಿವಕುಮಾರ್ ವಾಗ್ದಾಳಿ

0

ಗುವಾಹಟಿ: ಸೋಲುವ ಭಯದಲ್ಲಿ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾಸ್ ಶರ್ಮಾ ಅವರು ಕಾಂಗ್ರೆಸ್ ವಿರುದ್ಧ ಆಧಾರರಹಿತ ಹೇಳಿಕೆ ನೀಡುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು. ಗುವಾಹಟಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

ಹಿಮಂತ್ ಬಿಸ್ವಾಸ್ ಶರ್ಮಾ ಅವರು ಕಾಂಗ್ರೆಸ್ ವಿರುದ್ಧ ಪಾಕಿಸ್ತಾನ ವಿಚಾರವಾಗಿ ಆರೋಪ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಅವರು ದುರ್ಬಲರಾಗಿದ್ದಾರೆ. ಹೀಗಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ತಮ್ಮ ಕೆಲಸಗಳ ಬಗ್ಗೆ ಆತ್ಮವಿಶ್ವಾಸವಿಲ್ಲ, ತಮ್ಮ ಬದ್ಧತೆಯ ಬಗ್ಗೆಯೇ ವಿಶ್ವಾಸ ಇಟ್ಟುಕೊಂಡಿಲ್ಲ. ಈ ಬಾರಿ ಚುನಾವಣೆಯಲ್ಲಿ ಅವರ ಪಕ್ಷ ಸೋಲಲಿದೆ. ಹೀಗಾಗಿ ಹೀಗೆ ಮಾತನಾಡುತ್ತಿದ್ದಾರೆ” ಎಂದರು.

“ನಾನು ಮೊದಲು ಕಾಮಾಕ್ಯ ದೇವಾಲಯಕ್ಕೆ ಹೋಗಿ ಈ ರಾಜ್ಯದಲ್ಲಿ ಬದಲಾವಣೆ ತರುವಂತೆ ತಾಯಿ ಬಳಿ ಪ್ರಾರ್ಥಿಸಿದ್ದೇನೆ” ಎಂದು ತಿಳಿಸಿದರು.

ಡಿ.ಬಿ. ನಟೇಶ್ ಬಡ್ತಿ ವಿವಾದ: ನಿರಾಧಾರ ಆರೋಪ ಮಾಡಿದರೆ ಕ್ರಮ – ಸಿಎಸ್ ಶಾಲಿನಿ ರಾಜನೀಶ್ ಎಚ್ಚರಿಕೆ

0

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರಿಗೆ ಮುಂಬಡ್ತಿ ನೀಡಿರುವ ಕುರಿತು ಉದ್ಭವಿಸಿದ ವಿವಾದಕ್ಕೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಾಜನೀಶ್ ಸ್ಪಷ್ಟೀಕರಣ ನೀಡಿದ್ದಾರೆ.

ಸ್ನೇಹಮಯಿ ಕೃಷ್ಣ ಮಾಡಿರುವ ಆರೋಪಗಳು ನಿರಾಧಾರ, ಆಧಾರವಿಲ್ಲದ ಹಾಗೂ ಕ್ಷುಲ್ಲಕ ಸ್ವರೂಪದವು ಎಂದು ಅವರು ಪತ್ರದ ಮೂಲಕ ತಿಳಿಸಿದ್ದಾರೆ. ಸರ್ಕಾರದ ಉನ್ನತ ಅಧಿಕಾರಿಗಳ ವಿರುದ್ಧ ಪೂರಕ ದಾಖಲೆಗಳಿಲ್ಲದೆ ಆರೋಪ ಮಾಡುವುದು ಮಾನಹಾನಿಗೆ ಸಮಾನವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸ್ನೇಹಮಯಿ ಕೃಷ್ಣ ಅವರು ಡಿ.ಬಿ. ನಟೇಶ್ ಅವರಿಗೆ ಬಡ್ತಿ ನೀಡಲು ಕೋಟ್ಯಂತರ ರೂ. ಹಣ ಪಡೆದಿದ್ದಾರೆ ಎಂಬ ಆರೋಪ ಮಾಡಿದ್ದರು. ಆದರೆ ಈ ಸಂಬಂಧ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಮುಖ್ಯಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ. “ಆರೋಪಗಳಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಒದಗಿಸಿದರೆ, ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು,” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಸರ್ಕಾರದ ಉನ್ನತ ಹಂತದ ಅಧಿಕಾರಿಗಳ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ಇಂತಹ ಆಧಾರರಹಿತ ಆರೋಪಗಳಿಗೆ ವಿರುದ್ಧವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಸ್ ಎಚ್ಚರಿಕೆ ನೀಡಿದ್ದಾರೆ.

