Home Blog Page 2058

ರಾಜ್ಯ ಮಟ್ಟದ ಅಬ್ಯಾಕಸ್ ಸ್ಪರ್ಧೆಯಲ್ಲಿ ಶ್ವೇತಾ ಕಲಾಲ ವಿದ್ಯಾರ್ಥಿಗಳು ಸಾಧನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಸ್ಮಾರ್ಟ್ ಕಿಡ್ಸ್ ಅಬ್ಯಾಕಸ್ ವಿದ್ಯಾರ್ಥಿಗಳಿಗೆ ರವಿವಾರ ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ರಾಜ್ಯಮಟ್ಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.  ಈ ಸ್ಪರ್ಧೆಯಲ್ಲಿ ಗದಗ ಜಿಲ್ಲೆಯ ಶಿಕ್ಷಕಿ ಶ್ವೇತಾ ಕಲಾಲ ನೇತೃತ್ವದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಪಡೆದಿಕೊಂಡಿದ್ದು ಜಿಲ್ಲೆಗೆ ಹಾಗೂ ಅಬ್ಯಾಕಸ್ ಶಾಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಸಂತೋಷ್ ಕಲಾಲ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಕ್ಕಳಿಗೆ ಅಬ್ಯಾಕಸ್ ಶಿಕ್ಷಣ ನೀಡುವುದರಿಂದ ಮಕ್ಕಳ ಕಲಿಕೆಯ ಸಾಮರ್ಥ್ಯ‌ ಹೆಚ್ಚಳ, ಏಕಾಗ್ರತೆ, ಜ್ಞಾಪಕ ಶಕ್ತಿ ಹೆಚ್ಚಳ, ತಾರ್ಕಿಕ ಶಕ್ತಿ ಮತ್ತು ಕಲಾತ್ಮಕ ಗುಣಗಳು, ಭಯ, ಆತಂಕ ನಿವಾರಣೆಯಾಗಲಿದೆ ಮತ್ತು ಮಕ್ಕಳ ಉಜ್ವಲ ಭವಿಷ್ಯಕ್ಕೆ ಅಬ್ಯಾಕಸ್ ಸಹಕಾರಿಯಾಗಲಿದೆ ಎಂದು ಹೇಳಿದರು.

ರಾಜ್ಯ ಮಟ್ಟದ ಅಬ್ಯಾಕಸ್ ಸ್ಪರ್ಧೆಯಲ್ಲಿ ಗದಗ ಜಿಲ್ಲೆಯಿಂದ ಪಾಲ್ಗೊಂಡು ಸಾಧನೆ ಗೈದ ವಿದ್ಯಾರ್ಥಿಗಳಾದ ಫಕ್ಕೀರಡ್ಡಿ ಪ್ರವೀಣರಡ್ಡಿ ಹುಚ್ಚಣ್ಣವರ್ – ಪ್ರಥಮ ಬಹುಮಾನ, ಬಸವಪ್ರಭು ಹವಳದ್ – ಪ್ರಥಮ ಬಹುಮಾನ, ಪ್ರಣಿಕಾ ಸಂತೋಷ್ ಕಲಾಲ್ – ಪ್ರಥಮ ಬಹುಮಾನ, ಪ್ರತಿಭಾ ಮಂಜುನಾಥ ಡಂಬಳ – ದ್ವೀತಿಯ ಬಹುಮಾನ, ಫರ್ಹಾತ್ ಎಂ. ಹುಯಿಲಗೋಳ – ದ್ವೀತಿಯ ಬಹುಮಾನ, ಶ್ರೀನಿಧಿ ಸಂಕಪ್ಪ ನೈನಾಪುರ – ತೃತೀಯ ಬಹುಮಾನ, ವಿರಾಟ್ ಸಂತೋಷ್ ಕಲಾಲ್ – ತೃತೀಯ ಬಹುಮಾನ, ಶ್ರೇಯಾಂಕ್ ಎಸ್. ಬಳಿಗಾರ್ – ರನ್ನರ್ ಅಪ್ , ಸಿಂಚನಾ ಎಸ್.ಜವಾರಿ – ರನ್ನರ್ ಅಪ್ ಗಳಿಸಿದ್ದಾರೆ.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಅನ್ವಿತಾ ಅರ್ಮಾನಿ, ಭರತ್ ಮಂಜುನಾಥ್ ಡಂಬಳ, ಭೂಷಣ ಮಂಜುನಾಥ್ ಡಂಬಳ, ಸಿದ್ದೇಶ್ವರಯ್ಯ ಶಿವಯೋಗಿ ಗುದ್ದಿಮಠ, ಝೈನಾ ಎಂ. ಹುಯಿಲಗೋಳ, ಅಮೀರ್ ಹಮ್ಜಾ ಎಂ.ಹುಯಿಲಗೋಳ, ಧರ್ಮಶ್ರೀ ಸಂಕಪ್ಪ ನೈನಾಪುರ, ಭೂಮಿಕಾ ವಿಜಯ್ ರೇವಂಕಿ, ಮೋಹಿತ್ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗ ಶಿಕ್ಷಕರು ಹಾಜರಿದ್ದರು.

ಇದೇ ವೇಳೆ ಗದಗನ ಸ್ಮಾರ್ಟ್ ಕಿಡ್ಸ್ ಅಬ್ಯಾಕಸ್ – ಗದಗ (ಹುಡ್ಕೊ ಕಾಲೋನಿ) ಓಂ ಶಾಂತಿ ಭವನದ ಹಿಂದೆ ಇರುವ ಶಾಖೆಗೆ ಅತ್ಯುತ್ತಮ ಫ್ರಾಂಚೈಸಿ ಪ್ರಶಸ್ತಿಯನ್ನು ಶಾಖೆಯ ಮುಖ್ಯಸ್ಥೆ ಶ್ವೇತಾ ಕಲಾಲ ಅವರು ಸ್ವೀಕರಿಸಿದರು.

ಭಗವದ್ಗೀತೆ ಪಾಶ್ಚಾತ್ಯರ ಮನಗೆದ್ದ ಮಹಾ ಗ್ರಂಥವಾಗಿದೆ: ಡಾ. ಪಾವಗಡ ಪ್ರಕಾಶ್ ರಾವ್

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜ್ಞಾನವು ಸಾಗರದಾಚೆಗಿನ ಪಾಶ್ಚಾತ್ಯರ ಗಮನ ಸೆಳೆದಿದೆ. ಅದರಲ್ಲೂ ಭಗವದ್ಗೀತೆಯು ಪಾಶ್ಚಾತ್ಯರ ಮನಗೆದ್ದ ಮಹಾ ಗ್ರಂಥವಾಗಿದೆ ಎಂದು ಡಾ. ಪಾವಗಡ ಪ್ರಕಾಶ್ ರಾವ್ ನುಡಿದರು.

