Home Blog Page 2083

ರಸ್ತೆ ಗುಂಡಿಗಳನ್ನು ಮುಚ್ಚಲು ಕರವೇ ಮನವಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನಾದ್ಯಂತ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಲ್ಲಿ ಬಿದ್ದಿರುವ ತಗ್ಗು, ಗುಂಡಿಗಳನ್ನು ಮುಚ್ಚಬೇಕೆಂದು ಆಗ್ರಹಿಸಿ ಗುರುವಾರ ಶಿರಹಟ್ಟಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ವತಿಯಿಂದ ತಹಸೀಲ್ದಾರ ಮೂಲಕ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ತಾಲೂಕಾಧ್ಯಕ್ಷ ವೀರೇಶ ಪಸಾರದ, ಶಿರಹಟ್ಟಿ ತಾಲೂಕಿನಾದ್ಯಂತ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲ ರಸ್ತೆಗಳು ಹದಗೆಟ್ಟಿದ್ದು, ತಾಲೂಕಿಗೆ ಸಂಬಂಧಿಸಿದಂತೆ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ, ತಾಲೂಕಾ ಮುಖ್ಯ ರಸ್ತೆಗಳೆಲ್ಲವೂ ತಗ್ಗು ಗುಂಡಿಗಳಿಂದ ವಾಹನ ಸವಾರರಿಗೆ ಸಂಚರಿಸಲು ತೊಂದರೆಯಾಗುತ್ತಿದೆ. ಇದರಿಂದ ನಿತ್ಯವೂ ಜನರು ಪರಿತಪಿಸುವಂತಾಗಿದೆ.

ಈಗಲಾದರೂ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ರಸ್ತೆಗಳ ಗುಂಡಿಗಳನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಇಲ್ಲದೇ ಹೋದಲ್ಲಿ ವೇದಿಕೆ ವತಿಯಿಂದ ಶಿರಹಟ್ಟಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ದೇವೇಂದ್ರ ಶಿಂಧೆ, ಅಜಮತ ಮುಜಾವರ, ಬುಡ್ಡೇಸಾಬ ಶಿಗ್ಲಿ, ಮಲ್ಲಿಕ ನಗಾರಿ, ನೂರುಲ್ಲಾ ಮಕಾನದಾರ, ಇಮ್ರಾನ ಭಾವಿಕಟ್ಟಿ, ಫಾರೂಕ ಢಾಲಾಯತ, ಇಮ್ರಾನ ಶಿಗ್ಲಿ, ಬಬಲು ಬುವಾಜಿ, ಹುಸೇನ ಆದ್ರಳ್ಳಿ ಮುಂತಾದವರು ಉಪಸ್ಥಿತರಿದ್ದರು.

ವಿಜೃಂಭಣೆಯಿಂದ ನಡೆದ ಕ್ಷತ್ರಿಯ ಸಮಾಜದ 36ನೇ ಮುಂಜವಿ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಖಾನತೋಟ ಗಂಗಾಪುರ ಪೇಟೆ ಓಣೆಯಲ್ಲಿ 3ನೇ ವರ್ಷದ ಉಪನಯನ ಕಾರ್ಯಕ್ರಮ ಹಾಗೂ ಮದುವೆ ವಿಜೃಂಭಣೆಯಿಂದ ನೆರವೇರಿತು. ಕ್ರಾಂತಿ ಸೇನಾ ಗದಗ ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಲ, ಶ್ರೀ ಜಗದಂಬಾ ಸೇವಾ ಸಮಿತಿಯ ಉಪನಯನ ಸಮಿತಿ ನೇತೃತ್ವದಲ್ಲಿ 36ಮುಂಜವಿ ಕಾರ್ಯಕ್ರಮ ಹಾಗೂ ಒಂದು ಮದುವೆ ಕಾರ್ಯಕ್ರಮ ನೆರವೇರಿತು.  

ಈ ಸಂದರ್ಭದಲ್ಲಿ ಉಪನಯನ ಸಮಿತಿಯ ಗೌರವಾಧ್ಯಕ್ಷ ಪರಶುರಾಮಸಾ ಎಸ್.ಹಬೀಬ, ಅಧ್ಯಕ್ಷ ಶಂಕರಸಾ ಎಸ್.ಬದಿ, ಕ್ರಾಂತಿ ಸೇನಾ ಗದಗ ಜಿಲ್ಲಾಧ್ಯಕ್ಷ, ಉಪನಯನ ಸಂಸ್ಥಾಪಕರು ಬಾಬು ಬಾಕಳೆ, ಉಪಾಧ್ಯಕ್ಷರಾದ ಗುರುನಾಥಸಾ ಎ.ಬಾಕಳೆ, ನಾರಾಯಣ ಆರ್. ನಿರಂಜನ, ಶ್ರೀದೇವಿ ಸಿ.ಕಬಾಡಿ, ಗೌರವ ಕಾರ್ಯದರ್ಶಿ ಉಮೇಶ ಎನ್.ಹಬೀಬ, ಕಾರ್ಯದರ್ಶಿ ಮಂಜುನಾಥ ಕೆಂದೊಳ್ಳಿ, ಸಹ-ಕಾರ್ಯದರ್ಶಿ ಕಸ್ತೂರಿಬಾಯಿ ಎನ್.ಕಬಾಡಿ, ಅಕ್ಷತಾ ಎನ್.ಪವಾರ, ಖಜಾಂಚಿ ನಾರಾಯಣಸಾ ಡಿ.ಖಟವಟೆ, ಉಪ ಖಜಾಂಚಿ ಶಂಕರಸಾ ಕಲಬುರ್ಗಿ, ಸ್ವಾಗತ ಸಮಿತಿಯ ಗುರು ಕೆ.ಭಾಂಡಗೆ, ಪ್ರವೀಣ ಎ.ಹಬೀಬ ಉಪಸ್ಥಿತರಿದ್ದರು.

