Home Blog Page 2084

ಹತ್ತಿ ಸಂಗ್ರಹಣೆಗೆ ಗೋದಾಮು ಮಾಡಿಕೊಡುವಂತೆ ರೈತರ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದಲ್ಲಿ ಕಳೆದ ವಾರ ಪ್ರಾರಂಭವಾಗಿರುವ ಸಿಸಿಐ ಬೆಂಬಲ ಬೆಲೆ ಹತ್ತಿ ಖರೀದಿ ಕೇಂದ್ರಕ್ಕೆ ದಿನದಿಂದ ದಿನಕ್ಕೆ ರೈತರು ತಮ್ಮ ಹತ್ತಿಯನ್ನು ಮಾರಾಟಕ್ಕೆ ತರುತ್ತಿದ್ದು, ಖರೀದಿ ಕೇಂದ್ರದ ಬಳಿ ರೈತರು ಮತ್ತು ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಅದರಂತೆ ಗುರುವಾರವು ಹತ್ತಿ ಖರೀದಿ ಕೇಂದ್ರಕ್ಕೆ ಬೆಳಿಗ್ಗೆಯಿಂದಲೇ ಆಗಮಿಸಿದ್ದು, ಹತ್ತಿ ಸಂಗ್ರಹಣೆಗೆ ಜಾಗ ಇಲ್ಲದೆ ಖರೀದಿ ಮರುದಿವಸಕ್ಕೆ ಎಂದು ಸುದ್ದಿ ತಿಳಿಯುತ್ತಿದ್ದಂತೆ ಅಕ್ರೋಶಗೊಂಡ ನೂರಾರು ರೈತರು ಎಪಿಎಂಸಿಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದರು.

ಸುತ್ತಮುತ್ತಲಿನ ಗ್ರಾಮಗಳಿಂದ ರೈತರು ನಿತ್ಯ ಹತ್ತಿಯನ್ನು ತರುತ್ತಿದ್ದು, ಅವರಿಗೆ ದಿನಕ್ಕೆ ಇಷ್ಟೇ ಖರೀದಿ ಎಂದು ತಾಕೀತು ಮಾಡಿದರೆ ಹೇಗೆ ಎಂದರಲ್ಲದೆ, ಖರೀದಿಸಿದ ಹತ್ತಿಯನ್ನು ಸಂಗ್ರಹಿಸಲು ಒಂದೇ ಹತ್ತಿ ಫ್ಯಾಕ್ಟರಿಯನ್ನು ಮಾಡಲಾಗಿದ್ದು, ಅಲ್ಲಿ ಸಂಗ್ರಹಣೆಗೆ ಜಾಗ ಇಲ್ಲ ಎಂದು ಹೇಳುತ್ತಿರುವದಕ್ಕೂ ಸಹ ರೈತರು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಮತ್ತೊಂದು ಫ್ಯಾಕ್ಟರಿಗೆ ಅನುಮತಿ ನೀಡಿ, ಇಲ್ಲವೆ ಹತ್ತಿ ಸಂಗ್ರಹಣೆಗೆ ಗೋದಾಮು ನೀಡಿ ರೈತರಿಗೆ ಅನೂಕೂಲ ಮಾಡಿಕೊಡುವಂತೆ ಆಗ್ರಹಿಸಿದರು.

ಎಪಿಎಂಸಿ ಕಾರ್ಯದರ್ಶಿ ರುದ್ರಗೌಡ ಪಾಟೀಲ ಅವರು ರೈತರೊಂದಿಗೆ ಮಾತನಾಡಿ, ಈ ಕುರಿತಂತೆ ಮೇಲಾಧಿಕಾರಿಗಳೊಂದಿಗೆ ಮಾತನಾಡಿ ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವದಾಗಿ ಭರವಸೆ ನೀಡಿದರು. ಅಲ್ಲದೆ  ಫ್ಯಾಕ್ಟರಿಗೂ ಅನುಮತಿ ನೀಡುವಂತೆ ಕ್ರಮ ಕೈಗೊಳ್ಳುವದಾಗಿ ಹೇಳಿ ರೈತರನ್ನು ಸಮಾಧಾನಪಡಿಸಿದರು.

ಈ ಸಂದರ್ಭದಲ್ಲಿ ಶಂಕರಪ್ಪ ಸೊರಟೂರ, ಅರುಣ ಜಾಲಗಾರ, ಕುಮಾರ ಗೌಡರ, ಮಂಜುನಾಥ, ವಿರುಪಾಕ್ಷಗೌಡ ಎಸ್.ಎಂ. ಗರಡ್ಡಿ, ಮಹೇಶ ವಿ.ಪಿ., ವಿ.ಬಿ. ಪಲ್ಲೇದ, ಐ.ಎ. ವಾರದ, ಎಚ್.ಎಸ್. ಶಿರೋಳ, ವಿ.ಸಿ. ಕಿತ್ತೂರ, ಯ.ರ. ಜಾಲವಾಡಗಿ, ಅಬ್ದುಲ್ ಎಚ್., ಮಾಯಪ್ಪ ದಾಸ, ಸಿದ್ದಪ್ಪ ಸುಳ್ಳದ, ವಿ.ಸಿ. ಮೇಲ್ಮುರಿ ಮುಂತಾದವರಿದ್ದರು.