ಅವರು ಇಲ್ಲಿನ ಕುಮಾರವ್ಯಾಸ ಪ್ರವಚನ ಸಂಚಾಲನ ಸಮಿತಿ ಏರ್ಪಡಿಸಿರುವ ಭಗವದ್ಗೀತಾ ಪ್ರವಚನದ 12ನೇ ದಿನ ಪ್ರವಚನ ನೀಡಿ ಮಾತನಾಡಿ, ರಾಮಾಯಣ, ಭಗವದ್ಗೀತೆ ಹಾಗೂ ಶಂಕರಾಚಾರ್ಯರ ಅದ್ವೆöÊತ ಸಿದ್ಧಾಂತಗಳು ಪಾಶ್ಚಾತ್ಯರನ್ನು ಚಕಿತರನ್ನಾಗಿಸಿದ ಭಾರತೀಯ ಜ್ಞಾನಗಳಾಗಿವೆ. ಭಾರತಕ್ಕೆ ಭೇಟಿ ನೀಡಿದ ವಿದೇಶಿಗರಿಗೆ ನೆನಪಿನ ಕಾಣಿಕೆಯಾಗಿ ತಾಜ್‌ಮಹಲ್‌ನ್ನು ನೀಡುವ ಪದ್ಧತಿ ಇತ್ತು. ಆದರೆ ಇತ್ತೀಚೆಗೆ ಭಗವದ್ಗೀತೆಯನ್ನು ಕಾಣಿಕೆಯಾಗಿ ನೀಡುವ ಅಭ್ಯಾಸ ಆರಂಭವಾಗಿರುವುದು ಶ್ಲಾಘನೀಯ ಎಂದರು.

ತಪಸ್ಸು ಮಾಡಿದರೆ ಮಾತ್ರ ದೇವನೊಲುಮೆ ಸಾಧ್ಯವಿದ್ದು, ಅಚಲ ನಂಬಿಕೆ ಹಾಗೂ ಶ್ರದ್ಧೆಯಿಂದ ದೇವರನ್ನು ಒಲಿಸಿಕೊಂಡು ಅದ್ಭುತಗಳನ್ನು ಸೃಷ್ಟಿಸಿದ ಅನೇಕ ನಿದರ್ಶನಗಳು ನಮ್ಮ ಕಣ್ಮುಂದೆ ಇದೆ. ರಾಮಾಯಣದಲ್ಲಿ ಶ್ರೀರಾಮರ ಕಥೆ ಅಮೋಘ, ನಾವೆಲ್ಲ ರಾಮನನ್ನು ಆರಾಧನೆ ಮಾಡುತ್ತೇವೆ. ಆದರೆ ಅವರಂತೆ ಆದರ್ಶ ಪುರುಷರಾಗುವುದು ಕಷ್ಟಸಾಧ್ಯ. ಕೇವಲ ಹಿಂದೂಗಳಷ್ಟೇ ಅಲ್ಲದೇ ಖಾದರ್ ಎನ್ನುವಂಥ ಮುಸ್ಲಿಂ ವ್ಯಕ್ತಿಯೋರ್ವರು ರಾಮಾಯಣವನ್ನು ಉರ್ದುಗೆ ಅನುವಾದ ಮಾಡಿದ್ದಾರೆ ಎಂದು ತಿಳಿಸಿದರು.

ಡಾ.ಕಲ್ಲೇಶ ಮೂರಶಿಳ್ಳಿನ ನಿರೂಪಿಸಿ ವಂದಿಸಿದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಗುರಣ್ಣ ಬಳಗಾನೂರ, ಡಾ. ಎಸ್.ಎಸ್. ಶೆಟ್ಟರ್, ಡಾ.ಜಿ.ಬಿ. ಪಾಟೀಲ, ಅನಿಲ ವೈದ್ಯ, ವಾದಿರಾಜ ರಾಯ್ಕರ, ಡಾ. ಎಸ್.ಡಿ. ಯರಿಗೇರಿ, ಡಾ. ವಿಜಯದತ್ತ ಮಂಗಸೂಳಿ, ಗೋಪಾಲಕೃಷ್ಣ ತಾಸಿನ, ಶಶಿಧರ ಮೂರಶಿಳ್ಳಿನ, ಅನಿಲ ತೆಂಬದಮನಿ, ಗೌರಪ್ಪ ಬೊಮ್ಮಣ್ಣನವರ, ಬಿ.ವಿ ಹಿರೇಮಠ, ಡಾ. ದತ್ತಪ್ರಸನ್ನ ಪಾಟೀಲ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.

ಲಕ್ಕುಂಡಿಯ ವೈಭವ ಮರುಕಳಿಸಿ ಜಗತ್ತಿಗೆ ತೋರಿಸುವಂತಾಗಲಿ: ಸಚಿವ ಎಚ್.ಕೆ ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಲಕ್ಕುಂಡಿಯ ಇತಿಹಾಸ, ಪರಂಪರೆ, ಸಂಸ್ಕೃತಿ ಶ್ರೀಮಂತಿಕೆ, ಶಿಲ್ಪಕಲೆಗಳು, ಶಾಸನಗಳ  ಜಾಗೃತರಾಗಿ ಲಕ್ಕುಂಡಿಯ ಗತಕಾಲದ ವೈಭವವನ್ನು ಮರುಕಳಿಸಿ ಲಕ್ಕುಂಡಿಯ ಮಹತ್ವವನ್ನು ಜಗತ್ತಿಗೆ ತೋರಿಸಿ ಯುನೆಸ್ಕೋ ಪಟ್ಟಿಗೆ ಸೇರಿಸುವಂತೆ ಮಾಡಬೇಕು ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ ತಾಲೂಕಿನ ಲಕ್ಕುಂಡಿಯ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

101 ಬಾವಿ, 101 ದೇವಸ್ಥಾನಗಳ ಇತಿಹಾಸ ಹೊಂದಿರುವ ಲಕ್ಕುಂಡಿಯಲ್ಲಿ ಪ್ರಾಚ್ಯಾವಶೇಷಗಳ ಸಂಗ್ರಹಣೆ ಮೂಲಕ ಹುದುಗಿ ಹೋಗಿರುವ ದೇವಸ್ಥಾನ ಹಾಗೂ ಬಾವಿಗಳ ಅನ್ವೇಷಣೆ ಹಾಗೂ ಮರುಸೃಷ್ಟಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಲಕ್ಕುಂಡಿಯಲ್ಲಿರುವ ಶಾಸನಗಳು ಹಾಗೂ ಶಿಲ್ಪಕಲೆಗಳನ್ನು ಕೆಲವರು ಮನೆಗಳನ್ನಾಗಿ ಮಾಡಿಕೊಂಡಿದ್ದಾರೆ, ಕೆಲವರು ಕುರಿ, ಆಕಳು ಕಟ್ಟಿದ್ದಾರೆ. ಅವುಗಳ ಮಹತ್ವ ತಿಳಿಸಿ ಅವುಗಳನ್ನು ಒಂದೆಡೆ ಸಂಗ್ರಹಿಸಿ, ಸಂರಕ್ಷಿಸೋಣ ಎಂದರು.