ಉದ್ದಿಮೆಗಳ ಅಧಿಕೃತ ಲೈಸನ್ಸ್ ತಪಾಸಣೆ ನಡೆಸಿದ ಹಿರಿಯ ಆರೋಗ್ಯ ನಿರೀಕ್ಷಕ ಎಂ.ಎಂ. ಮಕಾನದಾರ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ನಗರಸಭೆಯಿಂದ ಅಧಿಕೃತ ಲೈಸನ್ಸ್ ಪಡೆದುಕೊಳ್ಳದೆ, ಲೈಸನ್ಸ್ ನವೀಕರಿಸಿಕೊಳ್ಳದೆ ಉದ್ದಿಮೆ/ವ್ಯವಹಾರ ನಡೆಸುತ್ತಿರುವವರ ಕುರಿತು ನಗರಸಭೆಯ ಪರಿಸರ ಅಭಿಯಂತರ ಆನಂದ ಬದಿ, ಹಿರಿಯ ಆರೋಗ್ಯ ನಿರೀಕ್ಷಕ ಎಂ.ಎಂ. ಮಕಾನದಾರ ನೇತೃತ್ವದಲ್ಲಿ ಲೈಸನ್ಸ್ ಮತ್ತು ಲೈಸನ್ಸ್ ನವೀಕರಣ ಆಗಿರುವ ಬಗ್ಗೆ ತಪಾಸಣೆಯನ್ನು ಕೈಗೊಂಡರು.

ಲೈಸನ್ಸ್ ಇಲ್ಲದೆ ಮತ್ತು ಲೈಸನ್ಸ್ ನವೀಕರಣ ಆಗದೆ ಇರುವವರಿಗೆ ನೋಟಿಸ್ ನೀಡಲಾಯಿತು. ಸದರಿ ತಪಾಸಣೆಯನ್ನು ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ನಗರಸಭೆ ಲೈಸನ್ಸ್ ಮತ್ತು ಲೈಸನ್ಸ್ ನವೀಕರಣ ಮಾಡದಿದ್ದಲ್ಲಿ ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಕಲಂ ನಂ. 256ರ ಮೇರೆಗೆ ಕ್ರಮ ಜರುಗಿಸಲಾಗುವುದು ಮತ್ತು ತಮಗೆ ನೀಡಿದ ವಿದ್ಯುಚ್ಛಕ್ತಿ ಸಂಪರ್ಕವನ್ನು ಮೊಟಕುಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳುವುದು ಎಂದು ಎಚ್ಚರಿಕೆಯ ನೋಟಿಸನ್ನು ನೀಡಿದರು.

ನಗರಸಭೆ ಸ್ಯಾನಿಟರಿ ಸೂಪರ್‌ವೈಸರ್‌ಗಳಾದ ಹೇಮೇಶ ಯಟ್ಟಿ, ಚಂದ್ರು ಹಾದಿಮನಿ, ಸಣ್ಣಪ್ಪ ಬೋಳಮ್ಮನವರ, ಅರ್ಜುನ ದೊಡ್ಡಮನಿ, ವಿಶ್ವನಾಥ ದೊಡ್ಡಮನಿ, ಕೆಂಚಪ್ಪ ಪೂಜಾರ ಸೇರಿದಂತೆ ನಗರಸಭೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಷರತ್ತು ವಿಧಿಸದೇ ಗ್ಯಾರಂಟಿ ಕೊಟ್ಟು ಈಗ ಬಡವರ ರಕ್ತ ಹೀರುತ್ತಿದ್ದೀರಾ!? ಕಾಂಗ್ರೆಸ್ ವಿರುದ್ಧ ರೇಣುಕಾಚಾರ್ಯ ಕಿಡಿ!

0

ಬೆಂಗಳೂರು:- ಷರತ್ತು ವಿಧಿಸದೇ ಗ್ಯಾರಂಟಿ ಕೊಟ್ಟು ಈಗ ಬಡವರ ರಕ್ತ ಹೀರುತ್ತಿದ್ದೀರಾ!? ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ವಿರುದ್ಧ ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ರದ್ದಾಗಿರುವ ರೇಷನ್ ಕಾರ್ಡ್‌ಗಳನ್ನು ಸರ್ಕಾರ ವಾಪಸ್ ಕೊಡದೇ ಹೋದರೆ ಹಳ್ಳಿಹಳ್ಳಿಗಳಲ್ಲಿ ಹೋರಾಟದ ಮೂಲಕ ಬಿಜೆಪಿ ಜಾಗೃತಿ ಮೂಡಿಸಬೇಕಾಗುತ್ತದೆ ಎಂದರು.

ಚುನಾವಣೆ ಪೂರ್ವದಲ್ಲಿ ಯಾವುದೇ ಷರತ್ತು ವಿಧಿಸದೇ ಎಲ್ಲರಿಗೂ ಉಚಿತ ಎಂದು ಗ್ಯಾರಂಟಿ ಘೋಷಿಸಿದ್ದೀರಿ. ಈಗ ಬಿಪಿಎಲ್ ರದ್ದುಪಡಿಸಿದ್ದೀರಿ. ಸಿಎಂ, ಆಹಾರ ಸಚಿವರು ಈಗ ಉತ್ತರ ಕೊಡಿ ಎಂದು ಆಗ್ರಹಿಸಿದರು.