ಕಪ್ಪತಗುಡ್ಡದ 10 ಕಿಮಿ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ಆಗ್ರಹಿಸಿ ನಂದಿವೇರಿ ಶ್ರೀಗಳಿಂದ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಕಪ್ಪತಗುಡ್ಡದ 80 ಸಾವಿರ ಎಕರೆ ಅರಣ್ಯ ಪ್ರದೇಶವನ್ನು ಸಂರಕ್ಷಿತ ಜೀವ ವೈವಿಧ್ಯತಾ ತಾಣವನ್ನಾಗಿ ವಿಸ್ತರಿಸುವುದು ಮತ್ತು ಅದರ ಪರಿಧಿಯ 1ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಕೈಗೊಳ್ಳದಂತೆ ನಿಷೇಧಿಸಲು ಸರಕಾರವನ್ನು ಒತ್ತಾಯಿಸಲು ಕಪ್ಪತಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳ ನೇತೃತ್ವದಲ್ಲಿ ಹಾಗೂ ಅನೇಕ ಪರಿಸರ ಸಂರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಂಘ-ಸAಸ್ಥೆಗಳ ಸಹಯೋಗದಲ್ಲಿ ಗುರುವಾರ ಬೆಳಗಾವಿ ವಿಭಾಗೀಯ ಆಯುಕ್ತರ ಮೂಲಕ  ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಪ್ಪತಗಿರಿ ನಂದಿವೇರಿ ಶ್ರೀಮಠದ ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ, ಕಪ್ಪತಗುಡ್ಡದ ಸಂರಕ್ಷಣಾ ವಿಷಯದಲ್ಲಿ ಮಲತಾಯಿ ಧೋರಣೆಯನ್ನು ಅನುಸರಿಸಿ ಆಗಾಗ ಸಂಕಷ್ಟಗಳನ್ನು ಸೃಷ್ಟಿಸುತ್ತಿರುವ ಕರ್ನಾಟಕ ಸರ್ಕಾರದ ಧೋರಣೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ. ಕಪ್ಪತಗುಡ್ಡದ ನೆಲ-ಜಲ ಜಾನುವಾರಗಳ ಹಾಗೂ ಜೀವ ವೈವಿಧ್ಯತೆಗಳ ಸಂರಕ್ಷಣೆಗಾಗಿ ಬದ್ಧವಿರಬೇಕಿದ್ದ ಸರಕಾರವು ಹಿತ್ತಿಲ ಬಾಗಿಲಿನಿಂದ ಗಣಿಗಾರಿಕೆಗೆ ಅವಕಾಶ ನೀಡುವ ಹುನ್ನಾರದೊಂದಿಗೆ ನೀತಿ ರೂಪಿಸಿ ಜನಸಾಮಾನ್ಯರ ಕಣ್ಣು ಒರೆಸುವ ತಂತ್ರ ಅನುಸರಿಸುತ್ತಿರುವುದು ತುಂಬಾ ದುರದೃಷ್ಟಕರ ವಿಷಯವಾಗಿದೆ ಎಂದರು.

ಕಪ್ಪತಗುಡ್ಡದ ಸಂರಕ್ಷಣಾ ಹೋರಾಟಗಾರರಾದ ರುದ್ರಣ್ಣ ಗುಳಗುಳಿ ಮಾತನಾಡಿ, ಗಣಿಗಾರಿಕೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ಈ ಹಿಂದೆ ಸರಕಾರವು ವ್ಯತಿರಿಕ್ತ ಆದೇಶ ಹೊರಡಿಸಿ ಕೈಸುಟ್ಟುಕೊಂಡು, ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಮತ್ತು ನಂದಿವೇರಿ ಶ್ರೀಮಠದ ಪೂಜ್ಯಶ್ರೀ  ಶಿವಕುಮಾರ ಮಹಾಸ್ವಾಮಿಗಳು ಹಾಗೂ ಇನ್ನಿತರ ೫೦ಕ್ಕೂ ಹೆಚ್ಚು ಮಠಾಧೀಶರ ನೇತೃತ್ವದಲ್ಲಿ ಹಾಗೂ ಗದಗ ಜಿಲ್ಲೆಯ ಅನೇಕ ನಾಗರಿಕ ಸಂಘಟನೆ ಮತ್ತು ಸಾರ್ವಜನಿಕರ ಹೋರಾಟದ ತೀವ್ರತೆಗೆ ಮಣಿದ ಸರ್ಕಾರ ಕಪ್ಪತಗುಡ್ಡದ ಕೆಲವೇ ಭಾಗವನ್ನು ಜೀವವೈವಿಧ್ಯತಾ ತಾಣವೆಂದು ಘೋಷಿಸಿದಾಗ ಹೋರಾಟ ತಾತ್ಪೂರ್ತಿಕವಾಗಿ ಸ್ಥಗಿತವಾಗಿದ್ದು ಈಗ ಇತಿಹಾಸ. ನಂತರದ ಪ್ರಶಾಂತ ವಾತಾರವಣವನ್ನು ತಪ್ಪಾಗಿ ಭಾವಿಸಿರುವ ಸರಕಾರವು ಈ ಭಾಗದ ಜನರ ರೋಷಕ್ಕೆ ಕಾರಣವಾಗಿದ್ದು ಜನಸಾಮಾನ್ಯರು ಸಿಡಿದೆದ್ದು ಸರ್ಕಾರ ಮತ್ತೊಮ್ಮೆ ಮುಜುಗರಕ್ಕೆ ಈಡಾಗುವುದರಲ್ಲಿ ಎರಡು ಮಾತಿಲ್ಲವೆಂದು ಹೇಳಿದರು.

ಪರಿಸರವಾದಿ ಬಾಲಚಂದ್ರ ಜಾಬಶೆಟ್ಟಿ ಮಾತನಾಡಿ, ಸಾಮಾಜಿಕ ಜಾಲತಾಣದ ಪ್ರಾಬಲ್ಯ ಅಷ್ಟೊಂದು ತೀವ್ರವಾಗಿರದ ಅಂದಿನ ದಿನಮಾನಗಳಲ್ಲಿ ವ್ಯಕ್ತವಾದ ಪ್ರತಿಭಟನೆಯನ್ನು ಸರ್ಕಾರ ಮರೆತಂತೆ ನಟಿಸಿದರೆ ಮತ್ತೆ ಮತ್ತೆ ತೀವ್ರ ಮುಖಭಂಗ ಅನುಭವಿಸಬೇಕಾಗುತ್ತದೆ. ಸಾಮಾಜಿಕ ಜಾಲತಾಣದ ಬೃಹತ್ ಶಕ್ತಿ 24 ಗಂಟೆಗಳ ಅವಧಿಯಲ್ಲಿ ಲಕ್ಷಾಂತರ ಜನರು ಸರ್ಕಾರದ ವಿರುದ್ಧ ಹೋರಾಟಕ್ಕೆ ಸನ್ನದ್ಧಗೊಳ್ಳುವ ಅಪಾಯದ ಅರಿವು ಇಂಟಲಿಜೆನ್ಸ್ ಇಲಾಖೆಯ ಮೂಲಕ ತಿಳಿದಿದ್ದರೂ ಮತ್ತೆ ಗಣಿಗಾರಿಕೆಗೆ ಅನುಮತಿ ನೀಡಲು ಸರಕಾರ ಹವಣಿಸುತ್ತಿರುವದು ಗಣಿ ಲಾಬಿಯ ಒತ್ತಡವನ್ನು ಅಚಿದಾಜಿಸಬಹುದು. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಹೇಳಿದರು.