ಕೆಎಎಸ್ ಅಧಿಕಾರಿಯಾಗಿರುವ ಡಿ.ಬಿ. ನಟೇಶ್ ಅವರಿಗೆ ನಿಯಮಾನುಸಾರವಾಗಿಯೇ ಬಡ್ತಿ ನೀಡಲಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

ಸರ್ಕಾರಕ್ಕೆ ಡೆಡ್ ​​ಲೈನ್ ನೀಡಿ ಮುಷ್ಕರ ವಾಪಸ್ ಪಡೆದ ಸಾರಿಗೆ ನೌಕರರು!

0

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ‘ಬೆಂಗಳೂರು ಚಲೋ’ ಪ್ರತಿಭಟನೆ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸಾರಿಗೆ ನೌಕರರು ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ರಾಜ್ಯ ಸರ್ಕಾರ ವೇತನ ಪರಿಷ್ಕರಣೆ ಆದೇಶಕ್ಕೆ ಒಪ್ಪಿಕೊಂಡಿದ್ದು, ಹಲವು ತಿಂಗಳ ಹಿಂಬಾಕಿ ಪಾವತಿಗೆ ಮಾರ್ಚ್ 2ರವರೆಗೆ ಗಡುವು ನೀಡಲಾಗಿದೆ.

38 ತಿಂಗಳ ಹಿಂಬಾಕಿ ಪೈಕಿ 26 ತಿಂಗಳ ಬಾಕಿ ಹಣ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ವೇತನ ಪರಿಷ್ಕರಣೆಗೂ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೂ 38 ತಿಂಗಳ ಸಂಪೂರ್ಣ ಹಿಂಬಾಕಿ ಹಣ ನೀಡಬೇಕೆಂದು ನೌಕರರು ಆಗ್ರಹಿಸಿದ್ದಾರೆ.

ಪ್ರತಿಭಟನೆ ನಡೆಯುತ್ತಿದ್ದ ಸ್ವಾತಂತ್ರ್ಯ ಉದ್ಯಾನ (ಫ್ರೀಡಂಪಾರ್ಕ್) ಸ್ಥಳಕ್ಕೆ ಕೆಎಸ್‌ಆರ್‌ಟಿಸಿ ಎಂಡಿ ಭೇಟಿ ನೀಡಿ ನೌಕರರೊಂದಿಗೆ ಚರ್ಚೆ ನಡೆಸಿದರು. ಬಳಿಕ ಜಂಟಿ ಕ್ರಿಯಾ ಸಮಿತಿ ಮುಖಂಡರು ಸಭೆ ನಡೆಸಿ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯಲು ತೀರ್ಮಾನಿಸಿದರು.

ಜಂಟಿ ಕ್ರಿಯಾ ಸಮಿತಿ ಸಂಚಾಲಕ ಜಯದೇವರಾಜೇ ಅರಸ್ ಅವರು, “ಮಾರ್ಚ್ 2ರೊಳಗಾಗಿ ಸರ್ಕಾರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು” ಎಂದು ತಿಳಿಸಿದ್ದಾರೆ. ಆದರೆ ಈ ನಿರ್ಧಾರಕ್ಕೆ ಕೆಲ ಸಾರಿಗೆ ನೌಕರರು ಆಕ್ಷೇಪ ವ್ಯಕ್ತಪಡಿಸಿದ್ದು, ತಕ್ಷಣವೇ ಹೋರಾಟ ಮುಂದುವರಿಸಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಮುಷ್ಕರ ಹಿಂಪಡೆಯಲ್ಪಟ್ಟಿರುವುದರಿಂದ ನಾಳೆಯಿಂದ ರಾಜ್ಯಾದ್ಯಂತ ಬಸ್‌ಗಳು ಎಂದಿನಂತೆ ಸಂಚರಿಸಲಿವೆ.