ಲಕ್ಕುಂಡಿಯಲ್ಲಿ ಕೈಗೊಂಡಿರುವ ಪ್ರಾಚ್ಯಾವಶೇಷಗಳ ಅನ್ವೇಷಣೆ ರಾಜ್ಯಕ್ಕೆ ದಿಕ್ಸೂಚಿಯಾಗಬೇಕು. ಇದರ ಪ್ರೇರಣೆ ಕರ್ನಾಟಕದ ತುಂಬೆಲ್ಲ ಹರಡಬೇಕು. ಜೀರ್ಣೋದ್ಧಾರ ಆಗಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಆಶಿಸಿದರು.

ನರಗುಂದ ಶಾಸಕ ಸಿ.ಸಿ. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಈ ರೀತಿಯ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮ ಪ್ರಥಮ ಬಾರಿಗೆ ನಡೆಯುತ್ತಿದೆ. ದಾನ ಚಿಂತಾಮಣಿ ಅತ್ತಿಮಬ್ಬೆಯ ಕರ್ಮಭೂಮಿ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿದ್ದು ಸಂತಸ ತಂದಿದೆ ಎಂದರು.

ಪ್ರಚ್ಯಾವಶೇಷಗಳನ್ನು ಸಂಗ್ರಹಣೆ ಮಾಡಿ ಸೂಕ್ತ ಸ್ಥಳದಲ್ಲಿ ಇಟ್ಟು ಮುಂದಿನ ಪೀಳಿಗೆಗೆ ಹಿಂದಿನ ಕಾಲದ ವೈಭವದ ಕುರುಹುಗಳನ್ನು ನೆನೆಪಿಸುವ ಕಾರ್ಯಕ್ರಮ ಇದಾಗಿದೆ. ಮುಂದಿನ ದಿನಗಳಲ್ಲಿ ಇಂದಿನ ಪ್ರಚ್ಯಾವಶೇಷಗಳ ಅನ್ವೇಷಣೆ ಕಾರ್ಯವು ಮಾದರಿಯಾಗಿ ದೇಶದಲ್ಲಿರುವ ಅನೇಕ ಗ್ರಾಮಗಳಲ್ಲಿರುವ ಪ್ರಾಚ್ಯಾವಶೇಷಗಳ ಅನ್ವೇಷಣೆ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ಖನಿಜ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಲಕ್ಕುಂಡಿ ಗ್ರಾ.ಪಂ ಅಧ್ಯಕ್ಷ ಕೆಂಚಪ್ಪ ಎಸ್.ಪೂಜಾರ್, ಉಪಾಧ್ಯಕ್ಷೆ ಪುಷ್ಪಾ ಎಸ್.ಪಾಟೀಲ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ವಾಸಣ್ಣ ಕುರಡಗಿ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಸಲ್ಮಾ ಫಾಹಿಮ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ. ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಮೈಸೂರಿನ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜು.ಎ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಗ್ರಾಮೀಣಾಭಿವೃದ್ಧಿ ವಿ.ವಿ ಕುಲಪತಿ ಪ್ರೊ. ಸುರೇಶ ನಾಡಗೌಡರ, ಜಾನಪದ ವಿ.ವಿ ಕುಲಪತಿ ಟಿ.ಎಂ. ಬಾಸ್ಕರ್, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಮಿತಿ ಸದಸ್ಯರುಗಳಾದ ಸಿದ್ಧಲಿಂಗೇಶ್ವರ ಪಾಟೀಲ, ರಾವ್, ಅ.ಧ. ಕಟ್ಟಿಮನಿ, ಉಮೇಶಗೌಡ ಪಾಟೀಲ, ಹನುಮಾಕ್ಷಿ ಬೋಗಿ, ಹಂಪಿ ವಿಶ್ವವಿದ್ಯಾಲಯ ಕುಲಪತಿ ಡಿ.ವಿ. ಪರಮಶಿವಮೂರ್ತಿ, ದೇವರಕೊಂಡ ರೆಡ್ಡಿ, ಲಕ್ಕುಂಡಿ ಗ್ರಾ.ಪಂ ಸದ್ಯಸರು ಹಾಜರಿದ್ದರು.

ಬಸವಣ್ಣನವರ ಮೌಲ್ಯಗಳು ಸಮಾಜಕ್ಕೆ ಅತ್ಯಗತ್ಯ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಈ ನಾಡಿನ ಮಠ ಮಾನ್ಯಗಳು, ಶೃದ್ಧಾ ಕೇಂದ್ರಗಳು, ಬಸವಣ್ಣನವರ ವೈಚಾರಿಕ ವಿಚಾರಗಳನ್ನು ಮೂಡಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವದು ಶ್ಲಾಘನೀಯ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಇಲ್ಲಿಯ ಸಮಿಪದ ಹರ್ಲಾಪೂರ ಕೊಟ್ಟೂರೇಶ್ವರ ಮಠದಲ್ಲಿ ಕಾರ್ತೀಕೋತ್ಸವದ ಲಕ್ಷ ದೀಪೋತ್ಸದಂಗವಾಗಿ ಹಮ್ಮಿಕೊಂಡ ಬಸವ ಪುರಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನಕಗಿರಿಯ ಸುವರ್ಣ ಸಂಸ್ಥಾನ ಮಠದ ಡಾ. ಚನ್ನಮಲ್ಲ ಮಹಾಸ್ವಾಮಿಗಳು ಮಾತನಾಡಿ,  ಬದುಕಿನಲ್ಲಿರುವ ಅಂಧಕಾರವನ್ನು ಕಳೆದು ಬೆಳಕು ಮೂಡಲು ಲಕ್ಷ ದೀಪೋತ್ಸವದಂಗವಾಗಿ ಬಸವ ಪುರಾಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸ್ತುತ್ಯಾರ್ಹವಾಗಿದೆ ಎಂದರು.