ನ್ಯಾಯವಾದಿ ಸರಸ್ವತಿ ಪೂಜಾರ ಮಾತನಾಡಿ, ಕಪ್ಪತಗುಡ್ಡದ ಸಂರಕ್ಷಣೆಗೆ ಇಂದು ಜಾಗೃತ ಸಮಾಜ ಟೊಂಕ ಕಟ್ಟಿ ನಿಂತಿರುವುದರಿAದ ಯಾವ ಕಾಲಕ್ಕೂ ಗಣಿಗಾರಿಕೆ ನಡೆಸಲು ಬಿಡಲಾರೆವೆಂಬ ಸಾರ್ವಜನಿಕ ಸಂಕಲ್ಪವು ಸರಕಾರಗಳನ್ನೇ ಆಹುತಿ ತೆಗೆದುಕೊಳ್ಳುವುದರಲ್ಲಿ ಸಂಶಯವಿಲ್ಲ ಎಂದರು.

ಹುಬ್ಬಳ್ಳಿಯ ಕಾನೂನು ಮಹಾವಿದ್ಯಾಲಯದ ಸಂಗನಗೌಡ ಬಿರಾದಾರ ಮಾತನಾಡಿ, ಕಪ್ಪತಗುಡ್ಡದ ಜೊತೆಗೆ ಲಕ್ಷಾಂತರ ಜನರ ಭಾವಬಂಧ ಬೆಸೆಯುವ ಕಾರ್ಯವು ಚಾಲನೆಯಲ್ಲಿದ್ದು, ಕಪ್ಪತಗುಡ್ಡ ಸಂರಕ್ಷಣೆ ನಿಟ್ಟಿನಲ್ಲಿ ಸೂಕ್ತ ಮಾರ್ಗವನ್ನು ಅನುಸರಿಸಬೇಕೆಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ, ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ, ಪರಿಸರಕ್ಕಾಗಿ ನಾವು ರಾಜ್ಯ ಸಂಘಟನೆ, ಧಾರವಾಡ ಕೃಷಿ ವಿಶ್ವ ವಿದ್ಯಾಯಯದ ಹಳೆ ವಿದ್ಯಾರ್ಥಿಗಳ ಸಂಘಟನೆ, ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಆಯುರ್ವೇದ ಮಹಾವಿದ್ಯಾಯಗಳ ವಿದ್ಯಾರ್ಥಿಗಳು, ಗದಗ, ಧಾರವಾಡ, ಹಾವೇರಿ, ಬಾಗಲಕೋಟ, ಬೆಳಗಾವಿ ಜಿಲ್ಲೆಗಳ ಪರಿಸರಾಸಕ್ತರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಶಂಕರ ಕುಂಬಿ, ಎಮ್.ವಾಯ್. ಮೆಣಶಿನಕಾಯಿ, ಶಾರದಾ ಗೋಪಾಲ, ಅನಿತಾ ಪಾಟೀಲ, ಸುಭದ್ರಾ ಕುಲಕರ್ಣಿ, ನೈಲಾ ಕೋಯ್ಲೋ, ಕೆ.ಎಸ್. ನಾಯಕ, ಪರಿಮಳಾ ಜಕ್ಕಣ್ಣವರ, ಆರ್.ಜಿ. ತಿಮ್ಮಾಪೂರ, ಸ್ವಪ್ನಾ ಕರಬಶೆಟ್ಟರ, ದೀಪಕ ಕಟ್ಟಿಮನಿ, ವೀರೇಶ ಅರಕೇರಿ, ಅಸ್ಲಮ್ ಅಬ್ಬಿಹಾಳ ಮುಂತಾದವರು ಇದ್ದರು.

ಶ್ರೀ ಸತ್ಯ ಸಾಯಿಬಾಬಾರ 99ನೇ ವರ್ಷದ ಸ್ಮರಣಾರ್ಥ ರಕ್ತದಾನ ಶಿಬಿರ

0

ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ಸತ್ಯಸಾಯಿಬಾಬಾರವರ 99ನೇ ವರ್ಷದ ಸ್ಮರಣಾರ್ಥ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ಹಾಗೂ ಕರ್ನಾಟಕ ಗದಗ ಜಿಲ್ಲಾ ಹುಲಕೋಟಿ ಸಮಿತಿಯು ಐಎಂಎ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಹಿಟೆನ್ ಪ್ರಾ. ಲಿಮಿಟೆಡ್ ಮತ್ತು ಸಿಬ್ಬಂದಿಯಿಂದ ಶ್ರೀ ಸಾಯಿಕುಮಾರ್ ಅವರಿಗೆ ವಿಶೇಷ ಮೆಚ್ಚುಗೆಯನ್ನು ಸಲ್ಲಿಸಲಾಯಿತು. ದೇಣಿಗೆ ಅಭಿಯಾನವನ್ನು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಅಧ್ಯಕ್ಷ ಶ್ರೀ ಗುರುಜಾಜ್ ಓದುಗೌಡರ್ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಆರ್‌ಎಮ್‌ಎಸ್‌ಎಸ್ ಅಧ್ಯಕ್ಷ ಡಾ. ಎಸ್. ನಾಗನೂರು, ದಾಸ್ ರೆಡ್ಡಿ, ಬ್ಲಡ್ ಬ್ಯಾಂಕ್ ಅಧ್ಯಕ್ಷ ಡಾ. ಶ್ರೀಧರ ಕುರಡಗಿ, ಕಾರ್ಯದರ್ಶಿ ಡಾ. ಅವಿನಾಶ ಓದುಗೌಡರ್, ಪಿಆರ್‌ಓ ಡಾ. ಪ್ಯಾರಅಲಿ ನೂರಾನಿ, ಹಿರಿಯ ಅಧಿಕಾರಿ ಡಾ. ಪವಾಡಶೆಟ್ಟರ ಮತ್ತು ವಿನಾಯಕ ಓದುಗೌಡರ ಉಪಸ್ಥಿತರಿದ್ದರು.