ಮಹಾರಾಷ್ಟ್ರ ಚುನಾವಣೆ ಮುಗಿಯುತ್ತಿದ್ದಂತೆ ಬಿಪಿಎಲ್ ರದ್ದು ಮಾಡಲು ಹೊರಟಿದ್ದೀರಿ. ಒಂದೇ ಒಂದು ಬಿಪಿಎಲ್ ಕಾರ್ಡ್ ಕೂಡಾ ರದ್ದು ಮಾಡಬಾರದು. ಮಾಡಿದ್ರೆ ಮುಂದೆ ಆಗುವ ಅನಾಹುತ ಎದುರಿಸಲು ರೆಡಿ ಆಗಿ ಎಂದು ಟಾಂಗ್ ಕೊಟ್ಟಿದ್ದಾರೆ.

ಬಸವೇಶ್ವರ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಸಮೀಪದ ಹರ್ಲಾಪೂರ ಕೊಟ್ಟೂರೇಶ್ವರ ಮಠದಲ್ಲಿ ಮಹಾ ಕಾರ್ತಿಕೋತ್ಸವದ ಧಾರ್ಮಿಕ ಸಮಾರಂಭ ಹಾಗೂ ನಮ್ಮೂರ ಲಕ್ಷ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ಬಸವೇಶ್ವರ ಪುರಾಣವನ್ನು ಕಾನೂನು, ಸಂಸದೀಯ ವ್ಯವಹಾರ, ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸಲಿದ್ದಾರೆ.

ನ,24ರಂದು ಸಂಜೆ 6.30ಕ್ಕೆ ಆರಂಭವಾಗುವ ಪುರಾಣವು ಡಿ.14ರವರೆಗೂ ನಡೆಯಲಿದೆ. ಗದಗ ತೋಂಟದಾರ್ಯ ಸಂಸ್ಥಾನ ಮಠದ ಡಾ ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕನಕಗಿರಿ ಸುವರ್ಣ ಸಂಸ್ಥಾನ ಮಠದ ಡಾ ಚನ್ನಮಲ್ಲ ಶ್ರೀಗಳು, ಬಳಗಾನೂರು ಚನ್ನವೀರ ಶರಣರ ಮಠದ  ಶಿವ ಶಾಂತವೀರ ಶರಣರು, ಲಕ್ಕುಂಡಿ ಅಲ್ಲಮಪ್ರಭುದೇವರ ಮಠದ ಸಿದ್ಧಲಿಂಗ ಶ್ರೀಗಳು ನೇತೃತ್ವ ವಹಿಸುವರು. ಹರ್ಲಾಪೂರ ತೋಂಟದಾರ್ಯ ಮಠದ ಚಂದ್ರಶೇಖರ ದೇವರು, ಪ್ರಭಯ್ಯಸ್ವಾಮಿ ಹಿರೇಮಠ ಉಪಸ್ಥಿತರಿರುವರು.

ಹಾವಲಿಂಗೇಶ್ವರ ಸಂಸ್ಥಾನಮಠದ ಶಾಂತವೀರ ಶಿವಚಾರ್ಯ ಶ್ರೀಗಳು ಬಸವೇಶ್ವರ ಪುರಾಣ ಪ್ರವಚನ ಆರಂಭಿಸುವರು. ತಾಳಿಕೋಟಿಯ ಕಾಸ್ಗತ್ತೇಶ್ವರ ಮಠದ ಪರಶುರಾಮ ಚಟ್ನಳ್ಳಿ, ಯಲ್ಲಪ್ಪ ಗುಂಡಳ್ಳಿ, ಹರ್ಲಾಪೂರ ಗ್ರಾಮದ ಕೆ.ಬಿ. ವೀರಾಪೂರ, ಮಂಜು ಅರ್ಕಸಾಲಿ ಸಂಗೀತ ಸೇವೆ ನೀಡುವರು ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.

ಕರ್ನಾಟಕದಲ್ಲಿರೋದು ಬುದ್ಧಿಗೇಡಿ ಸರ್ಕಾರ: ಎನ್‌. ರವಿಕುಮಾರ್ ವಾಗ್ದಾಳಿ!

0

ಬೆಂಗಳೂರು:- ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ಬುದ್ಧಿಗೇಡಿ ಸರ್ಕಾರ ಎಂದು ವಿಧಾನ ಪರಿಷತ್ ಸದಸ್ಯ ಎನ್‌. ರವಿಕುಮಾರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಬುದ್ಧಿಗೇಡಿ ಸರ್ಕಾರ. ಸಿದ್ದರಾಮಯ್ಯ ‌ಸರ್ಕಾರ‌ ಬರೀ‌ ಸೈಟ್ ದರೋಡೆ ಮಾಡುವಂತಹ ಸರ್ಕಾರ ಅಲ್ಲ‌, ಬಡವರ ಬಿಪಿಎಲ್ ಕಾರ್ಡ್ ದರೋಡೆ ಮಾಡುವ ಸರ್ಕಾರ ಕೂಡ ಹೌದು. ಲಕ್ಷಾಂತರ ‌ಬಡವರ ಬಿಪಿಎಲ್‌ ಕಾರ್ಡ್‌ಗಳನ್ನ ರದ್ದು ಮಾಡಿದ್ದಾರೆ, ಅವರ ಊಟದ ಕಥೆ ಏನು? ಅರ್ಹ‌ ಬಿಪಿಎಲ್ ರದ್ದು ಮಾಡಲ್ಲ ಅಂದಿದ್ರು, ಈಗ ರದ್ದು ಮಾಡಿದ್ಯಾಕೆ? ಕೊಡ್ತೀವಿ ಅಂತಿರೋದ್ಯಾಕೆ? ಇದೇನು‌ ವಾಪಸ್ ಸರ್ಕಾರನಾ? ಅಂತ ಪ್ರಶ್ನೆ ಮಾಡಿದ್ರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 89 ಕೋಟಿ ರೂ. ಹಗರಣ ಆಗಿರೋದನ್ನ ಸದನದಲ್ಲೇ ಒಪ್ಪಿಕೊಂಡಿದ್ದರು. ಯಾರಾದರೂ ‌ಕಪಾಳಮೋಕ್ಷ ಮಾಡಿ ಹೇಳಿದರೆ ತಪ್ಪು ತಿದ್ದಿಕೊಂಡು‌ ಹೋಗೋದು, ಇಲ್ಲವೇ ತಪ್ಪನ್ನೇ ಮುಂದೂಡಿಸಿಕೊಂಡು ಹೋಗೋದು ಈ ಸರ್ಕಾರದ ವರ್ತನೆ. ವಕ್ಫ್‌ ಬೋರ್ಡ್‌ನಿಂದ ನೋಟಿಸ್ ಕೊಟ್ರು ಈಗ ವಾಪಸ್ ತಗೋತಿದ್ದಾರೆ. ಇದೊಂದು‌ ಬುದ್ಧಿಗೇಡಿ ಸರ್ಕಾರ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಡಿಜಿಎಮ್ ಆಯುರ್ವೇದ ಕಾಲೇಜಿನ ಸಿಬ್ಬಂದಿ ಆತ್ಮಹತ್ಯೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಡಿಜಿಎಮ್ ಆಯುರ್ವೇದ ಕಾಲೇಜಿನ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೂಲತಃ ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಸೈಫ್ ಅಲಿ (28) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ತಂದೆಯ ಅಕಾಲಿಕ ನಿಧನದ ನಂತರ ಅನುಕಂಪದ ಆಧಾರದಲ್ಲಿ ಸರಕಾರಿ ನೌಕರಿ ಪಡೆದಿದ್ದ  ಸೈಫ್ಅಲಿ, ತಂಗಿಯ ಮದುವೆ ಮಾಡಿಕೊಟ್ಟಿದ್ದ ಎನ್ನಲಾಗಿದೆ.

