Home Blog Page 2079

ಹೇರ್ ಡ್ರೈಯರ್ ಬ್ಲಾಸ್ಟ್ ಪ್ರಕರಣಕ್ಕೆ ಸ್ಪೋಟಕ ತಿರುವು! ಅಸಲಿ ಕಥೆಯೇ ಬೇರೆ!

0

ಬಾಗಲಕೋಟೆ:- ಇತ್ತೀಚೆಗೆ ನಡೆದಿದ್ದ ಹೇರ್ ಡ್ರೈಯರ್ ಬ್ಲಾಸ್ಟ್ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದ್ದು, ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಕೊಲೆಗಾಗಿ ಸಂಚು ರೂಪಿಸಿರೋದು ತಿಳಿದು ಬಂದಿದೆ.

ಘಟನೆ ಸಂಬಂಧ ಓರ್ವ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತನನ್ನು ಸಿದ್ದಪ್ಪ ಶೀಲವಂತ ಎಂದು ಗುರುತಿಸಲಾಗಿದೆ.

ಜಿಲ್ಲೆಯ ಇಳಕಲ್ ನಗರದಲ್ಲಿ ನವೆಂಬರ್ 15 ರಂದು ಹೇರ್​ ಡ್ರೈಯರ್​​ ಬ್ಲಾಸ್ಟ್ ಆಗಿ, ಮೃತ ಯೋಧನ ಪತ್ನಿ ಬಸವರಾಜೇಶ್ವರಿ ಯರನಾಳ ಎರಡು ಮುಂಗೈ ಕಟ್ ಆಗಿದ್ದವು. ಕೇವಲ ಹೇರ್ ಡ್ರೈಯರ್ ಬ್ಲಾಸ್ಟ್​ನಿಂದ ಇಷ್ಟೊಂದು ಭೀಕರ ಸ್ಫೋಟ ಹೇಗೆ ಎಂದು ಅಚ್ಚರಿಯಾಗಿತ್ತು. ಜೊತೆಗೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು‌. ತನಿಖೆಯ ಗಂಭೀರತೆ ಅರಿತ ಇಳಕಲ್ ನಗರ ಠಾಣೆ ಪೊಲೀಸರು ಎರಡೇ ದಿನದಲ್ಲಿ ಪ್ರಕರಣ ಭೇದಿಸಿದ್ದಾರೆ. ಆ ಮೂಲಕ ಬ್ಲಾಸ್ಟ್ ಹಿಂದೆ ಲವ್ ಸ್ಟೋರಿ ಇರುವುದು ಬಹಿರಂಗವಾಗಿದೆ.

ಬಸವರಾಜೇಶ್ವರಿ ಹಾಗೂ ಸಿದ್ದಪ್ಪ ಶೀಲವಂತರ ಮಧ್ಯೆ ಪ್ರೀತಿ ಇತ್ತು‌. ಇದಕ್ಕೆ ಬಸವರಾಜೇಶ್ವರಿ ಸ್ನೇಹಿತೆ ಶಶಿಕಲಾ ಅಡ್ಡಿಯಾಗಿದ್ದಳು‌. ಇದು ಸರಿಯಲ್ಲ ಎಂದು ಹೇಳಿದ್ದಳು. ನಂತರ ಬಸವರಾಜೇಶ್ವರಿ ಸಿದ್ದಪ್ಪ ಜೊತೆ ಮಾತಾಡೋದನ್ನು ಬಿಟ್ಟಿದ್ದಳು. ಇದಕ್ಕೆಲ್ಲ ಕಾರಣ ಶಶಿಕಲಾ, ಆಕೆಯನ್ನೇ ಮುಗಿಸೋಣ ಎಂದ ಸಿದ್ದಪ್ಪ ಗ್ರಾನೈಟ್ ಡೆಟೊನೇಟರ್ ಡ್ರೈಯರ್​ನಲ್ಲಿ ಅಳವಡಿಸಿ ಶಶಿಕಲಾ ಅವರಿಗೆ ಕೊರಿಯರ್ ಮಾಡಿದ್ದ. ಆದರೆ ಅದನ್ನು ರಿಸೀವ್ ಮಾಡಿದ ಪ್ರೇಯಸಿ ಬಸವರಾಜೇಶ್ವರಿ ಕೈ ಕಳೆದುಕೊಳ್ಳುವಂತಾಗಿದೆ‌.

ಈ ಸಂಬಂಧ ಮಾತನಾಡಿದ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠ ಅಮರನಾಥ ರೆಡ್ಡಿ, ‘ಕೊಲೆಗೆ ಯತ್ನಿಸಿದ ಸಿದ್ದಪ್ಪ ಶೀಲವಂತ ಎಂಬುವವರನ್ನು ಪೊಲೀಸರು ಬಂಧಿಸಿದ್ದೇವೆ’ ಎಂದರು.

ಹೇರ್ ಡ್ರೈಯರ್ ಸ್ಫೋಟಗೊಂಡು ಗಾಯಗೊಂಡಿರುವ ಬಸವರಾಜೇಶ್ವರಿ ಯರನಾಳ, ಕೊಲೆಗೆ ಸಂಚು ರೂಪಿಸಿದ್ದ ಸಿದ್ದಪ್ಪ ಶೀಲವಂತ ಕುಷ್ಟಗಿ ತಾಲ್ಲೂಕಿನ ಪುರತಗೇರಿಯವರು. ಅವರಿಬ್ಬರಿಗೆ ಮದುವೆಗೆ ಮೊದಲೇ ಪರಿಚಯವಿತ್ತು. ಅವರ ಪತಿ ನಿಧನದ ನಂತರ ಮತ್ತೆ ಸಂಪರ್ಕಕ್ಕೆ ಬಂದಿದ್ದರು. ಇಳಕಲ್‌ನಲ್ಲಿದ್ದ ಅವರ ಮನೆಗೆ ಹೋಗುತ್ತಿದ್ದನ್ನು, ತಮ್ಮಿಬ್ಬರ ನಡುವೆ ಸಂಬಂಧವಿತ್ತು ಎಂಬುದನ್ನು ಸಿದ್ದಪ್ಪ ಒಪ್ಪಿಕೊಂಡಿದ್ದಾನೆ’ ಎಂದು ತಿಳಿಸಿದರು.