ಯಲ್ಲಮ್ಮ ದೇವಸ್ಥಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಣಿ ಚೆನ್ನಮ್ಮ ಪಾರ್ಟಿಯ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಾಗೂ ಪ್ರಚಾರ ಸಮಿತಿಯ ಅಧ್ಯಕ್ಷರಾದ ಸತೀಶ್ ಎಂ.ಕಳ್ಳಿ, ಮಹಿಳಾ ಘಟಕ ರಾಜ್ಯಾಧ್ಯಕ್ಷರಾದ ಭೀಮವ್ವ ಹಾಗೂ ಭಾರತಿ ಕೊಪ್ಪಳ, ಜಿಲ್ಲಾ ಅಧ್ಯಕ್ಷರಾದ ನಿಂಗನಗೌಡ ಹಾದಿಮನಿ, ಕೊಪ್ಪಳ ಜಿಲ್ಲಾ ಲಿಂಗಾಯತ್ ಸಮಾಜದ ಅಧ್ಯಕ್ಷರಾದ ಜಗನ್ನಾಥ್ ಸಿದ್ಲಿಂಗಪ್ಪ ಇವರುಗಳ ನೇತೃತ್ವದಲ್ಲಿ ಸವದತ್ತಿ ತಹಸೀಲ್ದಾರರ ಮೂಲಕ ಸುಕ್ಷೇತ್ರ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಆರು ಸಮುದಾಯ ಭವನ ನಿರ್ಮಾಣ ಮಾಡಬೇಕೆಂದು ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸತೀಶ್ ಎಂ.ಕಳ್ಳಿ ಮಾತನಾಡಿ, ಸುಕ್ಷೇತ್ರ ಶ್ರೀ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಆರು ಸಮುದಾಯ ಭವನಗಳನ್ನು ನಿರ್ಮಾಣ ಮಾಡಿದರೆ ಈ ಕ್ಷೇತ್ರ ಬರುವವರಿಗೆ ತಮ್ಮ ಧಾರ್ಮಿಕ ಕಾರ್ಯಗಳನ್ನು ಮಾಡಲು ಅನುಕೂಲವಾಗುತ್ತದೆ ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ಸವದತ್ತಿ ತಹಸೀಲ್ದಾರರು, ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಇಲಾಖೆಗೆ ಮತ್ತು ಸರ್ಕಾರಕ್ಕೆ ಕಳುಹಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಮಕ್ತುಮ್‌ಸಾಬ್ ಯಮನೂರುಸಾಬ್ ನದಾಫ್, ರಂಗಪ್ಪ ಮಲ್ಲಪ್ಪ ತಲ್ಯಾಳ, ಪಕೀರಗೌಡ ರಾಮನಗೌಡ ಮಾಲಿಪಾಟೀಲ್, ಶರಣಪ್ಪ ಎಲ್ಲಪ್ಪ ಮಾಗಿ, ಯಮನೂರಪ್ಪ ಮಾರುತಪ್ಪ ಭಜಂತ್ರಿ, ಹನುಮಂತ ಕೆಳಗಡೆ, ಕಳಗಪ್ಪ ಭಜಂತ್ರಿ, ಗಂಗಮ್ಮ ಶಿರಹಟ್ಟಿ, ಅಂಬಮ್ಮ ಅವಳಾದ, ಮುತ್ತಣ್ಣ ಲಂಬಾಣಿಮ, ನಾಗೇಂದ್ರ ಬೆಂಗಳೂರು ಉಪಸ್ಥಿತರಿದ್ದರು.

 

ವಿದ್ಯಾರ್ಥಿಗಳ ಮೇಲೆ ಕೇಸ್ ಹಾಕಿದ್ರೆ ನಾವೇನು ಕಡ್ಲೇಕಾಯಿ ತಿನ್ನುತ್ತಾ ಇರ್ತೇವಾ.?: ಶಿಕ್ಷಣ ಸಚಿವರಿಗೆ‌ ರೇಣುಕಾಚಾರ್ಯ ಎಚ್ಚರಿಕೆ

0

ಬೆಂಗಳೂರು: ವಿದ್ಯಾರ್ಥಿಗಳ ಮೇಲೆ ಕೇಸ್ ಹಾಕಿದ್ರೆ ನಾವೇನು ಕಡ್ಲೇಕಾಯಿ ತಿನ್ನುತ್ತಾ ಇರ್ತೇವಾ ಎಂದು ಮಾಜಿ ಸಚಿವ ರೇಣುಕಾಚಾರ್ಯ ಮಧು ಬಂಗಾರಪ್ಪಗೆ ಎಚ್ಚರಿಕೆ ಕೊಟ್ಟಿದ್ದಾರೆ. ನಗರದಲ್ಲಿ ಶಿಕ್ಷಣ ಸಚಿವರಿಗೆ‌ ಕನ್ನಡ‌ ಬರಲ್ಲ ಎಂದಿದ್ದಕ್ಕೆ‌ ವಿದ್ಯಾರ್ಥಿ ವಿರುದ್ಧ ಕ್ರಮಕ್ಕೆ ಮಧು‌ ಬಂಗಾರಪ್ಪ ಸೂಚನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,

ಒಬ್ಬ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ‌ಅವರ ಮಗನಾಗಿ‌ ಸಮಾಧಾನದಿಂದ ಉತ್ತರಿಸಬೇಕಿತ್ತು. ಬದಲಾಗಿ‌ ವಿದ್ಯಾರ್ಥಿ ಮೇಲೆ ದೌರ್ಜನ್ಯದ ಮಾತಾಡಿದ್ದಾರೆ. ಇದೊಂದು ತೊಘಲಕ್‌ ದರ್ಬಾರ್‌. ಹುಷಾರ್.. ವಿದ್ಯಾರ್ಥಿಗಳ ಮೇಲೆ ಕೇಸ್ ಹಾಕಿದ್ರೆ ನಾವೇನು ಕಡ್ಲೇಕಾಯಿ ತಿನ್ನುತ್ತಾ ಇರ್ತೇವಾ. ಹುಷಾರ್ ಎಂದು ಎಚ್ಚರಿಕೆ ಕೊಟ್ಟಿದ್ದಾರೆ..