ತಂಗಿಯ ಮಗಳು ಅನಾರೋಗ್ಯದಿಂದ ಮೊನ್ನೆ ಮೃತಪಟ್ಟಿದ್ದು, ನಿನ್ನೆ ಸಂಜೆ ಗದಗಕ್ಕೆ ಬಂದಿದ್ದರು.  ತಂಗಿಯ ಮಗಳ ಸಾವಿನಿಂದ ತೀವ್ರವಾಗಿ ನೊಂದಿದ್ದ ಸೈಫ್ಅಲಿ ನಿನ್ನೆ ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಶಹರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

 

ಈ ಅಚ್ಚರಿ ವಿಷಯ ನೀವು ತಿಳಿಯಲೇಬೇಕು! ಈರುಳ್ಳಿ ಸಿಪ್ಪೆ ಎಸೆಯೋ ಮುನ್ನ ಈ ಸ್ಟೋರಿ ನೋಡಿ!

0

ಸಾಮಾನ್ಯವಾಗಿ ಹೆಚ್ಚಿನವರು ಈರುಳ್ಳಿಯನ್ನು ಕತ್ತರಿಸಿದ ನಂತರ ಅದರ ಸಿಪ್ಪೆಯನ್ನು ಬಿಸಾಡುತ್ತಾರೆ. ಇಲ್ಲವಾದರೆ ಗಿಡಗಳಿಗೆ ಗೊಬ್ಬರಕ್ಕೆ ಬಳಸುತ್ತಾರೆ. ಆದರೆ ಈ ಈರುಳ್ಳಿ ಸಿಪ್ಪೆಯಲ್ಲಿ ಎಷ್ಟೆಲ್ಲಾ ಆರೋಗ್ಯಕರ ಗುಣಗಳಿವೆ ಅನ್ನೋದು ನಿಮಗೆ ಗೊತ್ತಾ?

ಭಾರತೀಯರು ತಮ್ಮ ಆಹಾರದಲ್ಲಿ ತರಕಾರಿಯನ್ನು ಬಳಸುವಾಗ ಅದರ ಪ್ರತಿಯೊಂದು ಭಾಗವನ್ನು ಬಳಸುತ್ತಾರೆ. ಯಾವುದೇ ಭಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ. ತಿರುಳು, ಚರ್ಮದವರೆಗೆ, ಸಸ್ಯಗಳ ಬೇರು, ಕಾಂಡ ಮತ್ತು ಎಲೆಗಳನ್ನು ಸಹ ಭಾರತೀಯ ಅಡುಗೆಯಲ್ಲಿ ಬಳಸಲಾಗುತ್ತದೆ.

ಈರುಳ್ಳಿ ಸಿಪ್ಪೆಯಲ್ಲಿ ಉತ್ತಮ ಪೋಷಕಾಂಶಗಳಿದ್ದು, ಇವು ವಿವಿಧ ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಹಾಗಾದ್ರೆ ಈರುಳ್ಳಿ ತ್ವಚೆ ಹಾಗೂ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಎಂಬುವುದರ ಬಗ್ಗೆ ಒಂದಷ್ಟು ಮಾಹಿತಿ ಈ ಕೆಳಗಿನಂತಿದೆ ನೋಡಿ.

ಈರುಳ್ಳಿ ಸಿಪ್ಪೆ ಏಕೆ ಮುಖ್ಯ?: ಈರುಳ್ಳಿ ಸಿಪ್ಪೆಯು ಫೈಬರ್ನಲ್ಲಿ ಸಮೃದ್ಧವಾಗಿದೆ. ಆದ್ದರಿಂದ ಈರುಳ್ಳಿಯ ಸಿಪ್ಪೆಯು ಉತ್ತಮ ಜೀರ್ಣಕ್ರಿಯೆಗೆ ಸಹಾಯಕವಾಗಿದೆ. ಜೊತೆಗೆ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಈರುಳ್ಳಿ ಸಿಪ್ಪೆಯು ಫ್ಲೇವನಾಯ್ಡ್ಗಳನ್ನು ಹೊಂದಿದ್ದು, ವಿಶೇಷವಾಗಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಫ್ಲೇವನಾಯ್ಡ್ ಕ್ವೆರ್ಸೆಟಿನ್ ಹೊಂದಿದೆ. ಇದು ಉರಿಯೂತವನ್ನು ಕಡಿಮೆ ಮಾಡುವಲ್ಲಿ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಯೋಜನಕಾರಿ ಆಗಿದೆ.