ಡಾ. ಕೊಟ್ಟೂರೇಶ್ವರ ಶ್ರಿಗಳು ಮಾತನಾಡಿ, 12ನೇ ಶತಮಾನದ ಬಸವಾದಿ ಪ್ರಮಥರು ಕಾಯಕದ ಮೂಲಕ ಈ ಸಮಾಜಕ್ಕೆ ವಚನ ಸಾಹಿತ್ಯದ ಮೂಲಕ ಅರಿವನ್ನು ನೀಡಿ ಜೀವನಕ್ಕೆ ಮೌಲ್ಯವನ್ನು ಕೊಟ್ಟಿದ್ದಾರೆ ಎಂದರು.

ಡಾ. ಶಾಂತವೀರ ಶಿವಾಚಾರ್ಯರು ಬಸವ ಪುರಾಣ ಪ್ರವಚನ ಮಾಡಿದರು. ಪರಶುರಾಮ ಚಟ್ನಳ್ಳಿ, ಯಲ್ಲಪ್ಪ ಗುಂಡಳ್ಳಿ ಸಂಗೀತ ಸೇವೆ ನೀಡಿದರು. ಲಕ್ಕುಂಡಿ ಅಲ್ಲಮಪ್ರಭುದೇವರ ಮಠದ ಸಿದ್ದಲಿಂಗ ಶ್ರೀಗಳು, ಬಿ.ಬಿ. ಅಸೂಟಿ, ವಾಸಣ್ಣ ಕುರಡಗಿ, ಕೃಷ್ಣಗೌಡ ಪಾಟೀಲ, ಗ್ರಾ.ಪಂ ಅಧ್ಯಕ್ಷೆ ರೇಣುಕಾ ವಡ್ಡರ, ಉಪಾಧ್ಯಕ್ಷ  ಅಡಿವೆಪ್ಪ ಗೌಡಪ್ಪನವರ, ಅಶ್ವಿನಿ ಮರಡಿ, ಗೋವಿಂದರೆಡ್ಡಿ ಕೊಣ್ಣೂರು, ಪ್ರಾಥಮಿಕ ಶಾಲೆಯ ಶಿಕ್ಷಕರು, ಗ್ರಾ.ಪಂ ಸದಸ್ಯರು ವೇದಿಕೆಯಲ್ಲಿದ್ದರು. ಮುಖ್ಯೋಪಾಧ್ಯಾಯ ಕೆ.ಬಿ. ಕೊಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಸ್.ಸಿ. ಸರ್ವಿ ಸ್ವಾಗತಿಸಿದರು. ವೆಂಕಟೇಶ ಜುಂಜಣಿ ನಿರೂಪಿಸಿದರು. ರಾಮಣ್ಣ ಬೆಳಧಡಿ ವಂದಿಸಿದರು.

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆಲುವು: ಮಾಜಿ ಶಾಸಕನಿಗೆ ಬಂಪರ್ ಗಿಫ್ಟ್, ಹೆಸ್ಕಾಂ ಅಧ್ಯಕ್ಷರಾಗಿ ಅಜ್ಜಂಪೀರ್‌ ಖಾದ್ರಿ ನೇಮಕ!

0

ಬೆಂಗಳೂರು:- ಶಿಗ್ಗಾವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ಹಿನ್ನೆಲೆ, ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿಗೆ ಬಂಪರ್ ಗಿಫ್ಟ್​ ನೀಡಲಾಗಿದೆ.

ಶಿಗ್ಗಾಂವಿ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಬಳಿಕ ಸಿಎಂ ಸಿದ್ದರಾಮಯ್ಯ ಮನವಿ ಮೇರೆಗೆ ಉಮೇದುವಾರಿಕೆ ವಾಪಸ್​ ಪಡೆದುಕೊಂಡಿದ್ದ ಹಿನ್ನೆಲೆ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶಿಗ್ಗಾಂವಿ ಉಪಚುನಾವಣೆ ವೇಳೆ ತಮ್ಮ ಮಾತಿಗೆ ಬೆಲೆ ಕೊಟ್ಟು ನಾಮಪತ್ರ ವಾಪಸ್ ಪಡೆದುಕೊಂಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ, ಫಲಿತಾಂಶ ಪ್ರಕಟವಾದ ಎರಡೇ ದಿನದಲ್ಲಿ ಖಾದ್ರಿ ಅವರಿಗೆ ಈ ಗಿಫ್ಟ್​ ನೀಡಿದ್ದಾರೆ.

ಶಿಗ್ಗಾಂವಿ ಉಪಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿದ್ದ ಖಾದ್ರಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಖಾದ್ರಿಗೆ ಉತ್ತಮ ಸ್ಥಾನಮಾನದ ಭರವಸೆ ನೀಡಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ನಾಮಪತ್ರ ಹಿಂಪಡೆಯುವಂತೆ ಸೂಚಿಸಿದ್ದರು. ಭರವಸೆ ಬೆನ್ನಲ್ಲೇ ಖಾದ್ರಿ ನಾಮಪತ್ರ ಹಿಂಪಡೆದು ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಪಠಾಣ್‌ಗೆ ಬೆಂಬಲ ಸೂಚಿಸಿದ್ದರು.

ಅದರಂತೆಯೇ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಬೆನ್ನಿಗೆ ನಿಂತು ಗೆಲ್ಲಿಸಿದ್ದರು. ಇದೀಗ ಕೊಟ್ಟ ಮಾತಿನಂತೆಯೇ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತಕ್ಕೆ ಅಧ್ಯಕ್ಷರನ್ನಾಗಿ ನೇಮಿಸಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.