‘ಬಸವರಾಜೇಶ್ವರಿ, ಶಶಿಕಲಾ ಇಬ್ಬರ ಪತಿ ಸೇನೆಯಲ್ಲಿದ್ದರು. ಇಬ್ಬರ ಪತಿಯೂ ಮೃತರಾಗಿದ್ದಾರೆ. ಸೈನಿಕ ಕಲ್ಯಾಣ ಮಂಡಳಿಗೆ ಹೋದಾಗ ಇಬ್ಬರಿಗೆ ಪರಿಚಯವಾಗಿ, ಸ್ನೇಹಿತೆಯರಾಗಿದ್ದರು. ಸಿದ್ದಪ್ಪ ಅವರನ್ನು ಅಲ್ಲಿಯೇ ಬಸವರಾಜೇಶ್ವರಿ, ಶಶಿಕಲಾಗೆ ಪರಿಚಯಿಸಿದ್ದರು’ ಎಂದರು.

ಸಿದ್ದಪ್ಪನೊಂದಿಗೆ ಸಂಬಂಧ ಒಳ್ಳೆಯದಲ್ಲ. ಅದನ್ನು ಬಿಟ್ಟು ಬಿಡುವಂತೆ ಶಶಿಕಲಾ, ಬಸವರಾಜೇಶ್ವರಿಗೆ ಸಲಹೆ ನೀಡಿದ್ದರು. ಅದರಂತೆ ಸಿದಪ್ಪ ಅವರನ್ನು ದೂರ ಇಡಲಾರಂಭಿಸಿದರು. ಇದರಿಂದ ಸಿಟ್ಟಿಗೆದ್ದು ಶಶಿಕಲಾ ಅವರನ್ನು ಕೊಲೆ ಮಾಡಲು ಸಿದ್ದಪ್ಪ ಸಂಚು ರೂಪಿಸಿದ್ದ’ ಎಂದು ವಿವರಿಸಿದರು.

‘ದಾಲ್ಫಿನ್‌ ಗ್ರಾನೈಟ್ಸ್ ಕಂಪನಿಯಲ್ಲಿ ಸೂಪರ್‌ವೈಸರ್ ಆಗಿದ್ದ ಸಿದ್ದಪ್ಪ, ಅಲ್ಲಿ ಕಲ್ಲು ಸ್ಫೋಟಿಸಲು ಇಟ್ಟಿದ್ದ ಡಿಟೊನೇಟರ್‌ ತಂದಿದ್ದ. ಅದನ್ನು ಹೇರ್‌ ಡ್ರೈಯರ್‌ಗೆ ಜೋಡಿಸಿ, ಅದನ್ನು ಬಾಗಲಕೋಟೆಯ ಡಿಟಿಡಿಸಿ ಕೋರಿಯರ್‌ನಿಂದ ಶಶಿಕಲಾಗೆ ಕಳುಹಿಸಿದ್ದರು. ಊರಿನಲ್ಲಿಲ್ಲದ್ದರಿಂದ ಬಸವರಾಜೇಶ್ವರಿಗೆ ತರಲು ಶಶಿಕಲಾ ತಿಳಿಸಿದ್ದಳು’ ಎಂದರು.

‘ಕೊರಿಯರ್‌ ತಂದಿದ್ದ ಬಸವರಾಜೇಶ್ವರಿ ಮನೆಯಲ್ಲಿರಿಸಿದ್ದರು. ಶಾಲೆಯಿಂದ ಮಕ್ಕಳು, ಕೊರಿಯರ್ ಓಪನ್‌ ಮಾಡಿ ಏನು ಬಂದಿದೆ ನೋಡುವಂತೆ ಕೇಳಿದಾಗ ಅದನ್ನು ಓಪನ್‌ ಮಾಡಲಾಗಿತ್ತು. ಹೇರ್‌ ಡ್ರಯರ್ ಇದ್ದದ್ದರಿಂದ ಆನ್‌ ಮಾಡಲು ಪ್ಲಗ್‌ ಹಾಕಿ, ಸ್ವಿಚ್‌ ಆನ್‌ ಮಾಡುತ್ತಿದ್ದಂತೆಯೇ ಸ್ಫೋಟಗೊಂಡು ಎರಡೂ ಕೈ ಬೆರಳುಗಳು ಛಿದ್ರಗೊಂಡಿವೆ’ ಎಂದು ತಿಳಿಸಿದರು.

ಪುರಾತನ ಕಾಲದ ಸ್ಮಾರಕಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ: ಡಾ. ದೇವರಾಜು ಎಸ್.ಎಂ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ನಮ್ಮ ಪುರಾತನ ಕಾಲದ ಮೌಲ್ಯಯುತ ಸ್ಮಾರಕಗಳನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರದ್ದಾಗಿದೆ ಎಂದು ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಹಾಯಕ ಅಧೀಕ್ಷಕ ಡಾ. ದೇವರಾಜು ಎಸ್.ಎಂ ಹೇಳಿದರು.