ನಿರೀಕ್ಷಣಾ ಜಾಮೀನು ಹಿಡಿದು ಠಾಣೆಗೆ ಬಂದವನ ಮೇಲೆ ಪಿಎಸ್‌ಐ ಹಲ್ಲೆ ಆರೋಪ: ಎಫ್‌ಐಆರ್ ದಾಖಲು

0

ಬೆಂಗಳೂರು: ನಿರೀಕ್ಷಣಾ ಜಾಮೀನು ಪಡೆದು ಠಾಣೆಗೆ ಹಾಜರಾದ ವ್ಯಕ್ತಿಯ ಮೇಲೆ ಪಿಎಸ್‌ಐ ಹಲ್ಲೆ ನಡೆಸಿರುವ ಘಟನೆ ಮಾಗಡಿ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಾಗಡಿ ರೋಡ್ ಠಾಣೆಯ ಪಿಎಸ್‌ಐ ಕೌಶಿಕ್ ವಿರುದ್ಧವೇ ಅದೇ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನಿರೀಕ್ಷಣಾ ಜಾಮೀನು ಪ್ರತಿಯನ್ನು ಹಿಡಿದು ಠಾಣೆಗೆ ಬಂದಿದ್ದ ಅವಿನಾಶ್ ಎಂಬ ವ್ಯಕ್ತಿಯನ್ನು ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆ ನಡೆಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಅವಿನಾಶ್ ಅವರು ಕೋರ್ಟ್ ಮೂಲಕ ಖಾಸಗಿ ದೂರು ಸಲ್ಲಿಸಿದ್ದು, ನ್ಯಾಯಾಲಯದ ಆದೇಶದಂತೆ ಪಿಎಸ್‌ಐ ಕೌಶಿಕ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸಿವಿಲ್ ಕೇಸಿನಲ್ಲಿ ಜಾಮೀನು ಪಡೆದು ಠಾಣೆಗೆ ಬಂದಿದ್ದಾಗ “ಬೇಲ್ ಜೊತೆ ಬಂದಿದಿಯಾ?” ಎಂದು ನಿಂದಿಸಿ, ಕೆನ್ನೆಗೆ ಹೊಡೆದು ಕಿವಿಗೆ ಗಾಯ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಎಂಎಲ್‌ಸಿ ವರದಿಯಲ್ಲೂ ಗಾಯದ ವಿವರ ದಾಖಲಾಗಿದೆ ಎನ್ನಲಾಗಿದೆ.

ಇದಲ್ಲದೆ, “ಈ ಕೇಸಿನಲ್ಲಿ ಬೇಲ್ ಪಡೆದುಕೊಂಡರೆ ನಿನ್ನ ಮೇಲೆ ಮತ್ತೊಂದು ಕೇಸ್ ದಾಖಲಿಸುತ್ತೇನೆ” ಎಂದು ಬೆದರಿಕೆ ಹಾಕಲಾಗಿದೆ ಎಂಬುದೂ ದೂರಿನಲ್ಲಿ ಹೇಳಲಾಗಿದೆ.

ಈ ಪ್ರಕರಣಕ್ಕೂ ಮೊದಲು ಅವಿನಾಶ್ ಅವರ ತಾಯಿ ಪ್ರಮೀಳಾ ವಿರುದ್ಧ ಚೀಟಿ ಹಣ ವಂಚನೆ ಸಂಬಂಧ ಲಕ್ಷ್ಮೀ ಎಂಬುವವರು ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ನೋಟಿಸ್ ನೀಡದೇ ಅವಿನಾಶ್ ಅವರ ತಾಯಿ, ಸಹೋದರಿ ಹಾಗೂ ತಂದೆಯ ಮೇಲೂ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಜಾಮೀನು ಪಡೆದ ನಂತರವೂ ಅವಿನಾಶ್ ಅವರನ್ನು ಅವರ ತಾಯಿ ಮತ್ತು ಸಹೋದರಿಯ ಎದುರಲ್ಲೇ ನಿಂದಿಸಿ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆ ಅವಿನಾಶ್ ಅವರು ಪಿಎಸ್‌ಐ ಕೌಶಿಕ್, ಲಕ್ಷ್ಮೀ ಹಾಗೂ ನರಸಿಂಹ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