ಇನ್ನೂ ವಕ್ಫ್ ವಿಚಾರವಾಗಿ ಮಾತನಾಡಿದ ಅವರು, ವಕ್ಫ್ ಅಲ್ಲೋಲಕಲ್ಲೋಲ ಲಾಗಿದೆ. ಬಿಜೆಪಿ (BJP) ಹೋರಾಟದ ನಂತರ ವಾಪಸ್ ಮಾಡುವುದಾಗಿ ಹೇಳಿದ್ದೀರಿ. ಆದರೆ ಕಲಂ 11ರಲ್ಲಿ ಬದಲಾವಣೆ ಆಯ್ತಾ? ಎಸ್‌ಸಿ, ಎಸ್‌ಟಿಗಳ 27 ಸಾವಿರ ಕೋಟಿ ರೂ. ಹಣ ವಾಪಸ್ ಪಡೆದಿದ್ದೀರಿ ಯಾಕೆ? ಸುಳ್ಳಿಗೆ, ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್. ಒಬ್ಬ ಬಡವ ಆಸ್ಪತ್ರೆಗೆ ಹೋದರೆ ಬಿಪಿಎಲ್ ಕಾರ್ಡ್ ಕೇಳುತ್ತಾರೆ. ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತೇನೆ. ಹಳ್ಳಿಹಳ್ಳಿಯಲ್ಲೂ ಜಾಗೃತಿ ಮೂಡಿಸುತ್ತೇವೆ ಎಂದು ಕಿಡಿಕಾರಿದರು.

ಕನಕದಾಸರ ಜಯಂತಿಯನ್ನು ಸರ್ಕಾರಿ ಜಯಂತಿ ಎಂದು ಘೋಷಿಸಿದ್ದು ಪ್ರಶಸಂನೀಯ: ಎಮ್.ಎಸ್. ಕರೀಗೌಡ್ರ

0

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಕಾರ್ಯಾಲಯದಲ್ಲಿ ದಾಸಶ್ರೇಷ್ಠ ಕನಕದಾಸರ 537ನೇ ಜಯಂತೋತ್ಸವವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಮಾತನಾಡಿ, ಕನಕದಾಸರ ಆದರ್ಶ ಮೌಲ್ಯಗಳು ಇಂದಿನ ಸಮಾಜಕ್ಕೆ ಉಪಯುಕ್ತವಾಗಿವೆ. ಅವರ ತತ್ವಗಳು, ಕೀರ್ತನೆಗಳು, ಮುಂಡಿಗೆಗಳು, ಕಾದಂಬರಿಗಳು ವಿಶ್ವವಿದ್ಯಾನಿಲಯದ ಅದ್ಯಯನದ ವಿಷಯ ಭಂಡಾರವಾಗಿವೆ ಎಂದರು.

ಬಿಜೆಪಿ ಹಿರಿಯ ಮುಖಂಡರಾದ ಎಮ್.ಎಸ್. ಕರೀಗೌಡ್ರ ಮಾತನಾಡಿ, ಭಕ್ತ ಶ್ರೇಷ್ಠ ಕನಕದಾಸರ ಜೀವನ ಪರಿಚಯವನ್ನು ಉದಾಹರಣೆಯೊಂದಿಗೆ ವಿವರಿಸಿ ಮೌಲ್ಯಗಳ ಮಹತ್ವವನ್ನು ಹೇಳಿದರು. ಬಿಜೆಪಿ ಗದಗ ಜಿಲ್ಲಾ ಪ್ರಕೋಷ್ಟಗಳ ಸಹ ಸಂಯೋಜಕ ರಮೇಶ ಸಜ್ಜಗಾರ ಮಾತನಾಡಿ, ಕನಕದಾಸರ ಜೀವನ ಸಂದೇಶ ನಮಗೆ ಆದರ್ಶ. ಕನಕದಾಸರ ಜಯಂತಿಯನ್ನು ಸರ್ಕಾರಿ ಜಯಂತಿ ಎಂದು ಘೋಷಿಸಿದ್ದು ಪ್ರಶಸಂನೀಯ ಎಂದರು. ನಗರ ಮಂಡಲ ಅಧ್ಯಕ್ಷ ಅನಿಲ ಅಬ್ಬಿಗೇರಿ ಮಾತನಾಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ಸಿದ್ದಣ್ಣ ಪಲ್ಲೇದ, ಬುದಪ್ಪ ಹಳ್ಳಿ, ಚನ್ನಮ್ಮ ಹುಳಕನ್ನವರ, ಸುರೇಶ ಹೆಬಸೂರ, ಕುಮಾರ್ ಮಾರನಬಸರಿ, ಮಂಜುನಾಥ್ ಶಾಂತಗೇರಿ, ಕಲ್ಲಯ್ಯಜ್ಜಪ್ಪ, ಕೆ.ಪಿ. ಕೋಟಿಗೌಡ್ರ್, ಸಂತೋಷ ಕಲ್ಯಾಣಿ, ಅಶೋಕ ಕುಡುತಿನಿ, ಶ್ರೀನಿವಾಸ್ ಹುಯಿಲಗೋಳ, ಅಪ್ಪಣ್ಣ ತೆಂಗಿನಕಾಯಿ, ಸುರೇಶ ಮರಳಪ್ಪನವರ, ಕಮಲಾಕ್ಷಿ ಅಂಗಡಿ, ರವಿ ವಗ್ಗನವರ, ವೈ.ಪಿ. ಅಡನೂರ, ರವಿ ವಗ್ಗನವರ, ದೇವೇಂದ್ರ ಹೂಗಾರ್ ಮುಂತಾದವರು ಉಪಸ್ಥಿತರಿದ್ದರು.