ಈರುಳ್ಳಿ ಸಿಪ್ಪೆಯಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಜೊತೆಗೆ, ಕಣ್ಣಿನ ಆರೋಗ್ಯ, ಬಲವಾದ ಮೂಳೆಗಳು ಮತ್ತು ಎಲೆಕ್ಟ್ರೋಲೈಟ್ ಸಮತೋಲನಕ್ಕೆ ಕೊಡುಗೆ ನೀಡುತ್ತದೆ.

ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು: ಮೊದಲೇ ಹೇಳಿದಂತೆ ಈರುಳ್ಳಿ ಸಿಪ್ಪೆಯಲ್ಲಿ ಕ್ವೆರ್ಸೆಟಿನ್ ನಂತಹ ಹೆಚ್ಚಿನ ಮಟ್ಟದ ಫ್ಲೇವನಾಯ್ಡ್ಗಳಿವೆ. ಇವುಗಳಲ್ಲಿ ಹೆಚ್ಚಿನ ಮಟ್ಟದ ಆ್ಯಂಟಿ ಆಕ್ಸಿಡೆಂಟ್ ಗುಣಗಳಿವೆ. ಈ ಉತ್ಕರ್ಷಣ ನಿರೋಧಕಗಳು ನಮ್ಮ ದೇಹದಲ್ಲಿ ಫ್ರೀ ರಾಡಿಕಲ್ಗಳನ್ನು ತಟಸ್ಥಗೊಳಿಸಲು ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದ್ರೋಗ ಮತ್ತು ಕ್ಯಾನ್ಸರ್ನಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತಾರೆ.

ಉರಿಯೂತದ ಗುಣಲಕ್ಷಣಗಳು: ಕ್ವೆರ್ಸೆಟಿನ್ ಸೇರಿದಂತೆ ಈರುಳ್ಳಿ ಸಿಪ್ಪೆಯಲ್ಲಿ ಕಂಡು ಬರುವ ಸಂಯುಕ್ತಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ. ಅಲ್ಲದೇ ಈರುಳ್ಳಿ ಸಿಪ್ಪೆಯ ರಸ ಅಥವಾ ಕಷಾಯವನ್ನು ಕುಡಿಯುವುದರಿಂದ ಸಂಧಿವಾತ ಮತ್ತು ಉರಿಯೂತದ ಕರುಳಿನ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಿದೆ.

ತ್ವಚೆಯ ಆರೋಗ್ಯ: ಈರುಳ್ಳಿ ಸಿಪ್ಪೆಯು ತ್ವಚೆಯ ಆರೋಗ್ಯವನ್ನು ಸುಧಾರಿಸುವ ಪ್ರಮುಖ ಜೀವಸತ್ವಗಳು, ಖನಿಜಗಳು ಮತ್ತು ಫ್ಲೇವನಾಯ್ಡ್ಗಳನ್ನು ಒಳಗೊಂಡಿರುವ ಸಂಯುಕ್ತಗಳನ್ನು ಹೊಂದಿದೆ. ಹೀಗಾಗಿ ಈರುಳ್ಳಿ ಸಿಪ್ಪೆಯ ರಸವನ್ನು ತ್ವಚೆಗೆ ಹಚ್ಚುವುದರಿಂದ ಚರ್ಮದ ಕಿರಿಕಿರಿಯಿಂದ ಪರಿಹಾರವನ್ನು ಪಡೆಯಬಹುದು. ಇದು ತ್ವಚೆಯ ಮೇಲಿನ ಮೊಡವೆಗಳು ಮತ್ತು ಗಾಯಗಳನ್ನು ವೇಗವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ.

ಕೂದಲಿನ ಆರೋಗ್ಯ: ಈರುಳ್ಳಿ ಸಿಪ್ಪೆಯ ರಸಗಳನ್ನು ಕೆಲವೊಮ್ಮೆ ಕೂದಲ ರಕ್ಷಣೆಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಏಕೆಂದರೆ ಈರುಳ್ಳಿ ರಸದಲ್ಲಿರುವ ಸಂಯುಕ್ತಗಳು ನಮ್ಮ ಕೂದಲು ಕಿರುಚೀಲಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕೆಲವರು ಈರುಳ್ಳಿ ಸಿಪ್ಪೆಯ ರಸವನ್ನು ನ್ಯಾಚುರಲ್ ಹೇರ್ ಕಂಡಿಷನರ್ ಆಗಿ ಬಳಸುತ್ತಾರೆ.

ಇರುವುದರಿಂದ ಇದು ಆರೋಗ್ಯಕರ ಕರುಳಿನ ಚಲನೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸುತ್ತದೆ. ಈರುಳ್ಳಿ ಸಿಪ್ಪೆಯಲ್ಲಿ ಕಂಡು ಬರುವ ಫ್ಲೇವನಾಯ್ಡ್ಗಳು ಪ್ರೀಬಯಾಟಿಕ್ ಪರಿಣಾಮಗಳನ್ನು ಬೀರಬಹುದು, ಇದು ಪ್ರಯೋಜನಕಾರಿ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗುತ್ತದೆ. ಈರುಳ್ಳಿ ಸಿಪ್ಪೆಯನ್ನು ಚಹಾ ಅಥವಾ ಮಸಾಲೆಯಾಗಿ ಬೇಯಿಸಿ, ಕೂಡ ತಿನ್ನಬಹುದು.