‘ಉಚಿತ ಯೋಜನೆಗಳು’ ದೇಶದ ದೀರ್ಘಕಾಲೀನ ಅಭಿವೃದ್ಧಿಗೆ ತೊಡಕಾಗುತ್ತಿದೆ: ಸುಪ್ರೀಂ ಟೀಕೆ – ಕೇಂದ್ರಕ್ಕೆ ನೋಟಿಸ್

0

ನವದೆಹಲಿ: ಚುನಾವಣೆಗೂ ಮುನ್ನ ರಾಜ್ಯ ಸರ್ಕಾರಗಳು ‘ಉಚಿತ ಯೋಜನೆಗಳು’ (ಫ್ರೀಬೀಸ್) ಘೋಷಿಸುವ ಪ್ರವೃತ್ತಿಯನ್ನು ಸುಪ್ರೀಂಕೋರ್ಟ್ ತೀವ್ರವಾಗಿ ಟೀಕಿಸಿದೆ. ಇದು ದೇಶದ ದೀರ್ಘಕಾಲೀನ ಅಭಿವೃದ್ಧಿಗೆ ತೊಡಕಾಗುತ್ತಿದೆ ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ತಮಿಳುನಾಡು ವಿದ್ಯುತ್ ವಿತರಣಾ ಕಂಪನಿಯ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ರಾಜ್ಯದ ಹಣವನ್ನು ನಿರಂತರವಾಗಿ ವಿತರಿಸುತ್ತಾ ಹೋದರೆ ದೇಶದ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಎಂದು ಪೀಠವು ಹೇಳಿದೆ. “ಚುನಾವಣೆಗೂ ಮುನ್ನ ಯಾವಾಗಲೂ ಇಂತಹ ಯೋಜನೆಗಳು ಏಕೆ ಘೋಷಣೆಯಾಗುತ್ತವೆ? ಇದು ಎಷ್ಟು ಕಾಲ ಮುಂದುವರಿಯುತ್ತದೆ?” ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಬಡವರು ಹಾಗೂ ಅಗತ್ಯವಿರುವವರಿಗೆ ಸಹಾಯ ಮಾಡುವುದು ಸರಿಯೇ ಸರಿ. ಆದರೆ ಎಲ್ಲರಿಗೂ ಉಚಿತವಾಗಿ ನೀಡುವುದು ಯಾವ ನ್ಯಾಯ? ಇದು ರಾಜಕೀಯ ಒಲೈಕೆಯ ನೀತಿಯಲ್ಲವೇ? ಎಂದು ನ್ಯಾಯಾಲಯ ಪ್ರಶ್ನಿಸಿದೆ. ರಾಜ್ಯಗಳು ಆದಾಯದಲ್ಲಿ ಕೊರತೆ ಇದ್ದರೂ ಇಂತಹ ವಿತರಣೆ ಮಾಡುತ್ತಿರುವುದನ್ನು ಉಲ್ಲೇಖಿಸಿದ ಪೀಠ, “ಹಣ ಎಲ್ಲಿಂದ ಬರುತ್ತದೆ? ರಸ್ತೆ, ಆಸ್ಪತ್ರೆ, ಶಾಲೆಗಳ ಅಭಿವೃದ್ಧಿಗೆ ಖರ್ಚು ಮಾಡಬೇಕಲ್ಲವೇ?” ಎಂದು ಪ್ರಶ್ನಿಸಿದೆ. ನಗದು ವರ್ಗಾವಣೆ ನೀತಿಗಳ ಮೇಲೂ ಟೀಕೆ ವ್ಯಕ್ತಪಡಿಸಿದೆ.

ಬೆಳಗ್ಗಿನಿಂದ ಸಂಜೆವರೆಗೆ ಉಚಿತ ಆಹಾರ, ಗ್ಯಾಸ್, ವಿದ್ಯುತ್, ನಗದು ನೀಡಿದರೆ ಜನರು ಏಕೆ ಕೆಲಸ ಮಾಡಬೇಕು? ಗೌರವದಿಂದ ಬದುಕಲು ಕೆಲಸ ಮಾಡಬೇಕು. ಇದು ರಾಷ್ಟ್ರ ನಿರ್ಮಾಣವೇ?” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಜನರು ಸ್ವಾವಲಂಬಿಗಳಾಗುವಂತೆ ಮಾಡಬೇಕು.