ಗದಗ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ವಿಜೃಂಭಣೆಯ ಕನ್ನಡೋತ್ಸವ, ಗೌರಿ ಹುಣ್ಣಿಮೆ ಆಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಗದಗ ಮತ್ತು ಮಹಾಂತ ಕಲಾ ಬಳಗ ಗದಗ ಇವುಗಳ ಸಹಯೋಗದಲ್ಲಿ ಕನ್ನಡೋತ್ಸವ ಮತ್ತು ಗೌರಿ ಹುಣ್ಣಿಮೆ ಆಚರಣೆ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.

ಕನ್ನಡದ ಗ್ರಾಮೀಣ ಹಬ್ಬವಾದ ಗೌರಿ ಹುಣ್ಣಿಮೆಯನ್ನು ಸಕ್ಕರೆ ಆರತಿ ಬೆಳಗುವುದರೊಂದಿಗೆ ಟ್ಯಾಗೋರ ರಸ್ತೆಯ ನಿವಾಸಿಗಳು ಅತಿಥಿಗಳನ್ನು ಬರಮಾಡಿಕೊಂಡು ವಿನೂತನವಾಗಿ ಕನ್ನಡದ ದೀಪವನ್ನು ಹಚ್ಚಿದರು. ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಕಾರ್ಯಕ್ರಮದಲ್ಲಿ ಕವಿಗಳಾದ ಶರಣಪ್ಪ ಹೊಸಂಗಡಿ, ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ತಾತನಗೌಡ ಪಾಟೀಲ, ಕಾರ್ಯದರ್ಶಿ ಅಶೋಕ ಪಾಟೀಲ, ನಗರಸಭೆಯ ಸದಸ್ಯ ಪ್ರಕಾಶ ಅಂಗಡಿ, ಮಾಧ್ಯಮಿಕ ಶಾಲಾ ಸಂಘದ ಅಧ್ಯಕ್ಷ ಬಸನಗೌಡ ನಿಂಬನಗೌಡ ಅವರನ್ನು ಸನ್ಮಾನಿಸಲಾಯಿತು. ಗದಗ ತಾಲೂಕಾ ಕಸಾಪ ಅಧ್ಯಕ್ಷರಾದ ಡಾ. ರಶ್ಮಿ ಅಂಗಡಿ ಕಾರ್ಯಕ್ರಮದ ಅಧ್ಯಕ್ಷಯೆ ವಹಿಸಿದ್ದರು.

ಪವಿತ್ರಾ ಮುದಗಲ್ಲ ಅತಿಥಿಗಳನ್ನು ಸ್ವಾಗತಿಸಿದರು. ನೀಲಮ್ಮ ಅಂಗಡಿ ಪ್ರಾರ್ಥಿಸಿದರು. ಸುನಂದಾ ನಿಂಬನಗೌಡರ ಜನಪದ ಹಾಡುಗಳನ್ನು ಹಾಡಿದರು. ಬಾಹುಬಲಿ ಜೈನರ್ ನಿರೂಪಿಸಿದರು. ಸೌಮ್ಯ ಉರುಳಿ ಮತ್ತು ರವಿ ಹೊಸೂರ ಅತಿಥಿಗಳನ್ನು ಪರಿಚಯಿಸಿದರು. ಕೋಶಾಧ್ಯಕ್ಷರಾದ ಪಾರ್ವತಿ ಬೇವಿನಮರದ ಗೌರಿ ಪದಗಳನ್ನು ಹಾಡಿದರೆ, ವಿಶ್ವನಾಥ ಬೇಂದ್ರೆಯವರು ನಾಟಕಗಳನ್ನು ನಿರ್ದೇಶಿಸಿದರು. ಡಿ.ಎಸ್. ನಾಯಕ ನಾಟಕದ ಸಂಭಾಷಣೆಗಳನ್ನು ಹೇಳಿದರು. ಕೊನೆಯಲ್ಲಿ ವಂದನಾ ಅಂಗಡಿ ವಂದಿಸಿದರು.

ಸಂಘಟನಾ ಕಾರ್ಯದರ್ಶಿ ಪುಷ್ಪಾ ಭಂಡಾರಿ, ಮೋಹನ ಮುದಗಲ್ಲ, ಚೇತನ ಅಂಗಡಿ, ರಮೇಶ ಉರುಳಿ, ಶರಣು ದೊಡ್ಡೂರ, ಮಹಾಂತೇಶ ಪೂಜಾರ, ಸಿದ್ಧಲಿಂಗಪ್ಪ ಹಗರನ್ನವರ, ಪ್ರೇಮಲತಾ ಕೊಠಾರಿ, ಗಡಾದ ಸಹೋದರರು, ಪಂಡಿತಯ್ಯ ಬಣ್ಣನೂಲಮಠ, ರತ್ನ ಮುಗಳಿ, ಎಂ.ಎಸ್. ಅಂಗಡಿ, ಪ್ರದೀಪ ಕಡದಾಳ, ಮಂಜುನಾಥ ದೇಸಾಯಿ, ಸುರೇಶ ಬಳಗಾರ, ಕಾಳಮ್ಮ ಕಮ್ಮಾರ ಉಪಸ್ಥಿತರಿದ್ದರು.