ಇಲ್ಲಿಯ ಪ್ರಾಚ್ಯ ವಸ್ತು ಸಂಗ್ರಾಲಯದ ಕೇಂದ್ರ ಸಂರಕ್ಷಿತ ಸ್ಮಾರಕವಾದ ಬ್ರಹ್ಮ ಜಿನಾಲಯದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಧಾರವಾಡ ವಲಯದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಂಪರಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪುರಾತನ ಕಾಲದ ವಾಸ್ತು ಶಿಲ್ಪ ಕಲೆಯು ಬೆಲೆಯುಳ್ಳದಾಗಿದ್ದು, ಸುಂದರ ಕೆತ್ತನೆಯಿಂದ ಕೂಡಿವೆ. ಅವುಗಳನ್ನು ಸಂರಕ್ಷಿಸಲು ವಿದ್ಯಾರ್ಥಿಗಳು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ವಿದ್ಯಾರ್ಥಿ ದಿಸೆಯಲ್ಲಿಯೇ ತಮ್ಮೂರಿನ ಇತಿಹಾಸ, ಶಿಲ್ಪಕಲೆ, ದೇವಾಲಯಗಳ ಕುರಿತು ಅಧ್ಯಯನ ಮಾಡಬೇಕು. ಅಂದಾಗ ಮಾತ್ರ ಪ್ರವಾಸಿಗರು ತಮ್ಮ ಗ್ರಾಮಕ್ಕೆ ಬಂದಾಗ ತಾವು ಅವರಿಗೆ ಮಾಹಿತಿ ನೀಡಬಹುದು. ನ.೧೯ ರಿಂದ ೨೫ರವರೆಗೂ ವಿಶ್ವ ಪರಂಪರಾ ಸಪ್ತಾಹವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತಿದ್ದು, ಇದರ ಮುಖ್ಯ ಉದ್ದೇಶವೆಂದರೆ, ದೇಶದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ಸ್ಮಾರಕಗಳ ಸಂರಕ್ಷಣೆ ಮತ್ತು ಮಹತ್ವ ಕುರಿತಂತೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿಯನ್ನು ಹೆಚ್ಚಿಸುವುದಾಗಿದೆ ಎಂದು ವಿವರಿಸಿದರು.

ದೈಹಿಕ ಶಿಕ್ಷಕಿ ಜ್ಯೋತಿ ಜೈಶೀಲಾ ಉಪಸ್ಥಿತರಿದ್ದರು. ಹಿರಿಯ ಸಂರಕ್ಷಣಾ ಅಧಿಕಾರಿ ಉಮೇಶ ಸ್ವಾಗತಿಸಿದರು. ಸ್ಮಾರಕ ಪ್ರಚಾರಕ ಸುರೇಶ ಪಾಪಳೆ ವಂದಿಸಿದರು. ಕಾರ್ಯಕ್ರಮದಲ್ಲಿ ಇಲಾಖೆಯ ಸಿಬ್ಬಂದಿಯವರು ಭಾಗವಹಿಸಿದ್ದರು.

ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ರಕ್ಷಣೆ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ವಾ.ಕ.ರ.ಸಾ ಸಂಸ್ಥೆಯ ಗದಗ ವಿಭಾಗದ ಚಾಲನಾ ಸಿಬ್ಬಂದಿಗಳ ಮೇಲೆ ಆಗುತ್ತಿರುವ ಹಲ್ಲೆಗಳಿಂದ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಸಂಸ್ಥೆಯ ವಿವಿಧ ಕಾರ್ಮಿಕ ಸಂಘಟನೆಗಳಿಂದ ಗದಗ ಪೊಲೀಸ್ ಇಲಾಖೆಯ ಡಿಎಸ್ಪಿ ಮೂಲಕ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಗದಗ ಮುಳಗುಂದ ನಾಕಾ ಬಳಿ ಇರುವ ಸಂಸ್ಥೆಯ ವಿಭಾಗೀಯ ಕಚೇರಿಯ ಮುಂದೆ ಸೇರಿದ ಕಾರ್ಮಿಕ ಸಂಘಟನೆಯ ಮುಖಂಡರು ಘೋಷಣೆಯೊಂದಿಗೆ ಡಿಎಸ್ಪಿ ಕಾರ್ಯಾಲಯದವರೆಗೆ ಪಾದಯಾತ್ರೆ ಕೈಗೊಂಡು ಮನವಿ ಸಲ್ಲಿಸಿದರು.

ವಾ.ಕ.ರ.ಸಾ ಸಂಸ್ಥೆಯ ಗದಗ ವಿಭಾಗದ ಸಿಬ್ಬಂದಿಗಳು ಕರ್ನಾಟಕ ಸರಕಾರ ಅಗತ್ಯ ಸೇವಾ ಕಾಯ್ದೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು, ಅದರಲ್ಲೂ ವಿಶೇಷವಾಗಿ ಬಸ್ ಡ್ರೈವರ್ ಹಾಗೂ ಕಂಡಕ್ಟರ್, ಡಿ ಕಮ್ ಸಿ ಹಗಲು-ರಾತ್ರಿ ಎನ್ನದೇ ದಿನದ 24 ಗಂಟೆಯೂ ಸಾರ್ವಜನಿಕರಿಗೆ ಪ್ರಯಾಣದ ಸೇವೆ ಒದಗಿಸುತ್ತಿದ್ದಾರೆ.

ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಡ್ರೈವರ್, ಕಂಡಕ್ಟರ್‌ಗಳು ಶ್ರಮಿಸುತ್ತಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ದಟ್ಟಣೆ, ಗದ್ದಲ ಹೆಚ್ಚಾಗುತ್ತಿದೆ. ಸ್ಟೇಜ್ ದಾಟುವುದರೊಳಗೆ ದಾರಿ ಚೀಟಿ ನೀಡಬೇಕಾದ ನಿಯಮ ಇರುವುದರಿಂದ ದಾರಿ ಚೀಟಿ ನೀಡಲು ಬಸ್ ನಿಲ್ಲಿಸುತ್ತಿದ್ದಂತೆಯೆ ಪ್ರಯಾಣಿಕರು ಡ್ರೈವರ್ -ಕಂಡಕ್ಟರ್ ಮೇಲೆ ಸಿಟ್ಟಾಗುವದು, ಬೈದಾಡುವದು ಅಷ್ಟೇ ಅಲ್ಲದೆ ವಾಗ್ವಾದಕ್ಕಿಳಿದು ಹಲ್ಲೆ ನಡೆಸುವಂತಹ ಕೃತ್ಯ ನಡೆಸುತ್ತಿರುವುದು ಕಳವಳಕಾರಿ ಘಟನೆಯಾಗಿದೆ.

ಒಂದು ವೇಳೆ ಸ್ಟೇಜ್ ದಾಟಿದರೆ ತನಿಖೆಯ ಅಧಿಕಾರಿಗಳು ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸಸ್ಪೆಂಡ್ ಮಾಡುವ ಸಂಭವ ಇರುವುದರಿಂದ ನೌಕರಿ ಮಾಡುವುದೇ ಕಷ್ಟವಾಗಿದೆ. ಕಾರಣ ಈ ಕುರಿತು ಸಂಸ್ಥೆಯ ನೌಕರರ, ಸಿಬ್ಬಂದಿಯ ಮೇಲೆ ಆಗುತ್ತಿರುವ, ಆಗಬಹುದಾದ ಹಲ್ಲೆಗಳನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಂಡು ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ವಿವರಿಸಿದರು.

ಮನವಿ ಸ್ವೀಕರಿಸಿದ ಪ್ರಭಾರ ಡಿಎಸ್ಪಿ ಮಹಾಂತೇಶ ಸಜ್ಜನ, ಮನವಿಯನ್ನು ಸೂಕ್ತ ಕ್ರಮಕ್ಕಾಗಿ ಹಿರಿಯ ಅಧಿಕಾರಿಗಳಿಗೆ ತಲುಪಿಸುವದಾಗಿ ಹೇಳಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಶಾಂತಣ್ಣ ಮುಳವಾಡ, ನಾಗರಾಜ ಬಳ್ಳಾರಿ, ಎಸ್.ಎಫ್. ಸಂಗಣ್ಣವರ, ಸಂತೋಷ ಕುಲಕರ್ಣಿ, ಗೋಪಾಲ ರಾಯರು, ಎಂ.ಎಚ್. ಪೂಜಾರ, ಎಫ್.ಎಚ್. ಗೌಡರ, ಎ.ಜಿ. ಸುಂಕದ, ಬಿ.ಎಚ್. ರಾಮೇನಹಳ್ಳಿ, ಎಚ್.ಸಿ. ಕೊಪ್ಪಳ, ಎಂ.ಆAಜನೇಯ, ಎಸ್.ಕೆ. ಭಜಂತ್ರಿ, ಎಸ್.ಕೆ. ಅಯ್ಯನಗೌಡರ, ಎ.ಕೆ. ಕರ್ನಾಚಿ, ಜಿ.ಆರ್. ಆದಿ, ಆಂಜನೇಯ ಕುಂಬಾರ, ಲಕ್ಮೀ ಸಾಲಮನಿ, ವಿದ್ಯಾ ಮೇಘರಾಜ, ವೀಣಾ ಚವ್ಹಾಣ, ಜೆ.ಜೆ. ಪಠಾಣ, ಸಿದ್ಧಪ್ಪ ಗದಗಿನ, ಮಲ್ಲಪ್ಪ ಅವ್ವಣ್ಣವರ, ಅಶೋಕ ಸಂಗಟಿ, ಕೆಂಚಪ್ಪ ಡೊಳ್ಳಿನ, ಈರಣ್ಣ ಜವಳಿ, ಬಸವರಡ್ಡಿ, ವ್ಹಿ.ವ್ಹಿ. ಗೋದಿ ಮುಂತಾದವರು ಪಾಲ್ಗೊಂಡಿದ್ದರು.

ಡಾ. ಹೆಚ್.ಕೆ. ಪಾಟೀಲ ಸೇವಾ ತಂಡದ ಸಹಯೋಗದಲ್ಲಿ ಉಚಿತ ನೇತ್ರ ಪರೀಕ್ಷಾ ಶಿಬಿರ

0

ವಿಜಯಸಾಕ್ಷಿ ಸುದ್ದಿ, ಗದಗ: ಹುಲಕೋಟಿಯ ಕೆ.ಎಚ್. ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯ ವತಿಯಿಂದ ಡಾ. ಹೆಚ್.ಕೆ. ಪಾಟೀಲ ಸೇವಾ ತಂಡದ ಸಹಯೋಗದಲ್ಲಿ ಗದಗ-ಬೆಟಗೇರಿಯ ವಾರ್ಡ್ ನಂ.5ರ ನರಸಾಪೂರ ಆಶ್ರಯ ಕಾಲೋನಿಯಲ್ಲಿ ಉಚಿತ ನೇತ್ರ ಪರೀಕ್ಷಾ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಶಿಬಿರದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಹೆಚ್.ಕೆ. ಪಾಟೀಲ ಸೇವಾ ತಂಡದ ಕ್ಯಾಪ್ಟನ್ ಶಾಕೀರ ಕಾತರಕಿ, ಕಾಂಗ್ರೆಸ್ ಮೀನುಗಾರಿಕೆ ವಿಭಾಗ ಮುಂಚೂಣಿ ಘಟಕದ ಅಧ್ಯಕ್ಷ ಸಂಗಮೇಶ ಹಾದಿಮನಿ, ನಾಗರಾಜ ಮುಳ್ಳಾಳ, ಕಾಂಗ್ರೆಸ್ ಮುಖಂಡರಾದ ವಾಸು ಜೋಗಿಯವರ ಸಹಕಾರದೊಂದಿಗೆ ೧೫೦ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ಹಾಗೂ ಕಣ್ಣಿನ ತಪಾಸಣೆ ಮಾಡಲಾಯಿತು.