ಸರ್ಕಾರಗಳು ಮಾಡುತ್ತಿರುವುದು ಅಪ್ಪೀಸ್ಮೆಂಟ್ ಪಾಲಿಸಿ ಎಂದು ಕರೆದ ನ್ಯಾಯಾಲಯ, ಉಚಿತ ವಸ್ತುಗಳ ಸಂಸ್ಕೃತಿಯನ್ನು ಪುನರ್ ಪರಿಶೀಲಿಸಬೇಕಾಗಿದೆ ಎಂದು ಸೂಚಿಸಿದೆ. ತಮಿಳುನಾಡು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಮುಂದುವರಿಸಿದೆ.

ಗದಗದಲ್ಲಿ ಮತ್ತೆ ದೇವರ ಮೂರ್ತಿಗಳ ಧ್ವಂಸ!

0

ಗದಗ: ಗದಗ ಜಿಲ್ಲೆಯಲ್ಲಿ ಮತ್ತೇ ಹಿಂದೂ ದೇವರ ಮೂರ್ತಿಗಳ ಧ್ವಂಸ ಮುಂದುವರೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮತ್ತು ಆಕ್ರೋಶ ಮೂಡಿದೆ. ಶಿಂಗಟಾಲೂರು ಗ್ರಾಮದ ಘಟನೆ ಮಾಸುವ ಮುನ್ನವೇ ಇನ್ನೆರಡು ಕಡೆ ಇಂತಹ ಘಟನೆಗಳು ನಡೆದಿವೆ.

ಮುಂಡರಗಿ ತಾಲೂಕಿನ ಮಲ್ಲಿಕಾರ್ಜುನಪುರ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಆದರಳ್ಳಿ ಸಮೀಪದ ದೇವಸ್ಥಾನಗಳಲ್ಲಿ ಈ ಘಟನೆ ನಡೆದಿದೆ. ಮಲ್ಲಿಕಾರ್ಜುನಪುರ ಗ್ರಾಮದ ಬಸ್ ನಿಲ್ದಾಣದ ಹತ್ತಿರದ ಗಾಳಿಗುಂಡಿ ಬಸವೇಶ್ವರ ದೇವಸ್ಥಾನದಲ್ಲಿ ಈಶ್ವರ ಲಿಂಗವನ್ನು ಧ್ವಂಸಗೊಳಿಸಲಾಗಿದೆ. ಅದೇ ರೀತಿ ಆದರಳ್ಳಿ ಸಮೀಪದ ದಂಡೇರಿ ಮರಿಯಮ್ಮ ದೇವಸ್ಥಾನದಲ್ಲಿ ದೇವಿಯ ಮೂರ್ತಿಯ ಮುಖಕ್ಕೆ ಮಸಿ ಬಳಿದು ಹಾನಿಗೊಳಿಸಲಾಗಿದೆ.

ಇದಕ್ಕೂ ಮೊದಲು ಶಿವರಾತ್ರಿ ದಿನದಂದು ಶಿಂಗಟಾಲೂರು ಗ್ರಾಮದಲ್ಲಿ ಶಿವಲಿಂಗ, ನಂದಿ ವಿಗ್ರಹ ಹಾಗೂ ಹೊನ್ನತ್ತೆಮ್ಮ ಮೂರ್ತಿಗಳನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದರು. ಆ ಘಟನೆಗೆ ಸಂಬಂಧಿಸಿದ ಆರೋಪಿಗಳ ಪತ್ತೆ ಈವರೆಗೂ ಆಗಿಲ್ಲ. ಪುರಾತನ ಕಾಲದ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಜನವಸತಿ ಕಡಿಮೆ ಇರುವ ಪ್ರದೇಶಗಳಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.