ಎಲ್ಲರೂ ಸನ್ನಡತೆಯನ್ನು ಬೆಳೆಸಿಕೊಂಡು ಸಮಾಜಕ್ಕೆ ಉಪಕಾರಿಗಳಾಗಿ ಬದುಕಬೇಕು: ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪುರಾಣ ಪ್ರವಚನಗಳನ್ನು ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಶ್ರವಣವು ಒಂದು ಉತ್ತಮ ಸಾಧನವಾಗಿದ್ದು, ಇದರಿಂದ ಮನುಷ್ಯನಿಗೆ ವಿಶೇಷ ಶಕ್ತಿ ದೊರಕುತ್ತದೆ ಎಂದು ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ಪಟ್ಟಣದ ಹಿರೇಮಠದ ಜಾತ್ರಾಮಹೋತ್ಸವದ ಅಂಗವಾಗಿ ನಡೆದಿರುವ ಶ್ರೀ ಹಾನಗಲ್ಲ ಗುರುಕುಮಾರೇಶ್ವರ ಪುರಾಣದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮನುಷ್ಯ ತನ್ನ ಆಯುಷ್ಯವನ್ನು ಸಮರ್ಪಕವಾಗಿ ಕಳೆಯಬೇಕು. ಯಾವಾಗಲೂ ಸದಾಚಾರ ಸಂಪನ್ನನಾಗಿ ತನ್ನ ಆಯುಷ್ಯ ಕಳೆಯಲು ಪ್ರಯತ್ನಿಸಬೇಕು. ಮನುಷ್ಯ ತನ್ನ ನಡೆ-ನುಡಿಗಳಿಂದ, ಆಚಾರ-ವಿಚಾರಗಳಿಂದ, ಇನ್ನೊಬ್ಬರೊಂದಿಗೆ ಹೊಂದಿಕೊಳ್ಳುವ ಗುಣದಿಂದ ಆತ ಸಮಾಜದಲ್ಲಿ ಎಲ್ಲರಿಂದಲೂ ಗೌರವಿಸಲ್ಪಡುತ್ತಾನೆ. ಆದ್ದರಿಂದ ಎಲ್ಲರೂ ಸನ್ನಡತೆಯನ್ನು ಬೆಳೆಸಿಕೊಂಡು ಸಮಾಜಕ್ಕೆ ಉಪಕಾರಿಗಳಾಗಿ ಬದುಕಬೇಕೆಂದು ಶ್ರೀಗಳು ತಿಳಿಸಿದರು.

ಪಂ. ಅನ್ನದಾನ ಶಾಸ್ತ್ರಿಗಳು ಮಾತನಾಡಿ, ಹಾನಗಲ್ಲ ಗುರುಕುಮಾರ ಶಿವಯೋಗಿಗಳು ಸಮಾಜಕ್ಕೆ ಅಪಾರವಾದ ಕಾಣಿಕೆಯನ್ನು ನೀಡಿದ್ದಾರೆ. ಆಚಾರಕ್ಕೆ ಪರಿಭಾಷೆಯನ್ನು ಬೆರದವರು ಹಾನಗಲ್ಲ ಗುರು ಕುಮಾರೇಶ್ವರರು. ಯಾವನಲ್ಲಿ ದಾನ, ಜ್ಞಾನ ಮತ್ತು ಸೇವೆಯ ಗುಣಗಳಿರುತ್ತವೆಯೋ ಆತ ಈ ಸಮಾದಲ್ಲಿ ಎಲ್ಲರಿಂದಲೂ ಪೂಜಿಸಲ್ಪಡುತ್ತಾನೆ. ಎಲ್ಲರಲ್ಲಿಯೂ ಈ ಮೂರೂ ಗುಣಗಳಿರಲು ಸಾಧ್ಯವಿಲ್ಲ. ಇವು ಒಂದೊಂದು ರತ್ನಗಳಾಗಿದ್ದು, ಇದರಲ್ಲಿ ಯಾವುದಾದರೊಂದು ಇದ್ದರೂ ಅವನು ಸರ್ವಮಾನ್ಯನಾಗುತ್ತಾನೆ ಎಂದರು.

ಹಾನಗಲ್ಲ ಕುಮಾರ ಶಿವಯೋಗಿಗಳು ವೀರ ವೈರಾಗ್ಯ ಚಕ್ರವರ್ತಿಗಳು. ಅವರಲ್ಲಿ ಸನ್ಯಾಸತ್ವವು ಅತ್ಯಂತ ಉನ್ನತ ಮಟ್ಟದಲ್ಲಿತ್ತು. ಸ್ವತಃ ತಾಯಿಯೇ ತಮ್ಮನ್ನು ಭೇಟಿಯಾಗಲು ಬಂದಾಗಲೂ ಸಹ ಅವರು ಅವರನ್ನು ಭೇಟಿಯಾಗದೆ ಬೆನ್ನು ತಿರುಗಿಸಿ ಹೋದ ಮಹಾ ಮಹಿಮರು. ಸಾರ್ವಜನಿಕ ಜೀವನದ ಹಣವನ್ನು ಎಂದಿಗೂ ಸ್ವಂತಕ್ಕೆ ಬಳಸದ ಅವರು, ಸಮಾಜದ ಉದ್ಧಾರಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ಶ್ರೇಷ್ಠ ಮಹಾತ್ಮರು ಎಂದರು.

ಸಭೆಯನ್ನುದ್ದೇಶಿಸಿ ವರ್ತಕ ಮುತ್ತಣ್ಣ ಪಲ್ಲೇದ ಮಾತನಾಡಿದರು. ವೇದಿಕೆಯ ಮೇಲೆ ಬೀಚಿ ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ, ಡಾ. ಆರ್.ಕೆ. ಗಚ್ಚಿನಮಠ ಉಪಸ್ಥಿತರಿದ್ದರು. ಶಿವಯೋಗಿ ಜಕ್ಕಲಿ ನಿರೂಪಿಸಿದರು.

ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ: ದಿನೇಶ್ ಗುಂಡೂರಾವ್

0

ಮಂಗಳೂರು: ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್  ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕ ಸರ್ಕಾರಕ್ಕೆ ಸಂದಾಯವಾಗುವುದಿಲ್ಲ.