ನೈಸರ್ಗಿಕ ಬಣ್ಣ: ಈರುಳ್ಳಿ ಸಿಪ್ಪೆ, ಮೊಟ್ಟೆಯನ್ನು ನ್ಯಾಚುರಲ್ ಹೇರ್ ಕಲರಿಂಗ್ ಆಗಿ ಸಹ ನೀವು ಬಳಸಬಹುದು. ಸಾಮಾನ್ಯವಾಗಿ, ಈರುಳ್ಳಿಯ ಹೊರ ಸಿಪ್ಪೆಯ ರಸವನ್ನು ರುಬ್ಬಿ ಸೋಸಿಕೊಂಡು ಹೊರತೆಗೆದು, ಹಳದಿ, ಕಿತ್ತಳೆ ಮತ್ತು ಕಂದು ಬಣ್ಣ ಹೀಗೆ ವಿವಿಧ ರೀತಿಯ ಬಣ್ಣಗಳ ಜೊತೆಗೆ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಬಹುದು.

ನಡು ಬೀದಿಯಲ್ಲಿ ದಲಿತ ಮಹಿಳೆ ಹತ್ಯೆ ಪ್ರಕರಣ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ!

0

ತುಮಕೂರು:- ನಡು ಬೀದಿಯಲ್ಲಿ ದಲಿತ ಮಹಿಳೆಯನ್ನ ಹತ್ಯೆ ಮಾಡಿದ್ದ ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ತುಮಕೂರಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ತ ನ್ಯಾಯಾಲಯ ಪ್ರಕರಣದಲ್ಲಿ ಭಾಗಿಯಾಗಿದ್ದ 21 ಆರೋಪಿಗಳಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.

14 ವರ್ಷಗಳ ಬಳಿಕ ತೀರ್ಪು ಬಂದಿದ್ದು, ಕುಟುಂಬಸ್ಥರು ಹಾಗೂ ಹೋರಾಟಗಾರರು ನ್ಯಾಯಾಲಯದ ತೀರ್ಪನ್ನ ಸ್ವಾಗತಿಸಿದ್ದಾರೆ. ಅದು 2010ರ ಜೂನ್ 28 ರ ಸಂಜೆ ಸುಮಾರು 7.30 ರ ಸಮಯ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ದಲಿತ ಮಹಿಳೆಯನ್ನ ನಡು ರಸ್ತೆಯಲ್ಲೇ ಕಲ್ಲುಗಳಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಲಾಗಿತ್ತು.

ಗ್ರಾಮದ ಕೆಲವರ ಕಡು ಕೋಪಕ್ಕೆ ಹೊನ್ನಮ್ಮ ಅಲಿಯಾಸ್ ಡಾಬಾ ಹೊನ್ನಮ್ಮ ಬೀದಿ ಹೆಣವಾಗಿದ್ಲು. ಹತ್ಯೆಯ ಭೀಕರತೆ ಎಷ್ಟಿತ್ತು ಅಂದ್ರೆ ಮೊದಲು ಹೊನ್ನಮ್ಮ ಮೃತಪಟ್ಟಿದ್ದಾಳೆ ಅಂತಾ ಹೊರಟ್ಟಿದ ಕ್ರೂರಿಗಳ ಕಿವಿಗೆ ಹೊನಮ್ಮ ಕುಡಿಯೋಕೆ ನೀರು.. ನೀರು ಅಂತಾ ಕೂಗಿತಿದ್ದಂತೆ ಮತ್ತೆ ಬಂದು ಹೊನ್ನಮ್ಮಳನ್ನ ಚರಂಡಿಗೆ ಹಾಕಿ ಆಕೆಯ ತಲೆ ಮೇಲೆ ಕಲ್ಲಿನ ಚಪ್ಪಡಿ ಹಾಕಿ ಪ್ರಾಣ ತೆಗೆದಿದ್ದರು..

ಹತ್ಯೆ ಪ್ರಕರಣ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು.. ಹಂದನಕೆರೆ ಜಿಪಂ ಕ್ಷೇತ್ರದಿಂದ ಒಮ್ಮೆ ಬಿಜೆಪಿ ಅಭ್ಯರ್ಥಿಯಾಗಿಯೂ ಸ್ಪರ್ಧಿಸಿದ್ದ ಹೊನ್ನಮ್ಮದಲಿತ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು. ಅಂದಿನ ಬಿಜೆಪಿ ಸರ್ಕಾರ ಉನ್ನತ ಮಟ್ಟದ ಸಮಿತಿ ಕೂಡ ರಚಿಸಿ ವರದಿ ಪಡೆದಿತ್ತು.

ಸಮಾಜ ಕಲ್ಯಾಣ ಇಲಾಖೆಯಿಂದ ಮೃತ ಕುಟುಂಬಕ್ಕೆ 1 ಲಕ್ಷ ರೂ.ಪರಿಹಾರ ಹಾಗೂ ಹೊನ್ನಮ್ಮ ಅವರ ಮಗನಿಗೆ ಸರ್ಕಾರ ಕೆಲಸ ನೀಡಿದೆ. ಕೃತ್ಯ ನಡೆದಾಗ ತಿಂಗಳಾನುಗಟ್ಟಲೇ ಇಡೀ ಊರಿಗೆ ಊರು ಮನೆಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದರು. ದಲಿತ ಸಂಘಟನೆಗಳು ರಾಜ್ಯದೆಲ್ಲೆಡೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದವು.