ಶಿಬಿರದಲ್ಲಿ ಕೆ.ಎಚ್. ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯ ವೈದ್ಯರ ತಂಡ ಹಾಗೂ ಸಿಬ್ಬಂದಿ ವರ್ಗದವರು ತಪಾಸಣೆ ನಡೆಸಿದರು. ಸಚಿವ ಎಚ್.ಕೆ. ಪಾಟೀಲರರ ಜನಪರ ಕಾರ್ಯಗಳಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.

ಇತಿಹಾಸ ಬಲ್ಲವರು ಮಾತ್ರ ಇತಿಹಾಸ ಸೃಷ್ಟಿಸುತ್ತಾರೆ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ಇತಿಹಾಸ ಬಲ್ಲವರು ಮಾತ್ರ ಇತಿಹಾಸ ಸೃಷ್ಟಿಸುತ್ತಾರೆ. ಪಾರಂಪರಿಕ ಲಕ್ಕುಂಡಿ ಕ್ಷೇತ್ರದ ಅನ್ವೇಷಣೆ ಮೂಲಕ ಇತಿಹಾಸ ತಿಳಿದು, ಲಭ್ಯವಿರುವ ಪ್ರಾಚ್ಯ ವಸ್ತುಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಪ್ರವಾಸೋದ್ಯಮ ಇಲಾಖೆ ಬೆಂಗಳೂರು, ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗ್ರಾಮ ಪಂಚಾಯತ ಲಕ್ಕುಂಡಿ ಇವರುಗಳ ಸಹಯೋಗದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ನಿಮಿತ್ತ ಅಧಿಕಾರಿಗಳಿಗೆ ಹಾಗೂ ಸ್ವಯಂ ಸೇವಕರಿಗೆ ಹಮ್ಮಿಕೊಂಡಿದ್ದ ತರಬೇತಿ  ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಚಿವರು, ಅಧಿಕಾರಿಗಳು, ಸ್ವಯಂ ಸೇವಕರನ್ನು ಒಳಗೊಂಡ ತಂಡದ ಜೊತೆಗೆ ಈಗಾಗಲೇ ಗುರುತು ಮಾಡಿರುವ ಮನೆಗಳಿಗೆ ಹೋಗಿ ಪ್ರಾಚ್ಯ ವಸ್ತುಗಳನ್ನು ನೀಡುವ ಬಗ್ಗೆ ರಶೀದಿ ನೀಡಿ ಪುರಾತನ ವಸ್ತಗಳ  ಭಾರದ ಆಧಾರದ ಮೇಲೆ ವಸ್ತುಗಳನ್ನು ಪಾಲಕಿಯಲ್ಲಿ, ಟ್ಯಾಕ್ಟರ್‌ಗಳಲ್ಲಿ ಸಂಗ್ರಹಿಸುವ ಕಾರ್ಯವಾಗಬೇಕು ಎಂದು ನುಡಿದರು.

ಈ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯವು ವಿದ್ಯಾರ್ಥಿ ಜೀವನದಲ್ಲಿಯೇ ಅತ್ಯುತ್ತಮ ಪ್ರಯೋಗಿಕ ಮತ್ತು ಉತ್ತಮ ಅನುಭವ ನೀಡುವ ಕೆಲಸವಾಗಲಿದೆ. ವಿದ್ಯಾರ್ಥಿಗಳು ಈ ಸಮಯವನ್ನು ಸದ್ಬಳಕೆ ಮಾಡಿಕೊಂಡು ಎಲ್ಲರಿಗೂ ಸಹಕಾರ ನೀಡಿ ಪ್ರಾಚ್ಯಾವಶೇಷಗಳ ಅನ್ವೇಷಣೆಯನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಕರಾದ ಸ್ಮಿತಾ ಅವರು ಮಾತನಾಡಿ, ರಾಜರ ಕಾಲದಲ್ಲಿ ಲಕ್ಕುಂಡಿಯಲ್ಲಿ ಠಂಕಸಾಲೆ ಇತ್ತು ಎಂದು ಶಾಸನಗಳಲ್ಲಿ ಉಲ್ಲೇಖವಿದೆ. ಹಾಗಾಗಿ ಲಕ್ಕುಂಡಿಯಲ್ಲಿ ಮಹತ್ವ ಹಾಗೂ ಮೌಲ್ಯಯುತವಾದ ಶಾಸನ, ನಾಣ್ಯ, ಸ್ಮಾರಕದ ಸಂಪತ್ತಿದೆ. ಮಣ್ಣಿನಲ್ಲಿ ಹುದುಗಿಹೋದ ಸ್ಮಾರಕಗಳನ್ನು ಮರಳಿ ತೆಗೆಯುವ ಕಾರ್ಯ ಆಗಬೇಕು. ಪ್ರಾಚ್ಯಾವಶೇಷಗಳ ಅನ್ವೇಷಣೆಯಲ್ಲಿ ಕಣ್ಣಿಗೆ ಕಾಣುವ ಶಾಸನ, ಶಿಲ್ಪಕಲೆ, ದೇವಾಲಯ ಕುರಿತು ಸ್ಥಳೀಯರಿಗೆ ಇರುವ ಮಾಹಿತಿ ಅವರ ಆಚರಣೆಯನ್ನು ದಾಖಲಿಸಿ, ಪ್ರತಿಯೊಬ್ಬರ ಸಹಕಾರದಿಂದ ಲಕ್ಕುಂಡಿಯಲ್ಲಿ ಲಭ್ಯವಾಗುವ ಪ್ರಾಚ್ಯವಸ್ತುಗಳನ್ನು ಸಂಗ್ರಹಿಸಿ ವಸ್ತು ಸಂಗ್ರಹಾಲಯ ಮಾಡಿ, ಜಾಗತಿಕವಾಗಿ ಲಕ್ಕುಂಡಿಯ ಬಗ್ಗೆ ಗಮನ ಸೆಳೆದು ವಿಶ್ವದ ಪ್ರಸಿದ್ಧ ತಾಣವಾಗಿ ಮಾಡವ ಕಾರ್ಯವಾಗಬೇಕು ಎಂದು ಹೇಳಿದರು.

ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಆಯುಕ್ತರಾದ ಶರಣು ಗೋಗೇರಿ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಮಟ್ಟದ ಸಲಹಾ ಸಮಿತಿ ಅಧ್ಯಕ್ಷರಾದ ಎಚ್.ಕೆ. ಪಾಟೀಲ, ಶಾಸಕ ಸಿ.ಸಿ. ಪಾಟೀಲ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರುಗಳ ನೇತೃತ್ವದಲ್ಲಿ ಜರುಗುವ ಪ್ರಾಚ್ಯಾವಶೇಷಗಳ ಅನ್ವೇಷಣೆ ತಂಡಗಳ ವಿವರ ನೀಡಿ, ತಂಡದ ಕಾರ್ಯ ಹಾಗೂ ರೂಪುರೇಷೆ ತಿಳಿಸಿ ಸಂಪೂರ್ಣ ಪ್ರಾಚ್ಯಾವಶೇಷಗಳ ಅನ್ವೇಷಣೆ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಎನ್‌ಎಸ್‌ಎಸ್, ಎನ್‌ಸಿಸಿ, ಸ್ವಯಂ ಸೇವಕರು, ಪ್ರವಾಸಿ ಗೈಡ್, ಇತಿಹಾಸ ಉಪನ್ಯಾಸಕರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

ನಮ್ಮದು ತ್ಯಾಗ ಮಾಡುವ ಕುಟುಂಬ ವರೆತೂ ಆಸೆ ಪಡುವವರಲ್ಲ: ಸುಮಲತಾ!

0

ಮಂಡ್ಯ:-ಉಚಿತ, ಖಚಿತ, ನಿಶ್ಚಿತ ಅಂದು ಸರ್ಕಾರ ದಿವಾಳಿಯಾಗಿದೆ ಎಂದು ಮಾಜಿ ಸಂಸದೆ ಸುಮಲತಾ ಹೇಳಿದ್ದಾರೆ.

ಈ ಸಂಬಂಧ ಮಂಡ್ಯದಲ್ಲಿ ಮಾತನಾಡಿದ ಅವರು, ʻಸ್ಥಾನಮಾನಕ್ಕಾಗಿ ಸುಮಲತಾ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.

ಕ್ಷೇತ್ರ ಬಿಟ್ಟುಕೊಟ್ಟು ಬಿಜೆಪಿ ಸೇರಿದವಳು ನಾನು. ನಮ್ಮದು ತ್ಯಾಗ ಮಾಡಿರುವ ಕುಟುಂಬ, ಯಾವುದಕ್ಕೂ ಆಸೆ ಪಡುವ ಕುಟುಂಬವಲ್ಲ. ಕ್ಷೇತ್ರವನ್ನ ಬಿಟ್ಟು ಕೊಟ್ಟು ಬಿಜೆಪಿ ಸೇರಿದವಳು ನಾನು, ನಮ್ಮದು ತ್ಯಾಗ ಮಾಡಿರುವ ಕುಟುಂಬ. ಯಾವುದಕ್ಕೂ ಆಸೆ ಪಡುವ ಕುಟುಂಬವಲ್ಲ. ಮೋದಿ ಸರ್ಕಾರದ ಯೋಜನೆಯನ್ನ ಜನರಿಗೆ ತಲುಪಿಸುವ ಆಸೆ ಇದೆ. ಯಾವುದೇ ವೈಯಕ್ತಿಕ ಆಸೆ ನಮಗಿಲ್ಲ. ವೈಯಕ್ತಿಕ ಆಸೆಗಾಗಿ ರಾಜಕಾರಣ ಮಾಡುವವರ ಲೀಸ್ಟ್ ನಮ್ಮ ಮುಂದೆ ಇದೆ ಎಂದು ಕುಟುಕಿದ್ದಾರೆ.