ಶುಲ್ಕ ಹೆಚ್ಚಳ ಮಾಡುವ ಮೂಲಕ ಗ್ಯಾರಂಟಿಗಳಿಗೆ ಹಣ ಹೊಂದಿಸಬೇಕಾದ ಪರಿಸ್ಥಿತಿ ಸರ್ಕಾರಕ್ಕೆ ಎದುರಾಗಿಲ್ಲ. ಅಷ್ಟಕ್ಕೂ ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ. ಆಯಾ ಆಸ್ಪತ್ರೆಗಳ ಅಭಿವೃದ್ಧಿಗೆ ಬಳಕೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಹೇಳಿದರು.ಇನ್ನೂ ಮೂರು, ನಾಲ್ಕು ವರ್ಷಗಳಿಗೊಮ್ಮೆ ಶುಲ್ಕ ಪರಿಷ್ಕರಣೆಯಾಗುವುದು ಸಹಜ ಪ್ರಕ್ರಿಯೆಯಾಗಿದೆ. ಇದನ್ನೇ ಮುಂದಿಟ್ಟುಕೊಂಡು ಗ್ಯಾರಂಟಿಗಳಿಗೆ ತಳುಕು ಹಾಕಿ ನೋಡುವುದು ಸರಿಯಲ್ಲ.

ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ಸೇವಾ ಶುಲ್ಕದ ಹಣವನ್ನು ಆಯಾ ಆಸ್ಪತ್ರೆಗಳ ಎಆರ್‌ಎಸ್ ಸಮಿತಿಗಳು ಚರ್ಚೆ ನಡೆಸಿ ಆಸ್ಪತ್ರೆಯ ಅಭಿವೃದ್ಧಿಗೆ ಬಳಕೆ ಮಾಡುತ್ತವೆ. ಆಸ್ಪತ್ರೆಯ ಎಆರ್‌ಎಸ್ ಫಂಡ್ ಹೆಸರಲ್ಲಿ ಅನುದಾನ ಲಭ್ಯವಿರುತ್ತದೆ. ಆಸ್ಪತ್ರೆಯ ಸ್ವಚ್ಛತೆ, ದುರಸ್ಥಿ ಕಾರ್ಯಗಳು ಸೇರಿದಂತೆ ಆಸ್ಪತ್ರೆಗಳ ಅಭಿವೃದ್ಧಿಗಳಿಗೆ ಬಳಕೆ ಮಾಡಲಾಗುತ್ತದೆ. ಸರ್ಕಾರ ಕೇವಲ ಅನುಮತಿ ನೀಡುತ್ತದೆ ಅಷ್ಟೇ ಎಂದು ಹೇಳಿದರು.

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಎ2 ಆರೋಪಿಯಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ದರ್ಶನ್ ಗೆ ಕೋರ್ಟ್ ಆರು ವಾರಗಳ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಈ ಮಧ್ಯೆ ಇಂದು ಹೈಕೋರ್ಟ್‌ ಏಕಸದಸ್ಯ ಪೀಠದಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು ಅರ್ಜಿ ವಿಚಾರಣೆಯನ್ನು ಮತ್ತೆ ಮುಂದೂಡಿಕೆ ಮಾಡಲಾಗಿದೆ.

ಪ್ರಕರಣದ ನಟ ದರ್ಶನ್, ಪವಿತ್ರಾ ಗೌಡ ಸೇರಿ 6 ಮಂದಿ ಆರೋಪಿಗಳ ಜಾಮೀನು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಾಯಿತು. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ವಿಚಾರಣೆಯನ್ನು ಮುಂದೂಡಿದ್ದಾರೆ. ವಾದ, ಪ್ರತಿವಾದದ ಬಳಿಕ ಜಾಮೀನು ಅರ್ಜಿ ವಿಚಾರಣೆಯನ್ನು ನವೆಂಬರ್ 26ಕ್ಕೆ ಮುಂದೂಡಲಾಯ್ತು.

ವಿಚಾರಣೆ ವೇಳೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಅವರು ದರ್ಶನ್​ಗೆ ಮಧ್ಯಂತರ ಜಾಮೀನಿನ ನೀಡಿದ ವೇಳೆ ಸೂಚಿಸಲಾಗಿದ್ದ ಕೆಲ ನಿಯಮಗಳನ್ನು ಪಾಲಿಸಿಲ್ಲವ ಎಂದು ವಾದ ಮಂಡಿಸಿದರು. ದರ್ಶನ್ ಪರ ವಕೀಲರು ಹೊಸ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಅರ್ಹತೆ ಮೇಲೆ ಮುಂದಿನ ದಿನಾಂಕದಂದು ವಿಚಾರಣೆ ನಡೆಸಬಹುದು ಎಂದು ನ್ಯಾಯಮೂರ್ತಿಗಳು ಸೂಚಿಸಿದರು. ಇದೇ ವೇಳೆ ವೈದ್ಯಕೀಯ ವರದಿಯ ಪ್ರತಿ ತಮಗೆ ನೀಡಿಲ್ಲವೆಂದು ಎಸ್​ಪಿಪಿ ಆಕ್ಷೇಪಣೆ ಸಲ್ಲಿಸಿದರು. 6 ವಾರಗಳ ಅವಧಿಗೆ ಷರತ್ತಿನ ಮೇಲೆ ಮಧ್ಯಂತರ ಜಾಮೀನು ನೀಡಲಾಗಿದೆ, ಆದರೆ ಸರ್ಜರಿಯ ದಿನಾಂಕ ತಿಳಿಸಿಲ್ಲವೆಂದು ಎಸ್​ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿದರು. ಅದೇ ವೇಳೆಗೆ ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ಮತ್ತೊಂದು ವೈದ್ಯಕೀಯ ವರದಿಯನ್ನು ಹೈಕೋರ್ಟ್​ಗೆ ಸಲ್ಲಿಕೆ ಮಾಡಿದರು.

ಅದೇ ವೈದ್ಯಕೀಯ ವರದಿಯ ಪ್ರತಿಯನ್ನು ಎಸ್​ಪಿಪಿ ಪ್ರಸನ್ನ ಕುಮಾರ್ ಅವರಿಗೆ ನೀಡಲಾಯ್ತು. ವರದಿ ಪರಿಶೀಲಿಸಿ ಪ್ರತಿಕ್ರಿಯಿಸಲು ಸೂಚನೆ ನೀಡಿದ ನ್ಯಾಯಮೂರ್ತಿಗಳು ನವೆಂಬರ್ 26ಕ್ಕೆ ಅರ್ಜಿ ವಿಚಾರಣೆ ಮುಂದೂಡಿದರು.

error: Content is protected !!