ಲಕ್ಕುಂಡಿ ಅನ್ವೇಷಣೆಯಲ್ಲಿ 600ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಲಭ್ಯ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಲಕ್ಕುಂಡಿಯಲ್ಲಿ ಜರುಗುತ್ತಿರುವ ಪ್ರಾಚ್ಯಾವಶೇಷಗಳ ಅನ್ವೇಷಣೆಯಲ್ಲಿ 5 ಬಾವಿ ಹಾಗೂ 5 ಶಾಸನಗಳು ಸೇರಿದಂತೆ 600ಕ್ಕೂ ಅಧಿಕ ಪ್ರಾಚ್ಯಾವೇಶಗಳು ಲಭ್ಯವಾಗಿವೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಲಕ್ಕುಂಡಿ ಗ್ರಾಮದಲ್ಲಿ ಭಾನುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಲಕ್ಕುಂಡಿಯನ್ನು ರಾಷ್ಟ್ರಕೂಟರ ಕಾಲದಲ್ಲಿ ಕಟ್ಟಿದ್ದಾರೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ವಿಶೇಷ ಅಭಿವೃದ್ಧಿ ಹೊಂದಿ ಹೊಯ್ಸಳರು, ಕೆಲವು ಕಾಲ ವಿಜಯನಗರದ ಅರಸರೂ ಆಳಿದ್ದಾರೆ. ಇಂದು ಪ್ರಾಚ್ಯಾವಶೇಷಗಳ ಅನ್ವೇಷಣೆ ಸಂಗ್ರಹಣೆ ಕೆಲಸ ವಿಶೇಷ ಪ್ರಯತ್ನವಾಗಿದ್ದು ಸಾಂಸ್ಕೃತಿಕ, ಐತಿಹಾಸಿಕ, ಕಾಂತ್ರಿಕಾರಕ ಹೆಜ್ಜೆಯಾಗಿದೆ ಎಂದರು.

ಲಕ್ಕುಂಡಿಯಲ್ಲಿ ಈ ಹಿಂದೆ ಇದ್ದ 101 ದೇವಾಲಯಗಳಲ್ಲಿ ಇಂದು 50-60ಲಭ್ಯವಾಗಿದೆ ಹಾಗೂ 8-10 ದೇವಾಲಯದ ಪಾಯಗಳು ದೊರಕಿವೆ. ಇನ್ನುಳಿದ ದೇವಾಲಯಗಳು ಎಲ್ಲೆಲ್ಲಿ ಇದ್ದವು ಎಂದು ಗುರುತಿಸುವದು ಬಹುದೊಡ್ಡ ಕೆಲಸವಾಗಿದೆ. ಹುದುಗಿಹೋದ ದೇವಾಲಯಗಳಲ್ಲಿ ಮರುಸೃಷ್ಟಿಸಬಹುದಾದ ದೇವಾಲಯ ಬಗ್ಗೆ ತಜ್ಞರು ಗಂಭೀರ ಆಲೋಚನೆ ಮಾಡುತ್ತಿದ್ದಾರೆ ಎಂದರು.

ಅನ್ವೇಷಣೆ ಸಂದರ್ಭದಲ್ಲಿ 5 ಹಳೆ ಬಾವಿಗಳು ಹೊಸದಾಗಿ ಸಿಕ್ಕಿದೆ ಹಾಗೂ 5 ಶಾಸನಗಳು ಲಭ್ಯವಾಗಿವೆ. ಅದರಲ್ಲಿ 3 ಶಾಸನಗಳು ಸಂಪೂರ್ಣ ಅಪ್ರಕಟಿತವಾಗಿದೆ. 2 ಅಪ್ರಕಟಿತವಾಗಿದೆ. ಈ ಕಾರ್ಯ ಎಲ್ಲರಲ್ಲೂ ಹುಮ್ಮಸ್ಸು ಹೆಚ್ಚಿಸಿದೆ. ಸರ್ಕಾರದ ಈ ಕೆಲಸದಿಂದ ಇತಿಹಾಸವಿರುವ ಗ್ರಾಮಗಳಲ್ಲಿ ಯಾವ ರೀತಿ ಕಾರ್ಯ ಕೈಗೊಳ್ಳಬಹುದು ಎನ್ನುವುದರ ಬಗ್ಗೆ ದಿಕ್ಸೂಚಿ ಸಿಕ್ಕಂತಾಗಿದೆ ಎಂದು ಹೇಳಿದರು.

ಇಂದು 13 ಗುಡಿಗಳನ್ನು ರಕ್ಷಿತ ಸ್ಮಾರಕ ಎಂದು ಪೋಷಿಸಲು ಸರ್ಕಾರ ನಿರ್ಣಯ ಕೈಗೊಂಡಿದೆ ಹಾಗೂ 1 ಮಠದಲ್ಲಿ ವಾಸ ಮಾಡುತ್ತಿರುವ ಮಾಲಿಕರು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಬಿಟ್ಟುಕೊಟ್ಟಿದ್ದಾರೆ. ಸ್ವ ಇಚ್ಛೆಯಿಂದ ಬಿಟ್ಟುಕೊಟ್ಟ ಅವರಿಗೆ ಸರ್ಕಾರದಿಂದ ವಿಶೇಷ ಗೌರವ ನೀಡಲಾಗಿದೆ ಎಂದರು.

13 ಸ್ಮಾರಕಗಳ ಸಂರಕ್ಷಣಾ ಕಾರ್ಯ ಪ್ರಾರಂಭವಾಗಿದೆ. ಮೊದಲು ಭೂಮಿಯ ಮೇಲ್ಭಾಗದಲ್ಲಿ ಲಭ್ಯವಿರುವ ಸ್ಮಾರಕಗಳನ್ನು ಸಂಗ್ರಹಿಸುಲಾಗುತ್ತದೆ. ಆನಂತರ ಡಿಸೆಂಬರ್ ಅಂತ್ಯದ ಒಳಗೆ ಉತ್ಖನನ ಕೆಲಸ ಪ್ರಾರಂಭಿಸಲಾಗುತ್ತದೆ ಹಾಗೂ ಕೋಟೆಯನ್ನು ಅಭಿವೃದ್ಧಿಪಡಿಸಿ ಲಕ್ಕುಂಡಿಯನ್ನು ಪ್ರವಾಸೋದ್ಯಮ ತಾಣವನ್ನಾಗಿಸಿ, ಇತಿಹಾಸವನ್ನು ತಿಳಿಯಲು ಬರುವವರಿಗೆ ಶ್ರೇಷ್ಠ ಕೇಂದ್ರವನ್ನಾಗಿಸಿ, ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯದಿಂದ ಲಕ್ಕುಂಡಿಯನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಪ್ರಯತ್ನ ಸಾಗಲಿದೆ ಎಂದು ತಿಳಿಸಿದರು.

ಶಾಸಕರಾದ ಸಿ.ಸಿ. ಪಾಟೀಲ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿಯ ಸದಸ್ಯ ಸಿದ್ಧಲಿಂಗೇಶ್ವರ ಎಚ್.ಪಾಟೀಲ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.