ದುಷ್ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಘಟನೆಗಳು ಮುಂಡರಗಿ ಹಾಗೂ ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ತಿರುಮಲದಲ್ಲಿ QR ಆಧಾರಿತ ಸ್ಮಾರ್ಟ್ ಪಾದರಕ್ಷೆ ವ್ಯವಸ್ಥೆ: 8,45,816 ಭಕ್ತರಿಗೆ ಡಿಜಿಟಲ್ ಸೌಲಭ್ಯ

0

ತಿರುಮಲ: ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುವ ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ತಿರುಮಲ ತಿರುಪತಿ ದೇವಸ್ಥಾನಂ ಹಂತ ಹಂತವಾಗಿ ನವೀನ ಸೌಲಭ್ಯಗಳನ್ನು ಪರಿಚಯಿಸುತ್ತಿದೆ. ಈ ಕ್ರಮದಲ್ಲಿ ಭಕ್ತರು ಸಾಮಾನ್ಯವಾಗಿ ಎದುರಿಸುತ್ತಿದ್ದ ಪಾದರಕ್ಷೆ ಸಂಗ್ರಹ ಸಮಸ್ಯೆಗೆ ಈಗ ತಂತ್ರಜ್ಞಾನ ಆಧಾರಿತ ಶಾಶ್ವತ ಪರಿಹಾರ ಒದಗಿಸಲಾಗಿದೆ.

ತಿರುಮಲಕ್ಕೆ ಬರುವ ಭಕ್ತರು ತಮ್ಮ ಪಾದರಕ್ಷೆಗಳನ್ನು ಸುರಕ್ಷಿತವಾಗಿ ಎಲ್ಲಿ ಇಡಬೇಕು ಎಂಬ ಗೊಂದಲಕ್ಕೆ ಒಳಗಾಗುತ್ತಿದ್ದರು. ಕೆಲವರು ರಸ್ತೆಯ ಬದಿ ಅಥವಾ ಯಾದೃಚ್ಛಿಕ ಸ್ಥಳಗಳಲ್ಲಿ ಬಿಡುವುದರಿಂದ ಅವು ಕಾಣೆಯಾಗುವುದು ಹಾಗೂ ಅಸ್ವಚ್ಛತೆ ಉಂಟಾಗುವುದು ಸಾಮಾನ್ಯವಾಗಿತ್ತು. ವಿಶೇಷ ಪಾದರಕ್ಷೆ ಕೌಂಟರ್‌ಗಳು ಇದ್ದರೂ, ಜನಸಂದಣಿ ಹೆಚ್ಚಿರುವುದರಿಂದ ಠೇವಣಿ ಇಡುವುದು ಮತ್ತು ಮರಳಿ ಪಡೆಯುವುದು ಸಮಯ ತೆಗೆದುಕೊಳ್ಳುತ್ತಿತ್ತು.

ಈ ಹಿನ್ನೆಲೆ, TTD QR ಆಧಾರಿತ ಸ್ಮಾರ್ಟ್ ಪಾದರಕ್ಷೆ ಟ್ರ್ಯಾಕಿಂಗ್ ಮತ್ತು ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಭಕ್ತರು ಕೌಂಟರ್‌ನಲ್ಲಿ ಪಾದರಕ್ಷೆಗಳನ್ನು ನೀಡಿದಾಗ QR ಕೋಡ್ ಇರುವ ರಸೀದಿ ನೀಡಲಾಗುತ್ತದೆ. ನಂತರ ಅದನ್ನು ಸ್ಕ್ಯಾನ್ ಮಾಡುವ ಮೂಲಕ ವೇಗವಾಗಿ ಹಾಗೂ ಸುಲಭವಾಗಿ ಪಾದರಕ್ಷೆಗಳನ್ನು ಮರಳಿ ಪಡೆಯಬಹುದು. ಇದರಿಂದ ಸಮಯ ಉಳಿತಾಯವಾಗುವುದರ ಜೊತೆಗೆ, ಸೌಲಭ್ಯವೂ ಹೆಚ್ಚಾಗಿದೆ.

ಈ ವ್ಯವಸ್ಥೆಯನ್ನು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಪರಿಚಯಿಸಲಾಗಿದ್ದು, ಪ್ರಸ್ತುತ ಕೆಲವು ಪ್ರಮುಖ ಸ್ಥಳಗಳಲ್ಲಿ ಮಾತ್ರ ಲಭ್ಯವಿದೆ. ಆದರೆ ಭಕ್ತರ ಓಡಾಟ ಹೆಚ್ಚಿರುವ ಪ್ರದೇಶಗಳಲ್ಲಿ ಶೀಘ್ರದಲ್ಲೇ ಇನ್ನಷ್ಟು ಸ್ಮಾರ್ಟ್ ಕೌಂಟರ್‌ಗಳನ್ನು ಸ್ಥಾಪಿಸಲು TTD ಸಿದ್ಧತೆ ನಡೆಸಿದೆ. ಕಲ್ಯಾಣಕಟ್ಟೆ, ATC ವೃತ್ತ ಮತ್ತು ಬೇಡಿ ಆಂಜನೇಯಸ್ವಾಮಿ ದೇವಾಲಯದ ಬಳಿಯೂ ಈ ವ್ಯವಸ್ಥೆ ಆರಂಭಿಸುವ ಯೋಜನೆ ಇದೆ. ಈ ಯೋಜನೆ ಕೋರಮಾಂಡರ್ ಇಂಟರ್ನ್ಯಾಷನಲ್ ಲಿಮಿಟೆಡ್ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ.