ಹೊನ್ನಮ್ಮ ಡಾಬಾ ನಡೆಸುತ್ತಿದ್ದು, ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಲು ಮರದ ತುಂಡು ಸಂಗ್ರಹಿಸಿ ಇಟ್ಟಿದ್ದರು. ಮರದ ತುಂಡುಗಳನ್ನು ಗ್ರಾಮದ ಕೆಲವರು ಕಳವು ಮಾಡಿದ್ದರು. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಇದೇ ವಿಷಯಕ್ಕೆ ಗ್ರಾಮಸ್ಥರು ಹಾಗೂ ಹೊನ್ನಮ್ಮನ ಮಧ್ಯೆ ದ್ವೇಷ ಉಂಟಾಗಿತ್ತು. ಸದಾ ಒಂದಲ್ಲೊಂದು ರೀತಿಯಲ್ಲಿ ಜಗಳ ನಡೆಯುತಿತ್ತು.

ಅವಾಚ್ಯ ಶಬ್ದಗಳಿಂದ ಹಾಗೂ ಜಾತಿ ಹೆಸರಿನಲ್ಲಿ ನಿಂದಿಸುವುದು ಮುಂದುವರಿದಿತ್ತು. ಕೊನೆಗೆ ಹೊನ್ನಮ್ಮ ಅವರನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಅಂದಿನ ಡಿವೈಎಸ್ ಪಿ ಶಿವರುದ್ರಸ್ವಾಮಿ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಚಾರ್ಜ್ ಶಿಟ್ ಸಲ್ಲಿಸಿದ್ರು..

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ.ಎಸ್.ಜ್ಯೋತಿ ವಾದ ಮಂಡಿಸಿದರು. ಒಟ್ಟು 27 ಆರೋಪಿಗಳಲ್ಲಿ 6 ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಉಳಿದ 21 ಮಂದಿ ಅಪರಾಧಿಗಳಿಗೆ ಶಿಕ್ಷೆ ಪ್ರಕಟಗೊಂಡಿದೆ. ತಲಾ ಒಬ್ಬ ಆರೋಪಿಗೆ 13,500 ದಂಡ ಸೇರಿ ಒಟ್ಟು 2 ಲಕ್ಷ 83 ಸಾವಿರ 500 ದಂಡ ವಿಧಿಸಿದೆ.

ಇದ್ರಿಂದ ಒಂದೇ ಗ್ರಾಮದ 21 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಗೆ ಒಳಗಾಗಿದ್ದಾರೆ. ಐಪಿಸಿ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರಾದ ನಾಗಿರೆಡ್ಡಿ ತೀರ್ಪು ಪ್ರಕಟಿಸಿದ್ದಾರೆ. ನ್ಯಾಯಾಲದ ತೀರ್ಪನ ದಲಿತ ಸಂಘಟನೆಗಳು ಸ್ವಾಗತಿಸಿವೆ.

ರಂಗನಾಥ,ಮಂಜುಳ, ತಿಮ್ಮರಾಜು, ರಾಜು (ದೇವರಾಜು), ಶ್ರೀನಿವಾಸ್, ಆನಂದ (ಆನಂದಸ್ವಾಮಿ), ವೆಂಕಟಸ್ವಾಮಿ, ವೆಂಕಟೇಶ್, ನಾಗರಾಜು, ರಾಜಪ್ಪ, ಮೀಸೆ ಹನುಮಂತಯ್ಯ, ಗಂಗಾಧರ (ಗಂಗಣ್ಣ), ನಂಜುಂಡಯ್ಯ, ಸತ್ಯಪ್ಪ- ಸತೀಶ, ಚಂದ್ರಶೇಖರ (ಚಂದ್ರಯ್ಯ), ರಂಗಯ್ಯ (ರಾಮಯ್ಯ), ಉಮೇಶ್, ಚನ್ನಮ್ಮ ಮಂಜಣ್ಣ, ಮಂಜು, ಸ್ವಾಮಿ (ಮೋಹನ್ ಕುಮಾರ್) ಶಿಕ್ಷೆಗೆ ಒಳಗಾದವರು.

ಇನ್ನೂ ಪ್ರಕರಣದ ಹನುಮಂತಯ್ಯ , ವೆಂಕಟೇಶ್, ರಾಮಯ್ಯ, ರಾಮಯ್ಯ, ದಾಸಪ್ಪ, ಬುಳ್ಳೆ ಹನುಮಂತಯ್ಯ ಈಗಾಗಲೇ ಮೃತಪಟ್ಟಿದ್ದಾರೆ. ಬರೋಬರಿ ಒಂದೂವರೆ ದಶಕಗಳ ಬಳಿಕ ದಲಿತ ಮಹಿಳೆಯ ಹತ್ಯೆಗೆ ನ್ಯಾಯ ಸಿಕ್ಕಂತಾಗಿದೆ.

ಜ್ಞಾನಾರ್ಜನೆಗೆ ಇತರ ಭಾಷೆಗಳು ಅಗತ್ಯ, ಆದರೆ ಕನ್ನಡ ಭಾಷೆಗೆ ಮೊದಲ ಆದ್ಯತೆ ದೊರೆಯಬೇಕು: ಜ.ಸದಾಶಿವಾನಂದ ಶ್ರೀಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತದ ಎಲ್ಲ ಭಾಷೆ, ಲಿಪಿಗಳನ್ನು ಅಧ್ಯಯನ ಮಾಡಿದ ಭಾಷಾ ತಜ್ಞ ಆಚಾರ್ಯ ವಿನೋಭಾ ಭಾವೆ ಅವರು ‘ಕನ್ನಡ ಭಾಷೆ ವಿಶ್ವ ಭಾಷೆಗಳ ರಾಣಿ’ ಎಂದು ಬಣ್ಣಿಸಿದ್ದಾರೆ. ಕನ್ನಡ ಭಾಷೆಯ ಹಿರಿಮೆ ಬಹು ದೊಡ್ಡದು ಎಂದು ಗದುಗಿನ ಶಿವಾನಂದ ಬೃಹನ್ಮಠದ ಪೂಜ್ಯ ಜ.ಸದಾಶಿವಾನಂದ ಮಹಾಸ್ವಾಮಿಗಳು ಹೇಳಿದರು.