ಸ್ತ್ರೀ ದೌರ್ಜನ್ಯ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿ: ನ್ಯಾಯಾಧೀಶ ಸತೀಶ ಎಂ

0

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಸಮಾಜದಲ್ಲಿ ಮಹಿಳೆಯರಿಗೆ ಗೌರಯುತವಾದ ಸ್ಥಾನವಿದ್ದು, ಇಂದು ಎಲ್ಲ ರಂಗಳಗಳಲ್ಲಿಯೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಆದರೆ ಸಮಾಜದಲ್ಲಿ ನಡೆಯುವ ಮಹಿಳೆಯ ಮೇಲಿನ ದೌರ್ಜನ್ಯ ತಡೆಯುವುದು ಎಲ್ಲರ ಜವಾಬ್ದಾರಿಯಾಗಿದ್ದು, ಇದಕ್ಕಾಗಿ ವಿಶೇಷವಾದ ಕಾನೂನು ಸಹ ಇದೆ ಎಂದು ದಿವಾಣಿ ನ್ಯಾಯಾಧೀಶರಾದ ಸತೀಶ ಎಂ.ಹೇಳಿದರು.

ಅವರು ತಾಲೂಕಾ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಶಿರಹಟ್ಟಿ ಮತ್ತು ಲಕ್ಷೇಶ್ವರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿರಹಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಹಿರೇಬಣದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರಿಗೆ ಅವರ ಉದ್ಯೋಗ ಸ್ಥಳದಲ್ಲಿ, ಸಮಾಜದಲ್ಲಿ ದೌರ್ಜನ್ಯಗಳು ನಡೆಯುತ್ತವೆ. ಇದರಿಂದ ಮಹಿಳೆಯರು ಮಾನಸಿಕವಾಗಿ ಕುಗ್ಗುವದುಂಟು. ಆದರೆ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ತಡೆಗಾಗಿಯೇ ವಿಶೇಷ ಕಾನೂನುಗಳಿದ್ದು, ಮಹಿಳೆಯರ ಮೇಲೆ ದೌರ್ಜನ್ಯ ನಡೆದ ಬಗ್ಗೆ ದೂರುಗಳು ಬಂದಲ್ಲಿ ಕಾನೂನು ಅಂತವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಸಮಾಜದಲ್ಲಿ ಮಹಿಳೆಯರನ್ನು ಸಮಾನತೆಯಿಂದ ನೋಡುವದು ಅವಶ್ಯವಾಗಿದೆ. ಇಂತಹ ಸಮಸ್ಯೆಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮಹಿಳೆಯರನ್ನು ಗೌರವಿಸುವ ಮೂಲಕ ಅವರಿಗೆ ಸೂಕ್ತ ಅವಕಾಶ, ಸ್ವಾತಂತ್ರ್ಯ, ಗೌರವ ನೀಡುವ ಕಾರ್ಯವಾದರೆ ಮಾತ್ರ ದೌರ್ಜನ್ಯದ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಹೇಳಿದರು.

ಸಹಾಯಕ ಸರ್ಕಾರಿ ಅಭಿಯೋಜಕಿ ಹೀನಾಕೌಸರ ಗಂಜಿಹಾಳ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಡಿ.ಪಿ.ಓ. ಮೃತ್ಯುಂಜಯ ಗುಡ್ಡಧಾನ್ವೇರಿ ವಹಿಸಿದ್ದರು. ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಬಾಳೇಶ್ವರಮಠ,. ಪ್ಯಾನಲ್ ವಕೀಲರಾದ ಪಿ.ಎಂ. ವಾಲಿ, ವಿ.ಎಸ್. ಪಶುಪತಿಹಾಳ, ಆರ್.ಎಂ. ಕುರಿ ಪಾಲ್ಗೊಂಡಿದ್ದರು. ಅಂಗನವಾಡಿ ಮೇಲ್ವಿಚಾರಕಿ ನಂದಾ ನವಲೆ ಕಾರ್ಯಕ್ರಮ ನಿರ್ವಹಿಸಿದರು.

ಮುಹಮ್ಮದ್ ಪೈಗಂಬರ್ ಜಗತ್ತಿಗೆ ನೀಡಿದ ಕೊಡುಗೆಗಳನ್ನು ಅರ್ಥ ಮಾಡಿಕೊಳ್ಳಬೇಕು: ಹಸನಸಾಬ ತಟಗಾರ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಮುಹಮ್ಮದ್ ಪೈಗಂಬರ್ ಮನುಕುಲದ ಪ್ರವಾದಿಯಾಗಿ, ಶಾಂತಿದೂತರಾಗಿ ಜಗತ್ತಿಗೆ ನೀಡಿದ ಕೊಡುಗೆಗಳನ್ನು ನಾವಿಂದು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಸನಸಾಬ ತಟಗಾರ ಹೇಳಿದರು.

ನಗರದ ರಾಜಾಬಕ್ಷಿ ದರ್ಗಾದ ಬುಕ್ಕಿಟಗಾರ ಹೊಲದಲ್ಲಿ ಡಿಸೆಂಬರ್ ೧೩ರಂದು ನಡೆಯಲಿರುವ ಗೌಸೆ ಆಜಂ ಕಾನ್ಪರೆನ್ಸ್ ಧಾರ್ಮಿಕ ಪ್ರವಚನದ ಪೋಸ್ಟರ್ ಶಾದಿಮಹಲ್‌ನಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಎಲ್ಲ ಧರ್ಮಗಳನ್ನು ಗೌರವಿಸುವ ಮೂಲಕ ಇವತ್ತು ಸುಂದರ ಸಮಾಜವನ್ನು ನಾವು ಕಟ್ಟಬೇಕಾಗಿದೆ. ಆ ನಿಟ್ಟಿನಲ್ಲಿ ಪಟ್ಟಣದಲ್ಲಿ ಐತಿಹಾಸಿಕ ಕಾರ್ಯಕ್ರಮಕ್ಕೆ ಅಣಿಯಾಗಿದ್ದೇವೆ ಎಂದರು. ಗೌಸೆ ಆಜಂ ಕಾನ್ಫರೆನ್ಸ್ ಕಮಿಟಿಯ ಸದಸ್ಯ ದಾವಲಸಾಬ ತಾಳಿಕೋಟಿ ಮಾತನಾಡಿ, ಈ ಕಾರ್ಯಕ್ರಮಕ್ಕೆ ಜಗತ್ತಿನ ಖ್ಯಾತ ವಾಗ್ಮಿಗಳು, ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ವಂಶಸ್ಥರಾದ ಉತ್ತರಪ್ರದೇಶದ ಸೈಯದ್ ಮುಹಮ್ಮದ್ ಹಾಷ್ಮಿ ಮಿಯಾ ಅವರು ಆಗಮಿಸಿ ಪ್ರವಾದಿಗಳ ಕುರಿತು ಪ್ರವಚನ ನೀಡಲಿದ್ದಾರೆ. ಇಂತಹ ದೊಡ್ಡ ಮಟ್ಟದ ಕಾರ್ಯಕ್ರಮ ಇತಿಹಾಸದಲ್ಲಿಯೇ ಮೊದಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ನಗರದ ಹಾಗೂ ಸುತ್ತಮುತ್ತಲಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಿದರು.