ಬಿಜೆಪಿ ಪಕ್ಷ ಸೇರಿರುವುದೇ ನನಗೆ ಸ್ಥಾನಮಾನ. ಮೋದಿ ಹಿಂದೆ ನಾವು ಇದ್ದೇವೆ, ಅವರ ಕೆಳಗೆ ಕೆಲಸ ಮಾಡ್ತಿರುವುದೇ ನಮಗೆ ಗೌರವ. ನಾನು ಮಂಡ್ಯದಿಂದ ಎಂಪಿ ಆಗಿದ್ದೆ. ಅಂಬರೀಶ್ ಕ್ಯಾಬಿನೆಟ್ ಮಿನಿಸ್ಟರ್ ಆಗಿದ್ದರು. ಕೇಂದ್ರದಲ್ಲಿಯೂ ಮಂತ್ರಿಯಾಗಿದ್ದರು, ಎಲ್ಲವನ್ನೂ ನೋಡಿದ್ದೇವೆ, ಇದಕ್ಕಿಂತ ಇನ್ನೇನು ಸ್ಥಾನಮಾನ ಬೇಕು? ಎಂದು ಪ್ರಶ್ನೆ ಮಾಡಿದ್ದಾರೆ.

ರಾಜ್ಯಮಟ್ಟದ ಕರಾಟೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: 2024-25ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಬೆಂಗಳೂರು ಹಾಗೂ ರಾಘವೇಂದ್ರ ಹೈಟೆಕ್ ಪದವಿಪೂರ್ವ ಕಾಲೇಜು ಡಾವಣಗೆರೆ ಇವರ ಸಹಯೋಗದಲ್ಲಿ ಡಾವಣಗೆರೆಯಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳ ಕರಾಟೆ ಸ್ಪರ್ಧೆಗಳಲ್ಲಿ ಇಲ್ಲಿನ ಸ್ಟುಡೆಂಟ್ ಎಜುಕೇಶನ್ ಸೊಸೈಟಿಯ ಸನ್ಮಾರ್ಗ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಹರ್ಷಿತಾ ಬಾಕಳೆ (-44 ಕೆ.ಜಿ) ದ್ವಿತೀಯ ಸ್ಥಾನ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸಾಹಿಲ್ ವೆರ್ಣೇಕರ್ (-58 ಕೆ.ಜಿ) ತೃತೀಯ ಸ್ಥಾನ ಗಳಿಸಿದ್ದಾರೆ.

ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮಿಂಚಿದ ಈ ವಿದ್ಯಾರ್ಥಿಗಳಿಗೆ ಗದಗ ಜಿಲ್ಲಾ ಪದವಿಪೂರ್ವ ಉಪನಿರ್ದೇಶಕರಾದ ಸಿದ್ಧಲಿಂಗ ಬಂಡೂ ಮಸನಾಯಕ, ಸಂಸ್ಥೆಯ ಚೇರಮನ್ ಪ್ರೊ. ರಾಜೇಶ ಕುಲಕರ್ಣಿ, ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ, ಆಡಳಿತಾಧಿಕಾರಿ ಎಂ.ಸಿ. ಹಿರೇಮಠ, ನಿರ್ದೇಶಕರಾದ ಪ್ರೊ. ರೋಹಿತ ಒಡೆಯರ, ರಾಹುಲ ಒಡೆಯರ, ಪ್ರೊ. ಪುನೀತ ದೇಶಪಾಂಡೆ, ಪ್ರೊ. ಸೈಯ್ಯದ್ ಮತಿನ್ ಮುಲ್ಲಾ ಸೇರಿದಂತೆ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರದ ಕೊಳಗೇರಿ ಪ್ರದೇಶಗಲ್ಲಿ ಮನೆಗಳನ್ನು ನಿರ್ಮಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ 863 ಮನೆಗಳು ಮಂಜೂರಾಗಿದ್ದು, ಮನೆ ನಿರ್ಮಾಣದಲ್ಲಿ ಭಾರೀ ಭ್ರಷ್ಟಾಚಾರ ನಡೆಸಲಾಗುತ್ತಿರುವ ಕುರಿತು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ಈ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ಸ್ಲಂ ಬೋರ್ಡ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್,ಮಾನ್ವಿ ಮಾತನಾಡಿ, ಅಧಿಕಾರಿಗಳು ಸ್ಲಂ ಸಮಿತಿಯ ಮನವಿಗೆ ಪ್ರಾಮಾಣಿಕವಾಗಿ ಸ್ಪಂದಿಸದೇ ನಮ್ಮ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಸ್ಲಂ ಬೋರ್ಡ್ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇರಿ ಸ್ಲಂ ಜನರಿಗೆ ಮೋಸ ಮಾಡಿ ಸರ್ಕಾರದ ವಸತಿ ಯೋಜನೆಯ ಮನೆಗಳನ್ನು ಮಾರಾಟ ಮಾಡುವ ವ್ಯವಹಾರಕ್ಕೆ ನಿಂತಿರುವುದನ್ನು ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ಖಂಡಿಸುತ್ತೇವೆ. ಹಕ್ಕುಪತ್ರಗಳ ನೋಂದಣಿಯಲ್ಲಿ ಈ ಹಿಂದೆ ನಡೆಸಲಾಗಿರುವ ಹಣದ ಅವ್ಯವಹಾರ ಕುರಿತು ಕಚೇರಿ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸ್ಲಂ ಸಮಿತಿಯ ಪ್ರಮುಖರಾದ ಅಶೋಕ ಕುಸಬಿ, ಪರವೀನಬಾನು ಹವಾಲ್ದಾರ, ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ದುರ್ಗಪ್ಪ ಮಣ್ಣವಡ್ಡರ, ಮೆಹರುನಿಸಾ ಡಂಬಳ, ಮೈಮುನ ಬೈರಕದಾರ, ಆಯೀಷಾ ಉಮಚಗಿ, ಪ್ರೇಮಾ ಮಣವಡ್ಡರ, ಸುಶೀಲಮ್ಮ ಗೊಂದಾರ, ಮೆಹಬೂಬಸಾಬ ಬಳ್ಳಾರಿ, ಸಾಕ್ರುಬಾಯಿ ಗೋಸಾವಿ, ಖಾಜೇಸಾಬ ಇಸ್ಮಾಯಿಲನವರ, ಮಕ್ತುಮಸಾಬ ಮುಲ್ಲಾನವರ, ಈರಮ್ಮ ಬೇವಿನಮರದ, ನಾಗರಾಜ ಮಣವಡ್ಡರ, ದಾದು ಗೋಸಾವಿ, ಮಲೇಶಪ್ಪ ಕಲಾಲ, ಚಂದ್ರಪ್ಪ ಲಕ್ಕುಂಡಿ, ಶಂಕ್ರಪ್ಪ ಹದ್ಲಿ ಮುಂತಾದವರು ಭಾಗವಹಿಸಿದ್ದರು.

ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳೊಂದಿಗೆ ಗುರು-ಹಿರಿಯರ ಮಾರ್ಗದರ್ಶನದಲ್ಲಿ ಸಾಗಬೇಕು: ಪ್ರೊ. ರಾಜೇಶ ಹೊಂಗಲ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮನೋರಮಾ ಮಹಾವಿದ್ಯಾಲಯದಲ್ಲಿ ಬಿಸಿಎ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ರಾಜೇಶ ಹೊಂಗಲ ಮಾತನಾಡಿ, ವಿದ್ಯಾರ್ಥಿಗಳು ಆದರ್ಶ ವ್ಯಕ್ತಿತ್ವ ಬೆಳಿಸಿಕೊಳ್ಳಬೇಕಾದರೆ ಉತ್ತಮ ಹವ್ಯಾಸಗಳೊಂದಿಗೆ ಗುರು-ಹಿರಿಯರ ಮಾರ್ಗದರ್ಶನದಲ್ಲಿ ಸಾಗಬೇಕು. ಅಂದಾಗ ಮಾತ್ರ ಜ್ಞಾನದ ಅರಿವು ಹೊಂದುವಲ್ಲಿ ಸಫಲತೆ ಪಡೆಯಬಹುದು ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಎಸ್. ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಆಯೋಜಿಸಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳು ಇಂತಹ ಕಾರ್ಯಾಗಾರ, ಉಪನ್ಯಾಸಗಳಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿರಿ ಎಂದರು.

ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ ಎನ್.ಎಮ್. ಕುಡತರಕರ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಕಿಶೋರ ಮುದಗಲ್ಲ ಹಾಗೂ ನಿರ್ದೇಶಕರಾದ ಮಂಜುನಾಥ ಕುಡತರಕರ, ಸಂಜಯಕುಮಾರ ಕುಡತರಕರ, ಚೇತನ ಕುಡತರಕರ, ಬಿಸಿಎ ಸಂಯೋಜಕರಾದ ಪ್ರೊ. ಸವಿತಾ ಪೂಜಾರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವಾಜಪೇಯಿ, ಮೋದಿ ಪ್ರಧಾನಿ ಆಗದಿದ್ದರೆ ಭಾರತ ಪಾಕಿಸ್ತಾನ ಆಗ್ತಾ ಇತ್ತು: ಎಂ. ಪಿ ರೇಣುಕಾಚಾರ್ಯ

0

ರಾಯಚೂರು: ವಾಜಪೇಯಿ, ಮೋದಿ ಪ್ರಧಾನಿ ಆಗದಿದ್ದರೆ ಭಾರತ ಪಾಕಿಸ್ತಾನ ಆಗ್ತಾ ಇತ್ತು ಎಂದು ಮಾಜಿ ಸಚಿವ ಎಂ. ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ವಾಜಪೇಯಿ, ಮೋದಿ ಪ್ರಧಾನಿ ಆಗದಿದ್ದರೆ ಭಾರತ ಪಾಕಿಸ್ತಾನ ಆಗ್ತಾ ಇತ್ತು.

ಹಿಂದೂ ರಾಷ್ಟ್ರ ಉಳಿಸಲು ಶ್ರೀರಾಮ ಮಂದಿರ ನಿರ್ಮಾಣ ಮಾಡಲಾಗಿದೆ. ವಕ್ಫ್ ರದ್ದತಿಗೆ ಮೋದಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅದಕ್ಕೆ ಹಿಂದೂಗಳು ಬೆಂಬಲ ಕೊಡಬೇಕು. ಎಲ್ಲ ಮಠಾಧೀಶರು ಹೋರಾಟಕ್ಕೆ ಇಳಿಯಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್ ಮುಕ್ತ ಮಾಡಲು ನಾವು ಹೋರಾಟ ಮಾಡಬೇಕು, ಹಿಂದೂಗಳು ಉಳಿಯಲು ಎಲ್ಲರೂ ಒಂದಾಗಬೇಕು. ಮೂರು ಚುನಾವಣೆ ಮೇಲೆ ದುಷ್ಪರಿಣಾಮ ತಪ್ಪಿಸಲು ನೋಟಿಸ್​ ಹಿಂಪಡೆಯಲು ಸಿದ್ದರಾಮಯ್ಯ ಹೇಳಿದ್ದಾರೆ. ಕಾಲಂ ನಂಬರ್ 11 ತೆಗೆಯಲು ಹೇಳಿಲ್ಲ. ವಕ್ಫ್ ಹಠಾವೋ ಅಲ್ಲ, ಕಾಂಗ್ರೆಸ್ ಹಠಾವೋ ಎನ್ನಬೇಕಿದೆ ಎಂದು ಹೇಳಿದರು.

error: Content is protected !!