TTD ನೀಡಿದ ಮಾಹಿತಿಯ ಪ್ರಕಾರ, ಈಗಾಗಲೇ 8,45,816 ಭಕ್ತರು ಈ ಡಿಜಿಟಲ್ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ ತಿರುಮಲದಲ್ಲಿ ಸ್ವಚ್ಛತೆ ಹೆಚ್ಚಿದ್ದು, ಪಾದರಕ್ಷೆ ಕಾಣೆಯಾಗುವ ಘಟನೆಗಳು ಗಮನಾರ್ಹವಾಗಿ ಕಡಿಮೆಯಾಗಿವೆ. ತಂತ್ರಜ್ಞಾನದ ಅರಿವು ಕಡಿಮೆ ಇರುವ ಭಕ್ತರಿಗೆ ಜಾಗೃತಿ ಮೂಡಿಸಲು TTD ವಿಶೇಷ ಪ್ರಚಾರ ಕಾರ್ಯಗಳನ್ನು ಕೈಗೊಂಡಿದೆ.

ಚಿಕ್ಕಮಗಳೂರು ಸೆಂಟ್ರಲ್ ಬ್ಯಾಂಕ್‌ಲ್ಲಿ ಮಹಾ ಮೋಸ – ಗ್ರಾಹಕರ ಅಸಲಿ ಚಿನ್ನವೇ ಕಳ್ಳತನ

0

ಚಿಕ್ಕಮಗಳೂರು: ವಿಶ್ವಾಸದ ಪ್ರತೀಕವೆಂದು ಪರಿಗಣಿಸಲ್ಪಡುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲೇ ಗ್ರಾಹಕರಿಗೆ ಭಾರೀ ಮೋಸ ನಡೆದಿರುವ ಆರೋಪ ಹೊರಬಂದಿದೆ. ಗೋಲ್ಡ್ ಲೋನ್ ಹೆಸರಿನಲ್ಲಿ ಗ್ರಾಹಕರ ಅಸಲಿ ಚಿನ್ನಾಭರಣವನ್ನು ಮಾರಾಟ ಮಾಡಿ, ನಕಲಿ ಚಿನ್ನವನ್ನು ಬದಲಾಯಿಸಿದ್ದಾರೆಯೆಂಬ ಗಂಭೀರ ಆರೋಪ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕೇಳಿಬಂದಿದೆ.

ಚಿಕ್ಕಮಗಳೂರು ನಗರದಲ್ಲಿರುವ ಶಾಖೆಯಲ್ಲಿ 2020 ರಿಂದ 2025ರವರೆಗೆ ಕ್ರಮಬದ್ಧವಾಗಿ ಈ ವಂಚನೆ ನಡೆದಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಸಂದೀಪ್, ನಾರಾಯಣಸ್ವಾಮಿ ಸೇರಿದಂತೆ 5 ಮಂದಿ ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಹಕರಿಗೆ ತಿಳಿಯದಂತೆ ಹೆಚ್ಚುವರಿ ಸಾಲ ಮಂಜೂರು ಮಾಡಿ ಹಣವನ್ನು ಗುಳುಂ ಮಾಡಲಾಗಿದೆ. 80 ಗ್ರಾಂ ರಿಂದ 140 ಗ್ರಾಂ ವರೆಗೆ ಚಿನ್ನ ಜಾಮೀನು ಇಟ್ಟು ಸಾಲ ಪಡೆದಿದ್ದವರು ಈಗ ತಮ್ಮ ಚಿನ್ನವನ್ನು ಮರಳಿ ಪಡೆಯಲು ಪರದಾಡುತ್ತಿದ್ದಾರೆ. ಸಾಲ ಸಂಪೂರ್ಣ ತೀರಿಸಿದ್ದರೂ ಚಿನ್ನ ವಾಪಸ್ ಸಿಗದೆ ಕಣ್ಣೀರಿಡುತ್ತಿದ್ದಾರೆ.