ಅವರು ಬುಧವಾರ ನಗರದ ಗದಗ ಹೆಲ್ಪಿಂಗ್ ಹ್ಯಾಂಡ್ಸ್ ಫೌಂಡೇಶನ್ ಹಾಗೂ ಗದಗ ಅಪ್ಪುರಾಜ್ ಇವೆಂಟ್ಸ್ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ-2024 ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಧಕ ಮಹನೀಯರಿಗೆ `ಕನ್ನಡ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅಕ್ಷರಗಳನ್ನು ದುಂಡಾಗಿ ಬರೆಯುವ ವಿಧಾನ ಯಾವುದಾದರೂ ಭಾಷೆಯಲ್ಲಿದ್ದರೆ ಅದು ಕನ್ನಡದಲ್ಲಿ ಮಾತ್ರ.ಇಂತಹ ಭಾಷೆ ಹಲವು ಕಾರಣಗಳಿಂದಾಗಿ ಅಳಿವಿನ ಅಂಚಿನಲ್ಲಿದೆ. ಪರಿಶುದ್ಧ ಕನ್ನಡ ಮಾತನಾಡುವುದು, ಬರೆಯುವದು ಕಷ್ಟವಾಗುತ್ತಿದೆ. ಇದ್ದ ಸರ್ಕಾರಿ ಕನ್ನಡ ಶಾಲೆಗಳ ಬಾಗಿಲು ಮುಚ್ಚಿಕೊಂಡು ಕನ್ನಡ ನಾಡಿನಲ್ಲಿ ಕನ್ನಡ ಹೊರತು ಅನ್ಯಭಾಷೆಗಳ ಶಾಲೆಗಳು ತೆರೆದುಕೊಳ್ಳುತ್ತಿವೆ. ಜ್ಞಾನಾರ್ಜನೆಗೆ ಇತರ ಭಾಷೆಗಳು ಅಗತ್ಯ. ಆದರೆ ಕನ್ನಡ ಭಾಷೆಗೆ ಮೊದಲ ಆದ್ಯತೆ ದೊರೆಯಬೇಕು. ಸುಂದರ, ಮಧುರ, ಮಂಜುಳವಾದ ಕನ್ನಡ ಭಾಷೆ ಇನ್ನಷ್ಟು ಸಮೃದ್ಧಗೊಳ್ಳಬೇಕು. ಕನ್ನಡ ಔಪಚಾರಿಕ ಭಾಷೆಯಾಗಿ ನೇಪಥ್ಯಕ್ಕೆ ಸರಿಯುತ್ತಿದೆ ಎಂದರು.

ಈ ಹಿನ್ನಲೆಯಲ್ಲಿ ಸಹಾಯಹಸ್ತದ ಈ ಸಂಸ್ಥೆಯು ನಿರಂತರವಾಗಿ ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ವೈವಿಧ್ಯಮಯ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿರುವದು ಅಭಿನಂದನೀಯ. ಅಪ್ಪುರಾಜ ಭದ್ರಕಾಳಮ್ಮನಮಠ ಹಾಗೂ ಗೆಳೆಯರ ಬಳಗ ಒಳ್ಳೆಯ ಕೆಲಸ ಮಾಡುತ್ತಿದ್ದು, ಈ ಕಾರ್ಯ ಮುಂದುವರೆಯಲಿ ಎಂದರು.

ಮುಖ್ಯ ಅತಿಥಿಗಳಾಗಿ ಗಣ್ಯರಾದ ತಾತನಗೌಡ ಪಾಟೀಲ, ಶಿವಯ್ಯ ನಾಲತ್ವಾಡಮಠ, ರಾಜು ಗುಡಿಮನಿ, ಅಕ್ಬರಸಾಬ ಬಬರ್ಚಿ, ರಾಜು ಕುರಡಗಿ, ಎಸ್.ಎಚ್. ಶಿವನಗೌಡ್ರ, ಬಸವರಾಜ ತಿರ್ಲಾಪೂರ, ಸಂತೋಷ ತೋಟಗಂಟಿಮಠ, ವಿಜಯಕುಮಾರ ಹಿರೇಮಠ, ಇರ್ಫಾನ ಡಂಬಳ ಆಗಮಿಸಿದ್ದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಗದುಗಿನ ಜ.ಪಂಚಾಚಾರ್ಯ ಮಾಂಗಲ್ಯ ಮಂದಿರದ ಗೌರವಾಧ್ಯಕ್ಷ ಚಂದ್ರು ಬಾಳಿಹಳ್ಳಿಮಠ, ಈ ಸಂಸ್ಥೆಯು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಸಂಯೋಜಿಸಿ ಜನಮುಖಿ, ಸಮಾಜಮುಖಿ ಕಾರ್ಯ ಮಾಡುತ್ತಿದೆ. ಈ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಿವೆ ಎಂದರು.

ಗದಗ ಹೆಲ್ಪಿಂಗ್ ಹ್ಯಾಂಡ್ಸ್ ಫೌಂಡೇಶನ್ ಹಾಗೂ ಗದಗ ಅಪ್ಪುರಾಜ್ ಇವೆಂಟ್ಸ್ ಅಧ್ಯಕ್ಷ ಅಪ್ಪುರಾಜ ಭದ್ರಕಾಳಮ್ಮನಮಠ ಸ್ವಾಗತಿಸಿದರು. ನಾಶೀರ್ ಚಿಕೇನಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಆರ್.ಜೆ. ರಶೀದ್ ನಿರೂಪಿಸಿದರು. ಕೊನೆಗೆ ಶಿವಯೋಗಿ ಟೆಂಗಿನಕಾಯಿ ವಂದಿಸಿದರು.

error: Content is protected !!