ಧರ್ಮ ಗುರುಗಳಾದ ಯಾಸೀನ ಮೌಲಾನ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೌಲಾನಾ ಖಲೀಲ ಅಹ್ಮದ ಖಾಜಿ, ರಫೀಕ್ ಮೌಲಾನ, ಕಾರ್ಯದರ್ಶಿ ಫಯಾಜ್ ತೋಟದ, ದಾದು ಹಣಗಿ, ನಾಸೀರ ಸುರುಪುರ, ಭಾಷಾ ಮುದಗಲ್ಲ, ಇಮ್ರಾನ್ ಅತ್ತಾರ, ಆರೀಫ್ ಮನಿಯಾರ, ಅಲಿ ಕಿಲ್ಲೆದಾರ, ಪಿ.ಕೆ. ಬಾಗವಾನ, ಎ.ಕೆ. ಕಾತರಕಿ, ಶಾಮೀದಸಾಬ ದಿಂಡವಾಡ, ರಸೂಲಸಾಬ ಆರಗಿದ್ದಿ, ಮೈಬುಸಾಬ ಚಿನ್ನೂರ, ಕೆ.ಸಿ. ಗೋಡೇಕಾರ, ಖಲಂದರ ಡಾಲಯತ, ಆಸೀಫ್, ಸಲೀಂ ಮಾನಿಯಾರ, ಸಲೀಂ ಕೊಪ್ಪಳ ಸೇರಿದಂತೆ ಸಮಾಜ ಭಾಂದವರು ಉಪಸ್ಥಿತರಿದ್ದರು.

ಹೊಳಗಟ್ಟಿಯನ್ನು ಭದ್ರಪಡಿಸಿ ಸ್ಮಾರಕವನ್ನಾಗಿ ರೂಪಿಸುವಂತೆ ಸಚಿವ ಎಚ್ ಕೆ ಪಾಟೀಲರಿಗೆ ಮನವಿ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಂದ 4 ಕೀ.ಮೀ ದೂರದಲ್ಲಿರುವ ಅಕ್ಕಮ್ಮ ಬಸಪ್ಪ ಕಟಿಗ್ಗಾರ ಅವರ ಜಮೀನಿನಲ್ಲಿ ಪ್ರಾಚ್ಯಾವಶೇಷಗಳಿಂದ ನಿರ್ಮಾಣವಾಗಿರುವ ಹೊಳಗಟ್ಟಿಯನ್ನು ಭದ್ರಪಡಿಸಿ ಸ್ಮಾರಕವನ್ನಾಗಿ ರೂಪಿಸಬೇಕೆಂದು ಇಲ್ಲಿಯ ರೈತರು ಒತ್ತಾಯಿಸಿದ್ದಾರೆ.

ಈ ಕುರಿತು ಹೊಳಗಟ್ಟಿ ಜಮೀನಿಗೆ ಭೇಟಿ ನೀಡಿದ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಡಾ. ಎಚ್.ಕೆ. ಪಾಟೀಲರಿಗೆ ಮನವಿ ಪತ್ರ ಸಲ್ಲಿಸಿದ ರೈತರು, ಲಕ್ಕುಂಡಿಯ ಗತ ವೈಭವವನ್ನು ಮರು ಸೃಷ್ಟಿಸಲು ಗ್ರಾಮದ ಮನೆ, ತಿಪ್ಪೆ, ಹಿತ್ತಲು, ಹೊಲದ ಬದುಗಳಲ್ಲಿ, ಕೆರೆಗಳಲ್ಲಿ, ಹೊಳಗಟ್ಟಿಗಳಲ್ಲಿ ಜೋಡಿಸಲಾಗಿರುವ ಪ್ರಾಚ್ಯಾವಶೇಷಗಳನ್ನು ಸಂಗ್ರಹ ಮಾಡುತ್ತಿರುವುದು ಸಂತಸದ ವಿಷಯವಾಗಿದೆ. ಅದರಂತೆ ಲಕ್ಕುಂಡಿ ದಕ್ಷಿಣ ಭಾಗದ ಜಮೀನು ಸರ್ವೇ ನಂ-216ರ ಹಿಸ್ಸಾ 1ರಲ್ಲಿ ಅಕ್ಕಮ್ಮ ಬಸಪ್ಪ ಕಟಿಗ್ಗಾರ ಅವರ ಜಮೀನಿನಲ್ಲಿ ದೊಡ್ಡ ಪ್ರಮಾಣದ ಹೊಳಗಟ್ಟಿಯಿದೆ. ಈ ಹೊಳಗಟ್ಟಿಯನ್ನು ಹಿರಿಯರು ಪ್ರಾಚ್ಯ ವಸ್ತುಗಳ ಕಲ್ಲುಗಳಿಂದ ನಿರ್ಮಾಣ ಮಾಡಿದ್ದು ಕಂಡುಬಂದಿದೆ.

ಈ ಪ್ರಾಚ್ಯಾವಶೇಷಗಳ ಸ್ಮಾರಕಗಳನ್ನು ತೆರವುಗೊಳಿಸಿ ಸಂಗ್ರಹ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಈ ಹೊಳಗಟ್ಟಿಗೆ ನೂರಾರು ಹೆಕ್ಟೆರ್ ಜಮೀನುಗಳಿಂದ ಮಳೆಯ ನೀರು ಹರಿದು ಬರುತ್ತದೆ. ಈ ನೀರು ಬರುವುದರಿಂದ ನಮ್ಮೆಲ್ಲರ ಜಮೀನಿನಲ್ಲಿರುವ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ. ಈ ಹೊಳಗಟ್ಟಿ ಸರಿಪಡಿಸಲು ಸಾಕಷ್ಟು ಶ್ರಮ ಹಾಗೂ ಅಧಿಕ ಹಣ ಖರ್ಚು ಮಾಡಲಾಗಿದೆ.