ಇಷ್ಟೇ ಅಲ್ಲದೆ ಕೆಲ ಗ್ರಾಹಕರ ಫಿಕ್ಸ್ಡ್ ಡಿಪಾಸಿಟ್ ಹಣವನ್ನೂ ಸಹ ಅಕ್ರಮವಾಗಿ ಬಳಕೆ ಮಾಡಿಕೊಂಡಿರುವ ಆರೋಪಗಳು ಕೇಳಿಬಂದಿವೆ. ಸ್ಥಳೀಯ ಶಾಖೆಯಲ್ಲಿ ನ್ಯಾಯ ಸಿಗದ ಕಾರಣ, ಸಂತ್ರಸ್ತರು ಬ್ಯಾಂಕಿನ ಬೆಂಗಳೂರು ಕೇಂದ್ರ ಕಚೇರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ಪ್ರಕರಣ ಇದೀಗ ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸಂಪೂರ್ಣ ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

D K Shivakumar: ಕಾಮಾಕ್ಯ ದೇವಾಲಯಕ್ಕೆ ಡಿಕೆ ಶಿವಕುಮಾರ್, ಪ್ರಿಯಾಂಕಾ ಗಾಂಧಿ ಭೇಟಿ

0

ಗುವಾಹಟಿ: ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ಇರುವ ಕಾಮಾಕ್ಯ ದೇವಾಲಯಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ ಅವರು ವಿಶೇಷ ಪೂಜೆ ನೆರವೇರಿಸಿದರು.

ಈ ಕುರಿತು ಡಿಕೆ ಶಿವಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, “ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರೊಂದಿಗಿಂದು ಅಸ್ಸಾಂನ ಗುವಾಹಟಿಯಲ್ಲಿರುವ ಪವಿತ್ರ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿದೆವು. ತಾಯಿ ಕಾಮಾಕ್ಯ ಆಶೀರ್ವಾದವು ಎಲ್ಲರಿಗೂ ಶಕ್ತಿ ಮತ್ತು ಸಮೃದ್ಧಿ ನೀಡಲಿ” ಎಂದು ಪ್ರಾರ್ಥಿಸಿದ್ದಾರೆ.

ಚಿತ್ರದುರ್ಗದಲ್ಲಿ ಚಲಿಸುತ್ತಿದ್ದ ಟ್ಯಾಂಕರ್‌ ಲಾರಿಗೆ ಬೆಂಕಿ! ಚಾಲಕ ಜಸ್ಟ್‌ ಮಿಸ್

0

ಚಿತ್ರದುರ್ಗ: ನೀರು ಸಾಗಿಸುತ್ತಿದ್ದ ಟ್ಯಾಂಕರ್ ಲಾರಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಬಳೆಕಟ್ಟೆ ಗೇಟ್ ಸಮೀಪದ ಕಾತ್ರಾಳು ಕೆರೆಯ ಪ್ರದೇಶದಲ್ಲಿ  ನಡೆದಿದೆ.

ರಸ್ತೆ ಬದಿಯ ಗಿಡಗಳಿಗೆ ನೀರು ಹಾಯಿಸುತ್ತಿದ್ದ ವೇಳೆ ಟ್ಯಾಂಕರ್‌ಗೆ ಏಕಾಏಕಿ ಬೆಂಕಿ ಹತ್ತಿಕೊಂಡಿದೆ. ಇಂಜಿನ್ ಭಾಗದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಚಾಲಕ ತಕ್ಷಣವೇ ಲಾರಿಯಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆಯ ಪರಿಣಾಮ ಕೆಲಕಾಲ ರಾಷ್ಟ್ರೀಯ ಹೆದ್ದಾರಿ–4ರಲ್ಲಿ ವಾಹನ ಸಂಚಾರ ವ್ಯತ್ಯಯಗೊಂಡು ಟ್ರಾಫಿಕ್ ಜಾಮ್ ಉಂಟಾಯಿತು.

ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಬಳಿಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಈ ಘಟನೆ ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

error: Content is protected !!