ಈ ಹೊಳಗಟ್ಟಿಗೆ ಜೋಡಿಸಲಾಗಿರುವ ಪ್ರಾಚ್ಯಾವಶೇಷಗಳನ್ನು ತೆರೆವುಗೊಳಿಸದೇ ಇನ್ನಷ್ಟು ಭದ್ರಪಡಿಸಿ  ಸುಂದರ ತಾಣವನ್ನಾಗಿ ಮಾಡಿ ಲಕ್ಕುಂಡಿ ಆಗಮಿಸುವ ಪ್ರವಾಸಿಗರಿಗೆ ವಿಕ್ಷೀಸುವಂತಾಗಲು ಸರಕಾರ ಮುಂದಾಗಬೇಕೆಂದು ಸ್ಥಳೀಯರಾದ ರವಿರಾಜ ಕಟಿಗ್ಗಾರ, ಮಂಜುನಾಥ ಕಟಿಗ್ಗಾರ, ಮಲ್ಲಪ್ಪ ಮಂಗಳೂರು, ಯಲ್ಲಪ್ಪ ಮುಳ್ಳಾಳ, ಬಸವಣ್ಣಿಪ್ಪ ಶೇಡದ, ಮಹಾಂತೇಶಗೌಡ ಪಾಟೀಲ,  ಮುಜರಪ್ಪ ಜವಳಬೆಂಚಿ, ಈರಪ್ಪ ಸಾಲಮನಿ, ರಾಮಣ್ಣ ಕಲಾಲ, ವೀರಪ್ಪ ಗರ್ಜಪ್ಪನವರ, ಪ್ರಕಾಶ ಹಣವಾಳ, ಹುಲಗಪ್ಪ ಹಳ್ಳಿಕೇರಿ, ಪಾಲಾಕ್ಷಪ್ಪ ಹಣವಾಳ, ವೀರಯ್ಯ ಗಂಧದ, ಮಹಾಂತೇಶ ಕಮತರ, ಕೊಟ್ರಪ್ಪ ಬಳಿಗೇರ, ಈರಪ್ಪ ಕಮತರ, ಬಸಪ್ಪ ತಿಮ್ಮಾಪೂರ, ಮುತ್ತಪ್ಪ ಬಟ್ಟೂರ, ಮಲ್ಲಪ್ಪ ಗರ್ಜಪ್ಪನವರ, ನಿಂಗಪ್ಪ ಮಡಿವಾಳರ, ನೀಲಮ್ಮ ವಡ್ಡರ, ಕಲ್ಲಪ್ಪ ಅಂಬಕ್ಕಿ ಸೇರಿದಂತೆ ನೂರಾರು ರೈತರು ಮನವಿ ಮಾಡಿದರು.

ಎಲ್ಲೆಡೆ ಧಾರ್ಮಿಕ ಕಾರ್ಯ, ಚಿಂತನೆಗಳು ನಡೆದಾಗ ಮಾತ್ರ ಗ್ರಾಮಗಳು ಸುಧಾರಣೆಯಾಗಲು ಸಾಧ್ಯ: ಶ್ರೀಕಾಂತ ಕುಲಕರ್ಣಿ

0

ವಿಜಯಸಾಕ್ಷಿ ಸುದ್ದಿ, ರೋಣ: ಪ್ರಸಕ್ತ ದಿನಗಳಲ್ಲಿ ಧಾರ್ಮಿಕ ಚಿಂತನೆಗಳು ಅಗತ್ಯವಾಗಿದ್ದು, ಈ ದಿಶೆಯಲ್ಲಿ ಗ್ರಾಮದಲ್ಲಿ ನಡೆಯುತ್ತಿರುವ ಧಾರ್ಮಿಕ ಪ್ರವಚನ ಸಹಕಾರಿಯಾಗಿದೆ. ಎಲ್ಲೆಡೆ ಧಾರ್ಮಿಕ ಕಾರ್ಯಗಳು ಹಾಗೂ ಚಿಂತನೆಗಳು ನಡೆಯಬೇಕು. ಅಂದಾಗ ಮಾತ್ರ ಗ್ರಾಮಗಳು ಸುಧಾರಣೆಯಾಗಲು ಸಾಧ್ಯವಾಗುತ್ತದೆ ಎಂದು ಕೃ.ಪ.ಸ.ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ ಹೇಳಿದರು.

ಅವರು ರವಿವಾರ ಸಂಜೆ ಮಾರನಬಸರಿ ಗ್ರಾಮದ ಸರ್ವಧರ್ಮ ಸಮನ್ವಯ ಪೀಠದ ಧಾರ್ಮಿಕ ಪ್ರವಚನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರೊ. ಎಫ್.ಎಂ. ಹುಡೇದ ಹಾನಗಲ್ಲ ಕುಮಾರೇಶ್ವರರ ಕುರಿತು ಉಪನ್ಯಾಸ ನೀಡಿದರು. ಶಾಂತಮ್ಮ ಮರಾಠ ಅಧ್ಯಕ್ಷತೆ ವಹಿಸಿದ್ದರು. ಶಿವಮೂರ್ತಿ ಶ್ರೀಗಳು ಸಾನ್ನಿಧ್ಯ ಹಾಗೂ ಶಿವಯೋಗಿ ದೇವರು ಸಮ್ಮುಖ ವಹಿಸಿದ್ದರು. ಗದಿಗೆಯ್ಯ ದೇವರು ವಿರಕ್ತಮಠ ಪ್ರವಚನ ನೀಡಿದರು. ದಾಸೋಹ ಸೇವೆ ಸಲ್ಲಿಸಿದ ಮರಿಯಮ್ಮ ಅಯ್ಯಪ್ಪ ಹಾದಿಮನಿರವರನ್ನು ಸನ್ಮಾನಿಸಲಾಯಿತು.

ಪತ್ರಕರ್ತ ಮೆಹೆಬೂಬ ಮೋತೆಖಾನ್, ಎಸ್‌ಡಿಎಂಸಿ ಅಧ್ಯಕ್ಷ ಕೂಡ್ಲೆಪ್ಪ ಹಡಪದ, ಗ್ರಾ.ಪಂ ಸದಸ್ಯರಾದ ದಿಲ್‌ಶ್ಯಾದಬೇಗಂ ದೋಟಿಹಾಳ, ಹನಮವ್ವ ತಳವಾರ, ನ್ಯಾಯವಾದಿ ಭರತಕುಮಾರ ಹಾದಿಮನಿ, ನಿವೃತ್ತ ಶಿಕ್ಷಕ ಎಸ್.ಬಿ. ಪೂಜಾರ, ಚಂದ್ರಶೇಖರಯ್ಯ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

error: Content is protected !!